ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕನ್ನು ಮುನ್ನಡೆಸುತ್ತಿರುವ ನಡೆದಾಡುವ ದೇವರ ಆಶ್ರಯದಲ್ಲಿ ಕಲಿತ ಪಾಠ

By ಸ ರಘುನಾಥ
|
Google Oneindia Kannada News

Recommended Video

ಬದುಕನ್ನು ಮುನ್ನಡೆಸುತ್ತಿರುವ ನಡೆದಾಡುವ ದೇವರ ಆಶ್ರಯದಲ್ಲಿ ಕಲಿತ ಪಾಠ | Oneindia Kannada

ಕಾರಣವೇನೇ ಇರಲಿ ನನ್ನನ್ನು ಸಿದ್ಧಗಂಗಾ ಮಠದಲ್ಲಿ ಬಿಟ್ಟ ದಿನದಿಂದ ಅಲ್ಲಿದ್ದ ಸಾವಿರಾರು ಮಕ್ಕಳಿಗೆ ಪೋಷಕರಾಗಿದ್ದ ಪೂಜ್ಯ ಸ್ವಾಮಿಜಿ ನನ್ನ ಪೋಷಕರೂ ಆದರು. ಎಂಟನೇ ತರಗತಿಯಿಂದ ಪ್ರಾರಂಭವಾಗುವ ದಾಖಲೆಗಳಲ್ಲಿ ಒಂದಾದ ಕ್ಯುಮಲೇಟಿವ್ ರೆಕಾರ್ಡ್ ನಲ್ಲಿ ಪೋಷಕರ ಹೆಸರು ಎಂಬಲ್ಲಿ ನಮೂದಾಗಿರುವ ಶ್ರೀ ಶಿವಕುಮಾರ ಸ್ವಾಮಿಗಳು ಎಂಬುದರಲ್ಲಿನ ಒಂದೊಂದು ಅಕ್ಷರವನ್ನೂ ಓದುವಾಗ ನಾನು ಎಂಥ ಮಹಾನುಭಾವರನ್ನು ಪೋಷಕರನ್ನಾಗಿ ಪದೆದಿದ್ದೆ ಎಂದು ರೋಮಾಂಚನವಾಗುತ್ತದೆ.

ಅವರನ್ನು ನೆನೆದಾಗಲೆಲ್ಲ ಧನ್ಯತೆಯ ಭಾವ ಮೂಡುತ್ತದೆ. ಮಠಕ್ಕೆ ಸೇರುವ ಮೊದಲು, ಆಮೇಲೆಯೂ ನಾನು ಪ್ರತಿಭಾವಂತನೇನಲ್ಲ. ಸಾಮಾನ್ಯ ವಿದ್ಯಾರ್ಥಿಗಳಲ್ಲಿಯೇ ಸಾಮಾನ್ಯ. ಆದರೆ ಬುದ್ಧಿಯವರ ಪ್ರಭಾವ ಅಸಾಮಾನ್ಯವಾದುದು. ಅವರು ಅಲ್ಲಿ ನಮ್ಮನ್ನು ಪೋಷಿಸುವ ದಾತರಷ್ಟೇ ಆಗಿದ್ದರೆಂದು ನನಗನ್ನಿಸಿದ್ದಿಲ್ಲ. ತಂದೆ, ಗುರು, ತಾತ, ಅನ್ನದಾತ ಎಲ್ಲವೂ ಆಗಿದ್ದರು.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮೋದಿಗೆ ಸಿಎಂ ಪತ್ರಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮೋದಿಗೆ ಸಿಎಂ ಪತ್ರ

