ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ನರಸಿಂಗರಾಯನಲ್ಲಿ ಅವನದೇ ಪ್ರಶ್ನೆಗಳು

By ಸ ರಘುನಾಥ, ಕೋಲಾರ
|
Google Oneindia Kannada News

ಕೆರೆ ತುಂಬಿತು. ಊರು ಸಂಭ್ರಮಿಸಿತು. ನೇಗಿಲುಗಳು ನೆಲದೊಂದಿಗೆ ಯುಗಳಗೀತೆ ಹಾಡಿದ್ದನ್ನು ನರಸಿಂಗರಾಯ, ಸುನಂದಾ ಕೇಳಿಸಿಕೊಂಡು ಆನಂದಿಸಿದರು. ಈ ಹಾಡು ತಮ್ಮ ಹೊಲಗದ್ದೆಗಳಲ್ಲಿಯೂ ಕೇಳಿಸದಿದ್ದರೆ ಹೆಂಡಂದಿರು ಮುಖಕೆ ಮಂಗಳಾರತಿ ಎತ್ತುವುದು ಖಾತ್ರಿಯೆಂದು ಪುಡಿಹುಡಿ ಪುಢಾರಿಗಳೂ ನೇಗಿಲು ಹಿಡಿದರು.

ಎತ್ತು, ನೇಗಿಲಿದ್ದವರ ಬೇಸಾಯದ ಬದುಕು ನಿರಾತಂಕ ಸಾಗಿತು. ಟ್ರಾಕ್ಟರುಗಳಿದ್ದವರು ತಮ್ಮ ಜಮೀನುಗಳು ಪಾಕಾಗದೆ (ಹದವಾಗದೆ) ಬಾಡಿಗೆಗೆ ಬರಲೊಪ್ಪಲಿಲ್ಲ. ತಮ್ಮ ಕೆಲಸ ಮುಗಿಸಿದ್ದ ಕೆಲವರು ಡೀಸಲಿನ ಬೆಲೆಯೇರಿಕೆಯ ನೆಪದಲ್ಲಿ ಡಿಮಾಂಡಿಗೆ ತಕ್ಕಂತೆ ಬಾಡಿಗೆ ಏರಿಸಿದರು. ತೆತ್ತವರ ಜಮೀನು ಉಳುಮೆಯಾಯಿತು. ಮಿಕ್ಕವರು ಟ್ರಾಕ್ಟರಿನ ಓನರುಗಳ ಮನೆ ಬಾಗಿಲು ಕಾಯುವಂತಾಯಿತು.

ಸ ರಘುನಾಥ ಅಂಕಣ; ಕೆರೆಯಲ್ಲಿ ನಿಂತು ನಕ್ಕಳು ಗಂಗಮ್ಮ ಸ ರಘುನಾಥ ಅಂಕಣ; ಕೆರೆಯಲ್ಲಿ ನಿಂತು ನಕ್ಕಳು ಗಂಗಮ್ಮ

ಕೊಡುವ ಬಾಡಿಗೆ ದುಡ್ಡಿಗೆ ಕೊಂಚ ಸೇರಿಸಿದರೆ ಎತ್ತುಗಳು ಬರುವುವು ಎಂದು ವಿವೇಕ ತಂದುಕೊಂಡವರು, ಅದರಿಂದ ಗೊಬ್ಬರವೂ ಸಿಗುವ ಕಾರಣದಿಂದಾಗಿ ಎತ್ತುಗಳಿಗಾಗಿ ಸಂತೆಗಳಿಗೆ ಅಲೆದರು. ಹೀಗೆ ಕೆಲವು ವರುಷಗಳಿಂದ ಬೀಡು ಬಿದ್ದಿದ್ದ ತುಂಡು ಭೂಮಿ ಬೇಸಾಯದಾರರು ಸೇದ್ಯ (ಬೇಸಾಯ) ದಾರರಾದರು ಇಂತು ಮುಕ್ಕಾಲು ಊರು ಬೇಸಾಯಗಾರರ ಊರೆನಿಸಿತು. ಎಷ್ಟು ವರುಷಗಳಾದವು ಇಂಥ ದೃಶ್ಯ ಕಣ್ಣುತುಂಬಿ ಎಂದು ಅಪ್ಪಯ್ಯ, ದುಗ್ಗಪ್ಪ ಮಾತಾಡಿಕೊಂಡರು.

