ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ಅಖಂಡ ಜ್ಯೋತಿಯೆತ್ತಿ ಊರದ್ಯಾವರ ಮಾಡಿ

By ಸ ರಘುನಾಥ, ಕೋಲಾರ
|
Google Oneindia Kannada News

ಅಖಂಡ ಜ್ಯೋತಿಯೆತ್ತಿ ಊರದ್ಯಾವರ ಮಾಡಿದರು. ಇದಕ್ಕಾಗಿ ನೆಂಟರು ಇಷ್ಟರನ್ನು ಕರೆಸಿಕೊಂಡಿದ್ದರು. ಮೂರೂ ದಿನ ಇಂಥವರು ಇಂಥವರ ಮನೆಯಲ್ಲೇ ಊಟ ಮಾಡಬೇಕೆಂದಿರಲಿಲ್ಲ. ಯಾರ ಮನೆಗೆ ಹೋದರೂ ನೀವು ಯಾರೆಂದು ಕೇಳದೆ ಅನ್ನವಿಕ್ಕುತ್ತಿದ್ದರು. ದೀಪಳ ದಿನವಂತೂ ಮರಿ, ಕೋಳಿಬಾಡಿನ ಸಮಾರಾಧನೆ. ಮಾಂಸ ಮಾಡದವರ ಮನೆಗಳಲ್ಲಿ ಒಬ್ಬಟ್ಟು, ಖೀರು, ಚಿತ್ರಾನ್ನ, ಕೋಸಂಬರಿಗಳು. ಮಸಾಲೆ ಘಮಲು, ಒಗ್ಗರಣೆ ವಾಸನೆ ಒಂದರೊಳಗೊಂದು ಬೆರೆತು ಯಾರ ಮನೆಯಲ್ಲಿ ಏನಡುಗೆ ಎಂಬುದು ತಿಳಿಯಲು ಮನೆಗಳಿಗೇ ಹೋಗಬೇಕಿತ್ತು. ಬಾಡಿನೂಟ ಬೇಕೆಂದವರಿಗೆ ಅದು. ಬೇಡೆಂದವರಿಗೆ ಸಕತ್ತಾದ ಒಬ್ಬಟ್ಟಿನೂಟ.

ಬಂದವರಲ್ಲಿ ಯಾರು ಯಾವ ಜಾತಿಯವರೊ, ಯಾವ ಜಾತಿಯವರ ಮನೆಯಲ್ಲಿ ಉಂಡರೊ ಹೇಳುವವರಿಲ್ಲ. ಕೇಳಿದವರೂ ಇಲ್ಲ. ಎಲ್ಲವೂ ಊಟವೇ. ಆದರೆ ಅವರವರಿಗೆ ಬೇಕಾದ್ದಷ್ಟೆ. ಊರದ್ಯಾವರ ಹೀಗೆ ಜಾತಿಯನ್ನು ಮೀರುತ್ತದೆಯಾದರೆ ಯಾಕಾಗಬಾರದು? ಆ ಈ ವಾದಗಳಲ್ಲೇ ಇದ್ದುಬಿಡುವುದಕ್ಕಿಂತ ಇಂಥ ಆಚರಣೆಗಳು ಸಾಮಾಜಿಕವಾಗಿಯೂ ಮುಖ್ಯವಾಗುವುದಲ್ಲವೆ ಎಂದು ನರಸಿಂಗರಾಯ ಸುನಂದಾಳಿಗೆ ಹೇಳಿದ. ನೀನು ಹೀಗೆ ಹೇಳು. ಮೂಲಭೂತವಾದಿಯೆಂದು ನಿನ್ನನ್ನು ಹಿಗ್ಗಾಮುಗ್ಗಾ ಜಾಡಿಸಿಬಿಡುತ್ತಾರೆ ಎಂದು ಅವಳು ನಕ್ಕಳು. ಹಾಗೆಯೆ ಮಾಡಲೇಳು. ನಮ್ಮ ಊರಿನ ಹೆಸರು ಈವರೆಗೆ ಪತ್ರಿಕೆಗಳಲ್ಲಿ ಬಂದಿಲ್ಲ. ಹೀಗಾದರೂ ಬರಲಿ ಅಂದ. ಎಂದೋ ಒಂದುದಿನ ಬರದಿರದು ಅಂದಳು.

ಸ ರಘುನಾಥ ಅಂಕಣ; ಊರುದ್ಯಾವರ ಮಾಡಬೇಕಣ್ಣ...ಸ ರಘುನಾಥ ಅಂಕಣ; ಊರುದ್ಯಾವರ ಮಾಡಬೇಕಣ್ಣ...

ಊರದ್ಯಾವರ ಸಾಂಗವಾಗಿ ನಡೆದು, ಆಡಿಕೊಳ್ಳುತ್ತಿದ್ದ ಮಾತುಗಳ ನಡುವೆ ಸುನಂದಾಳ ಹರಿಕಥೆ, ಅವಳು ಪದ್ಯಗಳನ್ನು ಹಾಡುತ್ತಿದ್ದ ರೀತಿ, ಅವಳ ಧ್ವನಿಯಿಂಪು, ಸೀತೆಯನ್ನು ಕುರಿತು ಹೇಳುವಾಗ ಕರಳು ಕರಗುತ್ತಿರುವಂತಾಗುತ್ತಿತ್ತು ಎಂಬ ಮಾತು ಸೇರುತ್ತಿತ್ತು. ಸೋಮೇಶನಿಗೆ ಹಾವು ಕಡಿದಿದ್ದಾಗ ಅವಳ ಹಾಡುಗಾರಿಕೆಯನ್ನು ಕೆಲವರಷ್ಟೇ ಆಲಿಸಿದ್ದರು. ಅಂದು ಇಡೀ ಊರಜನರೊಂದಿಗೆ ಹೊರಗಿನಿಂದ ಬಂದಿದ್ದವರೂ ಕೇಳಿ ಮೆಚ್ಚಿದ್ದರು.

