ಸ ರಘುನಾಥ ಅಂಕಣ; ಜಗ್ಗುನಕ ಜಗ್ಗುರೇ ಜಣಕು ನಕ ಜಣಾರೇ...
ಹುಣ್ಣಿಮೆ ದಿನ ರಾತ್ರಿ ಒಂಬತ್ತಕ್ಕೆ ಭಜನೆ. ಗೋಪಾಲಸ್ವಾಮಿ ಗುಡಿಯ ಮುಂದೆ ಊರಿನ ಜನ. ಸಿದ್ಧಪ್ಪ ಸಂಜೆಯೇ ಬಂದು ಬೀರಣ್ಣನ ಮನೆಯಲ್ಲಿ ಕುಳಿತಿದ್ದ. ಅವನ ಊರಿನದೂ ಕೆರೆ ಹೂಳಿನ ಸಮಸ್ಯೆ. ಇಲ್ಲಿ ಏನಾಗುವುದೊ ತಿಳಿದು, ತನ್ನ ಊರಿನಲ್ಲೂ ಮಾಡಿಸುವ ಮನಸ್ಸು ಅವನದು.
ಊಟ ಮುಗಿದ ಜನ ಗುಡಿಯತ್ತ ಹೆಜ್ಜೆ ಹಾಕಿದರು. ತಬಲ ಮುಂದಿಟ್ಟು ಮೋಟಪ್ಪ ಕುಳಿತಿದ್ದರೆ, ನರಸಿಂಗರಾಯನ ಬದಲಿಗೆ ಅಪ್ಪಯ್ಯ ಹಾರ್ಮೋನಿಯಂ ಹಿಡಿದಿದ್ದ. ತಲಕಾಯಿ ರಾಮಣ್ಣನ ಕೈಲಿ ಕೊಳಲಿತ್ತು. ಭಜನೆಯವರು ಅಣಿಯಾಗಿ ಕುಳಿತು ಸೂಚನೆಗಾಗಿ ಕಾಯುತ್ತಿದ್ದರು. ನರಸಿಂಗರಾಯ ಅವರಿಗೆ ಏನೋ ಹೇಳುತ್ತಿದ್ದ. ಅವರು ಆಯ್ತು ಅನ್ನುವಂತೆ ತಲೆಯಾಡಿಸುತ್ತಿದ್ದರು. ಅವರ ಬಳಿಯಿಂದ ಬಂದು ಸಭಿಕರ ಮುಂದೆ ನಿಂತ ನರಸಿಂಗರಾಯ, ಶ್ರೀಮದ್ರಮಾರಮಣ ಗೋವಿದಾ ಹರೇ ಅಂದ.
ಸ ರಘುನಾಥ ಅಂಕಣ; ಯಶಸ್ಸಿನ ವಾಸನೆ...
ಜನ ಜೈ ಹರಹರ ಮಹಾದೇವ ಅಂದರು. ಕೂಡಲೆ ಅವನು 'ಹೆಹ್ಹೆಹೇ ಹಯ್ಯ' ಎಂದು ಕೂಗಿದ್ದೆ ತಡ ಬಿಳಿವಸ್ತ್ರಧಾರಿಗಳಾದ ಹನ್ನೆರಡು ಮಕ್ಕಳು 'ಜೈರೇ ಜೈಜೈರೇ ಹಹ್ಹಹಾ ತಾಂ ತದಿಕಿಟ ತಾಂ' ಎಂದು ಕೆರೆಗೆ ಬರುವ ಕೊಕ್ಕರೆಗಳಂತೆ ಜನರ ಮಧ್ಯದಿಂದೆದ್ದು ನರಸಿಂಗರಾಯನ್ನು ಸುತ್ತುವರೆದರು. ಅವನ ಮೂರನೇ ಶಿಳ್ಳಿಗೆ ಮಕ್ಕಳು ಲಯಬದ್ಧವಾಗಿ ಚಪ್ಪಾಳೆ ಇಕ್ಕುತ್ತ, ಗೆಜ್ಜೆ ಕಾಲುಗಳನ್ನು ಕುಣಿಸುತ್ತ ಅವನ ಸುತ್ತ ಸುತ್ತತೊಡಗಿರು. ಆಹ್ಹ ಆಹ್ಹ ಹೈಯ್ಯ ಹೈಯ್ಯ ಆಹ ಚಲ್ ಚಲ್ ಎಂದು ಚಕ್ಕಭಜನೆ ಧಾಟಿಯಲ್ಲಿ ಉಲಿದ. ಮಕ್ಕಳು ಹಾಡನ್ನು ಎತ್ತಿಕೊಂಡರು.
