ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾಳ ನಿರ್ಗಮನದಿಂದ ಬಿಮ್ಮೆಂದ ಮನಸುಗಳು

By ಸ ರಘುನಾಥ, ಕೋಲಾರ
|
Google Oneindia Kannada News

ಸುನಂದಾ ಮದನಪಲ್ಲಿಗೆ ಹೋದ ದಿನ ಅಮ್ಮ 'ತುಂಬಾ ನಯ ವಿನಯದ ಹುಡುಗಿ. ಸಭ್ಯತೆ ತಪ್ಪಿದ್ದಿಲ್ಲ. ಅಂದಚಂದಕ್ಕೆ ಕೊರತೆಯಿಲ್ಲ. ಈ ಕಾಲಕ್ಕೆ ಇಂಥವರು ವಿರಳ ಅನ್ನಿಸುತ್ತೆ. ಅವಳು ಹೋದ ಮೇಲೆ ಮನೆ ಬಿಕೋ ಅನ್ನಿಸುತ್ತಿದೆಯಲ್ಲ?' ಅಂದಳು. 'ನನಗೆ ನನ್ನ ಮಗಳೇ ಅನ್ನಿಸುವಂತಿದ್ದಳು' ಅಂದಳು ಮುನೆಕ್ಕ.

ತನ್ನೊಳಗಿನ ಯಾವ ಭಾವನೆಗೂ ಹೊರಶಬ್ದ ಕೊಡುವವನಲ್ಲ ಅಪ್ಪ. ಕಲಿಸುವಾಗ ದುರ್ವಾಸನ ಅವತಾರಿಯಾಗುತ್ತಿದ್ದವನು ಸುನಂದಾಳಿಗೆ ಕಲಿಸುವಷ್ಟು ದಿನಗಳಲ್ಲಿ ಒಮ್ಮೆಯೂ ಕನಿಷ್ಠ ಸಿಡುಕಿದವನಲ್ಲ. ನರಸಿಂಗರಾಯ ಮೌನದಿಂದಿದ್ದ. ಆದರೆ ಅವನ ಚಿತ್ತಧ್ಯಾನದಲ್ಲಿ ಸುನಂದಾಳಿದ್ದಳು. ನಂತರದ ದಿನಗಳಲ್ಲಿ ಒಂದಿಲ್ಲೊಂದು ಕಾರಣದಿಂದ ಸುನಂದಾಳನ್ನು ಇಬ್ಬರು ಹೆಂಗಸರೂ ನೆನೆಯುತ್ತಿದ್ದರು.

ಸುನಂದಾಳ ಬದುಕಿನ ಬೆತ್ತಲೆ ಕಥೆಸುನಂದಾಳ ಬದುಕಿನ ಬೆತ್ತಲೆ ಕಥೆ

ಸುನಂದಾ ಇದ್ದಷ್ಟು ದಿನ ಮುನೆಕ್ಕನ ಮನೆಯಿಂದ ಬೇಗ ಬಂದು, ಎಲ್ಲರಿಗಿಂತ ಬೇಗ ಮಿಂದು, ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕಿ, ಒಂದು ದಳವನ್ನು ಕಣ್ಣಿಗೊತ್ತಿಕೊಂಡು ಮುಡಿಯುತ್ತಿದ್ದಳು. ಅಪ್ಪನ ಸಂಧ್ಯಾವಂದನೆ, ಪೂಜೆಗೆ ಅಣಿ ಮಾಡಿಡುತ್ತಿದ್ದಳು. ನರಸಿಂಗರಾಯನ ಜಳಕಕ್ಕೆ ಬಿಸಿನೀರು ತೋಡಿಡುತ್ತಿದ್ದಳು. ಅವನು ಮಿಂದು ಬಂದು ದೇವರಮನೆ ಬಾಗಿಲಲ್ಲಿ ನಿಂತು ಕೈ ಮುಗಿಯುತ್ತಿದ್ದನಷ್ಟೆ.

Silence In Narasingaraya Home After Sunanda Left

ಒಂದು ಮಂತ್ರವಿಲ್ಲ, ಒಂದು ಸ್ತುತಿಯಿಲ್ಲ. ಇದೂ ಅಪ್ಪ ಅಮ್ಮನ ಸಮಾಧಾನಕ್ಕೇನೋ ಅನ್ನಿಸುತ್ತಿತ್ತು ಸುನಂದಾಳಿಗೆ. ಈ ಬಗ್ಗೆ ಅಮ್ಮನನ್ನು ಕೇಳಿದ್ದಳು. ಏನೊ ಅಮ್ಮ, ಅವನು ಹುಡುಗನಿಂದಲೂ ಹೀಗೇನೇ. ದೇವರಿದಾನೆ, ಇಲ್ಲವೆನ್ನುವ ಮಾತೂ ಇಲ್ಲ. ಅರ್ಥವಾಗದ ಹುಡುಗ. ಯಾವುದಕ್ಕೂ ನಮ್ಮ ಬಲವಂತವಿಲ್ಲ. ಕೆಡದ ಮಗ ಹೇಗಿದ್ದರೂ ಚಿಂತೆಯಿಲ್ಲ ಅಂದಿದ್ದಳು. ಇನ್ನು ಮುನೆಕ್ಕ ಬೇರೆ ಜಾತಿಯವಳಾದರೂ ಅಮ್ಮನ ನೆರಳು.