Village People Gathered And Perform Village Diety Pooja

ಸುನಂದಾಳ ಹಾಡಿಕೆಗೆ ನರಸಿಂಗರಾಯ ಹಾರ್ಮೋನಿಯಂ ಅನ್ನು, ಮೋಟಪ್ಪ ತಬಲವನ್ನು ಮೊದಲ ಬಾರಿಗೆ ನುಡಿಸಿದ್ದರು. ಅವಳು ಕಥೆ ಮುಗಿಸಿ, ಶೇಷಪ್ಪ ತರುವ ಮಂಗಳಾರತಿಗಾಗಿ ಕಾಯುತ್ತಿದ್ದಾಗ ತಬಲ ಬಿಟ್ಟು ಎದ್ದ ಮೋಟಪ್ಪ, 'ಇವತ್ತಿಗೆ ನನ್ನ ಕೈಗಳು ಸಾರ್ಥಕವಾದವು ತಾಯಿ' ಎಂದು ಕೈ ಮುಗಿದ. ಸುನಂದ, 'ಕೈ ಮುಗಿಯಬೇಡಿ; ಆಶೀರ್ವದಿಸಿ' ಎಂದು ಅವನ ಕಾಲಿಗೆ ನಮಸ್ಕರಿಸಿದಳು. ಮೋಟಪ್ಪ ಆಕಾಶಕ್ಕೆ ಕೈ ಮುಗಿದ.

ಸ ರಘುನಾಥ ಅಂಕಣ; ಊರ ಮೇಲೆ ಮಾರಿಕಣ್ಣು...ಸ ರಘುನಾಥ ಅಂಕಣ; ಊರ ಮೇಲೆ ಮಾರಿಕಣ್ಣು...

ಮಾರನೆಯ ದಿನ ಸಂಜೆ ಚಲ್ಲಾಪುರಮ್ಮನ ಗುಡಿಯಲ್ಲಿ ಮುಖ್ಯರ ಹಾಗು ಹಣಕಾಸಿನ ವ್ಯವಹಾರ ನೋಡಿಕೊಂಡವರ, ಆಸಕ್ತರ ಸಭೆ ಸೇರಿತು. ಬೀರಣ್ಣ ನೀಡುತ್ತಿದ್ದ ಹಣದ ಲೆಕ್ಕ ನರಸಿಂಗರಾಯನ ಪುಸ್ತಕದಲ್ಲಿ ನಮೂದಾಗಿತ್ತು. ಬೀರಣ್ಣ ತನ್ನ ಕೈ ಸೇರಿದ ಹಣದ ಲೆಕ್ಕ ಕೊಟ್ಟರೆ, ನರಸಿಂಗರಾಯ ಖರ್ಚಿನ ಬಾಬತ್ತು ವಿವರ ನೀಡಿದ. ಬಂದಿದ್ದರಲ್ಲಿ ಹೋದದ್ದು ಕಳೆದು ಇಪ್ಪತ್ತೆಂಟು ಸಾವಿರದ ಮುನ್ನೂರ ನಲವತ್ತೊಂದು ರೂಪಾಯಿಗಳ ಶಿಲ್ಕು ಕಂಡಿತು. ಶೇಷಪ್ಪ ಹೇಳಿದ್ದ ದೇವಸ್ಥಾನದ ಚೀಟಿಯ ಹಣ ಇಪ್ಪತ್ತು ಸಾವಿರದೊಂದುನೂರೊಂದು ಹಾಗೆಯೇ ಉಳಿದಿತ್ತು. ಎರಡೂ ಸೇರಿ 48,442-00 ರೂಪಾಯಿಗಳನ್ನು ದೇವಸ್ಥಾನದ ಚೀಟಿ ಲೆಕ್ಕದಲ್ಲಿ ಬರೆಯಲಾಯಿತು. ವಿಗ್ರಹ ಮಾಡಿಸುವಾಗ ಉಳಿದದ್ದು ನೋಡೋಣವೆಂದು ಅಮ್ಮನಿಗೆ ಕ್ಷಮಿಸೆಂದು ಕೇಳಿ ಮಂಗಳಾರತಿ ಬೆಳಗಲು ಶೇಷಪ್ಪನಿಗೆ ಹೇಳಿದರು. ಅಪ್ಪಯ್ಯ 'ಶಾಂತಮು ಲೇಕಾ ಸೌಖ್ಯಮು ಲೇದು' (ಶಾಂತು ಇರದೆ ಸೌಖ್ಯವು ಇರದು) ಎಂದು ತ್ಯಾಗರಾಜರ ಕೀರ್ತನೆಯನ್ನು ಹಾಡಿದ.

English summary
Village set to celebrate village diety festival. All villagers celebrated festival with different food and songs,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X