ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಬರವಣಿಗೆ ಕ್ಷೇತ್ರದಲ್ಲಿ ಅಂಬೆಗಾಲಿಟ್ಟ ಕಾಲ

|
Google Oneindia Kannada News

ಬರವಣಿಗೆ ಕ್ಷೇತ್ರದಲ್ಲಿ ನಾನು ಅಂಬೆಗಾಲಿಟ್ಟಿದ್ದು 1976ರ ಮಧ್ಯಭಾಗದಲ್ಲಿ, ಸಣ್ಣಕತೆಯೊಂದನ್ನು ಬರೆಯುವ ಮೂಲಕ. ಆ ಕಥೆಯ ಹೆಸರು, 'ಈಸಬೇಕು, ಇದ್ದು ಜಯಿಸಬೇಕು'. ಅದು ಪ್ರಕಟವಾದ ಪತ್ರಿಕೆಯ ಹೆಸರು 'ಜನವಾಣಿ' ಎಂದಿರಬೇಕು. ಅದಕ್ಕೆ ಮಹದೇವಪ್ರಸಾದ್ ಸಂಪಾದಕರಾಗಿದ್ದರು ಎಂಬುದು ನೆನಪಿದೆ.

ಅವರು ನಂತರದಲ್ಲಿ ನನ್ನ ಮೂರು ಕಥೆಗಳನ್ನು ಪ್ರಕಟಿಸಿದರು. ಅದಕ್ಕೆ ಮುಂಚೆ ನಾನು ಹತ್ತನೆಯ ತರಗತಿ ಫೇಲಾಗಿ, ಬೆಂಗಳೂರಿನ ಮಲ್ಲೇಶ್ವರಂನಲ್ಲಿದ್ದ ಸೋದರತ್ತೆ ಮನೆಯಲ್ಲಿರುತ್ತ, 'ಬಲವಂತದ ಮಾಘಸ್ನಾನ'ವಾಗಿ ಸಪ್ಲಿಮೆಂಟರಿ ಪರೀಕ್ಷೆಗೆ ಸಿದ್ಧನಾಗುತ್ತಿದ್ದೆ. ಹತ್ತನೆಯ ತರಗತಿ ಫೇಲಾಗಲು ನನಗೆ ಬಾರದ ಇಂಗ್ಲಿಷ್ ಮತ್ತು ಅರ್ಥವೇ ಆಗದ ಗಣಿತ, ಇದರ ಜೊತೆಗೆ ಎನ್. ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳು ಕಾರಣ.

ಮಾಯವಾದ ಪತ್ತೆದಾರ ಮೂಲಕ ಓದುವುದು ಪ್ರಾರಂಭ
ಸೋದರತ್ತೆಯ ಮನೆಯಲ್ಲಿ ನರಸಿಂಹಯ್ಯನವರ ಕಾದಂಬರಿಗಳಿರಲಿಲ್ಲ. ಸುಧಾ ವಾರಪತ್ರಿಕೆ ಬರುತ್ತಿತ್ತು. ಅದರಲ್ಲಿನ ಕಥೆ, ಧಾರಾವಾಹಿಗಳನ್ನು ಓದುತ್ತಿದ್ದೆ. ಅವರ ಮನೆಯಲ್ಲಿ ಕೆ.ವಿ. ಅಯ್ಯರರ ಶಾಂತಲಾ, ಟಿ.ಕೆ. ರಾಮರಾಯ, ತ್ರಿವೇಣಿಯವರ ಕಾದಂಬರಿಗಳಿದ್ದವು. ಅವನ್ನು ಸೋದರತ್ತೆಯ ಕಣ್ತಪ್ಪಿಸಿ ಓದುತ್ತಿದ್ದೆ. ಒಮ್ಮೆ ಸಿಕ್ಕಿಬಿದ್ದು ತಲೆಯ ಮೇಲೆ ಮೊಟುಕಿಸಿಕೊಂಡಿದ್ದೆ. ಇವನ್ನೇ ಓದಿಕೊಂಡು ಈ ಬಾರಿಯೂ ಪರೀಕ್ಷೆಯಲ್ಲಿ ಡುಂಕಿ ಹೊಡೆಯುವೆನೆಂಬ ಆತಂಕದಲ್ಲಿ ಆಕೆ, ಹಾಲ್‌ನಲ್ಲಿದ್ದ ಅವನ್ನು ತನ್ನ ರೂಮಿನಲ್ಲಿಟ್ಟು, ನನ್ನ ಕೈಗೆ ಸಿಗದಂತೆ ಮಾಡಿದಳು. ಆಕೆಯ ಮನೆಯಲ್ಲಿದ್ದ ಆ ವರ್ಷ ಸುಧಾ ಹೊರತುಪಡಿಸಿ ಮತ್ತಾವ ಪುಸ್ತಕವನ್ನೂ ಓದಿದ್ದಿಲ್ಲ. ಹಳ್ಳಿಗೆ ಹಿಂದಿರುಗಿದ ನಂತರ ಮತ್ತೆ ನರಸಿಂಹಯ್ಯನವರ ಕಾದಂಬರಿ 'ಮಾಯವಾದ ಪತ್ತೆದಾರ' ಮೂಲಕ ಓದುವುದನ್ನು ಮರು ಉದ್ಘಾಟಿಸಿಕೊಂಡೆ.

