ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಶಿವ ಸಂಗಮಕ್ಕೆ ನಿಃಕಳಂಕ ಅನುವರ್ತಿ ಮಾರ್ಗ

By ಸ. ರಘುನಾಥ
|
Google Oneindia Kannada News

ಕನ್ನಡ ನುಡಿಯ ಪಾಕವೆತ್ತಿದ ವಚನಕಾರರು ನುಡಿದ ವಚನಗಳಲ್ಲಿ ವಸ್ತುವನ್ನು ಅರಿತು ಅದರ ಹಿಂದು ಮುಂದುಗಳ ನೆಲೆಯನ್ನು, ನಿಲುವನ್ನು ಹಿಡಿದು ಅನುಭಾವಕ್ಕೆ ಏರಿಸಿಕೊಂಡವರು. ವಸ್ತು ಕರಗುತ್ತ ವಸ್ತುಭಾವದ್ರವ ತೇಲಿ ಬಂದು, ಅದೂ ಹಿಂಗುತ್ತ ಅನುಭಾವದ ನುಡಿನಾದದಲ್ಲಿ ಲಿಂಗವನ್ನು ಎದೆಯಿಂದ ಮಾತನಾಡಿಸಿದವರು.

ಗುಹೇಶ್ವರನಾಗಲಿ, ಕೂಡಲಸಂಗಮದೇವನಾಗಲಿ, ಚೆನ್ನಮಲ್ಲಿಕಾರ್ಜುನನಾಗಲಿ, ಕೂಡಲಚೆನ್ನಸಂಗಯ್ಯನಾಗಲಿ, ಸಕಳೇಶ್ವರನಾಗಲಿ ದರ್ಶನದಲ್ಲಿ ಲಿಂಗವೇ. ಎಲ್ಲದರ ಭಾವ 'ದೇವನೊಬ್ಬ ನಾಮಹಲವು.' ಹಲವು ನಾಮಗಳಲ್ಲಿ ಒಬ್ಬ ದೇವನನ್ನು ಕಂಡವರು ಶರಣರು. ಇವರು ಕಂಡಿದ್ದು 'ನಿರ್ಲಿಂಗ'ನನ್ನು. ಇದರ ಒಕ್ಕಲಾದವರಿಗೆ ಹೆಣ್ಣುಗಂಡೆಂಬ ಭೇದ ಶೂನ್ಯ.

ಹಾಗಾಗಿಯೇ ಶರಣ-ಶರಣೆಯರು ಸಮಾನರಾಗಿ ವಚನಕಾರರೆಸಿದರು. ಇದು ಭಾವ ವಿಸ್ತಾರರದಲ್ಲಿ ಒಂದು ಕುಲ, ಶಿವಶರಣಕುಲ. ಚಾತುರ್ವಣದ ಬಿಗಿ ಸಿದ್ಧಾಂತ ಶಿಥಿಲವಾದುದು ಇಲ್ಲಿಯೇ. ಜೀವಜಾತಕ್ಕೆಲ್ಲ ಒಂದೇ ವರ್ಣ. ಅದು 'ಶಿವವರ್ಣ.' ಇಲ್ಲಿ ಮೋಳಿಗೆ ಮಹಾದೇವಿಯೂ ಒಬ್ಬಳು.

Sa. Raghunatha Column: The Path of the Nishkalanka to Shiva Sangama

ತನ್ನ ಎಪ್ಪತ್ತು ವಚನಗಳ ಮೂಲಕ ವಚನ ಸಾಹಿತ್ಯದಲ್ಲಿ ತನ್ನ ಇರವನ್ನು ತೋರಿರುವ ಮೋಳಿಗೆ ಮಹಾದೇವಿ, ತನ್ನ ವಚನಗಳಲ್ಲಿ ಭಕ್ತಿಯ ಅಂತರಂಗದ ಭಾವಕ್ಕೆ ಧ್ವನಿ ತುಂಬಿ ನುಡಿದಿದ್ದಾಳೆ. ಶರಣರ ವಿನಯವನ್ನು ಗುಣವಾಗಿಸಿಕೊಂಡಿದ್ದಾಳೆ. ಅವಳು ನಿಶ್ಚಯಿಸಿ ಹೇಳುವಾಗ ಇದು ಕಾಣುತ್ತದೆ.

