• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ ರಘುನಾಥ ಅಂಕಣ; ಊರ ಮೇಲೆ ಮಾರಿಕಣ್ಣು...

By ಸ ರಘುನಾಥ, ಕೋಲಾರ
|

ಊರಿನಲ್ಲಿ ಮೂರು ದಿನಗಳ ಅಖಂಡ ಭಜನೆಯೆಂದು ತಿಳಿದದ್ದೇ, ತಂಬೂರಿಗಳು ಶ್ರುತಿಗೆ ಬಂದವು. ಹುಣಿಸೆಹಣ್ಣು ತೆಂಗಿನ ನಾರಿನಿಂದ ತಿಕ್ಕಿಸಿಕೊಂಡ ತಾಳಗಳು ಫಳಗುಟ್ಟಿದವು. ಕಳಚಿ ಹೋಗಿದ್ದ ಗೆಜ್ಜೆಗಳನ್ನು ಕಟ್ಟಿಸಿಕೊಂಡು ಚಿಟಿಕೆಗಳು ನಾದಿಸಿದವು. ಗೋಪಾಲಸ್ವಾಮಿ ಗುಡಿಯ ಅಂಗಳದಲ್ಲಿ ತೆಂಗಿನ ಗರಿ, ಹೊಂಗೆ ರೆಂಬೆ ಹೊದೆಸಿದ ಚಪ್ಪರವೆದ್ದಿತು. ಅದರ ನಾಲ್ಕು ಕಂಬಗಳಿಗೆ ತೆಂಗಿನ ಗರಿ ಸುತ್ತಿ ಬಾಳೆಕಂದುಗಳನ್ನು ಕಟ್ಟಲಾಯಿತು. ಫಂಡರಿ ಭಜನೆ ತಂಡದವರು ಫಂಡರಿನಾಥನ ಝಂಡಾಗಳನ್ನು ಕಟ್ಟಿದರು. ಶನಿವಾರ ಸೂರ್ಯ ದರ್ಶನದೊಂದಿಗೆ ಭಜನೆ ಶುರುವಾಯಿತು.

ಮಧ್ಯಾಹ್ನದ ಹೊತ್ತಿಗೆ ಕೈವಾರ, ಗಟ್ಟಳ್ಳಿ, ಅವಗಾನಪಲ್ಲಿ, ತಾಟಿಮಾನಿಗಡ್ಡ, ಪಾತೂರು, ಆಂಧ್ರದ ಮಟುಕುಪಲ್ಲಿ, ತಮಿಳುನಾಡಿನ ಬೇರಿಕಿಯಿಂದ ಭಜನೆ, ತತ್ವಪದಗಳ ತಂಡಗಳು ಬಂದು ಸೇರಿದವು. ಸಂಜೆ ವೇಳೆಗೆ ಚಲ್ದಿಗಾನಪಲ್ಲಿಯಿಂದ ಚಕ್ಕಭಜನೆಯದೊಂದು ತಂಡ ಬಂದಿತು. ನಿರೀಕ್ಷಿಸಿರದ ಇಷ್ಟೊಂದು ಜನ ಹೊರಗಿನಿಂದ ಬಂದುದು ಊರವರಿಗೆ ಪುಳಕ ತಂದಿತು. ಇವರಿಗೆಲ್ಲ ಸುದ್ದಿ ಮುಟ್ಟಿಸಿದವರಾರೆಂದು ಊರಿನವರು ಚಕಿತರಾದರು. ಊರಿನ ಮರ್ಯಾದೆಗೆ ತಕ್ಕಂತೆ ಉಪಚಾರಗಳೂ ಪ್ರಾರಂಭವಾದವು. ಚಲ್ಲಾಪುರಮ್ಮನ ಗುಡಿ, ಸಿದ್ಧಪ್ಪನಗುಡಿ, ಊರುಬಾಗಿಲಲ್ಲಿ, ಅರಳಿಕಟ್ಟೆಯಲ್ಲಿ ಭಜನೆಗೆ ಅಣಿ ಮಾಡಲಾಯಿತು.

