ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಸಂಸಾರಿ ಶಬರಿ ನನ್ನಜ್ಜಿ ವೆಂಕಮ್ಮ

By ಸ. ರಘುನಾಥ
|
Google Oneindia Kannada News

'ಸ್ವಾತಿ ಮುತ್ಯಂ' ತೆಲುಗು ಸಿನೆಮಾದಲ್ಲಿ (ಇದು ಕನ್ನಡದಲ್ಲಿ 'ಸ್ವಾತಿಮುತ್ತು' ಎಂದು ರೀಮೇಕ್ ಆಯಿತು) ರಾಮಭಜನೆಯ ದೃಶ್ಯವಿದೆ. ಅದರಲ್ಲಿ ಶಬರಿಯಾಗಿ ಹಿರಿಯ ಪೋಷಕ ನಟಿ ನಿರ್ಮಲಮ್ಮ ಅದ್ಭುತವಾಗಿ ನಟಿಸಿದ್ದಾರೆ. ಇತ್ತೀಚೆಗೆ ಮೂರನೆಯ ಬಾರಿ ಅದನ್ನು ನೋಡುವಾಗ ನನ್ನ ಅಜ್ಜಿ ವೆಂಕಮ್ಮ ನೆನಪಾದಳು. ಅಂದರೆ ನನ್ನಜ್ಜಿ ಕಾಡಿನಲ್ಲಿದ್ದಳು ಎಂದಲ್ಲ. ಅವಳು ತುಳಸಿಕಟ್ಟೆ ಬಳಿಗೆ ಪೂಜೆಗೆ ಹೋಗುತ್ತಿದ್ದುದು ಆ ರೀತಿಯದಾಗಿತ್ತು.

ಕಾಡಿನಲ್ಲಿದ್ದ ಮಕ್ಕಳಿಗೆ ಶಬರಿ ಕಥೆಗಳನ್ನು ಹೇಳುತ್ತಿದ್ದಳೊ ಇಲ್ಲವೊ ತಿಳಿಯದು. ಹೇಳಿದ್ದರೆ ರಾಮನ ಕತೆಗಳನ್ನೇ ಹೇಳಿದ್ದಾಳು. ನನ್ನ ಅಜ್ಜಿಯಂತೂ ನಮಗೆ ಕಥೆಗಳನ್ನು ಹೇಳುತ್ತಿದ್ದಳು. ದೆವ್ವಗಳ ಕಥೆ ಹೇಳಿದ ರಾತ್ರಿ ನನ್ನ ಹಾಸಿಗೆ (ಗೋಣಿಚೀಲವೇ ಹಾಸಿಗೆ) ಒದ್ದೆಯಾಗದೆ ಇದ್ದುದಿಲ್ಲ. ರಾಕ್ಷಸರ ಕಥೆಗಳನ್ನು ಕೇಳಿದಾಗ ಹೆದರಿಕೆಯಾಗುತ್ತಿತ್ತು. ಆದರೆ ಹಾಸಿಗೆ ಒದ್ದೆಯಾಗುತ್ತಿರಲಿಲ್ಲ. ರಾಜಕುಮಾರ- ರಾಜಕುಮಾರಿಯರ ಕಥೆಗಳು ಬಹಳ ಇಷ್ಟವಾಗುತ್ತಿದ್ದವು. ಇವುಗಳಂತೆ ಗಾದೆಗಳು ಸಹ. ಬಹುತೇಕ ಗಾದೆಗಳು ತೆಲುಗಿನವು. ಗಾದೆಗೊಂದು ಕತೆಯೂ ಇರುತ್ತಿತ್ತು. ಆದರೆ ಅದನ್ನು ಗಾದೆ ಹೇಳಿದಾಗಲೆ ಹೇಳುತ್ತಿರಲಿಲ್ಲ. ಯಾವಾಗಲೋ ಬಿಡುವಿದ್ದು, ನೆನಪಾದಾಗ ಆ ಗಾದೆಯ ಕತೆಯಿದು ಎಂದು ಹೇಳುತ್ತಿದ್ದಳು. ನಾನು ತೆಲುಗು ಕಲಿಯಲು ಪ್ರಾರಂಭಿಸಿದ್ದು ಈ ಗಾದೆಗಳ ಮೂಲಕವೇ.

