• search

ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ

By ಸ ರಘುನಾಥ, ಕೋಲಾರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಹಳ್ಳಿಗಳಲ್ಲಿ ಅಜ್ಞಾತ ನಟ, ಗಾಯಕ, ವಾದಕ ಕಲಾವಿದರಿಗೆ ಬರವಿಲ್ಲ. ದುಡಿಮೆಯ ನಡುವೆ ಬಿಡುವು ಸಿಕ್ಕಿದಾಗಲೆಲ್ಲ ಇವರೊಳಗಿನ 'ಹಂಸಧ್ವನಿ'ಗೆ ರೆಕ್ಕೆ ಮೂಡಿಬಿಡುತ್ತದೆ. ರಾತ್ರಿಯಾದರಂತೂ ಅದರ ತಂಪಿಗೆ ಇಂಪು ತುಂಬಿಬಿಡುತ್ತಾರೆ.

  ಮನೆಯಂಗಳ, ಜಗುಲಿ, ದೇವಸ್ಥಾನದ ಮುಂಭಾಗ ಇವರ ಪ್ರದರ್ಶನ ಶಾಲೆ. ನಿದ್ರಾದೇವಿ ಬಂದು ಮಲಗೆನ್ನುವವರೆಗೆ ಇವರ ಧ್ವನಿಯದೇ ದರಬಾರು. ನಾಟಕ, ಕೇಳಿಕೆಯ ಮಟ್ಟುಗಳೋ, ವಾದ್ಯಗಳ ಮಧುರ ನಾದವೋ ನಿದ್ದೆ ಹತ್ತದವರಿಗೆ, ನಿದ್ದೆಗೆ ಜಾರುವವರಿಗೆ ಜೋಗುಳ. ಇರುಳಮ್ಮನಿಗೆ ನಾದದ ಔತಣ. ಕಾಸಿಲ್ಲ, ಜಿ.ಎಸ್.ಟಿ. ಇಲ್ಲವೇ ಇಲ್ಲ.. ಇಂತಹವರು ಅನೇಕ ಮಂದಿ. ಇವರಿಂದ ಸಂಗೀತದ ನಿತ್ಯ ರಾಮೋತ್ಸವ.

  ಭೈರಪ್ಪಜ್ಜನ ಆ 'ಒಂದು ರುಪಾಯಿ'ಯ ಮೌಲ್ಯ ಗೂಗಲ್ ಗೂ ಸಿಗಲ್ ವೇನೋ?

  ಇಂತಹ ಕಲಾವಿದರಲ್ಲಿ ಕಶೆಟ್ಟಿಪಲ್ಲಿಯ ದೊಡ್ಡಪ್ಪಗಾರಿ ರಾಮಪ್ಪ ಒಬ್ಬರು. ಈತ ಕೊಳಲು ವಾದಕ. ಕಳೆದ ಏಪ್ಪಿಲ್ ನಲ್ಲಿ ತೀರಿಕೊಂಡಾಗ ವಯಸ್ಸು ತೊಂಬತ್ತಾರು ವರ್ಷ. ಸಣ್ಣ ರೈತ. ತನ್ನೊಂದಿಗೆ ದುಡಿವ ಜೋಡೆತ್ತುಗಳೆಂದರೆ ಭಕ್ತಿ, ಪ್ರೀತಿ. ಮಧ್ಯಾಹ್ನ ಹೊಲದಲ್ಲಿ ಊಟ ಮಾಡುವ ಮುಂಚೆ ಮುದ್ದೆಯಲ್ಲಿ ಅರ್ಧ ಮುರಿದು ಕಣ್ಣಿಗೊತ್ತಿಕೊಂಡು ತಣಿಗೆ(ತಟ್ಟೆ) ಅಂಚಿಗಿಟ್ಟು ಉಣ್ಣುತ್ತಿದ್ದ.