ಬಿತ್ತಿದ ಬಿತ್ತು, ಪೃಥ್ವಿಯ ಕೂಟ, ಅಪ್ಪುವಿನ ದ್ರವದಿಂದ
ಮಸ್ತಕ ಒಡೆವುದಲ್ಲದೆ, ಉಷ್ಣದ ಡಾವರಕ್ಕೆ, ಬೆಂಕಿಯ ಬೇಗೆಗೆ
ಮಸ್ತಕ ಒಡೆವುದುಂಟೆ?
ಲಿಂಗವು ಭಕ್ತಿಯ ಶ್ರದ್ಧೆಗೆ, ವಿಶ್ವಾಸದ ಸುಸಂಗಿಗೆ,
ನಿಶ್ಚಯವಪ್ಪ ಲಿಂಗಿಗೆ ದೃಷ್ಟವಪ್ಪುದಲ್ಲದೆ,
ಉನ್ಮತ್ತವಪ್ಪ ವಿಶ್ವಾಸಘಾತಕಂಗೆ, ವಂದಿಸಿ ನಿಂದಿಸುವಂಗೆ,
ಹಿಂದೆ ಮುಂದೆ ಬಂದುದ ಬಾಯ್ಗಿಡುವವಂಗೆ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ
ಸಂಧಿಸನವಗೆ.

ವಚನದ ಆದಿಯಲ್ಲಿ ಮಹಾದೇವಿ, 'ಜೀವಕೂಟ'ದ ವಸ್ತುಗಳನ್ನು ಪರಿಣತ ಕೃಷಿಕನ ಕೃಷಿವಿಜ್ಞಾನದ ಕಣ್ಣಿನಿಂದ ನೋಡಿದ್ದಾಳೆ. ಇದು ಸಾಧ್ಯವಾಗುವುದು ವಸ್ತುವಿನ ಅನುಸಂಧಾನದಿಂದ. ಬೀಜ, ನೆಲ, ನೀರು ಜೀವಕೂಟ. ಉಷ್ಣ, ಬೆಂಕಿ ಅದಕ್ಕೆ ವಿರುದ್ಧವಾದವು. ಜೀವಕೂಟ ಸಜೀವ. ಉಷ್ಣ ಮತ್ತು ಬೆಂಕಿ ಸಜೀವವನ್ನು ನಿರ್ಜೀವಗೊಳಿಸುವಂಥದು. ಈ ಎರಡೂ ಭಿನ್ನ ಹಾಗು ವಿರುದ್ಧ ಗುಣದವು.

ಬಿತ್ತಿದ ಬೀಜವು ಮಣ್ಣಿನ(ಭೂಮಿಯ) ಸಂಗದಿಂದ, ಜಲದ್ರವ್ಯದಿಂದ ಬಿರಿದು ಮೊಳಕೆಯೊಡೆಯುತ್ತದೆ. ಶಾಖದ ತೀವ್ರತೆಗೆ, ಬಿಸಿಲ ತಾಪಕ್ಕೆ (ಬೆಂಕಿಯ ಬೇಗೆಗೆ) ಬಿರಿದು ಮೊಳೆಯುವುದೆ? ಮೊಳೆಯುವಾಗ ಮೊದಲು ಬೀಜದ ತಲೆ ದ್ವಿದಳವಾಗಿ ಒಡೆದೇ ಮೊಳಕೆ ಬರುವುದು. ಹೀಗಾಗಲು ಬೀಜಕ್ಕೆ ಮಣ್ಣು, ನೀರಿನ 'ಕೂಟ'ವೇರ್ಪಡಬೇಕು. ಬದಲಿಗೆ ಬೆಂಕಿ, ಶಾಖ ಕೂಟವಾದರೆ ಅದು ಸುಟ್ಟು, ಸೀದು, ಬೂದಿಯಾಗುವುದು.

