ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವರು

By ಸ. ರಘುನಾಥ
|
Google Oneindia Kannada News

ಬಸವಣ್ಣನವರನ್ನು ಓದಿ, ಓದಿ, ಓದುತ್ತಾ ಹೋದಂತೆ ಅಳೆಯಲು ಹೋದವವರು ಹಿಡಿದ ಮಾನಕವನ್ನು ಸಾಸಿವೆಯೊಂದು ಕಾಳಿಗೂ ಜಾಗವಿರದಂತೆ ತುಂಬಿರುತ್ತಾರೆ. ಚಟಾಕು, ಸೊಲಿಗೆ, ಪಾವು, ಪಡಿ, ಸೇರು, ಬಳ್ಳ... ಅಳತೆ ಹಿಡಿದವರ ಯೋಗ್ಯತೆಯಷ್ಟು ತುಂಬುವ ವಿಚಾರ ಬಸವಣ್ಣನವರದು. ಸಮಾಜಕ್ಕೆ ಸಂಬಂಧಿಸಿದ ಎಲ್ಲ ನಡವಳಿಕೆಗಳನ್ನು ನುಡಿದು ನಡೆದ ಶರಣಗುಣವಂತ ಬಸವಣ್ಣ.

ಹಾಗಾಗಿಯೇ ಅವರ ಬದುಕಿನಲ್ಲಿ ಶರಣರಾದಿಯಾಗಿ ಯಾರೊಬ್ಬರೂ ಅಪಶ್ರುತಿಯನ್ನು ಕಂಡುದಿಲ್ಲ. ಇಂಥ ಮಹಾನುಭಾವ ಜೀವನ ಸಂಸ್ಕೃತಿಯ ಬಹು ಮುಖ್ಯ ಅಂಗವಾದ 'ಓದು'(ಶಿಕ್ಷಣ), ಅದನ್ನು ಕಲಿವ, ಕಲಿಸುವವರ ಅಂತರಂಗ ಬೆಳಗುವಂತೆ ಹೇಳಿದ ವಚನ 'ಅಭಿಜಾತ'ವಾದುದೆಂದು ಮೂವತ್ತೆಂಟು ವರ್ಷಗಳು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ನನಗೆ ಇಂದಿಗೂ ಅನ್ನಿಸುತ್ತಿದೆ.

'ಓದಿಸುವಣ್ಣಗಳೆನ್ನ ಮಾತನಾಡ ಕಲಿಸಿದರಲ್ಲದೆ
ಮನಕ್ಕೆ ಮಾತಾಡ ಕಲಿಸಲಿಲ್ಲಯ್ಯಾ,
ಧನಕ್ಕೆ ಮುನಿದವರಲ್ಲದೆ, ಎನ್ನ ಮನಕ್ಕೆ ಮುನಿದವರಿಲ್ಲಯ್ಯಾ.
ಧನಕ್ಕೆ ಮುನಿದವರಿಗೆ ಮುನಿದು, ಎನ್ನ ಮನಕ್ಕೆ ಮುನಿದ
ಕೂಡಲಸಂಗಮದೇವಾ, ಮಡಿವಾಳ ಮಾಚಯ್ಯ.'

Sa Raghunatha Column: Summary of Basavannas Vachana

ಮೊದಲ ಎರಡು ಸಾಲುಗಳು ಉಪಾಧ್ಯಾಯರಿಗೆ ನೇರ ಸಂಬಂಧಿಸಿದವು. ಏನು ಕಲಿಸಬೇಕಿತ್ತು, ಏನನ್ನು ಕಲಿಸಿದರು ಅನ್ನುವ ಪ್ರಶ್ನೆಯನ್ನು ಉತ್ತರದ ಮೂಲಕ ಹುಟ್ಟಿಸಿದ್ದಾರೆ. 'ಓದು' ಕಲಿಸಬೇಕಿದ್ದವರು ಕಲಿಸಿದ್ದು ಮಾತಾಡುವುದನ್ನು. ಸರಿಯೇ. ಆ ಮಾತಿನ ಗಮ್ಯವಿರಬೇಕಿದ್ದುದು 'ಮನಕ್ಕೆ ಮಾತಾಡ' ಕಲಿಸುವತ್ತ. ಆದರೆ ಅದನ್ನೇ ಕಲಿಸಲಿಲ್ಲ. ಇಲ್ಲಿಯೇ ಸಮಸ್ಯೆ ಹುಟ್ಟುವುದು. ಅಕ್ಷರಗಳನ್ನು ಬಲ್ಲ ಯಾರಾದರೂ ಅವುಗಳನ್ನು ಗುರುತಿಸಿ ಓದುವುದನ್ನು (ಪಠಣ) ಕಲಿಸಬಹುದು. ಈ ಮಾತ್ರದ ಓದಿಗೆ ಶಿಕ್ಷಕರ ಅಗತ್ಯವಿಲ್ಲ.

ಬಸವಣ್ಣ ಹೇಳುವುದು "ಓದ'ನ್ನು. ಅದು ವಚನಕ್ಕೆ ಮಾತಾಡುವುದ ಕಲಿಸುವ ವಿದ್ಯೆ. ಶರಣತ್ವ (ಜ್ಞಾನ, ಭಕ್ತಿ, ಸತ್ಯ, ಅಹಿಂಸೆ, ದಯೆ, ಕಾರುಣ್ಯ, ಸಹನೆ, ಶಾಂತಿ) ಸಾಮಾಜಿಕ ಸಂಸ್ಕೃತಿ ಮನಸ್ಸಿನದು. ಅದು ಮಾತಾಡಬೇಕು. ಅದಕ್ಕೆ ಮಾತಾಡುವುದನ್ನು ಕಲಿಸಬೇಕು. ಅದನ್ನು ಮಾಡದೆ ಓದಿಸುವಣ್ಣಗಳು ಕಲಿಸಿದ್ದು ಬಾಯಿಗೆ ಮಾತಾಡುವುದನ್ನು. ಅಂದರೆ 'ಓದಿಸುವ'ವರು ಮನವನ್ನು ಮೂಕವಾಗಿಸಿ, ಹೊರಗಿನ ಬಾಯಿ ಮಾತನ್ನು ಕಲಿಸಿದರು ಎಂಬುದು ಬಸವಣ್ಣನವರ ಅಳಲು.