  ಊಟ ಮುಗಿದ ಮೇಲೆ ಆ ಮುರಿದ ಮುದ್ದೆಯನ್ನು ಎರಡು ತುತ್ತು ಮಾಡಿ ಎತ್ತುಗಳ ಬಾಯಿಗೆ ಕೊಡುತ್ತಿದ್ದ. ರಾತ್ರಿ ಮನೆಯಲ್ಲಿ ಊಟ ಮಾಡುವಾಗಲೂ ಅಷ್ಟೆ. ಕಾಗೆ, ನಾಯಿಯೇನಾದರು ಇದ್ದರೆ ಅದಕ್ಕೂ ಒಂದು ತುತ್ತು ಉಳಿಸಿ ಕೊಡುತ್ತಿದ್ದ. ಭೂದೇವಿ ಕೊಟ್ಟದ್ದು ಅವಳೆಲ್ಲ ಮಕ್ಕಳಿಗೂ ಸೇರಬೇಕೆಂಬ ಆದರ್ಶವಂತ ರೈತರಲ್ಲಿ ಆತನೂ ಒಬ್ಬ.

  ಕಳ್ಳ ಬಂದ ಕಳ್ಳ ಎಂದು ಎಚ್ಚರಿಸುವ ತಿತ್ತಿರಿ ಹಕ್ಕಿ!

  ನಿಜವಾದ ರೈತ ಅನ್ನದಾತ ಮಾತ್ರವಲ್ಲ, ಅವನಲ್ಲಿ ಜೀವಿಕರುಣೆಯೂ ಇರುತ್ತದೆ. ಕುವೆಂಪು 'ನೇಗಿಲಯೋಗಿ' ಅಂದದ್ದು ಸಾರ್ವಕಾಲಿಕ ಪವಿತ್ರತೆಯ ಮಾತು. ಹಾಗಾಗಿಯೇ ಇಂಥ ಪೆಮ್ಮಣ್ಣರು ಸ್ಮರಣಾರ್ಹರು.

  ರಾತ್ರಿ ಹತ್ತರ ನಂತರ ಬಿಡುವು

  ರಾತ್ರಿ ಹತ್ತರ ನಂತರ ಬಿಡುವು

  ರಾಮಪ್ಪನವರಿಗೆ ಬಿಡುವು, ವಿಶ್ರಾಂತಿಯ ವೇಳೆಯೆಂದರೆ ರಾತ್ರಿಯೇ. ಊಟ ಮಾಡಿ, ದನಗಳಿಗೆ ಮೇವು ನೋಡುವಾಗ್ಗೆ ರಾತ್ರಿ ಹತ್ತು ಗಂಟೆ ಆಗಿಬಿಡುತ್ತಿತ್ತು. ಆಗ ತಿರುಪತಿ ತಿಮ್ಮಪ್ಪನ ಫೋಟೋದ ಮುಂದಿರಿಸಿದ್ದ ಕೊಳಲನ್ನು ಕೈಗೆತ್ತಿಕೊಂಡು ಎರಡು ಕಣ್ಣಿಗೂ ಒತ್ತಿ, ತಿಮಪ್ಪ್ಮನಿಗೆ ನಮಸ್ಕಾರ ಮಾಡಿ, ಅಂಗಳಕ್ಕೆ ಬಂದು ಕುಳಿತರೆಂದರೆ ಕೊಳಲಿಗೆ ಜೀವ ಬಂದು ಬಿಡುತ್ತಿತ್ತು.

