• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ ರಘುನಾಥ ಅಂಕಣ; ನಗೆ ಮೊಗದ ಚಲ್ಲಾಪುರಮ್ಮನೆಷ್ಟು ಸುಂದರ!

By ಸ ರಘುನಾಥ, ಕೋಲಾರ
|

ಕೆಲಸ, ಕಷ್ಟಗಳ ನಡುವೆಯೂ ಊರಿನ ಜನ ಚೆಲ್ಲಾಪುರಮ್ಮನನ್ನು ಮರೆತವರಲ್ಲ. ಶಿವಾರಪಟ್ಟಣದ ಚೆಲುವರಾಜಾಚಾರಿಯ ಕರೆಗಾಗಿ ಕಾಯುತ್ತಿದ್ದರು. ಆ ಕರೆಯೂ ಬಂದಿತು. ಶಾಸ್ತ್ರೋಕ್ತವಾಗಿ ಅಮ್ಮನ ಮೂರುತಿಯನ್ನು ಬರಮಾಡಿಕೊಂಡರು. ಪ್ರತಿಷ್ಠಾಪನೆಯವರೆಗೆ ಆಗಬೇಕಿದ್ದ ಉಪಚಾರಗಳನ್ನು ಶೇಷಪ್ಪ ಮಾಡುತ್ತಿದ್ದ. ವಿಜಯದಶಮಿಗೆ ಪ್ರತಿಷ್ಠಾಪನೆ.

ಮುಖ್ಯಸ್ಥರೆಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದರು. ಅಮ್ಮನ ಪ್ರತಿಷ್ಠಾಪನೆ ಊರು ಮಟ್ಟಿಗಿನ ಕಾರ್ಯಕ್ರಮವಾದರೆ ಸಾಕು. ಹೆಚ್ಚಿಗೆ ಮಾಡಲು ದಿನಗಳು ಸುಖವಾಗಿಲ್ಲ. ಪ್ರತಿಷ್ಠಾಪನೆ ಹೇಗೆ ನೆರವೇರಬೇಕೊ ಹಾಗೆ ನಡೆಯಲಿ. ಉಳಿದಂತೆ ಮನೆಗೊಂದು ಪೂಜೆ. ಅದೇನು ಕಷ್ಟವಲ್ಲ. ಸುನಂದಮ್ಮನಿಗೆ ಹೇಗೂ ಅಮ್ಮನವರ ಕೀರ್ತನೆಗಳು ಬರೋವೆ ಆಗಿರೋದರಿಂದ ಅವತ್ತು ರಾತ್ರಿ ಹಾಡಿಸಿಬಿಡೋಣ. ಮೋಟಪ್ಪನ ತಬಲ, ನರಸಿಂಗನ ಹಾರ್ಮಣಿ ಇದ್ದದ್ದೆ. ಅದಾದ ಮೇಲೆ ಭಜನೆ.

ಸ ರಘುನಾಥ ಅಂಕಣ; ತೋಟಗಳು ಬೀಡು ಬೀಳುತ್ತ, ಮಳೆಗಾಲದಲ್ಲೇ ಗೋಕುಂಟೆ ಬತ್ತಿತು...

ಮರಿ ಬಲಿ ಇಲ್ವೋ ಅಂದ ಯಾಲಗಿರೆಪ್ಪ. ಊರದ್ಯಾವರದಲ್ಲಿ ಆಯ್ತಲ್ಲ. ಈಗೇಕೆ ಅಂದ ಬೀರಣ್ಣ. ಈ ಮಾತಿನಿಂದ ನಿರಾಸೆಯಾದದ್ದು ಮುನಿನಾರಾಯಣಿಗೆ. ಊರದ್ಯಾವರದಲ್ಲಿ ಮರಿಯ ತಲಕಾಯಿ ಅಣ್ಣನಿಗೆ ಹೋಗಿ, ಅವನಿಗೆ ಆರೆಂದರೆ ಆರೇ ಹುಂಜನದ ತಲಕಾಯಿಗಳು ಬಂದಿದ್ದವು. ಹೆಂಡತಿ ಅವನ್ನು ಸುಡುವಾಗ ಇದರಲ್ಲಿ ಬಾಡಾಪಾಡಾ ಎಂದು ಗೊಣಗಿದ್ದಳು. ಈಗ ಮರಿಯ ಬಲಿ ಇದ್ದಿದ್ದರೆ ತಲಕಾಯಿ ತನಗೆ ಬರುತ್ತಿತ್ತು. ಆದರೆ ನಾಲ್ಕು ಜನರ ತೀರ್ಮಾನಕ್ಕೆ ಎದುರು ಹೇಳುವಂತಿರಲಿಲ್ಲ. ಯಾಲಗಿರೆಪ್ಪ ಅವನ ಮುಖ ನೋಡಿ ಅರ್ಥಮಾಡಿಕೊಂಡು, ಮುಂದಿನ ಬಲಿಯಾದಾಗ ತಲಕಾಯಿ ನಿಂದೆ ಅಲ್ವ? ಸುಮ್ನಿರೆಂದ.