Sa. Raghunatha Column: Days of Entering to the Writing Field

ಮಾಲೂರಿನ ಮುನ್ಸಿಪಲ್ ಹೈಯರ್ ಸೆಕೆಂಡರಿ ಸ್ಕೂಲಿನಲ್ಲಿ ಪಿಯುಸಿಗೆ ಹೋದೆನಾದರೂ ಇಂಗ್ಲಿಷ್ ಮಾಧ್ಯಮಕ್ಕೆ ಹೆದರಿ ಮೂರು ತಿಂಗಳಿಗೇ ಮಂಗಳ ಹಾಡಿಬಿಟ್ಟೆ. ಆಗಲೇ ಮಾಸ್ತಿಯವರ ಚಿಕ್ಕವೀರ ರಾಜೇಂದ್ರ ಕಾದಂಬರಿ ಓದಿಗೆ ಸಿಕ್ಕಿದ್ದು. ಮಾಸ್ತಿ ನನ್ನೂರಿನ ಪಕ್ಕದೂರಿನವರು ಎಂಬ ಪ್ರೀತಿ ಹುಟ್ಟಿ ಅವರ ಕಥೆಗಳನ್ನು ಓದಿದೆ. ಇದು ನನ್ನ ಮಟ್ಟಿಗೆ ಕಾಲೇಜು ಶಿಕ್ಷಣಕ್ಕಿಂತ ಮಿಗಿಲಾದುದಾಗಿತ್ತು. ನಂತರದಲ್ಲಿ ಶಿವರಾಮ ಕಾರಂತ, ಎಸ್.ಎಲ್. ಭೈರಪ್ಪ, ನಿರಂಜನ, ಯಶವಂತ ಚಿತ್ತಾಲ, ತೇಜಸ್ವಿ, ತರಾಸು, ಅನಕೃ ಹೀಗೆ ಸಾಲು ಸಾಲು ಲೇಖಕರ ಕೃತಿಗಳು ಓದಿಗೆ ದೊರೆತವು.

1977 ಡಿಸೆಂಬರ್‌ನಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕನಾದೆ
ಆಗಲೇ ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನ ಓದಿದ್ದು. ಇದರಿಂದಾಗಿ ಗದ್ಯ ಓದುವುದು ಕಡಿಮೆಯಾಗುತ್ತ, ಕುವೆಂಪು, ಪುತಿನ, ಬೇಂದ್ರೆ, ಡಿವಿಜಿ, ಮಧುರಚೆನ್ನ ಮುಂತಾದವರ ಕವಿತೆಗಳನ್ನು ಓದುತ್ತಿದ್ದೆ. ತಕ್ಕಮಟ್ಟಿಗೆ ಅರ್ಥವಾಗುತ್ತಿದ್ದವು. ಎಲ್ಲವನ್ನೂ ಎರವಲು ಪಡೆದು ಓದುವ ಸ್ಥಿತಿ ನನ್ನದಾಗಿತ್ತು. 1977 ಡಿಸೆಂಬರ್‌ನಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕನಾದೆ. ನನಗೆ ಬೇಕಾದ ಪುಸ್ತಗಳನ್ನು ಕೊಂಡುಕೊಳ್ಳುವಂತಾದುದು 1979ರ ನಂತರ.