  ಮಧ್ಯರಾತ್ರಿವರೆಗೆ ನಾದ ಲಹರಿ

  ಮಧ್ಯರಾತ್ರಿವರೆಗೆ ನಾದ ಲಹರಿ

  ಸರಿ ಸುಮಾರು ಮಧ್ಯರಾತ್ರಿಯವರೆಗೂ ನುಡಿಕೆ. ಈತನ ಕೊಳಲ ಗಾನವನ್ನು ಚುಕ್ಕಿ ಚಂದರಾಮರು ಆಲಿಸಿ ಸುಖಿಸಿದಂತೆಯೇ ಅಮಾಸ್ಯೆಯ ಕತ್ತಲೂ ಆಲಿಸಿ ಸುಖಿಸುತ್ತಿತ್ತು. ಬಾನಲ್ಲಿ ಇರುಳು ಸಂಚಾರಿಗಳಾದ ಬಾವಲಿ, ಗೂಬೆ, ತಿತ್ತಿರಿ ಹಕ್ಕಿಗಳೂ ಅಷ್ಟೇ. ಆಗಾಗ ಜೀರುಂಡೆಗಳು ಮೌನ ವಹಿಸುತ್ತಿದ್ದುದು ಇವನ ಕೊಳಲ ನಾದದ ಇಂಪನ್ನು ಕೇಳಲೇನೋ ಅನಿಸುತ್ತಿತ್ತು. ಅಂದ ಮೇಲೆ ನಾದಪ್ರಿಯರಾದ ಜನ ಕೇಳದಿರುವರೆ!

  ಸ್ವಯಂ ಕಲಿಕೆ

  ಸ್ವಯಂ ಕಲಿಕೆ

  ರಾಮಪ್ಪ ಶಾಸ್ತ್ರೀಯವಾಗಿ ಕೊಳಲು ನುಡಿಸುವುದನ್ನು ಕಲಿತವನಲ್ಲ. ಆದರೂ ಕಲಿತಿದ್ದ. ಇವನದು 'ಏಕಲವ್ಯ ಕಲಿಕೆ'. ಗೊರವಯ್ಯ, ಹಾವಾಡಿಗ, ಸಂತೆ - ಪರಿಷೆಗಳಲ್ಲಿ ಕೊಳಲುಗಳ ಮಾರಾಟಗಾರರು ಊದುವುದನ್ನು ಕೇಳಿ, ಆಸಕ್ತಿ ತಳೆದು ಕಲಿತ ಕಲಿಕೆ ಮತ್ತು ಅದನ್ನು ಅನುಕರಿಸಿದ ಸ್ವಯಂ ಕಲಿಕೆ.

  ಎನ್.ಟಿ.ರಾಮರಾವ್ ಹಾಡುಗಳಿಗೆ ಸೊಗಸಾಗಿ ನುಡಿಸುತ್ತಿದ್ದ

  ಎನ್.ಟಿ.ರಾಮರಾವ್ ಹಾಡುಗಳಿಗೆ ಸೊಗಸಾಗಿ ನುಡಿಸುತ್ತಿದ್ದ

  ಕರ್ನಾಟಕ-ಆಂಧ್ರದ ಗಡಿಯ ಹಳ್ಳಿಯವನಾದ ರಾಮಪ್ಪ ಕೇಳುತ್ತಿದ್ದುದು ತೆಲುಗು ಹಾಡುಗಳನ್ನು. ಅವನ್ನೇ ನುಡಿಸುತ್ತಿದ್ದರು. ಎನ್.ಟಿ.ರಾಮರಾವ್ ರ ಪೌರಾಣಿಕ ಸಿನಿಮಾಗಳ ಹಾಡುಗಳನ್ನಂತೂ ಬಲು ಸೊಗಸಾಗಿ ನುಡಿಸುತ್ತಿದ್ದರು. ‘ಘಂಟಸಾಲ, ಪಿ.ಸುಶೀಲ ಪಾಟಲು ಚಾಲಾ ಬಾಗ ಪಿಳ್ಳಂಗೋವಿಲೋ ಪಲುಕುತಾಯಿ' (ಘಂಟಸಾಲ, ಪಿ.ಸುಶೀಲರ ಹಾಡುಗಳು ಕೊಳಲಲ್ಲಿ ಚೆನ್ನಾಗಿ ನುಡಿಯುತ್ತವೆ) ಎಂಬುದು ಅವರ ಅಭಿಪ್ರಾಯವಾಗಿತ್ತು.

