• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ ರಘುನಾಥ ಅಂಕಣ; ಬಯಲಾದ ಸುದರ್ಶನರೆಡ್ಡಿಯ ನೀಚತನ, ಕೆಂಪರಾಜನ ಹಗೆ...

By ಸ ರಘುನಾಥ, ಕೋಲಾರ
|
Google Oneindia Kannada News

ಸುನಂದಾ ಭಯ, ಗಾಬರಿಯಿಂದ ನಡುಗುತ್ತ, ಬಾಯಿಂದ ಮಾತು ಹೊರಡದೆ ಗರ ಹಿಡಿದವಳಂತೆ ಕುಳಿತಿದ್ದಳು. ಮುನೆಕ್ಕ ನೀರು ಕುಡಿಸಿ ಬೆನ್ನು ಸವರುತ್ತ ಸಮಾಧಾನ, ಧೈರ್ಯ ತುಂಬುತ್ತಿದ್ದಳು. ಹೆಂಗಸರ ದೊಡ್ಡ ಗುಂಪೇ ಅವಳ ಸುತ್ತ ನೆರೆದಿತ್ತು. ಹಣೆಯ ಗಾಯದಿಂದ ನೆತ್ತರು ಜಿನುಗುತ್ತಿತ್ತು. ಅಮ್ಮಯ್ಯ ಅದಕ್ಕೆ ಅರಿಸಿನ ಹಚ್ಚಿದಳು.

ಕೆಂಪರಾಜನೊಂದಿಗೆ ಇನ್ನೊಬ್ಬನನ್ನು ಮಲ್ಲಪ್ಪನ ಮನೆ ಮುಂದಿನ ಚಪ್ಪರದ ಕಲ್ಲುಗಂಬಕ್ಕೆ ತೆಂಗಿನ ನಾರಿನ ಹಗ್ಗದಿಂದ ಕಟ್ಟಿದರು. ಸರ್ವೇತೋಪಿನಲ್ಲಿ ಎಳೆದಾಡಿ ಅವಮಾನಿಸಿದ್ದ ಕೆಂಪರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಪುಟ್ಟಮಲ್ಲಿ ಚೆಂಬಿನಲ್ಲಿ ನೀರುತಂದು ಕೆಂಪರಾಜನ ಕಟ್ಟುಗಳ ಮೇಲೆ ಸುರಿಯುತ್ತಿದ್ದಳು. ಹಗ್ಗದ ಬಿಗಿತಕ್ಕೆ ಅವನು ಚೀರಾಡುತ್ತಿದ್ದ. ಇದೇ ಶಿಕ್ಷೆಯನ್ನು ಬೋಡೆಪ್ಪ ಆ ಇನ್ನೊಬ್ಬನಿಗೆ ಕೊಡುತ್ತಿದ್ದ. ಕೆಂಪರಾಜನ ಆಕ್ರಂದನ ಪುಟ್ಟಮಲ್ಲಿಯ ಎದೆಯ ಹಗೆಯನ್ನು ತಣಿಸುತ್ತಿತ್ತು. ಇನ್ನೊಬ್ಬನ ಗೋಳಾಟಕ್ಕೆ ಯಾರ ಕಿವಿಯೂ ತೆರೆದಿರಲಿಲ್ಲ.

ಸ ರಘುನಾಥ ಅಂಕಣ; ಸುನಂದಾಪಹರಣ...ಸ ರಘುನಾಥ ಅಂಕಣ; ಸುನಂದಾಪಹರಣ...

ಆ ಹೊತ್ತಿನಲ್ಲಿಯೇ ಅಲ್ಲಿಯೇ ವಿಚಾರಣೆ ಶುರುವಾಯಿತು. ನಿಜ ಹೇಳದೆ ಉಳಿಗಾಲವಿಲ್ಲ ಎಂದು ಮನಗಂಡ ಅಪರಿಚಿತ ಬಾಯಿಬಿಟ್ಟ. ಅವನು ಮದನಪಲ್ಲಿಯ ಸುದರ್ಶನರೆಡ್ಡಿ. ಅವನು ಗುತ್ತಿಗೆ ಪಡೆದು ನಡೆಸುತ್ತಿದ್ದ ರೆಕಾರ್ಡ್ ಡ್ಯಾನ್ಸ್ ಟ್ರೂಪಿಗೆ ಮೋಸದಿಂದ ಸುನಂದಳನ್ನು ಸೇರಿಸಿಕೊಂಡು ಹೆದರಿಸಿ ದುಡಿಸಿಕೊಳ್ಳುತ್ತಿದ್ದ. ಇಬ್ಬರು ಹೆಂಡಿರಿದ್ದರೂ ಸುನಂದಳ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ತಿಸಿದ್ದ.