ಸಂಜೆಯ ಪ್ರಾರ್ಥನೆ ಮುಗಿದ ಮೇಲೆ ಹೇಳುತ್ತಿದ್ದ ಕಥೆಗಳು, ವಚನಗಳು, ನೀತಿ ಎಲ್ಲವೂ ನನ್ನಲ್ಲಿ ಲೇಖಕ ಹಾಗೂ ಮನುಷ್ಯನೊಬ್ಬನನ್ನು ರೂಪಿಸುತ್ತಿದ್ದವು ಎಂದು ನನಗಂದು ಅನ್ನಿಸಿರಲಿಲ್ಲ. ಅವರಲ್ಲಿ ನಾನು ನನ್ನ ಅಜ್ಜಿ, ತಾತನನ್ನು ಕಂಡುಕೊಳ್ಳುತ್ತಿದ್ದೆ. ನಾನು ಇಂದು ಏನಾಗಲು ಸಾಧ್ಯವಾಗಿದೆಯೋ ಅದೆಲ್ಲ ಈ ಮೂವರ ಪ್ರಭಾವದಾಶೀರ್ವಾದ.

ಆ ಮೂವರ ಮೇಲೆ ಆಣೆ ಮಾಡಲಾರೆ

ಆ ಮೂವರ ಮೇಲೆ ಆಣೆ ಮಾಡಲಾರೆ

ದೇವರಿದ್ದಾನೆಯೋ ಇಲ್ಲವೊ ಎಂದು ತಿಳಿಯಲು ಇಂದಿಗೂ ಅಸಮರ್ಥನಾಗಿರುವ ನಾನು, ದೇವರ ಮೇಲೆ ಆಣೆ ಮಾಡಲು ಹಿಂದೆಗೆಯದ ನಾನು, ಈವೊತ್ತಿಗೂ ಈ ಮೂವರ ಮೇಲೆ ಆಣೆ ಇಡಲಾರೆ. ಇಟ್ಟರೆ ಸುಳ್ಳು ಹೇಳಲಾರೆ. ಹೇಳಿದರೆ ಇವರಿಗೆ ದ್ರೋಹ ಬಗೆದಂತೆ ಎಂದೇ ಭಾವಿಸಿರುವೆ.

ಬುದ್ಧಿಯವರ ಹಾವುಗ(ಪಾದುಕೆ)ಗಳ ಸಪ್ಪಳ ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುವುದು. ನಾವು ಬೇಸಿಗೆಯಲ್ಲಿ, ರೂಮುಗಳಲ್ಲಿ ಮಲಗದೆ, ಸಂಸ್ಕೃತ ಪಾಠಶಾಲೆಯ ಅಗಲವಾದ ಮೆಟ್ಟಿಲುಗಳ ಮೇಲೆ ಮಲಗುತ್ತಿದ್ದೆವು. ಸೆಕೆಗಿಂತ ಮುಖ್ಯ ಕಾರಣವೆಂದರೆ ತಿಗಣೆಗಳ ಕಾಟದಿಂದ ಬಚಾವಾಗುವುದು. ನಾವು ಗಾಢನಿದ್ದೆಯಲ್ಲಿರುವ ಹೊತ್ತಿನಲ್ಲಿ ಅಂದರೆ ಸುಮಾರು ಒಂದು ಗಂಟೆ ದಾಟಿದ ಸರಿರಾತ್ರಿಯಲ್ಲಿ ಬುದ್ಧಿಯವರ ಪಾದುಕೆಗಳ ಸಪ್ಪಳ ನಮ್ಮ ಪಕ್ಕದಿಂದಲೇ ಹಾದು ಹೋಗುತ್ತಿತ್ತು.

ಅಂದರೆ ಅವರು ಬೆಟ್ಟದ ಮೆಟ್ಟಿಲುಗಳ ಹತ್ತಿರದ ಗದ್ದುಗೆಗೆ ಮಲಗಲು ಹೋಗುತ್ತಿದ್ದಾರೆಂದು ನಮ್ಮ ಎಚ್ಚೆತ್ತ ಮನಸ್ಸಿಗೆ ತಿಳಿಯುತ್ತಿತ್ತು. ಮತ್ತೆ ಐದು ಗಂಟೆಗೂ ಮೊದಲೇ ಅದೇ ಸಪ್ಪಳ ನಮ್ಮನ್ನು ನಿದ್ದೆಯಿಂದ ಎಚ್ಚರಗೊಳಿಸುತ್ತಿತ್ತು. ಆ ಸಪ್ಪಳವೇ ನಮಗೆ ಅಲಾರಂ. ದಡಬಡಿಸಿ ಎದ್ದು ಚಾಪೆ, ಜಮಖಾನೆ, ದುಪ್ಪಟಿಗಳನ್ನು ಬಾಚಿಕೊಂಡು ರೂಮುಗಳತ್ತ ಓಡುತ್ತಿದ್ದೆವು.

