ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣದಲ್ಲಿ ಹಳ್ಳಿಗನ 'ಗುಂಡಾಟ' ಮತ್ತು ಎನ್‍ಟಿಆರ್ ಡೈಲಾಗ್

By ಸ ರಘುನಾಥ
|
Google Oneindia Kannada News

'ಹಸಿರು ಹೊನ್ನು' ಬಳಗವು ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಶಾಲೆಯಲ್ಲಿ ಮತ್ತು ಅದರ ಸಮೀಪದ ತಿರುಮಲಾಪುರ ಬೆಟ್ಟದ ಬುಡದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಾಕಿಕೊಂಡಿತ್ತು. ಶಾಲೆ ಆವರಣದಲ್ಲಿ ನೂರೈವತ್ತು ಗಿಡಗಳನ್ನು ನೆಟ್ಟು, ನಂತರ ಬೆಟ್ಟದ ಬುಡದಲ್ಲಿ ನೆಡುವುದು. ಸಮಯವಾದರೆ ತುಳವನೂರಿನ ಸರಕಾರಿ ಶಾಲೆಗೆ ಹೋಗುವುದೆಂದು ವೇಳಾಪಟ್ಟಿ ಸಿದ್ದಪಡಿಸಿದ್ದೆವು.

ಹೊರಟ ಎಂಟು ಮಂದಿಯಲ್ಲಿ 'ಬಳಗದ' ಅಧ್ಯಕ್ಷ ನೀಲ್ಬಾಗ್ ರಾಜಾರೆಡ್ಡಿ, ಕಾರ್ಯದರ್ಶಿಯಾದ ನಾನು, ಸದಸ್ಯರಾದ ಪೆದ್ದೂರು ಕೋಲಾಟದ ಕೃಷ್ಣಪ್ಪ, ಕಂಬಾಲಪಲ್ಲಿ ಚಂದ್ರಾರೆಡ್ಡಿ, ಲಕ್ಕೇಪಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಟಿ.ಕೆ.ನರಸಿಂಹಪ್ಪ, ತುಳವನೂರು ಶಾಲೆ ಶಿಕ್ಷಕ ಕವಿ ಮೂಡಲಗೊಲ್ಲಹಳ್ಳಿ ನರಸಿಂಹಪ್ಪ, ಮರುಂಕಿಂದಪಲ್ಲಿ ಶಾಲೆಯ ಮುಖ್ಯಶಿಕ್ಷಕ ವೆಂಕಟಶಿವ, ಜಾನಪದ ಗಾಯಕ ಮುನಿರೆಡ್ಡಿ ಹೊರಟೆವು. ಚಿಂತಾಮಣಿಯಲ್ಲಿ ನಂದಗುಡಿ-ಹೊಸಕೋಟೆ ಮಧ್ಯದ ಡಿ.ಶೆಟ್ಟಿಹಳ್ಳಿಯ ರೈತರಾದ ಸಿ.ಮುನಿರಾಜ, ಸಿ.ತಿಮ್ಮೇಗೌಡ, ಗೋಪಾಲ ಜೊತೆಯಾದರು.