ಸ ರಘುನಾಥ ಅಂಕಣ; ಸೋಮೇಶನ ಸಾವಿನ ನಂತರ ಮತ್ತೆ ನಾಟಕದ ಮಾತು

ಸೋಮವಾರ ಸಂಜೆಗೆ ಭಜನೆ ಪರಿಸಮಾಪ್ತಿಯಾಗಿ, ಹೊರಗಿನಿಂದ ಬಂದ ತಂಡಗಳ ಪ್ರತಿಯೊಬ್ಬರಿಗೂ ಎಲೆಯಡಿಕೆ ಸಹಿತ ತೆಂಗಿನಕಾಯಿ ನೀಡಿ ಗೌರವಿಸಲಾಯಿತು. ಬೀರಣ್ಣನ ಊರೂಟ ಭರ್ಜರಿಯಾಗಿತ್ತು. ಬಂದವರೆಲ್ಲ ರಾಜೋಪಚಾರವೆಂದರೆ ಇದು ಎಂದು ಹೊಗಳಿದರು.

ಹದಿನೈದು ದಿನ ಕಳೆದು, ಊರು ಇನ್ನೂ ಭಜನೆಯ ಗುಂಗಿನಲ್ಲಿರುವಾಗ ದೊಡ್ಡಹನುಮ ತೆಂಗಿನಮರದಿಂದ ಬಿದ್ದು ಆಸ್ಪತ್ರೆಯಲ್ಲಿ ಹೆಣವಾದ. ಅವನ ಮಕ್ಕಳು ತಮ್ಮ ಹೊಲದ ಅಂಚಿನಲ್ಲಿ ಮಣ್ಣು ಮಾಡಿದರು. ಮೂರನೆಯ ದಿನ ಹಾಲಿನ ಶಾಸ್ತ್ರ ಮುಗಿಸಿ ಮನೆಗೆ ಮರುಳುವ ಹೊತ್ತಿನಲ್ಲಿ ನೂಟವೆ ನಂಜಪ್ಪನ ಬಾವಿಯಲ್ಲಿ ಚೌಡಪ್ಪನ ಮಗಳು ಲಗುಮಿಯ ಹೆಣ ತೇಲುತ್ತಿರುವ ಸುದ್ದಿ ಮುಟ್ಟಿತು. ಊರು ಈ ಸೂತಕಗಳಿಂದ ಹೊಬರದಿರುವಾಗಲೆ ಬಾಳಮ್ಮನೋರ ಶಾಮ ತನ್ನ ಬೈಕಿನೊಂದಿಗೆ ಚೆನ್ನಪ್ಪನಕೆರೆಗೆ ಬಿದ್ದು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದ.

ಸ ರಘುನಾಥ ಅಂಕಣ; ವಸ್ತಾ ವಟ್ಟಿದೆ ಪೋತಾ ವಟ್ಟಿದೆ ಬಾಧಯೆಂದುಕಂಟಾ?

ಗಿತ್ತವೆಂಕಟಶಾಮಿಗೆ ರಾತ್ರಿ ಮೂರು ವಾಂತಿ, ನಾಲ್ಕು ಬೇಧಿ ಅಷ್ಟೇ ಆಗಿದ್ದು. ಬೆಳಿಗ್ಗೆ ಮೇಲೇಳಲೇ ಇಲ್ಲ. ಈ ಸಾವಿನೊಂದಿಗೆ ಎಲ್ಲ ಸಾವುಗಳೂ ಥಳುಕು ಹಾಕಿಕೊಂಡು ಊರಿಗೇನೋನೋ ಕೇಡಾಗಿದೆ. ಮಾರಮ್ಮ ಮುನಿಸಿಕೊಂಡಿದ್ದಾಳೆ. ಇಲ್ಲಾಂದ್ರೆ ಈ ಸಾಲು ಸಾವುಗಳೇನು ಎಂಬ ಮಾತು ಹುಟ್ಟಿ, ಜನ ನಡುಗಿ ಹೋದರು. ಇದಿಷ್ಟೇ ಸಾಲದೆಂಬಂತೆ ಶೇಷಪ್ಪ, ಚಲ್ಲಾಪುರನ ಮಕದಲ್ಲಿ ಬಿರುಕುಳುಗಳು ಕಾಣಿಸಿಕೊಂಡಿವೆ ಎಂದು ಕೂಗುತ್ತ ಬೀದಿಬೀದಿ ಓಡಾಡಿದ. ಇದರಿಂದಾಗಿ ಯಾರ ಮನೆಯಲ್ಲಿ ಯಾವಾಗ ಏನಾಗುವುದೋ ಎಂಬ ಭಯದಿಂದ ಊರೇ ತತ್ತರಿಸಿತು. ಇದಕ್ಕೆ ಭೂತ ತೋರಿಸಿದಂತೆ ಶೇಷಪ್ಪ, ಊರ ಗಜಾಗುಂಡ್ಲ ಮುಚ್ಚಬ್ಯಾಡ್ರೋಂತ ಬಡಕೊಂಡೆ. ಕೇಳಿದೋರಲ್ಲ. ಅಮ್ಮ ಸ್ನಾನ ಮಾಡ್ತಿದ್ದ ಗಜಾಗುಂಡ್ಲ ಅದು. ಸ್ನಾನ ಇಲ್ದೆ ಬಿಸಿ ಹತ್ತಿ ಅಮ್ಮನಿಗೆ ಹೀಗಾಗಿದೆ ಎಂದು ಗೋಳಾಡಿ ಊರಿಗೆ ಮತ್ತಷ್ಟು ದಿಗಿಲು ಸುರಿದ.

