• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕು

By ಸ ರಘುನಾಥ, ಕೋಲಾರ
|

ಯಾಲಗಿರೆಪ್ಪ ಹೋದ ಬಹಳ ಹೊತ್ತಿನವರೆಗೆ ಮುನೆಂಕಟೇಗೌಡ ಅಪ್ಪಯ್ಯನ ಜೊತೆ ಮಾತನಾಡುತ್ತ ಕುಳಿತಿದ್ದ. ಅಮ್ಮಯ್ಯನೂ ಕುಳಿತಿದ್ದಳು. ಯಾಲಗಿರೆಪ್ಪ ಮಾತಿಗೆ ತಪ್ಪೊ ಕುಳವಲ್ಲ ಅಂದಳು ಅಮ್ಮಯ್ಯ. ಇನ್ನು ಅವನೊಂದಿಗೆ ಕಂಟು (ಹಗೆ) ಕಟ್ಟಿಕೊಬೇಡ ಅಂದಳು. ನಾನೆಲ್ಲಿ ಕಟ್ಟಿಕೊಂಡಿದ್ದು ಅಮ್ಮಯ್ಯ? ಕೆಲಸಕ್ಕೆ ಬರದ ಮಾತಿಗೆ ಅವನೇ ಅಲ್ವ ಕಟ್ಟಿಕೊಂಡಿದ್ದು ಅಂದ.

ಮುಗೀತಲ್ಲ ಅದೇ ಸಂತೋಷ ಅಂದ ಅಪ್ಪಯ್ಯ. ಮುಗಿಸಿದೋನು ನರಸಿಂಗ ಅಂದ ಮುನೆಂಕಟೇಗೌಡ. ಯಾರೋ ಒಬ್ಬರು ಅಂದಳು ಅಮ್ಮಯ್ಯ. ಒಂದಿಬ್ಬರು ಕೂಲಿ ಆಳುಗಳನ್ನ ಹಿಡಕೊಂಡು ಇವತ್ತೇ ಕಾಲುವೆ ತೆಗಿಸಿಬಿಡ್ತೀನಿ ಅಂದ. ಮೊದಲು ಅದು ಮಾಡು ಹೋಗು ಅಂದ ಅಪ್ಪಯ್ಯ.

ಸ ರಘುನಾಥ ಅಂಕಣ; ವ್ಯವಹಾರ ಕುದುರಿಸಿ ಸಾಕ್ಷಿಯಾದ ನರಸಿಂಗರಾಯಸ ರಘುನಾಥ ಅಂಕಣ; ವ್ಯವಹಾರ ಕುದುರಿಸಿ ಸಾಕ್ಷಿಯಾದ ನರಸಿಂಗರಾಯ

ಮುನೆಂಕಟೇಗೌಡ ಬಾಗಿಲು ದಾಟಿದ, ನರಸಿಂಗರಾಯ ಕೋಣೆಯಿಂದ ಹೊರಬಂದ. ಏನು ಮಾಡ್ತಿದ್ದೆ ಎಂದು ಕೇಳಿದಳು ಅಮ್ಮ. ಮಾಡೋಕೇನಿದೆ? ನಾಟಕದ ಕಥೆ ಮುಗೀತಲ್ಲ ಅಂದ ನಿರಾಸೆಯಿಂದ. ಎಲ್ಲಿ ಮುಗೀತು? ಒಂದು ವರ್ಷ ಮುಂದಕ್ಕೆ ಹೋಗಿದೆಯಷ್ಟೆ ಅಂದ ಅಪ್ಪ. ಪಿಲ್ಲಣ್ಣನ ತೋಟದ ಕಡೆ ಹೋಗಿ ಬರುವುದಾಗಿ ಹೇಳಿ ಹೊರಟ ನರಸಿಂಗರಾಯ.

ಪಿಲ್ಲಣ್ಣ, ಬೋಡೆಪ್ಪ ಸೀಬೆಮರದಡಿ ಕುಳಿತು ಊರದ್ಯಾವರ ಕುರಿತು ಹರಟುತ್ತಿದ್ದರು. ಅವರೊಂದಿಗೆ ಸೇರಿಕೊಂಡ ನರಸಿಂಗರಾಯ, ನಡೆದ ವ್ಯವಹಾರವನ್ನು ತಿಳಿಸಿದ. ಯಾಲಗಿರಿ ಒಪ್ಪಿದ್ದೆ ಹೆಚ್ಚು ಎಂದು ಗೆಳೆಯರು ಆಶ್ಚರ್ಯ ವ್ಯಕ್ತಪಡಿಸಿದರು. ಒಪ್ಪಿಕೊಂಡನಪ್ಪ ಅಂದ ನರಸಿಂಗರಾಯ.

ನಾಟಕ ನಿಂತಿತು. ನಿನ್ನ ಕೈ ಖಾಲಿ ಏನು ಮಾಡ್ತಿ ಎಂದು ಬೋಡೆಪ್ಪ ಕೇಳಿದ. ಅದೇ ತಿಳತಿಲ್ಲವೆಂದ ನರಸಿಂಗರಾಯ, ಕೊಂಚ ಹೊತ್ತು ಮೌನವಾಗಿದ್ದು, ಪಿಲ್ಲಣ್ಣ ನಿನ್ನ ಬಾವೀಲಿ ಎಷ್ಟು ನೀರಿರಬಹುದು ಅಂದ. ಯಾಕೆ ಕುಡೀತಿಯೇನು ಎಂದು ನಗಾಡಿದ ಬೋಡೆಪ್ಪ. ನೀನು ಅಮಿಕ್ಕೋತೀಯ? ಎರಡು ಮಟ್ಟು ಮೇಲೊಂದಿಷ್ಟು ಇದ್ದೀತು. ಯಾಕೆ ಅಂದ ಪಿಲ್ಲಣ್ಣ. ಮುವ್ವರು ಸೇರಿ ಏನಾದರು ಬೆಳೆಯೋಣ ಅಂತ.

