ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ಯಶಸ್ಸಿನ ವಾಸನೆ...

By ಸ ರಘುನಾಥ, ಕೋಲಾರ
|
Google Oneindia Kannada News

ಬೋಡೆಪ್ಪ ಊರಿನಲ್ಲಿ ತಿಳಿಸಬೇಕಿದ್ದವರಿಗೆ ತಿಳಿಸಿದ. ಹಾಗೆಯೇ ಅಂದಿನ ಖರ್ಚಿಗಾಗಿ ಅವರಿಂದ ತಲಾ ಐವತ್ತು ರೂಪಾಯಿಗಳನ್ನು ವಸೂಲಿ ಮಾಡಿ ತಂದು ಎಲ್ಲರಿಂದ ಹೊಗಳಿಸಿಕೊಂಡ. ಆ ನಾನೂರಿಗೆ ಗೆಳೆಯರು ನೂರು ನೂರರಂತೆ ಹಾಕಿದರು. ಮುನೆಕ್ಕ ತನ್ನ ಹಾಗು ಸುನಂದಾಳ ಹೆಸರಿನಲ್ಲಿ ಇನ್ನೂರು ರೂಪಾಯಿ ಕೊಟ್ಟಳು. ಒಟ್ಟು ಒಂದುಸಾವಿರ ನಿರಾಯಾಸವಾಗಿ ಕೂಡಿತು.

ಮೊದಲ ಬಾರಿಗೆ ತಮ್ಮನ್ನು ಊರಿನವರು ಗುರುತಿಸಿದ್ದರಿಂದ ಸಂಭ್ರಮಿಸಿದ ಉಪಾಧ್ಯಾಯರಿಬ್ಬರು ಬಹುಮಾನ, ಸರ್ಟಿಫಿಕೇಟನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿ ಕೊಡುವುದಾಗಿ ಹೇಳಿದರು.

ಸ ರಘುನಾಥ ಅಂಕಣ; ವಿದ್ಯಾರ್ಥಿಗಳನ್ನು ರಂಗಕ್ಕಿಳಿಸಿದ ನರಸಿಂಗರಾಯಸ ರಘುನಾಥ ಅಂಕಣ; ವಿದ್ಯಾರ್ಥಿಗಳನ್ನು ರಂಗಕ್ಕಿಳಿಸಿದ ನರಸಿಂಗರಾಯ

ತಮ್ಮ ಊರಿನಲ್ಲಿ ಎಂದೂ ಕೇಳರಿಯದ ಕಾರ್ಯಕ್ರಮ ಕುತೂಹಲವನ್ನು ಸೃಜಿಸಿತ್ತು. ಭಾನುವಾರಕ್ಕಾಗಿ ಊರು ತುದಿಗಾಲಿನಲ್ಲಿ ನಿಂತಿತು.

School Children Of Village Written Essay About Lakes And Water Problems

ಮಕ್ಕಳು ಸಂಗ್ರಹಿಸಿದ್ದ ವಿಷಯವನ್ನೆಲ್ಲ ಕೂಡಿಸಿ ಶಿಕ್ಷಕರ ನೆರವಿನಲ್ಲಿ ಕ್ರಮಬದ್ಧವಾಗಿ ಬರೆಯುವುದನ್ನು ತಿಳಿದುಕೊಂಡಂತೆ ಬರೆದು ತಂದಿದ್ದರು. ಚಲ್ಲಾಪುರಮ್ಮನ ಗುಡಿಯ ಜಗುಲಿಯಲ್ಲಿ ಕುಳಿತು ಓದಿದರು. ನಾಲ್ಕನೆಯ ವಿಷಯವಾದ, ವರ್ತಮಾನದಲ್ಲಿ ಕೆರೆಗಳ ನಿರ್ವಹಣೆಯ ಸಮಸ್ಯೆ ಹಾಗು ಪರಿಹಾರದ ಕುರಿತು ಬರೆದ ಮೂರೂ ಪ್ರಬಂಧಗಳನ್ನು ಎರಡೆರಡು ಬಾರಿ ಓದಿಸಲಾಯಿತು. ಇದನ್ನು ನರಸಿಂಗರಾಯ ಉಕ್ತಲೇಖನದ ಮೂಲಕ ಬರೆಸಿದ್ದ. ಮಕ್ಕಳು ಅಚ್ಚುಕಟ್ಟಾಗಿ ಓದಿದರು.