ಅಂದು ಸಂಜೆ ನರಸಿಂಗರಾಯ ಕೊಳಲು ಹಿಡಿದು ಮೋಹನರಾಗವನ್ನು ಮಂದ್ರದಲ್ಲಿ ನುಡಿಸುತ್ತ ಕುಳಿತಿದ್ದ. ಅಮ್ಮ ಮನೆಗೆಲಸದಲ್ಲಿರುತ್ತಲೇ ಆಲಿಸುತ್ತ, ನರಸಿಂಗ ಅಷ್ಟು ಮಂದ್ರವೇಕೊ? ಮೂರನೇ ಮನೆಯಲ್ಲಿ ನುಡಿಸಲಾಗದ ಅಂದಳು. ಬೆಳಿಗ್ಗೆ ಎಮ್ಮೆ ಈದಿತೆಂತು ಗಿಣ್ಣುಹಾಲು ತಂದಿದ್ದ ಮುನೆಕ್ಕ, ತಾನೂ ಆಲಿಸುತ್ತಿದ್ದಳು. ಅದು ಮುಗಿಯುತ್ತಲೇ 'ಬಾರಯ್ಯ ಗೋವಿಂದ ಬಂಧಕವ ಬಿಡಿಸು, ದೇಹವೆಂಬುವ ಬಂಡಿ ಎಳೆದು ಬಳಲಿದೆನೊ' ಎಂದು ತನಗೇ ಎಂಬಂತೆ ಕೈವಾರ ತಾತಯ್ಯನ ಪದ ಹಾಡಿಕೊಳ್ಳುತ್ತಿದ್ದವನು ಥಟ್ಟನೆ ನಿಲ್ಲಿಸಿ, ಮರೆತು ಹೋಯಿತು ನೋಡು, ಕಥೆಯಲ್ಲಿ ಶಬರಿಯ ಪ್ರಸಂಗ ಬಂದಾಗ ಹಾಡೆಂದು ಸುನಂದಾಳಿಗೆ ಹೇಳಿಕೊಡಬೇಕಿತ್ತು ಅಂದ.

ದಾಸರ ಪದಗಳು ನಲಿದವು ಸುನಂದಾಳ ನಾಲಿಗೆ ಮೇಲೆ...ದಾಸರ ಪದಗಳು ನಲಿದವು ಸುನಂದಾಳ ನಾಲಿಗೆ ಮೇಲೆ...

ಏನಾಯಿತೀಗ, ಬಾ ಎಂದು ಹೇಳಿಕಳಿಸಿ ಹೇಳಿಕೊಟ್ಟರಾಯಿತು ಅಂದಳು ಅಮ್ಮ. ಅವಳ ಇಂಗಿತ ಎಲ್ಲರಿಗೂ ತಿಳಿಯಿತು. ಅವಳು ಹೋಗಿ ಹದಿನೈದು ದಿನಗಳಷ್ಟೇ ಆಗಿದ್ದು. ಆಗಲೇ ನೋಡಬೇಕೆಂಬ ಹಂಬಲ. 'ಸುಮಗಳು ಸುರಿಯಲು ಆಡಿದಳೇ/ ಚೈತ್ರದ ಸೊಬಗಿನ ಅಲಮೇಲುಮಂಗ' ಎಂದು ತಾನೇ ಅನುವಾದಿಸಿಕೊಂಡ ಅನ್ನಮಾಚಾರ್ಯರ ಕೀರ್ತನೆಯನ್ನು ನುಡಿಸುತ್ತ ಕುಳಿತಿದ್ದ ನರಸಿಂಗರಾಯನ ಮನಸ್ಸಿನಲ್ಲಿ ಸುನಂದಾ ಕಾಣಿಸಿಕೊಂಡಳು.

ಅವಳ ಬಗ್ಗೆ ತನಗೇನೂ ತಿಳಿಯದು. ಹಿರಿಯರು ವಿಚಾರಿಸಿಕೊಳ್ಳುವರು ಎಂದಿದ್ದೆ. ಆದರೆ ಅವರಿಗೂ ಅವಳ ಬಗ್ಗೆ ತಿಳಿದಂತಿಲ್ಲ. ತಿಳಿದುಕೊಳ್ಳಬೇಕು ಅನ್ನಿಸದಂತೆ ಅವಳಿದ್ದಳು. ಆದರೂ ತಿಳಿದುಕೊಳ್ಳಬೇಕಿತ್ತಲ್ಲವೆ? ಏಕೆ ತಿಳಿದುಕೊಳ್ಳಲಿಲ್ಲ? ತಿಳಿದೂ ತನಗೆ ಹೇಳಿಲ್ಲವೆ? ತನ್ನಿಂದ ಮುಚ್ಚುಮರೆ ಮಾಡುವವರಲ್ಲವಲ್ಲ? ಕೇಳಲೆ? ಹೇಳುವವರೆಗೆ ಕಾಯಲೆ? ಪ್ರಶ್ನೆಗಳ ಸಾಲು ಬೆಳೆಯುತ್ತಿತ್ತು. ಹೆಸರು ಹಿಡಿದು ಕೂಗಿಕೊಂಡೇ ಪಿಲ್ಲಣ್ಣ ಒಳಗೆ ಬಂದ. ಅವನ ಹಿಂದೆಯೇ ಬೋಡಪ್ಪ. ನರಸಿಂಗರಾಯ ಪ್ರಶ್ನೆಗಳಿಗೆ ತಡೆ ಹಾಕಿ, ಗೆಳೆಯರೊಂದಿಗೆ ಹೊರ ಹೊರಟ.

English summary
There is a silence in Narasingaraya home after sunanda went. His home was filled with happiness till sunanda is there
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X