• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುನಂದಾಳ ಬದುಕಿನ ಬೆತ್ತಲೆ ಕಥೆ

By ಸ ರಘುನಾಥ, ಕೋಲಾರ
|

ಹರಿಕಥೆ ಕಲಿಕೆಗೆಂದು ಬಂದ ಸುನಂದಾ, ಮುನೆಕ್ಕನ ಹಿಂದೆ ಬ್ಯಾಗಿನೊಂದಿಗೆ ಅವಳ ಮನೆಗೆ ಹೋದಳು. ತಿಂಗಳಿರಲು ಬಂದವಳು ತಂದುಕೊಂಡಿರುವುದು ಉಟ್ಟಿದ್ದೂ ಸೇರಿದರೆ ಒಂದೆರಡು ಸೀರೆ, ಬಟ್ಟೆ ಇದ್ದೀತೆಂದು ಬ್ಯಾಗು ಸೂಚಿಸಿತ್ತು. ಮುನೆಕ್ಕನಿಗೆ ಅದೇ ದೊಡ್ಡ ಪ್ರಶ್ನೆ. ಜೊತೆಗೆ ಕುತೂಹಲ. ಎರಡೂ ಕೂಡಿ ಚೀಲಕ್ಕೆ ಕೈ ಹಾಕಿ ಹೊರ ತೆಗೆದು ನೋಡಿಯೇ ಬಿಟ್ಟಳು. ಒಂದು ಸಾದಾ ಸೀರೆ, ರವಿಕೆ, ಒಳ ಉಡುಪು ಅಷ್ಟೇ! ತಿಂಗಳಿಗೆ ಸಾಕೆ? ಎಂದಳು.

ಅವಮಾನದಲ್ಲಿ ಮುದುಡಿದ ಜೀವ, ಮಾತನಾಡಿದೆನೇ ಅನಿಸುವಂತೆ 'ಸಾಲದೇ' ಎಂದಿತು. 'ಸಾಕೆಂದರೆ ಸಾಕು, ಬೇಕೆಂದರೆ ಬೇಕು' ಎಂದು ಹೇಳಿದವಳು ಹಿಂದೊಂದು ದಿನ ತಾನು ಅಪ್ಪಯ್ಯನ ಮುಂದೆ ಹೀಗೆಯೇ ನಿಂತಿದ್ದನ್ನು ನೆನಪಿಸಿಕೊಂಡು ಹೇಳಿದಳು, 'ದಿಕ್ಕಿಲ್ಲದವಳಾಗಿ ಉಟ್ಟಿದೊಂದು ಬಟ್ಟೆಯಲ್ಲಿ ಅಪ್ಪಯ್ಯನ ಮುಂದೆ ನಿಂತಿದ್ದೆ. ಆಗಿನ್ನೂ ನರಸಿಂಗರಾಯ ಹುಟ್ಟಿರಲಿಲ್ಲ. ಒಳ್ಳೆಯವನೆಂದೇ ನೋಡಿ ಮದುವೆ ಮಾಡಿದ. ಯಾರೋ ನನ್ನ ಬಗ್ಗೆ ಇಲ್ಲದ್ದನ್ನು ಅವನ ಕಿವಿಗೆ ಊದಿದ್ದರು. ಅನುಮಾನದ ದೆವ್ವ ಮೆಟ್ಟಿದ್ದವನು ಮೂರು ವರ್ಷಕ್ಕೇ ಸಾಕು ಮಾಡಿಕೊಂಡು ನ್ಯಾಯ ಪಂಚಾಯ್ತಿಗೂ ಬಗ್ಗದೆ ಹೋಗಿಯೇಬಿಟ್ಟ.'

ದಾಸರ ಪದಗಳು ನಲಿದವು ಸುನಂದಾಳ ನಾಲಿಗೆ ಮೇಲೆ...

ಎರಡು ಹೆರಿಗೆಯಲ್ಲೂ ಕೂಸು ಉಳಿಯದೆ ಹೋದ ಕರುಳು ಈಗ ಮತ್ತೆ ನೊಂದಿತು. ಬಡತನ, ಕಷ್ಟಕ್ಕೆ ಜಾತಿಯೆ? ಅಪ್ಪಯ್ಯ ಇದನ್ನು ನೋಡಿದ್ದರೆ ನಾನಿಂದು ಹೀಗೆ ಜೀವಂತ ಇರುತ್ತಿದ್ದೆನೆ? ಕಣ್ಣಲ್ಲಿ ನೀರಾಡಿತು. ಆದರೆ ತೋರ್ಗೊಡಲಿಲ್ಲ. ಕೈ ಹಿಡಿದು ಪಕ್ಕ ಕೂರಿಸಿಕೊಂಡು, ಒಳ್ಳೆ ಜಾಗಕ್ಕೆ ಬರುವಷ್ಟು ಪುಣ್ಯ ಮಾಡಿದ್ದೀಯೆ ಎಂದು ತಲೆ ನೇವರಿಸಿದಳು. ಅನ್ನ ಗೊಜ್ಜು ಮಾಡಿ ಬಡಿಸಿ, ರಾತ್ರಿಗೆ ಒಳ್ಳೆಯದೇನಾದರು ಮಾಡುತ್ತೇನೆ ಎಂದಳು. ಊಟವಾದ ಮೇಲೆ ಕೊಂಚ ಮಲಗತೀಯೇನು ಎಂದು ಕೇಳಿದಳು. ಇಲ್ಲವೆಂದಾಗ ಮಾತಿಗೆಳೆದಳು.

