ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ಶಿವರಾತ್ರಿ ದಿನ ‘ಲೋಕಲ್’ ಶಕುಂತಲೆ ಎಂಬ ನಾಟಕ

By ಸ ರಘುನಾಥ, ಕೋಲಾರ
|
Google Oneindia Kannada News

ಸುನಂದಾ ಕಡೆಯ ಎರಡು ತಾಲೀಮಿಗೆ ಬಂದರೆ ಸಾಕು ಎಂದಾಗಿದ್ದರಿಂದ ಅವಳ ತಾಲೀಮು ಬಿಡುವಾದಾಗಲೆಲ್ಲ ಮುನೆಕ್ಕ, ಅಮ್ಮಯ್ಯ, ಅಪ್ಪಯ್ಯನ ಮುಂದೆ ನಡೆಯುತ್ತಿತ್ತಾಗಿ, ಕೆಂಪರಾಜ ಉದ್ಧಟತನ ತೋರಿದಾಗ ಅವಳಿರಲಿಲ್ಲ. ಅವಳಿಗೆ ಈ ಪ್ರಸಂಗ ತಿಳಿಯುವುದು ಬೇಡವೆಂದು, ಒಂದು ವೇಳೆ ಸೂತ್ರಧಾರನ ಪಾತ್ರಧಾರಿ ಬದಲಾದುದೇಕೆಂದು ಕೇಳಿದರೆ ತನ್ನ ಕೈಲಿ ಆಗುವುದಿಲ್ಲವೆಂದು ಬಿಟ್ಟು ಹೋದನೆಂದು ಹೇಳುವುದೆಂದ ಮಾತಿಗೆ ಒಪ್ಪಿಯೂ ನರಸಿಂಗರಾಯ ಅವಳಿಗೆ ತಿಳಿಸಿದ್ದ.

ಅದಕ್ಕೆ 'ಅಷ್ಟೇನಾ?' ಎಂಬುದಷ್ಟೇ ಅವಳ ಪ್ರತಿಕ್ರಿಯೆಯಾಗಿತ್ತು. ಮನಸ್ಸಿನಲ್ಲೇನಿತ್ತೆಂದು ಅವನಿಗೆ ತಿಳಿಯಲಿಲ್ಲ.

ಸ ರಘುನಾಥ ಅಂಕಣ; ಸುನಂದಾಳ ಸೊಂಟ ಬಳಸಿ ಕುಣಿವ ಆಸೆಗೆ ಬಿದ್ದು ಬಣ್ಣ ಕಳೆದುಕೊಂಡ ಕೆಂಪರಾಜಸ ರಘುನಾಥ ಅಂಕಣ; ಸುನಂದಾಳ ಸೊಂಟ ಬಳಸಿ ಕುಣಿವ ಆಸೆಗೆ ಬಿದ್ದು ಬಣ್ಣ ಕಳೆದುಕೊಂಡ ಕೆಂಪರಾಜ

ಇನ್ನು ಹದಿನೈದು ದಿನಗಳ, ಅಂದರೆ ಇನ್ನೆರಡು ತಾಲೀಮಿನ ನಂತರ ನಾಟಕಕ್ಕೆ ಮುಹೂರ್ತ ಗೊತ್ತು ಮಾಡಬಹುದೆಂದು ನರಸಿಂಗರಾಯ ಹೇಳಿದ. ಶಿವರಾತ್ರಿಗೆ ಹೇಗೂ ಜಾಗರಣೆ ಇರೋದೆ. ಅವತ್ತೇ ಆಗಲಿ ಎಂದರು ಹಿರಿಯರು. ಅಂದರೆ ಇನ್ನು ಒಂದೂವರೆ ತಿಂಗಳು. ಆ ವೇಳೆಗೆ ಸೀನರಿ, ಲೈಟು, ಮೈಕು ಗೊತ್ತು ಮಾಡಿಕೊಳ್ಳಬೇಕಿತ್ತು.

Seniors Of Village Decided To Conduct Shakuntala Drama On Shivaratri

ಸೀನರಿಗಳ ಜವಾಬ್ದಾರಿಯನ್ನು ನರಸಿಂಗರಾಯ ಹೊತ್ತ. ಲೈಟು, ಮೈಕಿನ ವ್ಯವಸ್ಥೆ ಮಾಡುವುದು ಮೋಟಪ್ಪನ ಪಾಲಿಗೆ ಬಿದ್ದಿತು. ದುಡ್ಡಿನ ವ್ಯವಹಾರ ದುಗ್ಗಪ್ಪ, ಬೀರಣ್ಣನದು. ನಾಟಕದ ಖಾಯಷುದಾರರು ಕೆಲವರು ತಾವಾಗಿಯೇ ಮುಂದೆ ಬಂದು ನೆರವಿಗೆ ನಿಂತರು.

ನರಸಿಂಗರಾಯ ಮಾಡಿಕೊಂಡ ಸ್ಕೆಚ್ಚುಗಳನ್ನು ಹಿಡಿದು ಸೀನರಿಗಾಗಿ ಮಂಡ್ಯ, ಮೈಸೂರಿನ ಕಡೆಗೆ ಹೋಗಿ ಬಂದ. ಮಾಗಡಿ, ಕನಕಪುರ, ಆನೇಕಲ್ಲು, ಹೊಸೂರುಗಳಿಗೂ ಹೋಗಿ ಬಂದ. ಅಲ್ಲಿ ಅವನ ಕಲ್ಪನೆಗೆ ತಕ್ಕ ಸೀನರಿಗಳು ಕಂಡುಬರಲಿಲ್ಲ. ಹದಿನೈದು ದಿನಗಳು ಕಳೆದವು. ಕಡೆಗೆ ಚಿತ್ರ ಬರೆಯುವುದರಲ್ಲಿ ಆಸಕ್ತಿಯಿದ್ದ ತನ್ನೂರಿನ ಆರು ಮಂದಿ ವಿದ್ಯಾರ್ಥಿಗಳನ್ನು ಹಿಡಿದುಕೊಂಡು, ಟೈಲರ್ ಕಿಟ್ಟನ್ನ (ಣ್ಣ)ನ ಸಹಾಯದಿಂದ ಚಿತ್ರಪರದೆಗಳನ್ನು ಸಿದ್ಧಪಡಿಸಲು ಟೊಂಕ ಕಟ್ಟಿದ. ಅಪ್ಪಯ್ಯ ಸುನಂದರೂ ಕೂಡಿಕೊಂಡರು.

