ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಜನರ ಮಾತಿನಲ್ಲಿ ನರಸಿಂಗರಾಯ ಎನ್.ಟಿ.ಆರ್., ಸುನಂದ ಜಮುನಾ...

By ಸ ರಘುನಾಥ, ಕೋಲಾರ
|
Google Oneindia Kannada News

ಸುನಂದಾಳನ್ನು ಸರ್ವ ಸಿದ್ಧಳನ್ನಾಗಿ ಮಾಡಿ ದೊಡ್ಡ ಕಾಶ್ಮೀರೀ ಶಾಲು ಹೊದೆಸಿ ರಂಗದ ಹಿಂಭಾಗದಿಂದ ಕರೆತಂದ ನರಸಿಂಗರಾಯ 'ಶ್ರೀಕೃಷ್ಣ ತುಲಾಭಾರ' ನಾಟಕದಾರಂಭಕ್ಕೆ ತಾಳ ಹಿಡಿದು, ನಟ-ನಟಿಯರು ಮಾತು ಮರೆತರೆ ಎತ್ತಿಕೊಡುವ ಅನುಕೂಲಕ್ಕೆ ಸೈಡ್‍ವಿಂಗಿನಲ್ಲಿ ನಿಂತು ನೋಡಿದ. ಕೃಷ್ಣನ ಪಾರ್ಟುದಾರ ಆಂಜಿನಪ್ಪ ಅದೊಂದು ತರಹ ಕುಳಿತಿದ್ದ. 'ಏರಿಸಿ' ಬಿಟ್ಟಿದ್ದಾನೇನೋ ಎಂದುಕೊಂಡ. ಗಣೇಶನ ಪ್ರಾರ್ಥನೆ ಶುರುವಾದದ್ದರಿಂದ ತಾಳದತ್ತ ಮಗ್ನನಾದ.

'ಜೈ ಭಾರತ ಜೈಜೈ ಭಾರತ ಜನನಿ ಮಾತೆ ಸಕಲಭಾಗ್ಯವಿದಾತೆ' ಪದ ಎತ್ತಿಕೊಂಡ. ಮೇಳದವರು ಅವನ್ನು ಎತ್ತಿಕೊಂಡರು. ಬಲರಾಮನ ಪಾತ್ರಧಾರಿ ಬಂದು ಕಿವಿಯಲ್ಲಿ 'ಆಂಜಿಗನಿಗೆ ಚಳಿಜ್ವರ ಬಂದುಬಿಟ್ಟಿದೆ ನರಸಿಂಗ. ನಡುಗುತಿದ್ದಾನೆ. ಏನು ಗತಿ' ಎಂದ ಆತಂಕದಿಂದ. ನರಸಿಂಗರಾಯ ತಾಳ ತಪ್ಪಿಸಿದ. ಕೂಡಲೇ ಪ್ರೇಕ್ಷಕರ ಕಡೆಯಿಂದ ಯಾರದೋ ಕೂಗು 'ಯಾವನ್ಲೇ ಅವನು ತಾಳದೋನು. ತಾಳ ಬಿಸಾಕಿ ಬಂದಿಲ್ಲಿ ಕೂತ್ಕೊ' ನರಸಿಂಗರಾಯನ ಕೈಕಾಲು ಆಡಲಿಲ್ಲ. ಹಾಡು ಮುಗಿಯುತ್ತಲೇ ಕೃಷ್ಣನ ಪ್ರವೇಶ. ಐದು ನಿಮಿಷಕ್ಕೆ ಹಾಡು ಮುಗಿಯುತ್ತೆ. ಯಾರೊಂದಿಗೂ ಚರ್ಚಿಸಲು ಅವಕಾಶವಿಲ್ಲ.