ತಿಳಿದಿರಲಿಲ್ಲ ತಿಳಿದಿರಲಿಲ್ಲ ಸೀತಾರಾಮನಿಗೆ
ಕಟ್ಟುವುದೆಂದು ಸೇತುವೆಯನ್ನು ಲಂಕಾ ಪಟ್ಟಣಕೆ
ವಾನರರೆಲ್ಲ ಕಲ್ಲನು ಹೊತ್ತು ಕಡಲಿಗೆ ಎಸೆದು ಎಸೆದು
ಕಟ್ಟುತ್ತಿರಲು ತೋರುತ ಒಗ್ಗಟ್ಟು ಹೈಯ್ಯ ಆಹಾ ಹೈಯ್ಯ
ಅಳಿಲು ಕಡಲಲಿ ಮುಳುಗಿ ಮರಳಲಿ ಹೊರಳಿ
ಸೇತುವೆ ಮೇಲೆ ಮೈ ಕೊಡವಿ ಕೊಡವಿ ಹೈಯ್ಯ ಹೈಯ್ಯ ಆಹ ಆಹ
ಸುಂದರ ಸೇತುವೆ ಲಂಕೆಯವರೆಗೆ ತದ್ದಿಕ್ಕು ತಾಂ ಥೈ ಧಿಮಕಿ ಧಿಮಕಿ
ಮುರಳಿಕೃಷ್ಣ ಮುರಳಿಯನೂದಲು ಗೊಲ್ಲರ ಹಿಂಡೇ ಧಾವಿಸಿ ಬಂದಿತು
ಕಡಲಿನ ನಡೆವೆ ದ್ವಾರಕೆ ಎದ್ದಿತು ತಾತಾ ತದಿಕಿಟ ತದಿಕಿಟ ತೋಂ
ನಾಲ್ವಡಿ ಒಡೆಯ ವಿಶ್ವೇಶ್ವರಯ್ಯ ಕಟ್ಟದೆ ಬಿಟ್ಟರೆ ಕಷ್ಟ ಎಂದು
ನಾಡೇ ಮೆಚ್ಚಿದ ಕನ್ನಂಬಾಡಿ ಹರಹರ ಎಂದು ಹೈಯ್ಯ ಹಯ್ಯ
ಕಡಿಮೆಯೆ ನಾವು ಊರಿನ ಜನರು ಮನೆಗೊಂದಾಳು
ಇರುವುದೆ ಕೆರೆಯಲಿ ಕುಳಿತಾ ಹೂಳು ಹೇಳ್ ಹೇಳ್ ಏಳ್ ಏಳ್ ಹೈಯ್ಯ ಹೈಯ್ಯ
ಮುನಿನಾರಾಯಣಿ ಹಾಕೊ ಹಲಗೆ
ಜಗ್ಗುನಕ ಜಗ್ಗುರೇ ಜಣಕು ನಕ ಜಣಾರೇ
ಮುನಿನಾರಾಯಣಿಯೊಂದಿಗೆ ನರಸಿಂಗರಾಯ, ಮಕ್ಕಳು ಕುಣಿದದ್ದೇ ಕುಣಿದದ್ದು. ಭಜನೆಯ ಗುರು ರಾಮಾಂಜನಿ ಪೀಪಿಯೂದಿದ. ಕುಣಿತ ನಿಂತಿತು. 'ಗಜಾನನ ಓಂ ಗಜಾನನ, ಪಾರ್ವತಿ ತನಯ ಗಜಾನನ' ಪ್ರಾರ್ಥನೆಯೊಂದಿಗೆ ಶುರುವಾದ ಭಜನೆ ನಿಂತಾಗ ರಾತ್ರಿ ಹನ್ನೆರಡು ಗಂಟೆ.