ಎರಡನೇ ಹೆಂಡತಿ ಅವನಿಂದ ಬಿಡಿಸಿ, ತನ್ನ ಪರಿಚಿತರಲ್ಲಿ ಬಿಟ್ಟಿದ್ದಳು. ಆದರೂ ಅವನು ಸುನಂದಳನ್ನು ಕಾಡುತ್ತಲೇ ಬಂದಿದ್ದ. ಅವಳು ಅಪ್ಪಯ್ಯನ ಆಶ್ರಯಕ್ಕೆ ಬಂದ ಮೇಲೆ ಅವನ ನೀಚತನ ಅವಳ ಅಪಹರಣಕ್ಕೆ ಹೊಂಚು ಹಾಕುತ್ತಿತ್ತು. ಆದರೆ ಸುನಂದಳಿಗೆ ರಕ್ಷಣೆ ಇದ್ದುದು ತಿಳಿದ ಮೇಲೆ ದಿನದಿಂದ ದಿನಕ್ಕೆ ಅವನ ಹೊಂಚಿನ ಬಿಗಿ ತಪ್ಪುತ್ತಿತ್ತು. ರಿಕಾರ್ಡು ಡ್ಯಾನ್ಸಿನ ಖಯಾಲಿಯಿದ್ದ ಕೆಂಪರಾಜ ಸುದರ್ಶನ ರೆಡ್ಡಿಯನ್ನು ತನ್ನ ಹಗೆ ತೀರಿಸಿಕೊಳ್ಳಲು ಅವನೊಂದಿಗೆ ಕೈ ಜೋಡಿಸಿದ್ದ.

ಊರಿನವನೇ ತನ್ನ ಪರವಿರುವಾಗ ರೆಡ್ಡಿ ಧೈರ್ಯ ಮಾಡಿದ್ದ. ಅವನ ಹೊಂಚಿಗೆ ಮಾರ್ಗದರ್ಶಕನೇ ಕೆಂಪರಾಜ. ಮುನೆಕ್ಕನ ಕೂಗಾಟದಿಂದ ಡ್ರೈವರ್ ಗಾಬರಿಗೊಂಡು ಕಾರನ್ನು ರಿವರ್ಸ್ ತೆಗೆದುಕೊಳ್ಳದೆ ನೇರ ಓಡಿಸಿದ್ದರೆ ಸುನಂದಳ ಅಪಹರಣ ಯಶಸ್ವಿಯಾಗುತ್ತಿತ್ತು.

ಸ ರಘುನಾಥ ಅಂಕಣ; ಶಿವರಾತ್ರಿ ದಿನ 'ಲೋಕಲ್' ಶಕುಂತಲೆ ಎಂಬ ನಾಟಕಸ ರಘುನಾಥ ಅಂಕಣ; ಶಿವರಾತ್ರಿ ದಿನ 'ಲೋಕಲ್' ಶಕುಂತಲೆ ಎಂಬ ನಾಟಕ

ಕಟಕಟ ಹಲ್ಲು ಕಡಿದ ಪಿಲ್ಲಣ್ಣ ದೊಣ್ಣೆಯಿಂದ ಸುದರ್ಶನ ರೆಡ್ಡಿಯ ಬಲಮೊಣಕಾಲಿನ ಚಿಪ್ಪಿಗೆ ಬೀಸಿ ಹೊಡೆದ. ಅವನು ನರಕ ಯಾತನೆಯಿಂದ ನರಳಿದ. ಪಿಲ್ಲಣ್ಣನ ದೊಣ್ಣೆ ಎಂಡಮಂಡಿಯತ್ತ ಗುರಿಗೊಂಡಿತು. ನರಸಿಂಗರಾಯ ತಡೆಯದಿದ್ದರೆ ಏಟು ಅಲ್ಲಿಗೂ ಬೀಳುತ್ತಿತ್ತು. ಪಿಲ್ಲಣ್ಣನ ಹೊಡೆತಕ್ಕೆ ಅವನ ಮಂಡಿ ಮೂಳೆ ಸೀಳದೆ ಇರುವುದಿಲ್ಲ ಎಂದು ಮನೆಂಕಟೆಗೌಡ ಅಂದುಕೊಳ್ಳುತ್ತಿರುವಾಗಲೆ, ಯಾರ ಕೈ ದೊಣ್ಣೆ ಕೆಂಪರಾಜನ ಕಡೆಗೋ ಎಂದು ಭಯಗೊಂಡ ಸಾದಮ್ಮ ಮಗನನ್ನು ಕಾಪಾಡುವಂತೆ ಅಣ್ಣನ ಕಾಲು ಕಟ್ಟಿದಳು.