ಸ ರಘುನಾಥ ಅಂಕಣ; ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ...ಸ ರಘುನಾಥ ಅಂಕಣ; ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ...

ಮಕ್ಕಳು ಬಣ್ಣ ಚೆಲ್ಲಲಿ, ಪರದೆ ಬಟ್ಟೆಯನ್ನು ಕೆಡಿಸಲಿ ಸಿಟ್ಟಿಲ್ಲ, ಸಿಡುಕಿಲ್ಲ. ಸಿಡುಕಿದರೆ ಅವು ಕೈ ಕೊಡುವುದು ಖಚಿತ. ಅವರನ್ನು ಖುಷಿಯಾಗಿಡಲು ಅವರು ಬಯಸಿದ ತಿಂಡಿಗಳು ಮಾಯಾಬಜಾರು ಸಿನೆಮಾದಲ್ಲಿ ಘಟೋತ್ಕಚನ ಮುಂದೆ ಬರುತ್ತಿದಂತೆ ಬರುತ್ತಿದ್ದವು. ನರಸಿಂಗರಾಯನ ಉಸ್ತುವಾರಿಯಲ್ಲಿ ನಡೆಯುತ್ತಿದ್ದ ಕೆಲಸಗಳನ್ನು ನೋಡಿ ಪಿಲ್ಲಣ್ಣ, ಇದು ಲೋಕಲ್ ಶಕುಂತಲೆ ನಾಟಕ ಎಂದುದು ಹಾಗೆಯೇ ಊರಿನಲ್ಲಿ, ಪಕ್ಕದ ಊರುಗಳಲ್ಲಿ ಪ್ರಚಾರಗೊಂಡಿತು. ಅಪ್ಪಯ್ಯನ 'ಕಣ್ವಪುತ್ರಿ' ಹೀಗೆ ಲೋಕಲ್ ಶಕುಂತಲೆಯಾದಳು. ಇದಕ್ಕೆ ಅಪ್ಪಯ್ಯ, ಲೋಕಲ್ ಶಕುಂತಲೆ ಅಂದರೆ ಜಾನಪದ ಶಕುಂತಲೆ ಎಂದು ಹೇಳಿ ಹರ್ಷಗೊಂಡ.

ನರಸಿಂಗರಾಯ ಇಲ್ಲದಿದ್ದಾಗ, ಮಕ್ಕಳು ಚಿತ್ರ ಬಿಡಿಸುವಾಗ, ತಮ್ಮ ಕಲ್ಪನೆಯನ್ನೂ ಸೇರಿಸಿಬಿಡುತ್ತಿದ್ದರು. ಇದಿಲ್ಲ ಕಣ್ರೋ ಎಂದು ಸುನಂದಾ ಹೇಳಿದರೆ, ನರಸಿಂಗಣ್ಣ ಹೇಳಿದ್ದಾನೆ ಎಂದು ಬಾಯಿ ಮುಚ್ಚಿಸುತ್ತಿದ್ದರು. ನರಸಿಂಗರಾಯ ಬಂದು ನೋಡಿ, ಚೆನ್ನಾಗಿದೆ ಅಂದುಬಿಡುತ್ತಿದ್ದ. ಆದರೆ ಅದರಲ್ಲಿಯೂ ಒಂದು ಹೊಸತನದ ಹೊಳಪು ಅವನಿಗೆ ಕಾಣುತ್ತಿತ್ತು.

ನಾಟಕದ ಕೊನೆಯ ಮಂಗಳ ದೃಶ್ಯದಲ್ಲಿ ಟೈಲರ್ ಕಿಟ್ಟನ್ನ ಮತ್ತು ಮಕ್ಕಳನ್ನು ಸನ್ಮಾನಿಸುವ ತೀರ್ಮಾನವೂ ಆಯಿತು. ಆ ಖರ್ಚು ತನ್ನದೆಂದು ಮುನೆಕ್ಕ ಹೇಳಿದಳು. ಎಲ್ಲ ಚಿತ್ರಗಳು ಚೆನ್ನಾಗಿಯೇ ಇದ್ದವು. ಆದರೆ ಜಿಂಕೆಯೊಂದರ ಕೊಂಬು ಮಾತ್ರ ಎತ್ತಿನ ಕೊಂಬಿನಂತಿತ್ತು. ಅದನ್ನು ನೋಡಿದಾಗ ಸುನಂದಾ ಮಕ್ಕಳಿಗೆ ಕೇಳಿಸದಂತೆ ನರಸಿಂಗರಾಯನ ಕಿವಿಯಲ್ಲಿ 'ಜಿಂಕೆತ್ತು' ಎಂದು ಹೇಳಿದಾಗ ತಾಕಿದ ಅವಳ ಉಸಿರು ಅವನಲ್ಲಿ ಪುಳಕ ಹುಟ್ಟಿಸಿತ್ತು.

English summary
Seniors in village decided to conduct Shakuntala drama on shivaratri festival. Preparations began ahead of festival and drama
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X