ಬಸವಣ್ಣನವರ ಅಂದಿನ ಸಮಸ್ಯೆಯೇ ಇಂದಿನದೂ ಆಗಿರುವುದು. ಇದಕ್ಕೊಂದು ಉದಾಹರಣೆ: ನುಡಿವ ಇಂಗ್ಲಿಷ್ (ಸ್ಪೋಕನ್ ಇಂಗ್ಲಿಷ್)ನ ತರಗತಿಗಳ ಗದ್ದಲ. ಈ ಗದ್ದಲದಂತೆ ಮಾತನಾಡುವುದನ್ನು ಕಲಿತರೆ ಸಾಕು. ನಿನಗೆ ಕ್ಯಾಂಪಸ್ ಸೆಲೆಕ್ಷನ್ ಗ್ಯಾರಂಟಿ ಎಂಬ ಭೋದನೆಗಳಿಗೂ ಕಡಿಮೆಯಿಲ್ಲ. ಸಂಕೋಚ, ಉತ್ಪ್ರೇಕ್ಷೆ ಎಂಬಂಥ ಮಾತುಗಳಿಗೆ ಬಾಯಿ ಕಟ್ಟಿಸಿದರೆ ಈ ವಚನವನ್ನು 'ಶೈಕ್ಷಣಿಕ ಅನುಭಾವ ವಚನ' ಎಂದು ಹೇಳಬೇಕು. ಏಕೆಂದರೆ ಈ ವಿಷಯದಲ್ಲಿ ಬಸವಣ್ಣನವರ ಕಾಲವೇ ಚಲನೆಯಿಲ್ಲದೆ ಇಂದಿಗೂ ನಿಂತುಬಿಟ್ಟಂತಿದೆ.

ಬಸವಣ್ಣನವರ ನೇರ, ದಿಟ್ಟತನಕ್ಕೆ ರುಜುವಾತು ಅವರ ವಚನಗಳು. ಇಲ್ಲಿಯೂ ಅದರ ಸೂಕ್ಷ್ಮತೆ, ತೀಕ್ಷ್ಣತೆಯನ್ನು ಅವರು ಕುಂದಿಸಿಲ್ಲ. ಶೈಕ್ಷಣಿಕ ಟೊಳ್ಳನ್ನು ಎತ್ತಿ ತೋರಿಸುತ್ತ ಅದರ ಜೊಳ್ಳನ್ನು ಕಣ್ಣಿಗೆ ಹಿಡಿದಿದ್ದಾರೆ. ಕಲಿಸುವ ಶರಣತನ ಶಿಕ್ಷಕನದಾಗಬೇಕು. ಅವನು ಧನಕ್ಕೆ ಮುನಿಯಬೇಕು. ಹಾಗೆ ಮುನಿದ ಶಿಕ್ಷಕ ಮಡಿವಾಳ ಮಾಚಯ್ಯನಾಗುತ್ತಾನೆ. ಆದರೆ ಇಂದು ಧನಕ್ಕೆ ಮುನಿಯುದಾಗಿದೆ. ಹಾಗಾಗಿ ಮನ ಕಾಣೆಯಾಗಿದೆ. ಮನಕ್ಕೆ ಮನಿಯದೆ, ಧನಕ್ಕೆ ಮುನಿದವರು ಏನೇನಾದರೂ ಕೂಡಲಸಂಗಮದೇವರು ಕೂಡಿದವರಾಗಲಿಲ್ಲ. ಮೇಲಿನ ವಚನಕ್ಕೆ ಸಂವಾದಿಯಾಗಿ ಈ ವಚನವಿದೆ.

ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು,
ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು,
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ.
ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವರು.

ಇಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರ 'ಹುದ್ದೆನಾಮ'ಗಳು ನೆನಪಾಗುವಂತಿದೆ. ಇವರು ಅವರರವರ ಮಟ್ಟಿಗೆ ಹಿರಿಯರಾಗಿದ್ದಾರೆ. ತಮ್ಮ ತಮ್ಮನೆ ಮೆರೆದಿದ್ದಾರೆ. ಇವರು ಮೆರೆಸಬೇಕಾದ್ದು ವಿದ್ಯೆಯನ್ನು. ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ. ಇವರೇನಾದರೂ ತಮ್ಮ ಮರೆದು ನಿಮ್ಮ ಮೆರೆದಡೆ ಇವರ ಭಾಗ್ಯಕ್ಕೆ ಎಣೆಯಿರದು. ಆಗ ಆಗುವುದೇನು? ಪ್ರಶ್ನೆಯೇ ಬೇಡ. ಬಸವಣ್ಣನವರೇ ಸಾರಿಬಿಟ್ಟಿದುವರು ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವರು. ಇದು ಬಸವಣ್ಣನವರು 'ಕಲಿಸುವಣ್ಣಗಳಿಗೆ' ಅರಿವಿಗೆ ತಟ್ಟಿಸುಸುತ್ತಿರುವ ಸಹಜ, ಸರಳ ಸಂದೇಶ.

English summary
Sa Raghunatha Column: Basavanna's Vachana's about Koodalasangamadeva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X