Villagers folk conversation in agricultural field

ಚಿಲಕಲನೇರ್ಪಿನಲ್ಲಿ ಗಿಡ ನೆಟ್ಟ ಮೇಲೆ ತಿಮ್ಮೇಗೌಡ ಮತ್ತವರ ಗೆಳೆಯರು ತಮ್ಮ ತೋಟದ ಸುತ್ತ ಗಿಡನೆಡಲು ಆಹ್ವಾನವಿತ್ತು ನಮ್ಮಿಂದ ಬೀಳ್ಕೊಂಡರು. ಎರಡು ತಿಂಗಳ ನಂತರ ಅವರು ತಮ್ಮ ಮನೆಯಲ್ಲಿ 9.03.2017ರಂದು ಮಗುವಿಗೆ ಕೂದಲು ತೆಗೆಯುವ ಶಾಸ್ತ್ರವಿದೆ 'ಬಳಗ'ದವರೆಲ್ಲ ಬರಲೇಬೇಕೆಂದು ಫೋನು ಮಾಡಿ ಒತ್ತಾಯಿಸಿದರು. ಆದರೆ ಹೋಗಲು ಬಿಡುವಾದುದು ರಾಜರೆಡ್ಡಿ, ನರಸಿಂಹಪ್ಪ ಮತ್ತು ನನಗೆ ಮಾತ್ರ. ಸರಿ, ಕಿತ್ತಳೆ, ದಾಸವಾಳ, ಕಿರುನೆಲ್ಲಿ, ಬೆಟ್ಟಬೇವು ಗಿಡಗಳನ್ನು ತೆಗೆದುಕೊಂಡು ಹೊರಟೆವು. ಗಿಡಗಳನ್ನು ನೆಡುವ ಹೊತ್ತಿಗೆ ಸಂಜೆ ಸೂರ್ಯ ಮುಳುಗಿದ್ದ. ಅವರ ಆತಿಥ್ಯ ಸ್ವೀಕರಿಸಿ ಹೊರಟಾಗ ರಾತ್ರಿ ಎಂಟು ಗಂಟೆ. ದಾರಿಯಲ್ಲಿ ಮಾತು ಕಣದತ್ತ ಹೊರಳಿತು.

ಕಣವೆಂದರೆ ಕಾಳು ವಿಂಗಡಿಸಿ, ಹುಲ್ಲು ಮಾಡಿ, ನೆಲ್ಲು, ರಾಗಿ, ಹುರುಳಿ ಇಂತಹವನ್ನು ರಾಶಿ ಮಾಡುವ ತಾಣವಷ್ಟೇ ಆಗಿರೊಲ್ಲ. ಕೆಲಸ ಮಾಡುವಾಗ, ರಾತ್ರಿ ಕಾವಲಿಗಿರುವಾಗ 'ಕೊಂಟೆಮಾತು'ಗಳು, ಊರ ಗಂಡು-ಹೆಣ್ಣುಗಳ, ಪಡ್ಡೆಗಳ ಪ್ರೇಮದ ಗುಟ್ಟಿನ ವ್ಯವಹಾರಗಳು ಗುಟ್ಟಾಗಿಯೇ ಹೊರಬರುತ್ತಿರುತ್ತಿರುತ್ತವೆ. ಇವು ಕಾಲ ಕಳೆಯಲೂ ಆಗಿರುತ್ತವೆ. ನಮ್ಮ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತ ಆಡಿಕೊಳ್ಳುತ್ತಿದ್ದೆವು. ಡ್ರೈವು ಮಾಡುತ್ತಿದ್ದ ರಾಜಾರೆಡ್ಡಿಗೂ ನೆನಪು ಕಚಗುಳಿ ಇಡುತ್ತಿತ್ತು. 'ನೀನು ಕೇಳುತ್ತ ಡ್ರೈವು ಮಾಡು ಮಾರಾಯ. ಹೇಳಲು ಹೋಗಬೇಡ. ನಾವು ಸೇಫಾಗಿ ಮನೆ ಸೇರಬೇಕು' ಅಂದೆ. ಆದರೆ ರಾಜಾರೆಡ್ಡಿಗೆ ತಡೆಯುದಾಗುತ್ತಿರಲಿಲ್ಲ. ಸಮಯದ ಸಂಧಿನೋಡಿಕೊಂಡು ಹೇಳುತ್ತಿದ್ದ. ಮುನಿರೆಡ್ಡಿ, 'ಇವೆಲ್ಲ ಹಳೇವು. ಮೊನ್ನೆ ಆದದ್ದು ಕೇಳಿ' ಎಂದು, ತಾನು ಮೇಕಪೋತಲಪಲ್ಲಿಗೆ ಹೋಗಿದ್ದಾಗಿನ ಪರಸಂಗವನ್ನು ಬಿಚ್ಚಿದ.