ಈವಯ್ಯನಿಗೆ ನಿದ್ದೆ ಬರುವುದಿಲ್ಲವೇನೋ!

ಈವಯ್ಯನಿಗೆ ನಿದ್ದೆ ಬರುವುದಿಲ್ಲವೇನೋ!

ಆಗ ನಾನು ಅಂದುಕೊಳ್ಳುತ್ತಿದ್ದೆ: ಈವಯ್ಯನಿಗೆ ನಿದ್ದೆಯೇ ಬರುವುದಿಲ್ಲವೇನೋ ಎಂದು. ಆದರೆ ಆ ವಯಸ್ಸಿನಲ್ಲಿ ನನಗೆ ಅವರ ಕಾಯಕದ ತಪಸ್ಸಿನ ಆಳ, ಒಳಗುಗಳು ಅರ್ಥವಾಗುವಂತಿರಲಿಲ್ಲ. ಆಗ ಇದ್ದುದು ಭಯ- ಭಕ್ತಿ ಮಾತ್ರ.

ಬುದ್ಧಿಯವರದು ದೈವೀಗಾಂಭೀರ್ಯದ ವ್ಯಕ್ತಿತ್ವ. ಮುಖದಲ್ಲಿಯೂ ಗಾಂಭೀರ್ಯ. ಆದರೆ ಅದರಲ್ಲಿ ಎಂಥದೋ ಆಕರ್ಷಕ ಕಳೆ. ಬುದ್ಧಿಯವರು ನಗೆಯಲ್ಲಿ ಹಸುಗೂಸಿನ ಮುಗ್ಧತೆ. ನಗುವುದೇ ವಿರಳ, ನಕ್ಕರಂತೂ ಬೆಳದಿಂಗಳು. ನಾನು ಆ ಬೆಳದಿಂಗಳನ್ನು ನೋಡಲೆಂದೇ ಕಾಯುತ್ತಿದ್ದುದುಂಟು.

ಲೋಕ ಜಂಗಮ: ಸಿದ್ದಗಂಗಾಶ್ರೀಗಳ ಸಮಗ್ರ ಸಾಕ್ಷ್ಯಚಿತ್ರ

'ನೀನೆ ಅನಾಥ ಬಂಧು, ಕಾರುಣ್ಯ ಸಿಂಧು'

'ನೀನೆ ಅನಾಥ ಬಂಧು, ಕಾರುಣ್ಯ ಸಿಂಧು'

ನನ್ನ ಅಂದಿನ ದೀನ ಪರಿಸ್ಥಿತಿಯಲ್ಲಿ ಈ ನಡೆದಾಡುವ ದೇವರ ಆಶ್ರಯವಿರದೆ ಹೋಗಿದ್ದರೆ ಬೀದಿ ಭಿಕ್ಷುಕನಾಗಿಬಿಡುತ್ತಿದ್ದೆನೇನೋ!? ಅಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಒಂದು ದಿನ ಸಿದ್ದಗಂಗಾ ಬೆಟ್ಟದ ತುದಿಯಲ್ಲಿ ಕುಳಿತಿದ್ದೆ. ಅಜ್ಜಿ- ತಾತನ ನೆಪಾಗಿ ಅಳು ಬಂದಿತು. ಬುದ್ಧಿಯವರು ಹತ್ತಿರ ಬಂದು ಸಾಂತ್ವನಗೊಳಿಸಿದಂತೆನಿಸಿತು. ಮನಸ್ಸು ತುಂಬಿ ಬಂದು 'ನೀನೆ ಅನಾಥ ಬಂಧು, ಕಾರುಣ್ಯ ಸಿಂಧು' ಎಂದು ಹಾಡಿಕೊಂಡು ಬೆಟ್ಟವಿಳಿದು ರೂಮಿಗೆ ಹೋದೆ.

