ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಸಾದಿಯ ಪರಿಣಯ

By ಸ. ರಘುನಾಥ
|
Google Oneindia Kannada News

ತಾತ ನನ್ನನ್ನು ಶಾಲೆಗೆ ಸೇರಿಸಿ ಹೋದ ಸ್ವಲ್ಪ ಹೊತ್ತಿಗೆ ಹೆಂಗಸೊಬ್ಬಳು ಸಣ್ಣಗಿದ್ದ ಗಿಡ್ಡ ಹುಡುಗಿಯನ್ನು ಕರೆತಂದು ಸಾದಿಯೆಂದು ಹೆಸರು ಹೇಳಿ ಸೇರಿಸಿದಳು. ತಂದೆ ಯಾಕೆ ಬರಲಿಲ್ಲವೆಂದು ಲೀಲಾವತಿ ಮೇಡಂ ಕೇಳಿದ್ದಕ್ಕೆ, ಕುಡಿದು ಎಲ್ಲಿ ಬಿದ್ದಿದ್ದಾನೊ ಹಾಳಾದೋನು ಎಂದು ಸೆರಗನ್ನು ಬಾಯಿಗಿಟ್ಟುಕೊಂಡಳು. ಮೇಡಂ ಮತ್ತೇನೂ ಕೇಳದೆ ಸಾದಿಯನ್ನು ಸೇರಿಸಿಕೊಂಡರು. ನನ್ನ ಹೆಸರಿನ ಕೆಳಗೆ ಅವಳ ಹೆಸರು ಇತ್ತು. ಹಾಗಾಗಿಯೇ ಅವಳ ನೆನಪು ಈಗಲೂ ನನ್ನ ಮನಸ್ಸಿನಲ್ಲಿ ಉಳಿದಿದೆ.

ತಾಯಿ ಸಾದಿಯೆಂದು ಹೇಳಿದ್ದರೂ ಮೇಡಂ ಹಾಜರಾತಿ ತೆಗೆದುಕೊಳ್ಳುವಾಗ ಸಾದಮ್ಮ ಎಂದು ಕೂಗುತ್ತಿದ್ದರು. ಬಂದಿದ್ದ ದಿನ ಪೆಸೆಂಟ್ ಮೇಡಂ ಎಂದು ಕೀರಲು ಧ್ವನಿಯಲ್ಲಿ ಹೇಳುತ್ತಿದ್ದಳು. ನಿನ್ನೆ ಮೊನ್ನೆ ಏಕೆ ಬರಲಿಲ್ಲ ಎಂದು ಕೇಳಿದರೆ ಅಳುತ್ತಿದ್ದಳು. ಮೇಡಂ ಅವಳ ಬಳಿ ಹೋಗಿ ಎಲ್ಲ ಸರಿಹೋಗುತ್ತದೆ ಸುಮ್ಮನಿರು ಅನ್ನತ್ತಿದ್ದುದು ನಮಗಾರಿಗೂ ಅರ್ಥವಾಗುತ್ತಿರಲಿಲ್ಲ. ಮನೆಗೆ ಹೋಗಿ ಅಜ್ಜಿಯನ್ನು ಕೇಳಿದರೆ, ಹಾಳೋದೊನ ಮಾತೇಕೆ ಎಂದುಬಿಡುತ್ತಿದ್ದಳು.

ನಾನು ಎರಡನೆಯ ತರಗತಿಗೆ ಹೋಗಲು ಪ್ರಾರಂಭಿಸಿದೆ. ಸಾದಿ ಮೊದಲ ದಿನ ಬಂದವಳು ಮತ್ತೆಂದೂ ಬರಲೇ ಇಲ್ಲ. ನನ್ನ ಹೆಸರು ಕೂಗಿ, ತಲೆಯೆತ್ತಿ ನೋಡಿ, ನಾರಾಯಣ ಎಂದು ಮುಂದಿನ ಹೆಸರು ಕರೆಯುತ್ತಿದ್ದರು. ಅವಳ ಅಪ್ಪ ಕೆಲಸಕ್ಕೆ ಹೋಗುತ್ತಿದ್ದ ಮನೆಯ ಕುರಿಗಳನ್ನು ಮೇಯಿಸಲು ಶಾಲೆಯ ಮುಂದಿನಿಂದ ಹೋಗುತ್ತಿದ್ದ ಸಾದಿಯನ್ನು ಕಂಡಾಗಲೆಲ್ಲ ಮೇಡಂ, ಅಪ್ಪನಾದವನು ಸರಿಯಿಲ್ಲವೆಂದರೆ ಮಕ್ಕಳ ಪಾಡು ಹೀಗೇ ಆಗುವುದೆಂದು ಗುಣಗುತ್ತ ಅವಳ ಬೆನ್ನನ್ನು ನೋಡುತ್ತ ನಿಂತುಬಿಡುತ್ತಿದ್ದರು.