Villagers folk conversation in agricultural field

ಸಾಯಂಕಾಲ ಸುಮಾರು ಐದು ಗಂಟೆ. ಕಣದಲ್ಲಿ ಹೆಂಗಸರು ಮತ್ತು ಗಂಡಸರು ಗುಡಿಸುವ, ಗುಡ್ಡೆ ಮಾಡುವ ಕೆಲಸದಲ್ಲಿದ್ದರು. ಅಲ್ಲಿಗೆ ಈರರೆಡ್ಡಿ ಬಂದ. ಫುಲ್ ಟೈಟು ಪಾರ್ಟಿ. ಜಗ್ಗುಜಗ್ಗು ಹುಲಿವೇಷ ಕುಣಿದ. ಕಲಿತಿದ್ದ ದುರ್ಯೋಧನನ 'ಪಾಲ್ಟಿ'ನ ಮಟ್ಟನ್ನು 'ರಾಜರಾಜೆ ರಾಜು ದುರ್ಯೋ (ಜೊಲ್ಲು ಸುರಿಸುತ್ತ)ಯೋಜನ ಮರ್ರಾಜು ಜು...' (ರಾಜರಾಜೆ ರಾಜು ದುರ್ಯೋಧನ ಮಹರಾಜು...) ಎಂದು ಹಾಡಿದ. ಆದರೆ ನಿಜಕ್ಕೂ ಹಾಡಿಸಿದ್ದು ಅವನೊಳಗಿನ 'ಎಣ್ಣೆ ಪರಮಾತ್ಮ.' 'ಅದತ್ಕಿರ್ಲಿ ಈರಪ್ಪಣ್ಣ (ಅಂಥ ಸಮಯದಲ್ಲಿ ಅವನನ್ನು ಗೌರವದಿಂದ ಕರೆಯಬೇಕಿತ್ತು) ದಾನ ವೀರ ಸೂರ ಕರ್ಣ ಸಿನಮಾದಾಗ ಎಂಟಿಆರ್ ಅನ್ನೂ ಮಯಸಭೆ ಡೈಲಾಗೇಳು' ಎಂದೊಬ್ಬರು ಹುರಿದುಂಬಿಸಿದರು.

'ಏಯ್ ಏಯ್ ಯಾಮೇ ಯಾಯೇ ಯೇ, ಪಾಂಚಾಲಿ ಗಾಂಚಾಲಿ ಪಂಚಬರ್ರ್ ರ್‍ತುಕ (ಏಮೇ ಏಮೇಮೇ ಪಾಂಚಾಲೀ ಪಂಚಭರ್ತೃಕ) ಅವನೊಳಗಿನ ಕವಿವರ ಪರಮಾತ್ಮ 'ಗಾಂಚಾಲಿ' ಸೇರಿಸಿದ್ದ. ಮುಂದೆ ಇನ್ನೊಂದು ಡೈಲಾಗು ಎತ್ತಿಕೊಂಡ, '... ಕುರ್‍ರು ಕುಲುಮು ಟುರ್ರು ಯೆಯ್‍ಯೇನಾಡೋ ಕುಲಹೀನ ಮಯ್ ಮಯ್ ಮೈಂದಿ. ಕಾವ್ ಕಾವ್ ಕಾಗಾ ನೇ ಡು ...' (... ಕುರುಕುಲ ಮೇನಾಡೋ ಕುಲಹೀನ ಮೈನದಿ, ಕಾಗ ನೇಡು...' (ಕುರಕುಲವೆಂದೋ ಕುಲಹೀನವಾಗಿದೆ. ಮೇಲಾಗಿ ಇಂದು...) ಯಾವುದನ್ನೂ 'ಗುಂಡು' ಪೂರ್ತಿ ಮಾಡಲು ಬಿಡುತ್ತಿರಲಿಲ್ಲ. ಮುಂದೆ ಗ್ರಹಚಾರ ಕಾದಿದ್ದು ಜಾನಪದ ಗೀತೆಗೆ.