ತಪ್ಪು ಮಾಡಿದರಷ್ಟೇ ಭಯ ಪಡಬೇಕು

ತಪ್ಪು ಮಾಡಿದರಷ್ಟೇ ಭಯ ಪಡಬೇಕು

ಬುದ್ಧಿಯವರು ಬೋಧಿಸದೆ ಕಲಿಸಿದ ಗುಣಪಾಠವೊಂದು ಬಹು ದೊಡ್ಡದು. ಅಂದು ಅವರು ಗದ್ದುಗೆಯಲ್ಲಿ ಕುಳಿತು ಕಾರ್ಯಮಗ್ನರಾಗಿದ್ದರು. ತಲೆ ತಗ್ಗಿಸಿಕೊಂಡೇ ಕುಳಿತಿರುತ್ತಿದ್ದುದು. ನಾನು ಅಲ್ಲಿಂದ ಹಾದು ಹೋಗಬೇಕಿತ್ತು. ಆದರೆ ಭಯ. ಅದರ ಮಗ್ಗುಲಲ್ಲೆ ತಲೆ ತಗ್ಗಿಸಿ ಕುಳಿತಿದ್ದಾರೆ. ನೋಡುವುದಿಲ್ಲ ಎಂಬ ಧೈರ್ಯ. ಆದರೆ ಕಾಲೇಳುತ್ತಿರಲಿಲ್ಲ. ಅಮೆಯಂತೆ ತಲೆ ಹೊರಕ್ಕೆ ಚಾಚುವುದು, ಒಳಕ್ಕೆ ಎಳೆದುಕೊಳ್ಳುವುದು ಮಾಡುತ್ತಲಿದ್ದೆ.

ಕಡೆಗೆ ಸಾಹಸ ಮಾಡಿ, ತಲೆ ತಗ್ಗಿಸಿ ಕಳ್ಳ ಹೆಜ್ಜೆಯಲ್ಲಿ ಹೊರಟೆ. ಎರಡು ಹೆಜ್ಜೆ ಹಾಕಿದ್ದೆನೋ ಇಲ್ಲವೋ 'ಏ ಬಾಯಿಲ್ಲಿ' ಎಂಬ ಗಂಭೀರ ಕಂಠ ಕರೆಯಿತು. ಅದು ಬುದ್ಧಿಯವರದೆಂದು ಹೇಳಬೇಕಿಲ್ಲ. ನಡುಗುತ್ತ ಹೋಗಿ ನಿಂತೆ. 'ಏನದು ಆಟ. ಏನು ತಪ್ಪು ಮಾಡಿದ್ದಿ?' ಎಂದರು. ಇಲ್ಲ ಅಂದೆ. 'ಮತ್ತೇಕೆ ಭಯ?' ಅಂದರು. ನನಗೆ ಮಾತಿರಲಿಲ್ಲ. 'ನಡಿ' ಎಂದರು. ಅಂದು ಕಲಿತ ಪಾಠವೆಂದರೆ, ತಪ್ಪು ಮಾಡಿದರೆ ಮಾತ್ರ ಭಯಪಡಬೇಕು ಎಂಬುದು. ಅವರು ಧೈರ್ಯವನ್ನು ಕಲಿಸಿದ್ದು ಹೀಗೆ.