ನಾನು ಕನ್ನಡ ಪುಸ್ತಕಗಳನ್ನು ಓದವುದಕ್ಕೆ, ಬರವಣಿಗೆಯಲ್ಲಿ ತೊಡಗಲು ಅಡಿಪಾಯವೆಂದರೆ ನನ್ನ ತಾತ ಕಲಿಸಿದ ಕನ್ನಡ ವರ್ಣಮಾಲೆ ಮತ್ತು ಕಾಗುಣಿತ. ಅಜ್ಜಿ ಹೇಳುತ್ತಿದ್ದ ಗಾದೆಗಳು, ನನ್ನೂರ ಹೆಂಗಸರ ಬಾಯಿಯಿಂದ ಹೊರಬರುತ್ತಿದ್ದ ಲಯಬದ್ಧ ಬೈಗುಳ ಮತ್ತವರ ಮಾತುಗಳು ನನಗೆ ಭಾಷೆಯ ಪಾಠಗಳಾಗಿದ್ದವು. 1973ರ ಜೂನ್ 26ರಂದು ರೈಲಿಗೆ ಸಿಕ್ಕಿ ಕಾಲು ಕಳೆದುಕೊಂಡು, ಸರಿಸುಮಾರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ, ಸಾಂಕ್ರಾಮಿಕ ರೋಗಗಳ ಐಸೋಲೇಷನ್ ಆಸ್ಪತ್ರೆ, ಮತ್ತೆ ಬೌರಿಂಗ್ ಆಸ್ಪತ್ರೆಗಳಲ್ಲಿ ಇದ್ದೆ.

Sa. Raghunatha Column: Days of Entering to the Writing Field

1975ರ ಜೂನ್‌ವರೆಗೆ ಅಪ್ಪನ ಆಶ್ರಯಲ್ಲಿದ್ದೆ
1974ರ ಜೂನ್‌ನಿಂದ 1975ರ ಜೂನ್‌ವರೆಗೆ ಅಪ್ಪನ ಆಶ್ರಯಲ್ಲಿದ್ದೆ. ಆಗಲೇ ಬರವಣಿಗೆ ಆರಂಭಿಸಿದ್ದು. ಇದನ್ನು ತಿಳಿದ ಅಪ್ಪ, ಈ ಮಗನಿಗೆ ಸರಿಯಾಗಿ ಕಾಗುಣಿತ ಬರೊಲ್ಲ, ಕತೆ ಬರೀತಾನಂತೆ ಎಂದು ಪೆನ್ನು, ನೋಟು ಪುಸ್ತಕವನ್ನು ಒಲೆಗೆ ಹಾಕಿ ಸುಟ್ಟುಬಿಟ್ಟ. ಜೂನ್ 25ರಂದು ನನ್ನ ತಂಗಿ ಮೈಥಿಲಿ, ಪ್ರಾಥಮಿಕ ಶಾಲೆಯಲ್ಲಿ ನನ್ನ ಜೊತೆಗಾರನಾಗಿದ್ದ ಒಕ್ಕಲಿಗ ಹುಡುಗನೊಬ್ಬನನ್ನು ಪ್ರೀತಿಸಿ ಮನೆಬಿಟ್ಟು ಹೋದಳು.

ರಘು ನನ್ನ ಮಗಳಿಗೆ ತಲೆಹಿಡುಕನಾದ ಎಂದು ಅಪ್ಪ ಊರಿಗೇ ಕೇಳಿಸುವಂತೆ ಕೂಗಾಡಿದ. ಆ ರಾತ್ರಿ ಊಟ ಮಾಡುವಾಗ, ಗೊಜ್ಜಿಗೆ ಖಾರ ಜಾಸ್ತಿ ಎಂದೆ. 'ಬಿಟ್ಟಿ ತಿನ್ನೋ ...ಮಗನಿಗೆ ರುಚಿ ಬೇರೆ' ಅಂದ. ಅಂದು ಅರ್ಧ ಊಟದಲ್ಲಿ ಕೈತೊಳೆದು ಎದ್ದವನು, ಆ ನಂತರ ಆ ಮನೆಯಲ್ಲಿ ಒಂದು ಹನಿ ನೀರನ್ನೂ ಮುಟ್ಟಿದ್ದಿಲ್ಲ. ಮನೆಗೆ ಹೋದುದಿಲ್ಲ. ಈ ಘಟನೆ, ಪ್ರಸಂಗಗಳು ನನ್ನನ್ನು ಸಾಹಿತ್ಯ ರಚನೆಯತ್ತ, ನಂತರ ಮಾಡಿದ ಅನೇಕ ಕೆಲಸಗಳತ್ತ ಕರೆದೊಯ್ದವು. ಓದು ಮತ್ತು ಜನಜೀವನದ ಸಂಬಂಧಗಳು, ಅನುಭವಗಳು ನನ್ನ ಬರವಣಿಗಯನ್ನು ಕಟ್ಟಿ ಬೆಳೆಸಿದವು.