'ಮನೆಗೊಂದಾಳಂಗೆ ಬಂದು ಗಜಾಗುಂಡ್ಲನ ಮುಚ್ಚಿರೊ ಮಣ್ಣ ತೆಗೀಬೇಕಂತ ತೀರ್ಮಾನ ಮಾಡವ್ರಪ್ಪೋ' ಎಂದು ಸಾರುತ್ತ ಮುನಿನಾರಾಯಣಿ ಮನೆ ಮನೆಗೂ ಕೇಳಿಸುವಂತೆ ತಮಟೆ ಹೊಯ್ದ. ಮಣ್ಣು ತೆಗೆಯುವುದರಲ್ಲಿ ನರಸಿಂಗರಾಯನೂ ಭಾಗವಹಿಸಿದ. ಅವನು ಗಜಾಗುಂಡ್ಲ ಮುಚ್ಚುವಾಗಲೇ ವಿರೋಧಿಸಿದ್ದ. ಈ ನೆಪದಲ್ಲಾದರೂ ಜಲಮೂಲವೊಂದು ಜೀವಂತಗೊಳ್ಳುವ ಸಂತೋಷ ಅವನಿಗೆ. ಎರಡು ದಿನದ ಶ್ರಮದಲ್ಲಿ ಅದು ಆಳಗೊಂಡು ಮಳೆಗಾಲಕ್ಕೆ ನೀರು ತುಂಬಿಕೊಳ್ಳಲು ಮೈದೆರೆಯಿತು.

ಮುಂದಿನದು ಎಲ್ಲ ಅನಾಹುತಗಳಿಗೆ ಕಾರಣ ತಿಳಿಯುವುದು. ಕಾರಣ ಕೇಳಲು ಶೇಷಪ್ಪ ಮಾಂತ್ರಿಕನನ್ನು ಕಾಣಲು ಕೊಳ್ಳೆಗಾಲಕ್ಕೆ ಪಯಣ ಹೊರಟ. 'ಊರಿನ ವಾಸ್ತು ನೋಡಿಸಿದರೆ ಒಳ್ಳೇದೇನೊ' ಎಂದು ರಂಗ ತಾನೊಂದು ಹುಳುಬಿಟ್ಟು ಆ ಮಟ್ಟಿಗೆ ಮುಖ್ಯಸ್ಥನಾದ. ದುಗ್ಗಪ್ಪ ನರಸಿಂಗರಾಯನನ್ನು ಜೋತಿಷಿ ರಾಯಲಪಾಡು ಸತ್ಯಪ್ಪಸ್ವಾಮಿಯವರನ್ನು ತಾನು ಹೇಳಿದೆನೆಂದು ಹೇಳಿ ಜೊತೆಯಲ್ಲೆ ಕರೆದುಕೊಂಡು ಬರುವಂತೆ ತಾಕೀತು ಮಾಡಿ ಕಳುಹಿದ. ಸಂಜೆ ಹೊತ್ತಿಗೆ ಬಂದ ಸತ್ಯಪ್ಪಸ್ವಾಮಿ, ಅರಳಿಕಟ್ಟೆ ಮೇಲೆ ಕುಳಿತು ಧ್ಯಾನಿಸಿ, ಚಂಡಿಕಾ ಹೋಮಶಾಂತಿಯಾದರೆ ಸಾಕೆಂದು ಅದಕ್ಕೆ ದಿನವನ್ನೂ ಗೊತ್ತು ಮಾಡಿದರು. 'ಶೇಷಪ್ಪನ ಬರಾವು ಆದರೆ, ಅವನು ಏನು ಹೇಳ್ತಾನೊ ಕೇಳಿಕೊಂಡು ಎಲ್ಲ ಶಾಂತೀನೂ ಒಟ್ಟಿಗೆ ಮಾಡಿಬಿಡೋದೆ' ಅಂದ ಮೋಟಪ್ಪ.

English summary
After Somesha's death, bhajana function was held by villagers. But in few days, serial deaths in village created anxiety among people,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X