• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುನಂದಾ ತೆರೆದ ಮುನೆಕ್ಕನ ಲೆಕ್ಕದ ಖಾತೆಗಳು

By ಸ ರಘುನಾಥ, ಕೋಲಾರ
|

ಮುನೆಕ್ಕನ ನೆನಪಿನಲ್ಲಿದ್ದ ಸಾಲದ ಲೆಕ್ಕಗಳು ಪುಸ್ತಕಕ್ಕಿಳಿದವು. ಊರಿನ ಮುಕ್ಕಾಲುವಾಸಿ ಜನರು ಸಾಲವಿಟ್ಟಿದ್ದವರೇ. ಅದರಲ್ಲಿ ದುಗ್ಗಪ್ಪ, ಅಪ್ಪಯ್ಯನವರ ಖಾತೆಯೂ ಇತ್ತು. ನಗದು ಪಾವತಿದಾರರು ಕೆಲವರಾದರೆ, ದವಸಧಾನ್ಯಗಳ ರೂಪದಲ್ಲಿ ತೀರಿಸುವವರು ಕೆಲವರಿದ್ದರು. ಇಂಥವರಲ್ಲಿ ಹೆಂಗಸರೇ ಜಾಸ್ತಿ. ಸುನಂಧಾ ಹೆಂಗಸರ ಸಾಲಕ್ಕೆ ಬೇರೆಯದೇ ಪುಸ್ತಕವಿಟ್ಟಳು. ಹೀಗೇಕೆಂದು ಕೇಳಿದ ಮುನೆಕ್ಕ, ಗೊತ್ತಾಗುತ್ತೆ ಇರು ಎಂಬ ಉತ್ತರ ಪಡೆದಿದ್ದಳು.

ಸುನಂದಾ ಅಂಗಡಿಯಲ್ಲಿ ವ್ಯಾಪಾರಕ್ಕೆ ಕುಳಿತು ಒಂದು ತಿಂಗಳು ದಾಟಿತ್ತು. ಒಂದು ರಾತ್ರಿ ನರಸಿಂಗರಾಯ ಸದಾರಮೆ ನಾಟಕಕ್ಕಾಗಿ ಹೊಸದಾಗಿ ರಚಿಸಿದ್ದ ಪದ್ಯ-ಗೀತೆಗಳ ಸಂಗೀತ ಸಂಯೋಜನೆ ಕುರಿತ ಮಾತುಕತೆಗೆ ಸುನಂದಾಳನ್ನು ಅಪ್ಪಯ್ಯ ಕರೆಸಿಕೊಂಡಿದ್ದ. ಮುನೆಕ್ಕನ ಹಾಜರಿಯೂ ಇತ್ತು.

ಊಟವಾದ ಮೇಲೆ ಅಪ್ಪಯ್ಯ "ಹೇಗಿದೆ ಅಂಗಡಿ ವ್ಯಾಪಾರ? ಸುನಂದಳ ಕೈಲಿ ಲುಕ್ಸಾನ, ಲಾಭಾನ?" ಎಂದು ಕೇಳಿದ. ಅವಳು ಲಕ್ಷ್ಮಿ, ಲುಕ್ಸಾನೆಲ್ಲೀದು ಎಂದು ಮುನೆಕ್ಕ ಲೆಕ್ಕದ ಪುಸ್ತಕಗಳನ್ನು ಅಪ್ಪಯ್ಯನಿಗೆ ತೋರಿಸಿದಳು. ಕಣ್ಣಾಡಿಸಿದ ಅಪ್ಪಯ್ಯ, ಮಗನ ಕೈಗಿತ್ತ. ನರಸಿಂಗರಾಯನ ಪಕ್ಕ ಕುಳಿತಿದ್ದ ಅಮ್ಮನೂ ನೋಡಿದಳು. ಸುನಂದಾಳನ್ನು ಕರೆದು ಪಕ್ಕ ಕೂರಿಸಿಕೊಂಡ ಅಮ್ಮ, ಅವಳ ಕೆನ್ನೆಗೊಂದು ಮುತ್ತುಕೊಟ್ಟು, ಲಕ್ಷ್ಮೀನೇ ಅಂದಳು.