ಅಜ್ಜಿಗೆ ಸಂಸಾರವೆಂದರೆ ವ್ಯಾಮೋಹಕ್ಕಿಂತ ಅಕ್ಕರೆ ಜಾಸ್ತಿ. ಸಂಸಾರವೆಂದರೆ ಗಂಡ, ಮಕ್ಕಳು, ಮೊಮ್ಮಕ್ಕಳು ಮಾತ್ರವಲ್ಲ. ಕೂಲಿ ಆಳುಗಳು, ಹೊಲ, ಗದ್ದೆ, ದನಕರು, ಕಡೆಗೆ ತುಳಸಿಗಿಡವೂ ಅವಳಿಗೆ ಸಂಸಾರವೇ. ದೇವರ ಪೂಜೆ ಮಾಡುತ್ತಲೇ ದನಕರುಗಳಿಗೆ ಮೇವು ನೋಡಿದರೊ ಇಲ್ಲವೊ ಎಂಬ ಚಿಂತೆ. ತುಳಸಿಕಟ್ಟೆಗೆ ಪ್ರದಕ್ಷಣೆ ಮಾಡುತ್ತಲೆ, 'ಲೇ ಹೊಲದ ಕಡೆ ಯಾರಾದರು ಹೋಗಿದ್ದಾರೊ ಇಲ್ಲವೊ' ಎಂದು ಮನೆಮಂದಿಗೆ ಅನ್ವಯಿಸುವಂತೆ ಗಟ್ಟಿಯಾಗಿ ಹೇಳುತ್ತಿದ್ದಳು.

Sa Raghunath Column: The Brood Of Grandma Venkamma

ಯಾರಿಂದಲೂ ಉತ್ತರ ಬಾರದಿದ್ದರೆ, 'ಎಲ್ಲ ಎಲ್ಲಿ ಸತ್ತಿದ್ದೀರಿ?' ಎಂದರಚುತ್ತಿದ್ದಳು. ಅವಳ ಅರಚಾಟಕ್ಕೆ ಬೆಚ್ಚಿ ತುಳಸಮ್ಮನೇ ಯಾರಿಗಾದರೂ ಹೊಲಕ್ಕೆ ಹೋಗವ ಬುದ್ಧಿ ಕೊಡುತ್ತಿದ್ದಳು. ನಾರಾಯಣ ನಾರಾಯಣ... ಮೂರನೆಯ ಸಲಕ್ಕೆ ನಾರಾಯಣ ಉಚ್ಚಾರ ಹೊರಡದೆ, ಎಮ್ಮೆ ಯಾಕೊ ಸರಿಯಾಗಿ ನಮುರು (ಮೆಲುಕು) ಹಾಕಿಲ್ಲ. ಎರಡು ವೀಳೆದೆಲೆ, ಎರಡು ಚಿಟಿಕೆ ಇಂಗು ತೆಗೆದಿಡಿ. ಎಮ್ಮೆಗೆ ತಿನ್ನಿಸಬೇಕು ಎಂದು ಹೇಳಿಯೇ ಮೂರನೇ ಸಲ ನಾರಾಯಣ ನಾಮ ನಾಲಗೆಗೆ ಬರುತ್ತಿದ್ದುದು. ಅಲ್ಲಿಯವರೆಗೆ ನಾರಾಯಣನು ಕಾಯಬೇಕಾದ್ದೇ.