ಮುನೆಕ್ಕನ ಮಾತಿನ ದಾರಿ ಲೋಕಾಭಿರಾಮದ್ದೆ ಅಥವಾ ತನ್ನ ಕಥೆ ಕೇಳುವುದೆ ಎಂದು ಅರ್ಥವಾಗದೆಯೇ ಸುನಂದಾ ತನ್ನ ಕಥೆಯನ್ನು ಹೇಳುತ್ತಿದ್ದಳು.

ಯಾರ ಮಗಳೋ, ಜಾತಿ ಯಾವುದೋ ತಿಳಿಯದು. 'ಅಮ್ಮ' ಅಂದುದು ರಾಮುಲಮ್ಮನನ್ನು. ಜೋಪಡಿಯಲ್ಲಿ ಸುಮಾರು ನನ್ನದೇ ವಯಸ್ಸಿನ ವರದಲು ಹೆಸರಿನ ಮಗಳೊಂದಿಗಿದ್ದ ಚಿಂದಿ ಆಯುವ ಆ ತಲ್ಲಿ (ತಾಯಿ) ಮನಸಿನ ಹೆಂಗಸನ್ನು. ಅಮ್ಮ, ನಾನು ಚಿಂದಿ ಆಯಲು ಹೋದಾಗ ವರದಲು ಶಾಲೆಗೆ ಹೋಗುತ್ತಿದ್ದಳು. ಗುಡಿಸಲಿದ್ದುದು ಚಿತ್ತೂರಿನಲ್ಲಿ. ವರದಲುಳನ್ನು ಅಕ್ಕ ಎಂದು ಕರೆಯುತ್ತಿದ್ದೆ. ಅವಳು ನನಗೆ ಗುರುವೂ ಆಗಿದ್ದಳು. ರಾತ್ರಿ ಜೋಪಡಿಯಲ್ಲಿ ಬುಡ್ಡಿದೀಪದ ಬೆಳಕಿನಲ್ಲಿ ತನಗೆ ತೆಲುಗು ಓದಲು ಬರೆಯಲು ಕಲಿಸಿದ್ದು ಅವಳೇ. ನಾಲ್ಕು ವರ್ಷ. ಅವಳಿಗಿಂತಲೂ ಚೆನ್ನಾಗಿ ಕಲಿತೆ. ಆ ಅಕ್ಷರವೇ ಅನ್ನ ನೀಡಿದ ತಾಯಿ.

ಸುನಂದಾಳ 'ಹರಿಕಥಾ' ಪ್ರಸಂಗ

ವರದಲು ಏಳನೆಯ ತರಗತಿಗೆ ಬಂದಿದ್ದಳು. ಅಂದು ಸಾಯಂಕಾಲ... ನಾವಿಬ್ಬರು ಆಯ್ದುದನ್ನು ರದ್ದಿ ಅಂಗಡಿಗೆ ಹಾಕಿ, ವರದಲೂಗೆ ಪೆನ್ನು ಪೆನ್ಸಿಲ್ ಕೊಂಡು ಮನೆಗೆ ಬಂದೆವು... ಸುನಂದಾಳ ಕೊರಳು ಕಟ್ಟಿತು. ಅದೇ ಗುಡಿಸಲಿನಲ್ಲಿದ್ದೇನೆ, ಅಂದು ನೋಡಿದ್ದನ್ನೇ ನೋಡುತ್ತಿದ್ದೇನೆ. ಎಲ್ಲ ಹಾಗೆಯೇ ಆಗುತ್ತಿದೆ ಅನ್ನುವಂತೆ ಎದೆ ಬಡಿದುಕೊಂಡು ಅಳತೊಡಗಿದಳು. ಮುನೆಕ್ಕ ಎದ್ದು ಹೋಗಿ ಬಾಗಿಲು ಮುಚ್ಚಿ ಬಂದಳು. ಸುನಂದ 'ಅಮ್ಮಾ' ಅಂದಳು. ಹೃದಯ ನಿಂತುಬಿಡುವುದೇನೋ ಎಂದು ಮುನೆಕ್ಕನಿಗೆ ಭಯವಾಯಿತು.