 ಸುನಂದಾಳಿಗೆ ಪತ್ತಲ ಉಡಿಸಿದ ನರಸಿಂಗರಾಯ ಸುನಂದಾಳಿಗೆ ಪತ್ತಲ ಉಡಿಸಿದ ನರಸಿಂಗರಾಯ

ನರಸಿಂಗರಾಯ ಎಚ್ಚೆತ್ತ. ಹಾಡು ಮುಗಿಯುತ್ತಲೇ ನೀನು ಹೋಗಿಬಿಡು. ಕೃಷ್ಣಪರಮತ್ಮನು ಅರ್ಜುನನ್ನು ಬೀಳ್ಕೊಟ್ಟು ಬರಲು ಹೋಗಿದ್ದಾನೆ. ವಿಷಯವನ್ನು ಅರುಹಲು ನನ್ನನ್ನು ಕಳುಹಿಸಿರುವನು ಎಂದು ಹೇಳಿ ಸೂತ್ರದಾರನೊಂದಿಗೆ ಹತ್ತು ನಿಮಿಷ ಮ್ಯಾನೇಜ್ ಮಾಡಿಬಿಡು ಎಂದು ಹೇಳಿ, ತಾಳವನ್ನು ಮೇಳದಲ್ಲಿ ಮುಂದೆ ನಿಂತಿದ್ದವನ ಕೈಗೆ ಕೊಟ್ಟ. ವಾದ್ಯದವರ ಪಕ್ಕವೇ ಕುಳಿತಿದ್ದ ಅಪ್ಪನಿಗೆ ಹೇಳಿಕಳುಹಿಸಿದ. ಅವರು ಆತುರ ನಡಿಗೆಯಲ್ಲಿ ಬಂದರು. ವಿಷಯ ಕಿವಿಗೆ ಬಿದ್ದ ಕೂಡಲೇ, ನರಸಿಂಗ ಕಟ್ಟಿಬಿಡು ವೇಷ ಎಂದು ಹೇಳಿ, ಮಾತಿಗೆ ಅವಕಾಶ ಕೊಡದೆ ಹಿಂದಿರುಗಿದರು. ಎಲ್ಲರೂ ಕೂಡಿ ಹತ್ತೇ ನಿಮಿಷಗಳಲ್ಲಿ ನರಸಿಂಗರಾಯನಿಗೆ ಕೃಷ್ಣ ಸಿಂಗಾರ ಮಾಡಿಬಿಟ್ಟರು.

Short Story Narasingaraya In Krishna Part

'ಕದವ ತೆರೆಯೆ ಸತ್ಯಭಾಮೆ/ ಮುನಿದ ನಿನ್ನ ಮುಖದ ಅಂದ/ ನೋಡೊ ಭಾಗ್ಯ ಕರುಣಿಸೆ/ ಕದವ ತೆರೆಯೆ ಸತ್ಯಭಾಮೆ' ಎಂದು ಹಾಡುತ್ತ ರಂಗ ಪ್ರವೇಶ ಮಾಡಿಯೇ ಬಿಟ್ಟ. ಇದೇನಿದು ವಿಚಿತ್ರ? ಆಂಜಿನಪ್ಪನಲ್ಲವೆ ಕೃಷ್ಣ! ಎಂಬ ಪ್ರಶ್ನೆಬೆರಗು ಕವಿದ ಜನ, ಮೇಕಪ್ಪಿನಲ್ಲಿದ್ದ ನರಸಿಂಗರಾಯನನ್ನು ಥಟ್ಟನೆ ಗುರುತಿಸಲಾಗೆ, 'ಯಾರಿವನು? ಎಲ್ಲಿಂದ ಕರೆಸಿದರು? ಯಾವಾಗ ಬಂದ? ಪ್ರಶ್ನೆಗಳಲ್ಲಿ ಮುಳುಗಿದರು. ತಕ್ಷಣಕ್ಕೆ ವಾದ್ಯಗಾರರ ಕೈ ಆಡಲಿಲ್ಲ. ನರಸಿಂಗರಾಯ ಧ್ವನಿಯನ್ನು ಕೊಂಚ ಒರಟು ಮಾಡಿ ಮೊದಲನೇ ಪಾದವನ್ನು ಪುನರಾವರ್ತಿಸಿದಾಗ ಅವರು ಆಶ್ಚರ್ಯದಲ್ಲಿ ಮುಳುಗಿಯೇ ಕೂಡಲೇ ಆಂಜಿನಪ್ಪನಿಗಾಗಿ ಮಾಡಿಕೊಂಡಿದ್ದ ಶ್ರುತಿಯನ್ನು ಬದಲಿಸಿಕೊಂಡು, ಅವನ ಹಾಡಿಕೆಯ ಮನೋಧರ್ಮವನ್ನು ಗ್ರಹಿಸಿ ನುಡಿಸತೊಡಗಿದರು. ಜನರಿಗೆ ನರಸಿಂಗರಾಯನ ಗುರುತು ಹತ್ತುತ್ತಿದಂತೆ ಶಿಳ್ಳೆ, ಚಪ್ಪಾಳೆಗಳನ್ನು ಮೊಳಗಿಸಿದರು.