ಮಾಲೂರಿನ ಛತ್ರವೊಂದರಲ್ಲಿ ಆಶ್ರಯ ಪಡೆದೆ
1975ರ ಜೂನ್ 26ರಂದು ಮನೆ ತೊರೆದು ಮಾಲೂರಿನ ಛತ್ರವೊಂದರಲ್ಲಿ ಆಶ್ರಯ ಪಡೆದೆ. ಊಟ ತಿಂಡಿಗಾಗಿ ಅವರಿವರ ಮನೆ ಮಕ್ಕಳಿಗೆ ಪಾಠ ಮಾಡಿದೆ. ಅಂಗಡಿಯೊಂದರಲ್ಲಿ ಲೆಕ್ಕ ಬರೆಯುವ ಕೆಲಸ ಹಿಡಿದೆ. 'ಕಸ್ತೂರಿ ಗ್ರಂಥಾಲಯ' ನಡೆಸುತ್ತಿದ್ದ ಕೋಟಿಲಿಂಗನ ಗೆಳೆತನವಾಯಿತು. ಓದಿಗೆ ವಿಪುಲ ಅವಕಾಶವಾಯಿತು. ಬರೆಯುವ ಸ್ವಾತಂತ್ರ್ಯವೂ ಸಿಕ್ಕಿತು. ಅಲ್ಲಿ ಬರೆದ ಮೊದಲ ಕಥೆಯೇ 'ಗತಿ'. ಅದಕ್ಕೆ ಮಲ್ಲಿಗೆ ಮಾಸ ಪತ್ರಿಕೆ ನಡೆಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಸಿಕ್ಕಿತು. ಆ ಹೊತ್ತಿಗೆ ಅಡ್ಡಗಲ್ಲು ಎಂಬ ಹಳ್ಳಿ ಶಾಲೆಯಲ್ಲಿ ಕೆಸಕ್ಕೆ ಸೇರಿದ್ದೆ. ಅಲ್ಲಿಯೇ, 1978ರಲ್ಲಿ ಗೋಪಾಲಕೃಷ್ಣ ಅಡಿಗರ ಮತ್ತು ರಾಮಚಂದ್ರಶರ್ಮರ ಕವಿತೆಗಳನ್ನು ಓದಲು ಕೈಗೆತ್ತಿಕೊಂಡಿದ್ದು ಹಾಗು ಬಂಡಾಯ- ದಲಿತ ಚಳವಳಿಯೊಂದಿಗೆ ಸೇರಿದ್ದು.

ಅಡಿಗ ಮತ್ತು ಶರ್ಮರ ಕಾವ್ಯ ಹುಟ್ಟಿಸಿದ ಬೆರಗು, ಭಯವನ್ನು ನಿಸ್ಸಂಕೋಚದಿಂದ ಒಪ್ಪಿಕೊಳ್ಳುತ್ತೇನೆ. ಅರ್ಥವಾದುದರ ಆಚೆಗಿನ ಅಂದಿನ ನನ್ನ ಮನಸ್ಥಿತಿ ಇದು. ಇದರಿಂದ ಹೊರಬರಲು ಅವರ ಕಾವ್ಯ ಕುರಿತ ವಿಮರ್ಶೆಯನ್ನು ಆಶ್ರಯಿಸಿದೆ. ಬೇಂದ್ರೆಯವರ ಕಾವ್ಯದ ಒಳಹೋಗಲು ಓದಿದ ಪುಸ್ತಕಗಳಲ್ಲಿ ಅನಂತಮೂರ್ತಿಯವರ 'ಭೃಂಗದ ಬೆನ್ನೇರಿ' ಎಂಬುದೊಂದು. ಸು.ರಂ. ಎಕ್ಕುಂಡಿಯವರ ಕವಿತೆಗಳು ಆಕರ್ಷಿಸಿದವು. ಎ.ಕೆ. ರಾಮಾನುಜನರ ಕವಿತೆಗಳು ಒಳಗೆಳೆದುಕೊಂಡವು.