ಸ ರಘುನಾಥ ಅಂಕಣ; ಮನಸ್ಸುಗಳು ಒಂದಾದರೂ ಕಾರ್ಯಕ್ಕಿಳಿಯದ ಪ್ರಯತ್ನ
ಸಿದ್ಧಪ್ಪ ಹೂಳೆತ್ತುವ ಮಾತಿಗೆ ಬಂದ. ನಿಮ್ಮೂರನ್ನು ನೋಡಿಕೊಂಡು ನಮ್ಮೂರಿನಲ್ಲಿ ಜನ ಮುಂದಾಗೋರಿದ್ದಾರೆ. ನೀವು ಏನು ಮಾಡೋರಿದ್ದೀರಿ? ಎಂದು ಪ್ರಶ್ನಿಸಿದ. ನಾವು ಮನೆಗೊಂದಾಳು ಸಿದ್ಧ ಎಂದ ಬೀರಣ್ಣ. ಆಗಲೆ ತಕರಾರಿನ ಧ್ವನಿ ಕೇಳಿಸಿತು. 'ಜಮೀನು ಇರೋರ್ಗೆ ಇದರಿಂದ ಅನುಕೂಲ, ಲಾಭ. ಕೂಲಿ ಮಾಡೋರಿಗೆ ಏನು ಬರುತ್ತೆ?' ಕೆರೇಲಿ ನೀರಿದ್ರೆ ನಿಮಗೆಲ್ಲ ಕೆಲಸ ಸಿಗೊಲ್ವ ಅಂದ ಮುನೆಂಕಟೇಗೌಡ. ಅದು ಇಲ್ಲ ಅನ್ನೊಲ್ಲ.
ಒಂದು ವಾರ ಹೂಳೆತ್ತಬೇಕಾಗುತ್ತೆ ಅಂತೀರ. ಕೂಲಿ ಮಾಡಿ ದಿನ ಕಳೆಯೋರಿಗಿದಾಗುತ್ತ? ಅನ್ನೋ ಮಾತು ಬಂದಿತು. ಇದನ್ನು ದುಗ್ಗಪ್ಪನಾದಿಯಾಗಿ ಕೆಲವರು ನಿರೀಕ್ಷಿಸಿದ್ದರು. ಉತ್ತರವೂ ಸಿದ್ಧವಿತ್ತು. ಅಂಥವರಿಗೆ ದವಸ ಕೊಡೋದು ಅಂತಾಗಿದೆ ಅಂದ ದುಗ್ಗಪ್ಪ. ಇದಕ್ಕೆ ಆಕ್ಷೇಪಣೆಗಳೆಲ್ಲ ಅಡಗಿದವು.
ತೂಬಿನಿಂದ ಹಿಂದಕ್ಕೆ ಹದಿನೈದಡಿ ತನಕ ಮೂರಡಿ ಆಳಕ್ಕೆ ಹೂಳೆತ್ತೋದು. ಅಲ್ಲಿಂದ ಮುಂದಕ್ಕೆ ಎರಡಡಿ ಎತ್ತಿದರೆ ಸಾಕು. ಬೇಕಿದ್ದವರು ಮಣ್ಣನ್ನು ಹೊಲಗದ್ದೆಗಳಿಗೆ ಹೊಡೆದುಕೊಳ್ಳಬಹುದು. ಉಳಿದ ಮಣ್ಣನ್ನು ರಸ್ತೆಯ ಹಳ್ಳಗಳಿಗೆ, ಕಟ್ಟೆಗೆ ಹಾಕೋದು ಎಂಬ ತೀರ್ಮಾನಕ್ಕೆ ಎಲ್ಲರು ಸಮ್ಮತವಾಗಿ ಹೋ ಎಂದರು.