ಎಲ್ಲರಿಗೂ ಖುಷಿ. ಆದರೆ ಸುನಂದಳು ಮಾತ್ರ ಆತಂಕದಲ್ಲಿ ಚಡಪಡಿಸುತ್ತಿದ್ದಳು. ಇದನ್ನರಿತ ಹಿಮ್ಮೇಳದ ಸಾಕಮ್ಮ, 'ಕೃಷ್ಣ ಮನಸು ಕೆಟ್ಟಿದೆ/ ಸತ್ಯಭಾಮೆಯ ಮನಸು ಕದಡಿದೆ/ ಈಗ ಹೋಗಿ ಮರಳಿ ಬಾರೋ' ಎಂದು ಹಾಡಿದಳು. ಈ ಅಚಾನಕಕ್ಕೆ ವಾದ್ಯಗಳು ಸ್ಥಬ್ದವಾದವು. ಸಾಕಮ್ಮನ ಕೈಯ ತಾಳವೊಂದೇ ನುಡಿಯುತ್ತಿದ್ದುದು. ತೆರೆಯ ಹಿಂದೆ ಏನೇನೋ ಆಗುತ್ತಿದೆ. ಏನೆಂದು ತಿಳಿಯುತ್ತಿಲ್ಲ. ಹೀಗಾದರೆ ನಾಟಕದ ಗತಿಯೇನು? ನಾಕೂರಿನವರ ಮುಂದೆ ಊರಿನ ಮರ್ಯಾದೆಯೇನಾದೀತು? ನರಸಿಂಗರಾಯನ ಕಣ್‍ಸನ್ನೆಯರಿತು ಪರದೆ ಇಳಿತು.

ನರಸಿಂಗರಾಯ ಎಂಎಲ್ ಎ ಜೊತೆ ಇಂಗ್ಲಿಷಲ್ಲಿ ಮಾತಾಡಿದ್ದು...ನರಸಿಂಗರಾಯ ಎಂಎಲ್ ಎ ಜೊತೆ ಇಂಗ್ಲಿಷಲ್ಲಿ ಮಾತಾಡಿದ್ದು...

ಸಂದರ್ಭವರಿತ ಸಾಕಮ್ಮ ದರುವು ತೆಗೆದೇಬಿಟ್ಟಳು: 'ಕಾವ ಕೃಷ್ಣನಿರುವನೊ/ ಭಾಮೆ ಮನವನರಿತು/ ಸಾಂಗಗೊಳಿಸಿ ಎಲ್ಲ/ ಭಾಮೆಯೊಡನೆ ಸರಸದಿಂದ ಬರುವನೊ' ನರಸಿಂಗರಾಯನನ್ನು ಕಂಡ ಸುನಂದ ಅಳತೊಡಗಿದಳು. ಸ್ಟೇಜಿನಲ್ಲಿ ನಿನ್ನ ಸಮ ನಿಲ್ಲಲಾರೆ ಎಂದು ಕೈ ಮುಗಿದಳು. 'ನೀನೀಗ ಸತ್ಯಭಾಮೆ, ಸುನಂದಳಲ್ಲ. ಅವಳನ್ನು ಮನಸ್ಸಿನಲ್ಲಿ ತುಂಬಿಕೊ. ನನ್ನನ್ನು ಮೀರಿಸುತ್ತಿ. ಈಗ ಗೆದ್ದೆಯೋ ಎಲ್ಲರೆದುರು ಸನ್ಮಾನ ಮಾಡುತ್ತೇವೆ' ಎಂದು ಅವಳ ಬೆನ್ನು ತಟ್ಟಿದ.

ನರಸಿಂಗರಾಯನ ಸ್ಪರ್ಶದಿಂದ ಅವಳ ಮೈಯಲ್ಲಿ ಮಿಂಚು ಹರಿಯಿತು. ಅಂದು ರಂಗದ ಮೇಲೆ ಸುನಂದ ಪ್ರದರ್ಶಿಸಿದ ಹಮ್ಮು ಬಿಮ್ಮು ಒಯ್ಯಾರ, ದರ್ಪ 'ಶ್ರೀಕೃಷ್ಣ ತುಲಾಭಾರಂ' ಸಿನೆಮಾ ನೋಡಿದ್ದವರಿಗೆ ಜಮುನ, ಜಯಲಲಿತ ಒಟ್ಟಿಗೆ ಸುನಂದಳ ಮೈಮೇಲೆ ಬಂದಿರುವರೇನೋ ಅನ್ನಿಸಿತು. ನರಸಿಂಗರಾಯನ ನಟನೆಯಲ್ಲಿ ಜನ ಕಂಡಿದ್ದು ಎನ್.ಟಿ.ಆರ್ ರನ್ನು. ಅರುಣೋದಯಕ್ಕೆ ಸರಿಯಾಗಿ ರಂಗದ ಮೇಲೆ ಸುನಂದಳನ್ನು ಘನವಾಗಿ ಸನ್ಮಾನಿಸಿದಾಗ ಅವಳು ನೆಲಕ್ಕೆ ಹಣೆಯೊತ್ತಿ ಎದ್ದು ಕೈ ಮುಗಿದಾಗ ಜನರಿಗೆ ಕಂಡಿದ್ದು ನೀರ ಕೊಳದಂತಾಗಿದ್ದ ಅವಳ ಕಣ್ಣುಗಳು.

English summary
Here is a short story about how narasingaraya came in krishna part and manage theatre,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X