ನರಸಿಂಗರಾಯನಿಗೆ ಅಪ್ಪನ ನಾಟಕದ ಪಾಠಗಳು

ಏಕೆ ಕೆದಕಿದೆನೋ ಎಂದು ಪಶ್ಚಾತ್ತಾಪ ಪಡುವಂತಾಯಿತು. ಕುಡಿಯಲು ನೀರು ಕೊಟ್ಟಳು. ಸಮಾಧಾನ ಎಂದಳು. ಸುನಂದಾ ನೀರು ಕುಡಿಯಲಿಲ್ಲ. ಅಮ್ಮಾ ಅವತ್ತು ವರದಲು ಹೆಣವಾಗಿದ್ದಳು. ರಕ್ತ, ರಕ್ತ. ಯಾರೋ ತಿಳಿಯದು. ನನ್ನ ಮೇಲೆಯೇ ಅತ್ಯಾಚಾರವಾದಂತೆ, ಈಗಲೂ ಅತ್ಯಾಚಾರ ಮಾಡುತ್ತಿರುವಂತೆ ಪ್ರತಿರಾತ್ರಿ ಕನಸು. ನನಗಾದುದೇ ನನ್ನ ಮಗಳಿಗೂ ಆಯಿತು. ನಾನು ಬದುಕಿದೆ, ಇವಳು ಸತ್ತಳು ಎಂದು ಅಮ್ಮ ಗೋಳಾಡಿದಳು. ಕೇಳಿದವರಿಲ್ಲ, ಆದವರಿಲ್ಲ. ಪುಂಗನೂರಿಗೆ ಬಂದೆವು. ಅದೇ ಚಿಂದಿ ಆಯುವ ಕೆಲಸ. ಅಮ್ಮ ಬರದಾಗಿದ್ದಳು. ನಾನೊಬ್ಬಳೆ. ಅಂಥದೇ ಸಾಯಂಕಾಲ. ಅಮ್ಮ ವಿಷ ಕುಡಿದಿದ್ದಳು. ನಾನು ಅನಾಥಳಾದೆ. ಗಂಗಶಿರಸು ಜಾತ್ರೆಗೆ ಬಂದಿದ್ದ ರಿಕಾರ್ಡ್ ಡ್ಯಾನ್ಸಿನ ಹೆಂಗಸೊಬ್ಬಳ ಆಶ್ರಯ ಸಿಕ್ಕಿತು. ಕಲಿಸಿದಳು, ಕುಣಿದೆ. ಅಶ್ಲೀಲ ಹಾವಭಾವಗಳೇ ಜನರ ಮನರಂಜನೆ. ಮೈ ನೆಕ್ಕಲು ಹಾತೊರೆಯುವ ಪುಂಡರು. ಅವರಿಗೆ ಪೊಲೀಸರ ಕುಮ್ಮಕ್ಕು. ಕೈಲಿ ಮೂರು ಕಾಸಿತ್ತು. ಮದನಪಲ್ಲಿಗೆ ಓಡಿಬಂದೆ. ಅಲ್ಲಿ ನಾಟಕಗಳಿಗೆ ಮುಖ್ಯವಾಗಿ ನರ್ತಕಿ ನಟಿಯರನ್ನು ಸಪ್ಲೆ ಮಾಡುವ ಚಿನ್ನಮ್ಮುಲು ಎಂಬ ಹೆಂಗಸಿನ ಪರಿಚಯವಾಗಿ ಆಶ್ರಯ ಪಡೆದೆ. ಆಕೆ ಯಾರೊಂದಿಗೋ ಓಡಿ ಹೋದಳು. ಅವಳಿದ್ದ ರೂಮಿನಲ್ಲೇ ಇದ್ದು...

ಮುನೆಕ್ಕ ಎದ್ದು, ಒಲೆ ಮೇಲೆ ನೀರಿಟ್ಟು, ನೀನು ಸ್ನಾನ ಮಾಡು. ಈಗ ಬಂದೆ ಎಂದು, ನರಸಿಂಗರಾಯನ ಮನೆಗೆ ಹೋದಳು. ಅಮ್ಮನನ್ನು ಹಿತ್ತಲಿಗೆ ಕರೆದೊಯ್ದು ಕಥೆಯನೆಲ್ಲ ಹೇಳಿದಳು. ಅಮ್ಮ, 'ಪಾಪದ ಹೆಣ್ಣು. ಕಾಲ ಬರುವವರೆಗೆ ಇದು ಗಂಡಸರಿಗೆ ತಿಳಿಯುವುದು ಬೇಡ. ಮುಂದೆ ಹೇಗೆಂದು ನೋಡೋಣ' ಅಂದಳು.

English summary
Here is a story of sunanda and her past life. Sunanda told her whole story to munekka while staying in her home
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X