ಸಂಜೆ ದೇವರ ಮುಂದೆ ದೀಪ ಮುಡಿಸುತ್ತಿರುವಾಗಲೇ 'ದನಗಳ ಮುಂದೆ ಹುಲ್ಲಿದೆಯೆ ಎಂದು ಕೇಳದೆ ದೇವರಿಗೆ ಕೈ ಮುಗಿದುದನ್ನು ನಾನು ಕಂಡವನಲ್ಲ. ರಾತ್ರಿ ಊಟಕ್ಕೆ ಕುಳಿತಾಗಲೆ ಪರದೇಸಿ ನಾಯಿಯ ನೆನಪಾಗುತ್ತಿದ್ದುದು. ತಕ್ಷಣ ಎದ್ದು, ಅರ್ಧ ಮುದ್ದೆಯನ್ನು ಸಾರಿನಲ್ಲಿ ಹೊರಳಿಸಿ, 'ಯಾವ ಮನೆ ಮುಂಡೇದೋ ಏನೋ ಊಟದ ಹೊತ್ತಿಗೆ ಬಂದು ಅಂಗಳದಲ್ಲಿ ಬಿದ್ದಿರುತ್ತೆ' ಎಂದು ಹಾಕಿ ಬಂದು, ತನ್ನ ತುತ್ತು ಮುರಿಯುತ್ತಿದ್ದಳು.

ಕೂಲಿಯವರೆಂದರೆ ಅತಿ ಅಕ್ಕರೆ. ಮುಂಡೇವು ಮೈ ಮುರಿದು ದುಡಿಯುತ್ವೆ. ಹೊಟ್ಟೆ ತುಂಬಿಸದಿದ್ದರೆ ಹೇಗೆ ಎಂದು ಸಾಕು ಸಾಕು ಎಂದು ಬೇಡುವವರೆಗೆ ಬಡಿಸುತ್ತಿದ್ದಳು. ಹೆಣ್ಣಾಳುಗಳಿಗೆ ಮೇಲೊಂದು ತುತ್ತು ಹೆಚ್ಚು. ಮನೆಮಂದಿಗಾಗಿ ಉಳಿಯುತ್ತದೆ ಎನ್ನಿಸಿದರೆ, ಮನೆಗೆ ಹೋಗಿ ಒಲೆ ಏನು ಹಚ್ಚುತ್ತಿ? ತಗೊಂಡು ಹೋಗಿ ಮಕ್ಕಳಿಗೆ ಹಾಕು ಎಂದು ಕೊಡುತ್ತಿದ್ದಳು. ಅವರಿಗೆಲ್ಲ ಇವಳು ದೊಡ್ಡಮ್ಮಣ್ಣಿ.

ಕಾಗೆ ಗುಬ್ಬಿ, ಅಳಿಲು, ಪಾರವಾಳಗಳು ಅಜ್ಜಿಯ ಸಂಸಾರದಲ್ಲಿದ್ದವು. ಅವುಗಳಿಗೆ ಕಾಳುನೀರು ಕೊಡುತ್ತಿದ್ದಳು. ಇವಳು ಅಂಗಳದಲ್ಲಿ ಮುಸುರೆ ತೊಳೆಯಲು ಕುಳಿತರೆ, ಬೇರೆಯವರು ತೊಳೆಯುವಾಗ್ಗಿಂತಲು ಇವಳು ತೊಳೆಯುವಾಗ ಒಂದು ಕಾಗೆಯಾದರೂ ಹೆಚ್ಚಿಗೆ ಬಂದಿರುತ್ತಿತ್ತು. ನನಗೆ ಕಾಡುಪಾವನ್ನು ಮೊದಲಿಗೆ ತೋರಿಸಿದ್ದು ಅಜ್ಜಿ. ಬಾರೊ ಮುಂಡೆಗಂಡ, ಕಾಡುಪಾಪವನ್ನು ನೋಡು ಎಂದು ಕರೆದಳು. ನಾನು ಹೋಗುವಷ್ಟರಲ್ಲಿ ಆ ಸಿಗ್ಗಿನ ರಾಣಿ (ರಾಜನೂ ಆಗಿರಬಹುದು) ತೋರಿಸಿ ಹೋಗಿದ್ದು ತನ್ನ ಹಿಂಭಾಗವನ್ನು.

English summary
Grandma Venkamma's stories of prince and princesses were very intresting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X