• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ. ರಘುನಾಥ ಅಂಕಣ: ನರಸಿಂಗ ಹೇಳಿದ ದೆವ್ವದ ಕಥೆ

By ಸ. ರಘುನಾಥ
|
Google Oneindia Kannada News

ನಾವು ಮೂವರು ಕರಿಕಲ್ಲು ಗುಡ್ಡದಲ್ಲಿ ಬೆಳದಿಂಗಳೂಟ ಮಾಡಿ, ಅಲ್ಲಿಯೇ ರಾತ್ರಿ ಕಳೆದು ಬರಲು ತೀರ್ಮಾನಿಸಿದೆವು. ಅಮ್ಮ ಮೊಸರನ್ನ ಮಾಡಿ ಕೊಟ್ಟಿದ್ದಳು. ಪಿಲ್ಲಣ್ಣ ಬೋಂಡ ಮಾಡಿಸಿಕೊಂಡು ಬಂದಿದ್ದ. ಬೋಡೆಪ್ಪ ಮೊಟ್ಟೆಗಳನ್ನು ಬೇಯಿಸಿ ತಂದಿದ್ದ. ಪೊಗದಸ್ತಾಗಿ ಐದಾರು ಜನ ತಿಂದರೂ ಉಳಿಯುವಷ್ಟಿತ್ತು.

ಎತ್ತರವಾದ, ಕೋಡಿರದೆ ಚಪ್ಪಟೆಯಾದ ಕಲ್ಲನ್ನು ಏರಿ ಕುಳಿತೆವು. ಸಮಯ ಹತ್ತು ಗಂಟೆ ಇದ್ದೀತು. ತುಂಬ ಹತ್ತಿರವೇ ಅನ್ನಿಸುವಂತೆ ನರಿಗಳು ಊಳಿಟ್ಟವು. ನಾವು ಅದನ್ನು ಅನುಕರಿಸಿ ಒಟ್ಟಿಗೆ ಕೂಗಿದೆವು. ಅವು ಮತ್ತೂ ಜೋರಾಗಿ ಕೂಗಿದವು. ನಾವೂ ದನಿ ಏರಿಸಿ ಕೂಗಿದೆವು. ಅವು ಧ್ವನಿ ಕುಗ್ಗಿಸಿ ಕೂಗಿದವು. ನಾವು ಮಾನವ ದನಿಯಲ್ಲಿ ಗಟ್ಟಿಯಾಗಿ ಕೂಗಿದಾಗ ಹೆದರಿದವೇನೋ ಮತ್ತೆ ಕೂಗಲಿಲ್ಲ.

ಅತ್ತಿ ಮರಕ್ಕೆ ಹಾರಿಬಂದ ಗೂಬೆ ಕೂಗಿತು. ಪ್ರತಿಯಾಗಿ ನಾವು ಕೂಗಿ, ಹೋಹೋ ಎಂದು ಗದ್ದಲ ಎಬ್ಬಿಸಿದೆವು. ಅದು ಹಾರಿ ಹೋಯಿತು. ಕಲ್ಲಿನ ಪಕ್ಕದಲ್ಲಿದ್ದ ಲಂಟಾನ ಪೊದೆಯಲ್ಲಿ ಸರಸರ ಶಬ್ದವಾಯಿತು. ಪಿಲ್ಲಣ್ಣ ಹಾವಿರಬೇಕು ಅಂದ. ನಾನು ನೋಡೋಣ ಎಂದೆ. ಸರಿ ಮುವ್ವರೂ ಮೆಲ್ಲಗೆ ಇಳಿದು ಕಣ್ಣು ಕದಲಿಸದೆ ನೋಡಿದೆವು. ಉಡ ಪೊದೆಯಿಂದ ಹೊರಬಿದ್ದು ಓಡಿ ಹೋಯಿತು.

ಮತ್ತೆ ಕಲ್ಲನ್ನೇರಿ, ಊಟ ಮಾಡುವಷ್ಟು ಜಾಗದ ಧೂಳನ್ನು ಟವಲಿನಿಂದ ಹೊಡೆದು, ಬೇಕಿದ್ದಷ್ಟು ಅನ್ನ, ಬೋಂಡ, ಮೊಟ್ಟೆಗಳನ್ನು ಹಾಕಿಕೊಂಡು ಕುಳಿತೆವು. ಹೆಚ್ಚಿಗೆ ಉಂಡೆವೆಂದರೂ ಮತ್ತಿಬ್ಬರಿಗೆ ಆಗುವಷ್ಟು ಉಳಿದಿತ್ತು. ಯಾರಾದರೂ ಹೊಲದ ಕಾವಲಿಗೆ ಇತ್ತ ಬಂದರೆ ಕೊಡಲು ಕಾದೆವು. ಯಾರೂ ಬರಲಿಲ್ಲ. ಮಲಗುವ ಹೊತ್ತಿಗೆ ಹಸಿವಾದರೆ ತಿನ್ನಬಹುದೆಂದು ಡಬ್ಬಿಗಳಿಗೆ ಮುಚ್ಚಳ ಹಾಕಿಟ್ಟೆವು. ಹರಟುವುದು, ಆಕಾಶಕ್ಕೆ ಕಲ್ಲು ಎಸೆಯುವುದು, ಮನಸ್ಸಿಗೆ ಬಂದ ಹಾಡುಗಳನ್ನು ಅರಚುವುದು, ಹೀಗೆ ಬಹಳ ಹೊತ್ತು ಕಳೆದೆವು.