Village Scene Completely Changed By Filled Lake

'ರಾಜ್ಯದ ಹಳ್ಳಿ ಹಳ್ಳಿ ಹೀಗಾಗಿಬಿಟ್ಟರೆ ಸಾಹೇಬ್ರೆ, ನಾವು ಹೊಲಗದ್ದೆಗಳ ಸುತ್ತ ಅಲೀಬೇಕಾಗುತ್ತೆ. ನಾವು ಅಲೆಸಿದ್ದಕ್ಕೆ ರಿವೆಂಜು ತೀರಿಸಿಕೊಂಡರೂ ತೀರಿಸಿಕೊಂಡಾರು. ಬೇಸಾಯದ ರೈತರು 'ರೈತ ಓಟು' ಎಂದು ಆಲೋಚಿಸುವಂತೆ ಯಾರಾದರೂ ಮಾಡಿದರೆಂದುಕೊಳ್ಳಿ, ಆಗ ನಮ್ಮ ಅಡಿಗೆ ಸುಣ್ಣಕಲ್ಲು ಇಟ್ಟು ನೀರು ಬಿಟ್ಟುಕೊಂಡಂತಾಗುತ್ತಲ್ಲ' ಎಂದು ಎಂಎಲ್ ಎ ತಮ್ಮ ಆಪ್ತ ಮಂತ್ರಿಯೊಬ್ಬರಿಗೆ ಹೇಳಿದರಂತೆ ಎಂಬ ಮಾತು ಗುಂಡು ಪಾರ್ಟಿ ಮಾಡುವಾಗ ಪುಡಿಕಂಟ್ರಾಕ್ಟರ್ ಒಬ್ಬನ ಬಾಯಿಯಿಂದ ಹೊರಬಿತಂತ್ತೆ.

ಅದಕ್ಕೆ ಮಿನಿಸ್ಟರು ಸಾಹೇಬರು, 'ಅಯ್ಯೋ ತೆಗೇರಿ ಸಾಕು. ರಾಜ್ಯ ಅಂದ್ರೆ ಆ ಒಂದೂರೇನ? ರಾಮರಾಜ್ಯದ ಕನಸಿನಂತೆ ನಿಮ್ಮದು. ನಮ್ಮ ಕೈದಾಟಿ ಹೋಗೋದು ಯಾವುದಿದೆ? ಇಂಥ ಹಗಲುಗನಸು ಕಂಡು ಭಯ ಬೀಳೋದನ್ನು ಬಿಡ್ರಿ' ಅಂದರೆಂದು ಹೇಳಿದ್ದೂ ಆ ಕಂಟ್ರಾಕ್ಟ್ರನೇ ಅಂತೆ.

 ಸ ರಘುನಾಥ ಅಂಕಣ; ಜಗ್ಗುನಕ ಜಗ್ಗುರೇ ಜಣಕು ನಕ ಜಣಾರೇ... ಸ ರಘುನಾಥ ಅಂಕಣ; ಜಗ್ಗುನಕ ಜಗ್ಗುರೇ ಜಣಕು ನಕ ಜಣಾರೇ...

ನರಸಿಂಗರಾಯನ ಗುಂಪಿಗಿದು ಗಂಭೀರವಾಗಿ ಕಂಡಿತು. ಕಾರ್ಪೊರೇಟುಗಳು ರಾಜಕೀಯವನ್ನು ಅಲುಗಾಡಿಸುವಂತೆ ರೈತರಿಂದೇಕಾಗುತ್ತಿಲ್ಲ ಎಂದು ನರಸಿಂಗರಾಯ ಪ್ರಶ್ನಿಸಿಕೊಂಡ. ಎಮ್ಮೆಲ್ಯೆ, ಮಿನಿಷ್ಟರನ ಮಾತುಗಳು ಒಣ ರಾಜಕಾರಣದ ಮಾತುಗಳಾಗಿರಲಿಲ್ಲ. ರಾಮರಾಜ್ಯ, ಗ್ರಾಮ ಸ್ವರಾಜ್ಯವನ್ನು ಚಂದ್ರ ಸೂರ್ಯರಷ್ಟು ದೂರ ಇಟ್ಟಿರುವವರು ಆಡಿದ ಮಾತು ನಿಜ ತಾನೆ ಅನ್ನಿಸಿತು. ಆ ಗತ, ಈ ವರ್ತಮಾನದಂತೆಯೇ ಭವಿಷ್ಯತ್ತಿಗೂ ಹತ್ತಿಕೊಳ್ಳುವುದೆ ಎಂಬ ಪ್ರಶ್ನೆ ಹುಟ್ಟಿತು. ಇದು ಈ ಕಾಲ ದಾಟಿದ ಆಲೋಚನೆಯೆ ಎಂದು ಪ್ರಶ್ನಿಸಿಕೊಂಡ. ಇದಕ್ಕೆ ಉತ್ತರಿಸಿವ ದಾರ್ಶನಿಕತೆ ತನ್ನಲ್ಲಿಲ್ಲ ಅನ್ನಿಸಿ ನಿರಾಸೆಗೊಂಡ.