Sa Raghunatha Column: Matrimony Of Saadi

ಒಂದು ದಿನ ಸೈಕಲ್ ಮೇಲೆ ಒಬ್ಬರು ಬಂದರು. ಮೇಡಂ ಪುಸ್ತಕಗಳಲ್ಲಿ ಏನೇನೋ ಬರೆದು ಅವರ ಮುಂದಿಟ್ಟರು. ಅವರೂ ಬರೆದರು. ಮೇಡಂ ಬೀಗದ ಕೈ ಗೊಂಚಲನ್ನು ಅವರಿಗೆ ಕೊಟ್ಟು ಕೈ ಮುಗಿದು ಹೊರಗೆ ಹೋದರು. ಶಾಲೆ ಬಿಡುವ ವೇಳೆಗೆ ಮೇಡಂ ತಾವಿದ್ದ ಹಳೆಯ ಮಾಳಿಗೆ ಮನೆ ಖಾಲಿ ಮಾಡಿ ಹೋಗಿಬಿಟ್ಟಿದ್ದರು. ರಾತ್ರಿ ತಾತ ಅಜ್ಜಿಗೆ, ಮೇಡಂ ವರ್ಗವಾಗಿ ಹೋದರು. ಎಲ್ಲರನ್ನು ಹೊಂದಿಕೊಂಡಿದ್ದ ಹೆಣ್ಣುಮಗಳು ಎಂದು ಹೇಳುತ್ತಿದ್ದುದನ್ನು ವರ್ಗವೆಂದರೆ ಏನೆಂದು ಅರ್ಥವಾಗದೆ ಕೇಳಿಸಿಕೊಂಡಿದ್ದೆ.

ಮರುದಿನ ಮೇಷ್ಟ್ರು ನನ್ನ ಹೆಸರಾದ ಮೇಲೆ ನಾರಾಯಣ ಎಂದು ಕರೆದಾಗ, ಸಾದಿಯ ಹೆಸರನ್ನೇಕೆ ಕರೆಯಲಿಲ್ಲವೆಂಬುದು ತಿಳಿಯಲಿಲ್ಲ. ನನ್ನನ್ನು ಐದನೆಯ ತರಗತಿಗೆ ದೊಡ್ಡಶಿವಾರದ ಶಾಲೆಗೆ ಸೇರಿಸಿದರು. ಸಾದಿ ಈಗ ಕುರಿಗಳೊಂದಿಗೆ ದನಗಳನ್ನು ಮೇಯಿಸಲು ಹೋಗುತ್ತಿದ್ದಳು. ಸಾದಿಯ ಅಪ್ಪ ಏನು ಮಾಡಿದ್ದನೋ ಏನೋ ಪೊಲೀಸರು ಹಿಡಿದುಕೊಂಡು ಹೋದರು. ಆಮೇಲೆ ಅವನನ್ನು ಊರಿನಲ್ಲಿ ಕಾಣಲೇ ಇಲ್ಲ. ಸಾದಿಯ ಅಮ್ಮನಿಗೆ ಅದಾವುದೋ ವಾಸಿಯಾಗದ ರೋಗವಂತೆ. ಚಾಪೆ ಬಿಟ್ಟು ಮೇಲೆದ್ದಿದ್ದಿಲ್ಲ.

ನಾನು ಹೈಸ್ಕೂಲು ಮೆಟ್ಟಿಲೇರಿದಾಗ ಸಾದಿ ದನ ಕಾಯುವುದನ್ನು ಬಿಟ್ಟು ಕೂಲಿಗೆ ಹೋಗುವವಳಾಗಿದ್ದಳು. ಅಜ್ಜಿ ಆಗೀಗ ಅವಳನ್ನು ಕರೆದು ತನ್ನ ಹಳೆಯ ಸೀರೆ, ಒಂದಷ್ಟು ರಾಗಿ ಕೊಡುತ್ತಿದ್ದಳು. ಆಗ ಸಾದಿ ನನ್ನೊಂದಿಗೆ ನಗುನಗುತ್ತ ಮಾತನಾಡುತ್ತಿದ್ದಳು.

ಒಂಬತ್ತನೆಯ ತರಗತಿ ಪರೀಕ್ಷೆ ಮುಗಿದು ರಜೆ ಬಂದಿತ್ತು. ನಾನು ಗೆಳೆಯರೊಂದಿಗೆ ಈಜಲು ಹೋಗುವುದು, ಊರಿನಲ್ಲಿ ಅಲೆಯುವುದು, ಸೌದೆ ತರುವ ನೆಪದಲ್ಲಿ ಜೇನುಗೂಡು ಹುಡುಕುವುದು, ನೋಣಗಳಿಂದ ಕಚ್ಚಿಸಿಕೊಂಡು ಬಂದು ತಾತನಿಂದ ಬೈಸಿಕೊಳ್ಳುವುದು, ಅಜ್ಜಿ ಯಾವುದೋ ಎಲೆಹಸಿರು ಮದ್ದು ಹಚ್ಚುವುದು ನಡೆದಿತ್ತು.