ಹಸಿವೆ ಎನಿಸಿದ್ದಲ್ಲವಾಗಿ ಡಬ್ಬಿಗಳ ಪಕ್ಕದಲ್ಲಿ ಮಲಗಿದೆವು. ಹೆಬ್ಬಾವನ್ನು ನೋಡಿಲ್ಲ. ಅದು ಈಗೇನಾದರು ಬಂದರೆ ಎಷ್ಟು ಚೆನ್ನ ಅಲ್ಲವಾ ಅಂದ ಬೋಡೆಪ್ಪ. ಅದು ಇಲ್ಲೆಲ್ಲೂ ಇಲ್ಲವೆಂದು ನಮಗೆ ತಿಳಿದಿತ್ತು. ಹೆಬ್ಬಾವನ್ನೇನು ನೋಡೋದು? ದೆವ್ವ ಬಂದರೆ ಚೆನ್ನ. ತಾನು ನೋಡಿದ್ದೇನೆಂದು ಹೇಳುವ ಮಾಂತ್ರಿಕ ಸುಬ್ಬಣನಿಗೆ ನಾವೂ ನೋಡಿದ್ದೇವೆಂದು ಹೇಳಬಹುದು ಅಂದ ಪಿಲ್ಲಣ್ಣ.

ಹೀಗೆ ಮಾತನಾಡುತ್ತ ನಿದ್ದೆ ಹೋದೆವು. ಒಂದು ಹೊತ್ತಿನಲ್ಲಿ ನಾಯಿ ಲೊಚಗುಟ್ಟಿದಂತೆ ಶಬ್ದ! ಮೂವರಿಗೂ ಒಟ್ಟಿಗೆ ಎಚ್ಚರವಾಯಿತು. ಬಿಟ್ಟ ಕಣ್ಣಿಗೆ ಏನೂ ಕಾಣಿಸಲಿಲ್ಲ. ಆದರೆ ಲೊಚ ಲೊಚ ಶಬ್ದ ಕೇಳಿಸುತ್ತಿತ್ತು, ಭಯವಾಯಿತು. ಕೊಂಚವೂ ಅಲುಗಾಡದೆ ಮಲಗಿದ್ದೆವು. ಮನಸ್ಸಿನಲ್ಲಿ ಜೈ ವೀರಾಂಜನೇಯ ಎಂದು ಜಪಿಸಿದೆವು.

ಯಾವ ರೀತಿಯೆಂದು ಹೇಳಲಾಗದಂತೆ ಗಾಳಿ ಬೀಸಿತು. ಶಬ್ದ ನಿಂತಿತು. ಧೈರ್ಯ ಬಂದಿತು. ನಮ್ಮ ಸುತ್ತಲು ಉಚ್ಚೆ ಹೊಯ್ದರೆ ದೆವ್ವ ಓಡಿ ಹೋಗುವುದೆಂದು ಕೇಳಿದ್ದ ಮಾತು ನೆನಪಾಗಿ, ಆಂಜನೇಯನನ್ನು ಜಪಿಸುತ್ತಲೇ ಎದ್ದು ಕಲ್ಲಿನ ಸುತ್ತ ವೃತ್ತಾಕಾರವಾಗಿ ಉಚ್ಚೆ ಹೊಯ್ದು, ಧೈರ್ಯ ತಂದುಕೊಂಡು ಮಲಗಿದೆವು. ಊರಿನ ಕೋಳಿ ಕೂಗಿಗೆ ಎಚ್ಚರವಾಯಿತು. ಎದ್ದು ಡಬ್ಬಿಗಳಲ್ಲಿ ಉಳಿದಿದ್ದವನ್ನು ಚೆಲ್ಲಲು ಮುಚ್ಚಳ ತೆಗೆದಾಗ ಎಲ್ಲ ಡಬ್ಬಿಗಳೂ ಖಾಲಿ! ಮುಚ್ಚಳ ಎಷ್ಟು ಬಿಯಾಗಿತ್ತೆಂದರೆ ಒದ್ದಾಡಿ ತೆರೆಯಬೇಕಿತ್ತು. ಹಾಗಿದ್ದೂ ಖಾಲಿ!

ಮನೆಗೆ ಮರಳುವಷ್ಟರಲ್ಲಿ ಪಿಲ್ಲಣ್ಣನಿಗೆ ಜ್ವರ ಬಂದಿತ್ತು. ವಿಷಯ ಕೇಳಿ ಎಲ್ಲರೂ ಬೈದವರೇ. ಪಿಲ್ಲಣ್ಣನನ್ನು ಸುಬ್ಬಣ್ಣನಲ್ಲಿಗೆ ಕರೆದೊಯ್ದು, ಆದುದನ್ನು ಹೇಳಿ, ಮಂತ್ರ ಹಾಕಿಸಿ, ತಾಯತ ಕಟ್ಟಿಸಿದರು. ಅದನ್ನು ನಾನು ಕಂಡಿದ್ದೇನೆ. ಕೆಟ್ಟ ದೆವ್ವವಲ್ಲ. ಹಾಗಾಗಿ ಈ ಮೂವರೂ ಬಚಾವಾಗಿದ್ದಾರೆ ಎಂದ.

English summary
Narsingaraya, Pillanna and Bodeppa had dinner at the black stone hill and decided to spend the night there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X