ತೀರ್ಪುಗಾರರ ಪರವಾಗಿ ಶಿಕ್ಷಕರಿಬ್ಬರು ಮಾತನಾಡಿ, ಹನ್ನೆರಡು ಮಕ್ಕಳ ಹನ್ನೆರಡೂ ಪ್ರಬಂಧಗಳು ಉತ್ತಮವಾದವು. ಈ ಎಲ್ಲರಿಗೂ ಬಹುಮಾನವಾಗಿ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು ಹಾಗು ಪ್ರಶಸ್ತಿಪತ್ರ ಕೊಡಲಾಗುವುದೆಂದು ಘೋಷಿಸಿದರು. ಅವರ ಕೈಯಿಂದಲೇ ಅವನ್ನು ಕೊಡಿಸಿದ್ದರಿಂದ, ಶಾಲು, ಹಣ್ಣು, ಹೂಮಾಲೆಗಳಿಂದ ಸನ್ಮಾನಿಸಿದ್ದರಿಂದ, ಆ ಸನ್ಮಾನ ಅವರ ಜೀವಮಾನದಲ್ಲಿ ಮೊದಲನೆಯದಾದ್ದರಿಂದ ಅಮಿತ ಸಂತೋಷ ವ್ಯಕ್ತಪಡಿಸಿದರು.

ಸ ರಘುನಾಥ ಅಂಕಣ; ಮನಸ್ಸುಗಳು ಒಂದಾದರೂ ಕಾರ್ಯಕ್ಕಿಳಿಯದ ಪ್ರಯತ್ನಸ ರಘುನಾಥ ಅಂಕಣ; ಮನಸ್ಸುಗಳು ಒಂದಾದರೂ ಕಾರ್ಯಕ್ಕಿಳಿಯದ ಪ್ರಯತ್ನ

ವಿಷಯ ತಿಳಿದು ಅದೆಂಥದೊ ನೋಡಿಯೇ ಬಿಡುವ ಎಂದು ಪಕ್ಕದೂರಿನಿಂದ ಕಾರ್ಯಕ್ರಮಕ್ಕೆ ಬಂದಿದ್ದ ಪಂಚಾಯ್ತಿ ಸದಸ್ಯ ಪೈಲ್ವಾನ್ ಸಿದ್ಧಪ್ಪ, ತನ್ನೂರಿಗೆ ಈ ಮಕ್ಕಳನ್ನು ಕಳಿಸಿಕೊಡುವಂತ ವಿನಂತಿಸಿದ. ನಿಮಗೆ ಅನುಕೂಲವಾದ ದಿನವನ್ನು ತಿಳಿಸಿದರೆ ತಾನೇ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿದ. ಭಜನೆ ಮುಗಿದ ಮುಂದಿನ ಭಾನುವಾರ ಆದೀತೋ ಎಂದು ದುಗ್ಗಪ್ಪ ಕೇಳಿದ. ಅದಕ್ಕೆ ಸಿದ್ಧಪ್ಪ ಆಗಲಿ, ನಾನು ಎಲ್ಲ ಸಿದ್ಧಮಾಡಿರುತ್ತೇನೆ ಎಂದ. ಇದರಿಂದ ಇಡೀ ಊರು ಹಿಗ್ಗಿತು. ನಾವಿಬ್ಬರು ಮಕ್ಕಳನ್ನು ಕರೆತರುವುದಾಗಿ, ನೀವು ಬರುವುದು ಬೇಡವೆಂದು ಶಿಕ್ಷಕರು ಹೇಳಿದರು. ಸಿದ್ಧಪ್ಪ ಅವರಿಗೆ ಕೈ ಮುಗಿದ.