ಒಂದು ದಿನ ಸಂಜೆ ಎಲೆ ಅಡಿಕೆ ಮೇಲೆ ಹತ್ತು ರೂಪಾಯಿ ನೋಟಿಟ್ಟು ರಂಗಮ್ಮ, ಅವಳ ಗಂಡ ಚಿನ್ನಬ್ಬ ನನ್ನ ಸೋದರ ಮಾವನ ಮುಂದೆ ಕುಳಿತ್ತಿದ್ದರು. ಅವನು ಪಂಚಾಂಗ ನೋಡುತ್ತಿದ್ದ. ಹುಡುಗನದು ದೇವಗಣ. ಹುಡುಗಿಯದೂ ದೇವಗಣವೇ. ವೈರವಿಲ್ಲ. ನಾಮಬಲವೂ ಕೂಡುತ್ತೆ ಎಂದು ಪಂಚಾಂಗ ನೋಡುತ್ತಲೇ ಹೇಳುತ್ತಿದ್ದ. ಕಷ್ಟದಲ್ಲಿ ಬೆಳೆದಿರೋಳು. ನಮ್ಮ ಮನೆಗೆ ಒದ್ದಿಕೆಯಾಗ್ತಾಳೆ (ಹೊಂದಿಕೆಯಾಗುತ್ತಾಳೆ) ಅಂತ ತಂದುಕೊಳ್ಳಾಣ ಅಂತ. ನೀನೇನು ಹೇಳ್ತಿ ಐನೋರೇ ಎಂದು ರಂಗಮ್ಮ ಕೇಳಿದಳು.

ಅದಕ್ಕೆ ಅವನು, ಸಾದಿ ಊರೇ ಕಂಡಿರೊ ಹುಡುಗಿ. ಒಳ್ಳೆ ಗುಣ. ಗಣಗಳೂ ಕೂಡಿ ಬಂದಿವೆ. ಆಗಬೋದು ಅಂದ. ಚಿನ್ನಬ್ಬ ನನ್ನ ತಾತನನ್ನು ಮಾತಾಡಿಸಲು ಹೋದ. ಆಗ ರಂಗಮ್ಮ, ಎಲ್ಲ ಸರೆ ಐನೋರೆ. ನಮ್ಮೋನೂ ಅವಳ ಬಯಸವ್ನೆ. ಆದುರೆ ಐನೋರೆ, ಅವಳ ಸನ್ನುಗಳು ಈಸೀಸೆ ಅವೆ. ಮಗೀಗೆ ಕುಡಿಸಿಕೊಂಡಾಳ ಹೆಂಗೆ? (ಎಲ್ಲ ಸರಿ ಅಯ್ಯನವರೆ. ನಮ್ಮವನೂ ಅವಳನ್ನ ಬಯಸಿದ್ದಾನೆ. ಅವಳ ಸ್ತನಗಳು ಇಷ್ಟಿಷ್ಟೇ ಇವೆ. ಮಗುವಿಗೆ ಹಾಲು ಸಿಕ್ಕೀತೆ ಹೇಗೆ) ಎಂದು ಮೆಲುಧ್ವನಿಯಲ್ಲಿ ಕೇಳಿದಳು.

ಅವನು ನಕ್ಕು ಒಟ್ಟಿಗೆ ಎರಡು ಮಕ್ಕಳಿಗೆ ಕುಡಿಸಿಕೊಂಡಾಳು ಅಂದ. ನೀನು ಹೇಳಿದ್ಮೇಕ್ಕೆ ಆತುಬುಡು ಐನೋರೆ. ಹಂಗೆ ಮೂರ್ತಾನೂ(ಮುಹೂರ್ತವನ್ನೂ) ಮಡುಗಿಬುಡು ಅಂದಳು. ಅವನು ಮುಹೂರ್ತ ಕಟ್ಟಿಕೊಟ್ಟ. ಅವರು ಹೋದ ಮೇಲೆ ತಾತ ಕೇಳಿದ, ಹೇಗಿದೆಯೋ ಗಣಕೂಟ? ಹುಡುಗೀದು ರಾಕ್ಷಸಸಗಣ. ಹುಡುಗನದು ದೇವಗಣ. ಹಾಗೆಂದು ಹೇಳಿದ್ದರೆ ಪಾಪದ ಹುಡುಗಿಗೆ ಮದುವೆ ಆಗುತ್ತಿರಲಿಲ್ಲ ಅಂದ.

ಸಾದಿಗೆ ಮದುವೆಯಾಯಿತು. ಬಸುರಿಯಾಗಿದ್ದಾಗೊಮ್ಮೆ ನಮ್ಮ ಹೊಲಕ್ಕೆ ಬಂದಿದ್ದಳು. ಹೇಗಿದ್ದಿ ರಾಕ್ಷಸಿ ಎಂದು ಕೇಳಿದೆ. ಏಕೆ ಹಾಗೆಂದಿದ್ದು ಎಂದಳು. ಸೋದರಮಾವ ಹೇಳಿದ ಸುಳ್ಳನ್ನು ತಿಳಿಸಿದೆ. ಅವರು ದೊಡ್ಡೋರು ಅಂದಳು. ಹೆರಿಗೆಯಾಯಿತು. ಹೆಣ್ಣು ಮಗು. ಹೊಟ್ಟೆ ತುಂಬುವಷ್ಟು ಹಾಲೂ ಇತ್ತು.

English summary
Sa Raghunatha Column: Saadi's marriage context with Chinnabba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X