ಶಾಹಜಿಯ ಶೃಂಗಾರ ಪದ ಕವಿತೆಗಳು ಓದಿಗೆ ಸಿಕ್ಕಿದವು
ಅಡ್ಡಗಲ್ಲಿನಲ್ಲಿ ರಾಮಚಂದ್ರಪ್ಪ ಎಂಬುವವರಿಂದ ತೆಲುಗು ಪ್ರಾಚೀನ ಕವಿಗಳಲ್ಲಿ ನನ್ನಯ, ಪೋತನ, ಶ್ರೀನಾಥ, ತೆನಾಲಿ ರಾಮಕೃಷ್ಣರ ಕಾವ್ಯಗಳ ಹಲವು ಪದ್ಯಗಳ ಪರಿಚಯವಾಯಿತು. ಅಲ್ಲಿಯೇ ಮುನೀಶ್ವರಾಚಾರಿ ಎಂಬುವವರಿಂದ ಶಾಹಜಿಯ ಶೃಂಗಾರ ಪದ ಕವಿತೆಗಳು ಓದಿಗೆ ಸಿಕ್ಕಿದ್ದು. ನಟುವಾಂಗದ ತಾಯಮ್ಮನವರ ಸ್ವರದಲ್ಲಿ ಗಡಿಭಾಗದ ಜಾನಪದಗೀತೆಗಳನ್ನು, ಕಲವು ಜಾವಳಿಗಳನ್ನು ಆಲಿಸಿದ ಪ್ರಭಾವದಲ್ಲಿ ಜಾನಪದ ಗೀತೆಗಳ ಸಂಗ್ರಹಕ್ಕಿಳಿದೆ.

ಇದು ನನಗೆ ಇನ್ನೊಂದು ಯೂನಿವರ್ಸಿಟಿ ಆಯಿತು. ಜನರ ತೆಲುಗು ಕಲಿತದ್ದು ಈ ವಿಶ್ವವಿದ್ಯಾಲಯದಲ್ಲಿಯೇ. ಇಲ್ಲಿ ಕುರಿಗಾಹಿ, ದನಗಾಹಿ, ಕೂಲಿಕಾರರು ನನಗೆ ಪ್ರೊಫೆಸರರು. ಪರಿಣಾಮದಲ್ಲಿ ತೆಲುಗು- ಕನ್ನಡ, ಕನ್ನಡ- ತೆಲುಗು ಅನುವಾದಕನಾದೆ. 'ಕೋಲಾರ ತೆಲುಗು'ನಲ್ಲಿ ಸಣ್ಣ ಕತೆಗಳನ್ನು ಬರೆದೆ. 'ಕೋಲಾರ ತೆಲುಗಿನಲ್ಲಿ ಕಥೆಗಳನ್ನು ಬರೆದ ಮೊದಲ ಕತೆಗಾರ' ಎಂದು ತೆಲುಗಿನ ಪ್ರಸಿದ್ಧ ಕವಿ- ವಿಮರ್ಶಕ ಶ್ರೀ ಅದ್ದೇಪಲ್ಲಿ ರಾಮಮೋಹನರಾವ್ ಗುರುತಿಸಿದರು.

ಶ್ರೀ ಸ.ವೆಂ. ರಮೇಶ್‌ರೊಂದಿಗೆ 'ಮೆರಸುನಾಡು ಕಥಲು' ಸಂಪಾದಿಸಿದೆ. ಇದಕ್ಕಾಗಿ ಈ ಪ್ರಾಂತ್ಯದ ಕತೆಗಾರರ ಕೆಲವು ಕನ್ನಡ ಕಥೆಗಳನ್ನು ತೆಲುಗಿಗೆ ಅನುವಾದಿಸಲಾಯಿತು. ಇದು 'ಮೊರಸುನಾಡು ಕಥೆಗಳು' ಎಂದು ಕನ್ನಡದಲ್ಲಿ ಪ್ರಕಟವಾಯಿತು. ಇದರಲ್ಲಿ ಮೊರಸುನಾಡು ಕಥಲು ಸಂಕಲನದಲ್ಲಿದ್ದ ತೆಲುಗು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡೆವು. ಈ ಮುನ್ನ ಬರೆದ 'ತೆಲುಗನ್ನಡ ಕಥಲು' ಸಂಕಲನವನ್ನು ದ್ರಾವಿಡ ವಿಶ್ವವಿದ್ಯಾಲಯ ಪ್ರಟಿಸಿತು. ಈ ಎರಡೂ ಭಾಷೆಗಳಲ್ಲಿ ನನ್ನ ಸಾಹಿತ್ಯಯಾನ ಮುಂದುವರೆಯಿತು.

English summary
Sa. Raghunatha Column: Upon returning to the village, Narasimaiah's novel has begun to read through the Mayavada Pattedara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X