ಕೈಯ ಬೆತ್ತವೂ ಗುರುವೇ

ಕೈಯ ಬೆತ್ತವೂ ಗುರುವೇ

ಬುದ್ದಿಯವರ ಕೈಯ ಬೆತ್ತವೂ ಒಬ್ಬ ಗುರುವೆ. ಒಂದೇ ಒಂದೇಟು ಸಾಕಿತ್ತು. ಮತ್ತೆಂದೂ ಅಂತಹ ತಪ್ಪು ಮಾಡದಿರಲು. ಅವರಿಂದ ಏಟು ತಿನ್ನುವುದೂ ಒಂದು ಭಾಗ್ಯವೇ. ಈ ಭಾಗ್ಯ ನನಗೆ ನಾಕಾರು ಬಾರಿ ಸಿಕ್ಕಿದೆ. ಕಟ್ಟಳೆ ಮೀರಿ ಕ್ಯಾತ್ಸಂದ್ರದ ಸಂತೆಗೆ ಹೋಗಿದ್ದಾಗ, ಪ್ರಾರ್ಥನೆಗೆ ಚಕ್ಕರ್ ಹಾಕಿದಾಗ, ಓದದೆ ಹರಟೆಯಲ್ಲಿದ್ದಾಗ, ನನ್ನ ಪಕ್ಕದವನಾಗಿದ್ದ ಅರಸೀಕೆರೆಯ ನಟರಾಜನೆಂಬುವವನ ಟ್ರಂಕಿನಿಂದ ಚಕ್ಕುಲಿ ನಿಪ್ಪಟ್ಟುಗಳನ್ನು ಕದ್ದು ತಿಂದು ಸಿಕ್ಕಿಹಾಕಿಕೊಂಡಾಗ, ಭೀಮರಾಜು ಎಂಬುವವನಿಗೆ ಗಾಯವಾಗುವಂತೆ ಹೊಡೆದಾಗ ಅವರ ಚಡಿಯೇಟು ಬುದ್ಧಿ ಕಲಿಸಿದೆ. ಏಟೆಂದರೆ ಗಾಳಿಯಲ್ಲೆದ್ದ ಅವರ ಕೈ ಬೆತ್ತ 'ಸುಂಯ್' ಎಂದು ಬಂದು ಅಂಗೈಗೆರಗಿದರೆ ನೋವಿನ ಛಳುಕು ನೆತ್ತಿಗೇರಿ ತಲೆ ದಿಂಯೆನ್ನುತ್ತಿತ್ತು, ಕಿವಿಯಲ್ಲಿ ಬಿಸಿ ಹೊರಡುತ್ತಿತ್ತು.

ಬುದ್ಧಿಯವರಿಂದ ಕಲಿತ ಇನ್ನೊಂದು ಪಾಠವೆಂದರೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡದಿರುವುದು ಮತ್ತು ಅದನ್ನು ಮುಂದೂಡದೆ ಇರುವುದು. ಹಾಗೆಯೇ ಪರಿಹಾರವನ್ನು ಕಂಡುಕೊಳ್ಳುವುದು. ಇದು ನನ್ನ ಜೀವನ ಹಾಗೂ ವೃತ್ತಿಯಲ್ಲಿ ನನ್ನನ್ನು ಮನ್ನಡೆಸಿದೆ.

ಅವರು ಅನ್ನದೇವರೂ ಹೌದು

ಅವರು ಅನ್ನದೇವರೂ ಹೌದು

ಶ್ರೀಗಳವರು ಬಹು ನೇತ್ರದವರು. ನೂರಾರು ಜನರ ನಡುವೆ ಇದ್ದರೂ ಕೆಲಸ- ಕಾರ್ಯಗಳಲ್ಲಿ ಮಗ್ನರಾಗಿದ್ದರೂ ತಮ್ಮ ಪರಿಸರದಲ್ಲಿ ನಡೆಯುವ ಸಣ್ಣ ಚಟುವಟಿಕೆಯನ್ನು ಗಮನಿಸಬಲ್ಲವರಾಗಿದ್ದರು. ವ್ಯಕ್ತಿ ಚಿಕ್ಕವನಿರಲಿ, ದೊಡ್ಡವನಿರಲಿ 'ಶರಣು' ಮಾಡಿದ ಮೇಲೆ 'ಪ್ರಸಾದ ಸ್ವೀಕರಿಸಿ ಹೋಗಿ' ಎಂದು ಅನ್ನದಾಸೋಹಕ್ಕೆ ಆಹ್ವಾನಿಸದೆ ಕಳುಹಿಸುವವರಲ್ಲ. ಬುದ್ಧಿಯವರು 'ನಡೆದಾಡುವ ದೇವರು' ಮಾತ್ರವಲ್ಲ, ಅನ್ನದೇವರೂ ಹೌದು. ಇದು ಜಗಬಲ್ಲ ಸತ್ಯ.