ಕೂಡಲೆ ಮುನೆಂಕಟೇಗೌಡ ಈ ಹಲ್ಕ ಮಾಡಿರೊ ತಪ್ಪಿಗೆ ತಕ್ಕದ್ದನ್ನು ಮಾಡೋಣ. ಅವನ ಮೇಲೆ ಕೈ ಮಾಡುವುದು ಬೇಡವೆಂದು ಬೇಡಿದ. ಪೋಲಿಸುವರೆಗೆ ಹೋದರೆ ಇಬ್ಬರ ಮೇಲೂ ಕೇಸಾಗುತ್ತೆ. ಅದು ಬೇಡ. ಊರಿಗೆ ಪೊಲೀಸರು ಬರೋದು ಬೇಡವೆಂದು ದುಗ್ಗಪ್ಪ ಹೇಳಿದ್ದು ಎಲ್ಲರಿಗೂ ಸರಿ ಎನಿಸಿತು. ಬೀರಣ್ಣ ಇಬ್ಬರನ್ನೂ ಬಂಧ ಮುಕ್ತರನ್ನಾಗಿ ಮಾಡಿದ. ಕಟ್ಟು ಬಿಚ್ಚಿದ ಕೂಡಲೇ ಸುದರ್ಶನರೆಡ್ಡಿ ನೆಲಕ್ಕೆ ಕುಸಿದ. ಬಲಗಾಲು ಊರಲೂ ಆಗುತ್ತಿರಲಿಲ್ಲ.

ಸುದರ್ಶನ ರೆಡ್ಡಿಯಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡರು. ಅವನ ಕೊರಳಲ್ಲಿದ್ದ ನಾಲ್ಕು ಸವರನ್ ಚಿನ್ನದ ಸರ ಗೋಪಾಲಸ್ವಾಮಿಗೆ ತಪ್ಪು ಕಾಣಿಕೆಯಾಗಿ ಸೇರಿತು. ಜೇಬಿನಲ್ಲಿದ್ದ ಹತ್ತು ಸಾವಿರ ರೂಪಾಯಿಗಳಲ್ಲಿ ಅವನು ಮದನಪಲ್ಲಿ ತಲುಪಲು ಮೂರು ಸಾವಿರ ರೂಪಾಯಿಗಳನ್ನು ಉಳಿಸಿ, ಏಳು ಸಾವಿರವನ್ನು ಊರವಸೂಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಯಿತು. ಅವನ ಕಾಲಿಗೆ ಪೂಜಾರಿ ಶೇಷಪ್ಪ ಮದ್ದಿನ ಕಟ್ಟು ಹಾಕಿದ.

ಆ ವೇಳೆಗೆ ಕೋಳಿ ಕೂಗಿತು. ಮುನೆಂಕಟೇಗೌಡನ ಎತ್ತಿನಗಾಡಿಯಲ್ಲಿ ರಂಗ, ಬೋಡೆಪ್ಪ ಸುದರ್ಶನರೆಡ್ಡಿಯನ್ನು ರಸ್ತೆವರೆಗೆ ಬಿಟ್ಟುಬರಲು ಅವನನ್ನು ಎತ್ತಿನ ಗಾಡಿಯಲ್ಲಿ ಕೂರಿಸಿದರು. ಅವನು ಮಾತಿಲ್ಲದೆ ಸುನಂದಳತ್ತ ಕೈ ಮುಗಿದ. ಊರಿನವರಿಗೆ ಕೈ ಮುಗಿದು ಕೆನ್ನೆಗೆ ಬಡಿದುಕೊಂಡ. ಸಾಯಂಕಾಲಕ್ಕೆ ಚಲ್ಲಾಪುರಮ್ಮನ ಗುಡಿ ಮುಂದೆ ಕೆಂಪರಾಜನ ವಿಚಾರಣೆಯಿದೆಯೆಂದು ಮುನೆಂಕಟೇಗೌಡ ಸಾರಿದ.

English summary
Villagers tied two kidnappers and beaten them. There is a big story behidn this kidnap
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X