ಜಾತಿಗಳ ಓಟು 'ರೈತನ ಓಟು' ಆಗಿ ಪರಿವರ್ತನೆಗೊಳ್ಳುವುದು ಜಡಗೊಳಿಸಿರುವ ಗ್ರಾಮ ಸ್ವರಾಜ್ಯ ಚೇತನಗೊಂಡಾಗಲೇ ಎಂದು ಅರ್ಥಮಾಡಿಕೊಳ್ಳುವವರು ಯಾಕಿಲ್ಲವೆಂದು ಹುಣಿಸೆ ಮರಗಳನ್ನು ಕೇಳಿದ. ಕೊಂಬೆಗಳು ಅಲುಗಾಡಿ ಗಾಳಿ ಬೀಸಿದವು.

ಆ ಅಲೆಗಳಲ್ಲೊಂದು ನರಸಿಂಗರಾಯನ ಮನದಲ್ಲಿ ಬೀಸಿ, ಆಲೋಚನೆಯ ದಾರಿಗೆಳೆಯಿತು. ಬುದ್ಧ ಹೇಳಿದ್ದು ತಿಳಿದುಕೊಂಬ ಶಿಷ್ಯರಿದ್ದರು. ಕೃಷ್ಣ ಬೋಧಿಸಿದ್ದನ್ನು ಅನುಸರಿಸುವವರಿದ್ದರು. ಏಸುವಿಗೆ ಕೇಳಿಸೊಳ್ಳುವ ಜನರಿದ್ದರು. ಪೈಗಂಬರ್ ನುಡಿಗೆ ಕಿವಿಗೊಡುವವರಿದ್ದರು. ಗಾಂಧಿಗೆ ಕಾರ್ಯಕ್ಕಿಳಿವ ಅನುಯಾಯಿಗಳಿದ್ದರು. ಈಗ ಅವರೆಲ್ಲ ತಾನೆ ಎಂಬ ಅಹಮಿನ ಭ್ರಮೆ ಆವರಿಸಿದೆ. ಹೇಳುವವರ ಮುಂದೆ ಆಮಿಷದ ಉಸಿರಾಟಗಳು. ತಿರುಚು ವಾದಗಳಿಂದ ಗಾಂಧಿ, ಅಂಬೇಡ್ಕರರಿಗೆ ಕೊಡುತಿರುವ ಬಳುವಳಿ ಏನು? ಹೀಗೆಯೇ ಮುಂದುವರೆದರೆದರೆ ಆದೀತೋ ಕೂಡೂಟ? ಸಮಾನತೆಯ ಸಂವೇದನೆ ಸಾಮಾಜಿಕ ಧ್ವನಿಯಾಗಲು ಕಾಯಬೇಕಿರುವುದು ಎಲ್ಲಿಯವರೆಗೆ?

ಮನಸು ಗಾಳೆಯಲೆಯ ರೂಪ ತಾಳಿ ಹೇಳಿತೆ ಇದನೆಲ್ಲ ಎಂದು ನರಸಿಂಗರಾಯ ಚಿಂತನೆಯಲ್ಲಿ ಮುಳುಗಿದ. ಲಾಂತರು ಹಿಡಿದು ಹುಡುಕುತ್ತ ಬಂದ ಅಪ್ಪಯ್ಯ 'ನರಸಿಂಗಾ' ಎಂದು ಕೂಗು ಹಾಕಿದಾಗ ರಾತ್ರಿ ಹನ್ನೊಂದು ದಾಟಿತ್ತು.

English summary
People started agriculture after so many years in village. Village scene completely changed by lake water,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X