ಈಗ ಕೆರೆ ವಿಷಯ ಪ್ರಸ್ತಾಪ ಮಾಡಬೋದ? ಎಂದು ಯಾಲಗಿರೆಪ್ಪ ನರಸಿಂಗರಾಯನನ್ನು ಕೇಳಿದ. ಅದಕ್ಕೆ ಅವನು, ಬೇಡ. ಭಜನೆ ದಿನದವರೆಗೆ ಯೋಚಿಸಲಿ. ನೀವೆಲ್ಲ ಅವಕಾಶವಾದಾಗಲೆಲ್ಲ ಈ ವಿಷಯವನ್ನೇ ಮಾತಾಡುತ್ತಿರಿ. ಟಿವಿಯಲ್ಲಿ ಹೇಳಿದ್ದನ್ನೇ ಹೇಳ್ತಿರುತ್ತಾರಲ್ಲ ಹಾಗೆ ಅಂದ.

ನರಸಿಂಗರಾಯ ಆ ಹನ್ನೆರಡೂ ವಿದ್ಯಾರ್ಥಿಗಳನ್ನು ಪ್ರತಿ ಸಂಜೆ ಒಂದು ಗಂಟೆ ಕಾಲ ತನ್ನ ಹುಣಿಸೆ ತೋಪಿಗೆ ಕರೆದುಕೊಂಡು ಹೋಗುತ್ತಿದ್ದ. ಹೋಗುವಾಗ ಮುನೆಕ್ಕನ ಅಂಗಡಿಯಿಂದ ಕೊಬ್ಬರಿ ಮಿಠಾಯಿ, ನಿಪ್ಪಟ್ಟು, ಚಕ್ಕುಲಿ, ಖಾರದ ಕಳ್ಳೆಬೀಜ, ಹೀಗೆ ತೆಗೆದುಕೊಂಡು ಹೋಗುತ್ತಿದ್ದ. ಏನು ಮಾಡ್ತಿದ್ದಿ ಎಂದು ಸುನಂದಳೋ, ಮುನೆಕ್ಕನೋ, ಅಮ್ಮನೋ, ಗೆಳೆಯರೋ ಕೇಳಿದಾಗ ನೋಡುತ್ತಿರಿ ಅನ್ನುತ್ತಿದ್ದ. ಆದರೆ ಜೊತೆಗೆ ಬೇರೆ ಯಾರನ್ನೂ ಕರೆದುಕೊಂಡು ಹೋಗುತ್ತಿರಲಿಲ್ಲ.

ಒಂದು ದಿನ ಸುನಂದಾ, ಅಮ್ಮ ನಿಮ್ಮ ಮಗ ಭಜನೆ ದಿನ ಏನೋ ಮ್ಯಾಜಿಕ್ಕು ಮಾಡೋ ಹಾಗಿದೆ ಅಂದಳು. ಏನೋ ಅಮ್ಮ ಅವನ ಹುಚ್ಚೇ ಅರ್ಥವಾಗದು. ಯಾವುದನ್ನೇ ಆಗಲಿ ತಲೆಗೆ ಬಂದರೆ ಸಾಕು ವಿಪರೀತವಾಗಿ ಹಚ್ಚಿಕೊಂಡು ಬಿಡುತ್ತಾನೆ. ಅದಕ್ಕೆ ತಕ್ಕ ಹಾಗೆ ಅವನಪ್ಪ, ಅವನ ಗೆಳೆಯರೂ ಇದ್ದಾರೆ. ಒಮ್ಮೊಮ್ಮೆ ಕೊಂಚ ಭಯವೂ ಆಗುತ್ತೆ. ಅವನು ಮಾಡೋದು ಕೆಟ್ಟ ಕೆಲಸವಾಗಿದ್ದರೆ ದಂಡಿಸಬೋದಿತ್ತು. ಮನೆಗೆ ಮಾರಿ, ಊರಿಗೆ ಉಪಕಾರಿ ಅಂತಾಗಿದ್ದರೂ ಬೈಯಬಹುದಿತ್ತು. ಆದರೆ ಮನೆ ಕೆಲಸವನ್ನೂ ಬಿಡದೆ ಮಾಡುತ್ತಾನೆ. ಎಲ್ಲ ಅಪ್ಪನ ಗುಣವೆಂದು ಹೆಮ್ಮೆಯಿಂದ ಹೇಳಿದಳು. ಆದರೂ ಅವಳ ಕಣ್ಣಲ್ಲಿ ಚಿಂತೆಯ ನೆರಳೊಂದು ಸುನಂದಾಳಿಗೆ ಕಂಡಿತು.

English summary
School children of village written essays about water problems and submitted to teachers in challapuramma temple. People gathered to see this special programme
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X