ಈ ದೃಷ್ಟಾಂತದ ಹಿನ್ನೆಲೆಯಲ್ಲಿ ಮಹಾದೇವಿ, ಲಿಂಗವು ಯಾರಿಗೆ ಗೋಚರ ಎಂಬುದನ್ನು ಹೇಳುತ್ತಾಳೆ. ಬೀಜ ಮೊಳೆಯಲು 'ಪೃಥ್ವಿಯ ಕೂಟ, ಅಪ್ಪುವಿನ ದ್ರವ' ಕೂಡುವುದಾಗಬೇಕಾದಂತೆ, ಲಿಂಗ ಗೋಚರಕ್ಕೆ 'ಭಕ್ತಿಯ ಶ್ರದ್ಧೆ, ವಿಶ್ವಾಸದ ಸಂಗವಾಗಬೇಕು. ಇಲ್ಲವಾದರೆ ಶಿವನನ್ನು ಸಂಧಿಸುವುದಾಗದು. ಬೀಜ, ಮಣ್ಣು, ನೀರು ಇವುಗಳೊಂದಿಗೆ ಲಿಂಗ, ಭಕ್ತಿಯ ಶ್ರದ್ಧೆ, ವಿಶ್ವಾಸ, ನಿಶ್ಚಯ ಇವುಗಳನ್ನು ಸಮನ್ವಯಿಸಿಕೊಳ್ಳಬೇಕು.

ಉನ್ಮತ್ತ, ವಿಶ್ವಾಸಘಾತಕ, ಮುಂದೆ ನಮಸ್ಕರಿಸಿ (ತೋರಿಕೆ) ನಿಂದೆ ನಿಂದಿಸುವವ, ಸಿಕ್ಕಿದ್ದನ್ನೆಲ್ಲ (ಬೆಂಕಿಯಂತೆ) ತಿನ್ನುವವನಿಗೆ (ಪ್ರಸಾದ ಸ್ವೀಕಾರ ವ್ರತನಿಯಮ ಬಾಹಿರನಾದವನಿಗೆ) ದೈವಚೈತನ್ಯ ಲಿಂಗ ಗೋಚರವಾಗದು. ಅವನು ಉಷ್ಣದ ಡಾವರ, ಬೆಂಕಿಯ ಬೇಗೆಗೆ ಸಿಕ್ಕಿದ ಬೀಜದಂತೆ. ಅವನಲ್ಲಿ ಭಕ್ತಿಯ ಬೀಜ ಮೊಳೆಯದು.

ಲೋಕಾನುಭವ, ಶಿವಾನುಭವದ 'ಭಕ್ತಿಕೂಟ' ಮನದಲ್ಲಿ ಮೇಳೈಸಿದ ಶಿವಶರಣೆ ಮೋಳಿಗೆ ಮಹಾದೇವಿಯ ಈ ವಚನವೂ ವಿಶಿಷ್ಟವಾದುದು. ಈ ರೀತಿಯ ರಚನಾ ಶೈಲಿಯಿಂದ ಆಕೆಯ ವಚನಗಳು ನೇರವಾಗಿ ಹೃದಯ ಹೊಕ್ಕು ಲಿಂಗಾನುಭವವನ್ನು ಕಟ್ಟಿಕೊಡುತ್ತದೆ. ಶಿವ ಸಂಗಮಕ್ಕೆ ನಿಃಕಳಂಕ ಅನುವರ್ತಿ ಮಾರ್ಗವನ್ನು ತೋರಿಸುತ್ತದೆ.

Recommended Video

Russia Ukraine ಸಂಘರ್ಷದಿಂದ ಭಾರತಕ್ಕಿರುವ ಅಪಾಯವೇನು? | Oneindia Kannada

English summary
Sa. Raghunatha Column: A description of Shiva in Molige Mahadevi's Vachana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X