ಯಾಕೆ ಇಂಗ್ಲಿಷ್ ಸಿನಿಮಾ ನೋಡ್ಬೇಕು ಅನ್ನಿಸ್ತಾ? ಕಿಚಾಯಿಸಿದ ಬೋಡೆಪ್ಪ. ಅತ್ತ ಗಮನ ಕೊಡದೆ, ಏನು ಬೆಳೆಯೋದು? ಕೇಳಿದ ಪಿಲ್ಲಣ್ಣ. ಹೂಕೋಸು ಅಂದ ನರಸಿಂಗರಾಯ. ಖರ್ಚು ಶಾನೆ ಬರುತ್ತೆ. ಅಷ್ಟು ಬಂಡ್ವಾಳ ಇದೆಯ? ಪ್ರಶ್ನೆ ಎಸೆದ ಬೋಡೆಪ್ಪ. ಅದಕ್ಕೆ ಏನಾದರು ಮಾಡೋಣ. ಮೊದಲು ಬೆಳೆ ಇಡೋದು ಅಂತ ತೀರ್ಮಾನವಾಗಲಿ ಅಂದ ಪಿಲ್ಲಣ್ಣ. ತೀರ್ಮಾನ ಮಾಡಲು ಗೆಳೆಯರು ನರಸಿಂಗನ ಮನೆಯನ್ನು ಆಯ್ದುಕೊಂಡು ಮೇಲೆದ್ದರು.

ಅಪ್ಪಯ್ಯ ತೊರವೆ ರಾಮಾಯಣ ಹಿಡಿದು ಕುಳಿತಿದ್ದ. ಅಮ್ಮಯ್ಯ, ಮುನೆಕ್ಕ, ಸುನಂದಾ ಊರುದ್ಯಾರು ನಡೆದ ಮಾತಿನಲ್ಲಿದ್ದರು. ಅಮ್ಮಾ ಕಾಫೀ ಕೊಡ್ತೀಯ? ಎಂದು ಕೇಳಿದ ನರಸಿಂಗರಾಯ. ಸುನಂದಾ ಅಡುಗೆ ಮನೆಗೆ ಹೋದಳು. ಬೋಡೆಪ್ಪ ನರಸಿಂಗರಾಯ ಹೇಳಿದ ಮಾತನ್ನು ಹೇಳಿದ. ಅಮ್ಮಯ್ಯ ಈರುಳ್ಳಿ ತೋಟ ನೋಡೋಕೆ ಚೆನ್ನಾಗಿರುತ್ತೆ ಅಂದಳು. ಅಮ್ಮೋ ಅದು ಮಾತ್ರ ಬೇಡವೆಂದರೆ ಬೇಡ ಅಂದ ಪಿಲ್ಲಣ್ಣ. ಹೂಕೋಸೊ? ಅಂದ ನರಸಿಂಗರಾಯ. ಬಂಡವಾಳ? ಅಂದ ಬೋಡೆಪ್ಪ. ಅದಾಗದೆಂದಾಯಿತು.

ಮುನೆಕ್ಕ ಕ್ಯಾರೆಟ್ಟು ಹಾಕಿದರೆ ಹೇಗೆ? ಅಂದಳು. ಅದೂ ಬಂಡವಾಳ ಬೇಡುತ್ತೆ ಅಂದ ಪುಸ್ತಕದಿಂದ ತಲೆಯೆತ್ತಿ ಅಪ್ಪಯ್ಯ. ಮತ್ತೇನು ಅಂದಳು ಸುನಂದಾ, ಎಲ್ಲರ ಕೈಗೂ ಕಾಫೀ ಲೋಟ ಕೊಟ್ಟು. ಹರಿವೆ ಸೊಪ್ಪು ಬಿತ್ತಬಹದು. ಮುವ್ವರ ಮನೆ ತಿಪ್ಪೆಗಳಲ್ಲಿ ಗೊಬ್ಬರವಿದೆ. ನಾನು ದೊಡ್ಡಕಡತೂರಿನಿಂದ ಬೀಜ ತಂದುಕೊಡ್ತೀನಿ. ಮೂರು ನಾಲ್ಕು ಕುಯ್ಲಿಗೆ ಮೋಸವಿಲ್ಲ. ಆದರೆ ಸೊಪ್ಪು ಇರೋವರೆಗೂ ಹುಳಿಸೊಪ್ಪು, ಬಸ್ತೆಸರಿಗೆ ಮುಫತ್ತು ಸೊಪ್ಪು ಕೊಡಬೇಕು ಅಂದ ಅಪ್ಪಯ್ಯ. ಆಗ ಹುಟ್ಟಿದ ನಗೆಯೊಂದಿಗೆ ಬಂಡವಾಳದ ಸಮಸ್ಯೆ ಬಗೆಹರಿಯಿತು.

ರಾತ್ರಿ ಮಲಗುವ ಮುಂಚೆ ನರಸಿಂಗರಾಯ ಸದಾರಮೆ ನಾಟಕದ ನೋಟು ಪುಸ್ತಕವನ್ನು ಟ್ರಂಕಿನಲ್ಲಿಟ್ಟು ನಿಟ್ಟುಸಿರು ಬಿಟ್ಟ.

English summary
Sadarame drama which was planned to play in village cancelled due to some reason. Narasingaraya kept those drama book in old suitcase,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X