ಸೂರ್ಯನ ಉದಯಾಸ್ತಗಳು, ಅವನ ಸುತ್ತ ಭೂಮಿ ಪರಿಭ್ರಮಿಸುವುದು, ಋತುಗಳಾಗುವುದು, ಸಸ್ಯವರ್ಗ ಆಕ್ಸಿಜನ್ ಅನ್ನು ಉತ್ಪಾದಿಸಿ ಕೊಡುವುದು ಸೇರಿದಂತೆ ನಿಸರ್ಗದ ಚಟುವಟಿಕೆಗಳು ಅವವುಗಳದೇ ಆಗಿರುತ್ತದೆ. ಇವುಗಳ ನಿಯಂತ್ರಕ ಮಾನವನಂತೂ ಅಲ್ಲವೇ ಅಲ್ಲ. ಇವನು ಕೇವಲ ಅವುಗಳ ಹಂಗಿನವನು. ನಮ್ಮ ಸರಕಾರಿ ಯೋಜನೆಗಳ ಪರಿಭಾಷೆಯಲ್ಲಿ ಹೇಳುವುದಾದರೆ ಫಲಾನುಭವಿ. ಫಲವನ್ನು ಅನುಭವಿಸುವಲ್ಲಿ ಇವನಿಗೆ ಪ್ರಾಮಾಣಿಕತೆ ಹಾಗೂ ತನ್ನ ಮಿತಿಗಳ ಅರಿವಿರಬೇಕು. ಇಲ್ಲವೆಂದರೆ ಅದರ ದುಷ್ಫಲ ಇವನದೇ ಆಗಿರುತ್ತದೆ. ಇಂಥದರ ಜ್ಞಾನ ಎಲ್ಲರಿಗೂ ಇರಬಹುದಾದರೂ ಆ ಜ್ಞಾನವನ್ನು ಅರಿವಾಗಿ ರೂಪಿಸಿಕೊಳ್ಳಲು ಅನೇಕ ಸಲ ಮಾರ್ಗದರ್ಶನ ಬೇಕಾಗುತ್ತದೆ. ಇಂಥ ಮಾರ್ಗದರ್ಶಕರಾಗಿ ಶ್ರೀಗಳಂತಹವರು ಹುಟ್ಟಿಬರುತ್ತಾರೆ.

ಕನಕದಾಸರು 'ಮಾನವ ಜನ್ಮ ದೊಡ್ಡದು ...' ಎಂದು ಹೇಳಿದ್ದು ನಿಜ. ಆದರೆ ಅದು ಹೇಗೆ ದೊಡ್ಡದೆಂದು ತಿಳಿಯುವುದನ್ನು ಮಹಾನುಭಾವರು ಬದುಕಿ ತೋರಿಸಿಕೊಡುತ್ತಾರೆ. ಆ ಬದುಕನ್ನು ನೋಡುವ ಕಣ್ಣು, ಅರಿಯುವ ಮನಸ್ಸು ಇರಬೇಕಷ್ಟೆ.

English summary
Siddaganga mutt Shivakumara swamiji is like father, mother and teacher for lakhs of people in Karnataka. One India Kannada columnist Sa Raghunatha remembers his childhood days at Siddaganga mutt and love shown by Shivakumara swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X