  ಕನ್ನಡ ಹಾಡು ನುಡಿಸಲು ಬೇಡಿಕೆ

  ಕನ್ನಡ ಹಾಡು ನುಡಿಸಲು ಬೇಡಿಕೆ

  ‘ರಾಗಮಯೀ ರಾವೆ, ಅನುರಾಗಮಯೀ ರಾವೆ.' ‘ಶ್ರೀರಾಮ ನಾಮಾಲು ಶತಕೋಟಿ, ಒಕ್ಕೊಕ್ಕ ಪೇರು ಬಹು ತೀಪಿ.' ‘ರಾಗಾಲ ಸರಾಗಲ.' ‘ನರವರ ಕುರುವರ' ಮುಂತಾದ ಹಾಡುಗಳನ್ನು ಸೊಗಸಾಗಿ ನುಡಿಸುತ್ತಿದ್ದರು. ಅವರನ್ನು ಒಮ್ಮೆ ಶಾಲೆಗೆ ಕರೆಸಿಕೊಂಡು, ಸನ್ಮಾನಿಸಿ, ಕನ್ನಡ ಹಾಡುಗಳನ್ನು ನುಡಿಸುವುದನ್ನು ಕಲಿಯಲು ಎಂದು ಕೇಳಿಕೊಂಡೆ.

  ‘ಪಾಟ ವಿನಿಪಿಸ್ತೆ ವಾಂಚುತಾ' (ಹಾಡನ್ನು ಕೇಳಿಸಿದರೆ ನುಡಿಸುತ್ತೇನೆ) ಅಂದರು. ನನಗೆ ಸಂಗೀತವೆಲ್ಲಿ ಬರುತ್ತೆ? ಆದರೆ ಶಾಲೆಯಲ್ಲಿ ಟೇಪ್ ರೆಕಾರ್ಡರ್ ಇತ್ತು. ಅದರಿಂದ ‘ಕೃಷ್ಣಾ ನೀ ಬೇಗನೆ ಬಾರೋ, ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ, ಭಾಗ್ಯದ ಲಕ್ಷ್ಮೀ ಬಾರಮ್ಮ' ಇವನ್ನು ಕೇಳಿಸಿದೆ. ಒಂದೊಂದನ್ನೂ ನಾಕಾರು ಬಾರಿ ಆಲಿಸುತ್ತಿದ್ದರು. ರಾತ್ರಿಹೊತ್ತು ನುಡಿಸಿ ನುಡಿಸಿ ಕಲಿತು ಮರುದಿನ ವಿಧೇಯ ವಿದ್ಯಾರ್ಥಿಯಂತೆ ಬಂದು ಶಾಲಾ ಮಕ್ಕಳೂ ಕೇಳುವಂತೆ ನುಡಿಸುತ್ತಿದ್ದರು.

  ನಾಕಾರು ಸ್ಪರ್ಧೆಗಳಲ್ಲಿ ಬಹುಮಾನ

  ನಾಕಾರು ಸ್ಪರ್ಧೆಗಳಲ್ಲಿ ಬಹುಮಾನ

  ಅವರಿಂದ ಪ್ರೇರಿತರಾದ ಒಂದಿಬ್ಬರು ವಿದ್ಯಾರ್ಥಿಗಳು ಅವರಿಂದಲೇ ಹೇಳಿಸಿಕೊಂಡು, ನಾಕಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಶಾಲೆಗೆ ಹೆಸರು ತಂದದ್ದೂ ಆಯಿತು. ಗುರು ಕಾಣಿಕೆಯಾಗಿ ಆತನಿಗೆ ನೀಡಿದ್ದು ಒಂದು ಹೂವಿನ ಹಾರ ಮತ್ತು ನಾಲ್ಕು ಬಾಳೆಹಣ್ಣು. ಅದನ್ನೇ ದೊಡ್ಡ ನಿಧಿಯೆಂಬಂತೆ ಕಣ್ಣಿಗೊತ್ತಿಕೊಂಡು ಸ್ವೀಕರಿಸಿದ್ದ ಆ ಮಹಾನುಭಾವ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Farmer Ramappa died at the age of 96. But he remembered by his talent. He used to play flute in nights, once finished all other works. How was his life, where he learned flute other interesting details explains One India columnist Sa Raghunatha.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more