Villagers folk conversation in agricultural field

ಅದರಲ್ಲಿ ಮೈದುನ ಅತ್ತಿಗೆಯನ್ನು 'ಮೆಲ್ಲಗೆ ನಡೆಯೊ ಓ ಅತ್ತಿಗೆ, ನಿನ್ನ ಸೀರೆ ಹರಿದದ್ದು ಹೇಗೆ ಓ ಅತ್ತಿಗೆ...'. (ಸಿನ್ನಂಗ ಪೋಯೇಟಿ ಓ ವದಿನೆ, ನೀ ಸೀರೆಟ್ಟ ಸಿನಿಗಿಂದೆ ಓ ವದಿನೆ ...) ಎಂದು ಕೇಳುತ್ತಾನೆ. ಈರರೆಡ್ಡಿ ಅದನ್ನು ಪರಮಾತ್ಮ ಹಾಡಿಸಿದಂತೆ ಹಾಡುತ್ತ ಪ್ರತಿಯೊಂದು ನುಡಿಗೂ 'ಕಾಮೆಂಟ್' ಬಾಣ ಬಿಡುತ್ತಿದ್ದ. 'ಇದಿ ಬಿರ್ನಾ ಇಪ್ಪಲ್ಯಾ. ಮಿಂಡುಗಾಡು ಸಿಂಚೇಸೆ (ಇವಳು ಬೇಗ ಬಿಚ್ಚಲಿಲ್ಲ. ಮಿಂಡ ಹರಿದಾಕಿದ).

ಅಂದು ಬೆಳದಿಂಗಳಿತ್ತು. ಕಣದವರು ಕೆಲಸ ಮುಗಿಸುವ ಹೊತ್ತಿಗೆ ಊಟ ಕಣಕ್ಕೇ ಬಂತು. ಈರರೆಡ್ಡಿಯನ್ನು ಊಟಕ್ಕೆ ಎಬ್ಬಿಸುವಂತಿರಲಿಲ್ಲ. ಅವನಾಗಲೇ ಕಣದ ಅಂಚಿನಲ್ಲಿ ಹರವಿದ್ದ ರಾಗಹುಲ್ಲ ಮೇಲೆ ಉರುಳಿ ತೊದಲು ಕನವರಿಕೆಯಲ್ಲಿದ್ದ. ಕೋಳಿಕೂಜಾಮದ ಚಳಿಗೆ ಅವನಿಗೆ ಎಚ್ಚರವಾಯಿತು. ಟವಲನ್ನು ಕತ್ತಿನಿಂದ ಬಾಯಿಯವರೆಗೆ ಸುತ್ತಿಕೊಂಡು ಮನೆಯತ್ತ ಹೊರಟಾಗ, 'ಏಮಿ ಈರರೆಡ್ಡಿ ಸಾಯಿಂತ್ರಮು ಇದ್ದುರೊಸ್ತಿರಿ. ಇಬುಡು ಒಕಡೇ ಎಲ್ಲುತುನ್ನಾವು' (ಏನು ಈರರೆಡ್ಡಿ ಸಾಯಂಕಾಲ ಇಬ್ಬರು ಬಂದಿರಿ. ಈಗ ಒಬ್ಬನೇ ಹೊರಟದ್ದಿ) ಎಂದು ಕಣದಾತ ಕೇಳಿದ. 'ಜತಲೋ ರಾಜಿಗಾಡುಂಡೆ. ಸಲವಕಿ ಆಡೆಬುಡೋ ಲೇಸಿ ಎಲ್ಲಿಪಾಯ' (ಜೊತೆಯಲ್ಲಿ ರಾಜಿಗಿನಿದ್ದ. ಚಳಿಗೆ ಅವನು ಯಾವಾಗಲೋ ಎದ್ದು ಹೋಗಿಬಿಟ್ಟ) ಎಂದ. ಅವನು ಕುಡಿದದ್ದು ರಾಜಾ ವಿಸ್ಕಿ. ಅದೇ ಅವನ 'ರಾಜಿಗಾಡು.'

English summary
Oneindia Kannada columnist Sa Raghunatha remembers his days with agriculture and villagers folk conversation during agricultural work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X