ಹೆಂಗಸರ ಲೆಕ್ಕದ ಪುಸ್ತಕವನ್ನು ಕೈಗೆತ್ತಿಕೊಂಡು ನೋಡಿದ ಅಪ್ಪಯ್ಯ. ಅದರಲ್ಲಿ ಪ್ರತಿಯೊಬ್ಬರ ಹೆಸರಿನ ಮುಂದೆ ಉದ್ದಗೆರೆ ಹಾಕಿದ ನಾಲ್ಕು ಅಂಕಣಗಳಿದ್ದು, ಸರಕುಗಳ ಸಾಲ, ಕೈ ಬದಲೂ, ಸಲ್ಲಿಕೆ, ಉಳಿತಾಯ ಎಂದು ಬರೆದಿತ್ತು. ಯಾವ ಅಂಕಣವೂ ಖಾಲಿ ಇರಲಿಲ್ಲ. ನರಸಿಂಗರಾಯನೂ ನೋಡಿದ. "ಓ, ಸುನಂದ ಮುನೆಕ್ಕನನ್ನು ಬ್ಯಾಂಕ್ ಮುನೆಕ್ಕ ಮಾಡಲು ಹೊರಟಂತಿದೆ" ಎಂದು ಹೆಮ್ಮೆಯಿಂದ ಹೇಳಿ, ಮುಖ ನೋಡಿದ. ಸುನಂದಾಳ ಕಣ್ಣಲ್ಲಿ ಮೆಚ್ಚುಗೆ, ಕೆನ್ನೆ ಕೆಂಪಲ್ಲಿ ಲಜ್ಜೆಯನ್ನು ಕಂಡ. 'ಇದು ಗಂಡಸರಿಗೆ ತಿಳಿಯದ ಗುಟ್ಟಿನ ಲೆಕ್ಕ' ಅಂದಳು ಸುನಂದಾ. ನಮಗೆ ತಿಳೀತಲ್ಲ ಅಂದ ಅಪ್ಪಯ್ಯ. ನೀವು ಬೇರೆ ತರಹ ಬಿಡಿ ಅಂದಳು. ಅಂದರೆ ನಾವಿಬ್ಬರು ಗಂಡೂ ಅಲ್ಲ ಹೆಣ್ಣೂ ಅಲ್ಲ ಅಂತಲೋ ನಿನ್ನ ಮಾತಿನ ಅರ್ಥ ಅಂದ ಅಪ್ಪಯ್ಯ. ಸುನಂದಾ ಪೆಚ್ಚಾದಳು. ನರಸಿಂಗರಾಯ ಗೊಳ್ಳನೆ ನಕ್ಕ. ಅಪ್ಪಯ್ಯ ಅಂಥದೇ ತನ್ನ ನಗೆಯ ಅಲೆಯನ್ನು ಅದಕ್ಕೆ ಸೇರಿಸಿದ. ಸುನಂದಾಳ ಮನಸ್ಸು ಹಗುರಾಗಿ, ನಕ್ಕಳು.

ನರಸಿಂಗರಾಯ ರಚಿಸಿದ್ದ ಸಾಹಿತ್ಯ, ಕೂಡಿಸಿದ್ದ ಸಂಗೀತವನ್ನು ಪ್ರಸ್ತಾಪಿಸಿದ ಸುನಂದಾ, ತುಂಬು ಹೃದಯದಿಂದ ಪ್ರಶಂಶಿಸಿದಳು. ನರಸಿಂಗರಾಯ 'ನಮ್ಮ ಅಮೀರ್ ‍ಬಾಯಿ ಕರ್ನಾಟಕಿಯವರಿಗೆ ಶುಕ್ರಿಯ' ಎಂದು ಸಾಭಿನಯ ಮುಜರೆ ಮಾಡಿದ. ಅಮ್ಮ 'ಸಾಕೋ ನಿನ್ನ ಆಟ' ಎಂದು ಅವನ ತಲೆಯ ಮೇಲೆ ಮೊಟಕಿದಳು. ಆಗ ಸುನಂದಾ ಹೇಳಲೋ ಬೇಡವೊ ಅಂದುಕೊಳ್ಳುತ್ತಲೆ, 'ಶೆಟ್ಟಿ ಹಾಗು ಅವನ ಮಗ ಆದಿಮೂರ್ತಿಗೆ ಸಂಭಾಷಣೆಯೆ ಆಯಿತು. ಅವರಿಗೊಂದು ಹಾಸ್ಯ ಗೀತೆ ಇಟ್ಟರೆ ಚೆಂದವೇನೊ' ಅಂದಳು. ಹಾಸ್ಯಗೀತೇನಾ? ತಲೆ ಕೆರೆದುಕೊಂಡ ನರಸಿಂಗರಾಯ. ಅದಕ್ಕೇನಂತೆ ಅಂದ ಅಪ್ಪಯ್ಯ. 'ಕೂಗೊ ಕೋಳೀಗೇನು ಕುಂಡೆ ನೋಯೋದು, ಎದ್ದು ರಾಗಿ ಬೀಸೋಳ್ಗಲ್ವ ನೋಯೋದು ಅಂತ ಸೊಸೆ ಅತ್ತೆಗೆ ಹೇಳಿದಳಂತೆ' ಅಂದ ನರಸಿಂಗರಾಯ. ಅದಕ್ಕೆ ಉತ್ತರವಾಗಿ ಅಪ್ಪಯ್ಯ 'ನೋಯಿಸ್ಕೊಬೇಕಯ್ಯ' ಅಂದ.

ಮುನೆಕ್ಕ, ಸುನಂದಾ ಮನೆಗೆ ಹೋದ ಮೇಲೆ ಬಾಗಿಲು ಹಾಕಿ ಬಂದ ಅಮ್ಮನಿಗೆ 'ಇವರಿಬ್ಬರು ನಮ್ಮೂರ ಹೆಂಗಸರಿಗೆ ನಾಯಕಿಯರಾಗುವಂತಿದೆ' ಎಂದು ಅಪ್ಪ ಹೇಳಿದ್ದು ಮಾತಿಗಾಗಿಯೋ, ಗಂಭೀರವಾಗಿಯೋ ಎಂದು ಯೋಚಿಸುತ್ತ ನರಸಿಂಗರಾಯ ಹಾಸಿಗೆಯಲ್ಲಿ ಮೈ ಚಾಚಿದ.

English summary
Its been a month Sunanda came to munekka's home. Since she came, she became one of the family member of munekka home. Now she is maintaining her shop and kept separate book for calculation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X