ಹೇಗೂ ಸಭೆ ಸೇರಿದೆ. ಇಲ್ಲೆ ಪ್ರಸ್ತಾಪವಾದರೆ ಚೆನ್ನ. ಇದಕ್ಕೇಕೆ ಇನ್ನಂದು ಸಭೆ. ನೀರಿನ ಬಗ್ಗೆ ಮಾತು ತೆಗಿ ಎಂದು ಮುನೆಕ್ಕ ನರಸಿಂಗರಾಯನ ಕಿವಿಯಲ್ಲಿ ಹೇಳಿದಳು. ಇದನ್ನು ಗಮನಿಸಿದ ಮುನೆಂಕಟೇಗೌಡ, ಎಲ್ಲ ಮುಗೀತಿರೋವಾಗ ನಿಂದೇನು? ಅದೇನೊ ಎಲ್ಲರಿಗೂ ಕೇಳೊ ಹಾಗೆ ಹೇಳು ಅಂದ. ಅವಳು ನರಸಿಂಗ ಹೇಳ್ತಾನೆ ಅಂದಳು. ನಿನಗೊಬ್ಬ ಲಾಯರ್ರೋ ಅಂದ ದುಗ್ಗಪ್ಪ. ಲಾಯರಾ ನಂಗೆ? ನರಸಿಂಗನಾದರೆ ಎಲ್ಲ ಇಪ್ಪರ್ಸಿ (ಬಿಡಿಸಿ, ವಿವರಿಸಿ) ಹೇಳ್ತಾನಂತ ಅಷ್ಟೆ ಅಂದಳು. ನರರಸಿಂಗರಾಯ ಅಪ್ಪನ ಮುಖ ನೋಡಿದ. ಊಂ ಆಗಲಿ ಎಂದ ಅಪ್ಪಯ್ಯ.

ಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕು

ಊರಿಗಿರುವ ನೀರಿನ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಹೇಳಿ, ಪ್ರತಿಷ್ಠಾಪನೆ ಮುಗಿದ ಮೇಲೆ ಒಂದು ದಿನ ನಾವೆಲ್ಲ ಎಂ.ಎಲ್.ಎ. ಹತ್ತಿರ ಹೋಗಿ ಕೆರೆಯಲ್ಲಿ ಹೂಳು ಎತ್ತಿಸಲು ಕೇಳೋಣ ಅಂದ ನರಸಿಂಗರಾಯ. ಒಂದು ಸಲ ಹೋಗಿ ಬಂದೆವಲ್ಲ. ಏನಾಯ್ತು? ಈ ಸಲಾನೂ ಅದೇ ಆಗೋದು ಅಂದ ಪಿಲ್ಲಣ್ಣ. ಆಗ ಹೋಗಿದ್ದು ಹುಡುಗರು. ಅವರಲ್ಲಿ ಕೆಲವರು ಓಟು ಇದ್ದೋರಲ್ಲ. ಈ ಸಲ ದೊಡ್ಡೋರ ಜೊತೆ ಹೋಗೋಣ ಅಂದ ನರಸಿಂಗರಾಯ. ದುಗ್ಗಪ್ಪ, ಬೀರಣ್ಣನ ಮುಂದಾಳ್ತನದಲ್ಲಿ ಹೋಗಲು ಇಪ್ಪತ್ತು ಜನ ಆಯ್ಕೆಯಾದರು.

ಅಪ್ಪಯ್ಯ, ನರಸಿಂಗರಾಯನಿಗೂ ಮೊದಲೇ ಮನೆ ಸೇರಿದ್ದ ಮುನೆಕ್ಕ, ಅಮ್ಮಯ್ಯ, ಸುನಂದರಿಗೆ ಎಲ್ಲ ವರದಿ ಮಾಡಿದ್ದಳು. ಸುನಂದಮ್ಮನೋರು ಹಾರ್ಮೋನಿಯಂ, ತಬಲ ಜೊತೆ ಪ್ರಾಕ್ಟೀಸು ಮಾಡೋರೊ, ಇಲ್ಲ ಬೇಕಾಗ್ದೊ ಅಂದ ನರಸಿಂಗರಾಯ. ಇದೇನೊ ನಿನ್ನ ಹೊಸಾ ವರಸೆ ಅಂದಳು ಅಮ್ಮಯ್ಯ. ನಂದಲ್ಲಮ್ಮ ತಾಯಿ, ಸಭೇಲಿ ಸುನಂದಮ್ಮ ಅಂತ ಮಾತು ಬಂತು ಅನ್ನುತ್ತಿರುವಾಗಲೆ ಮೋಟಪ್ಪ ಹಾಜರಾದವನು ಎರಡು ದಿನದ ಪ್ರಾಕ್ಟೀಸು ಸಾಕು ಅಂದ.

ಸ ರಘುನಾಥ ಅಂಕಣ; ವ್ಯವಹಾರ ಕುದುರಿಸಿ ಸಾಕ್ಷಿಯಾದ ನರಸಿಂಗರಾಯ

ಯಾವ ಅಡ್ಡಿ ಆತಂಕವಿಲ್ಲದೆ ಚಲ್ಲಾಪುರಮ್ಮನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಸುನಂದಳ ಸಂಕೀರ್ತನಾ ಸೇವೆ, ಭಜನೆ ಕೈಂಕರ್ಯ ನೆರವೇರಿತು. ಜನರ ಮನಸ್ಸಿನಲ್ಲಿ ಶಾಂತಭಾವ, ಊರಿಗೆ ಒಳ್ಳೆಯದಾಗುವ ಭರವಸೆ.

English summary
People of village decided to establish goddess statue on the day of vijayadashami with simple programmes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X