ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಸಾಂತ್ವನದ ಹಾಡುಗಳು ಶತಮಾನಗಳಿಗೂ ಹಾಡೇ

|
Google Oneindia Kannada News

ಹಾಡನ್ನು ಹಾಡುವಾಗ ಆಲಿಸುವ, ಅದೇ ಹಾಡನ್ನು ಓದುವ ಅನುಭವ ಬೇರೆ ಬೇರೆಯಾದುದು. ಈ ಎರಡು ಕ್ರಿಯೆಗಳಲ್ಲಿ ತಲ್ಲೀನವಾದಾಗ ಮನೋಗತವಾಗಬೇಕಾದ ಸಂಗೀತ, ಸಾಹಿತ್ಯದ ಮನೋಭಾವ, ಗುಣಾಂಶಗಳು ಜಾರಿಹೋಗುವುದಿಲ್ಲ. ವಿರಹ, ವಿಷಾದ, ವಿನೋದ, ಆನಂದ ಯಾವುದೇ ಆಗಲಿ ಅನುಭವಿಸುವಾಗಿನ ಸಮಯ ವಿಶೇಷವಾದುದು.

ಹೀಗಾಗಿ ಸಾಹಿತ್ಯವನ್ನೊಳಗೊಂಡ ಸಂಗೀತ, ಸಂಗೀತವನ್ನೊಳಗೊಂಡ ಸಾಹಿತ್ಯ ಮನಸ್ಸಿನಲ್ಲಿ ಚಿತ್ರ, ಲೋಕವನ್ನು ಸೃಜಿಸುತ್ತದೆ. ಅದು ಮರೆಯದ, ಮರೆಯಬಾದ್ದಾಗಿ ಉಳಿಯುತ್ತದೆ. ಹೀಗೆ ಉಳಿಯುವುದು ಭಾವಗೀತೆ, ಸಿನೆಮಾ ಗೀತೆ, ಕೀರ್ತನೆ, ಪದ, ಪದ್ಯ, ಕಾವ್ಯ, ಭಜನೆ, ತತ್ವಪದ ಯಾವುದಾದರೂ ಸಮ್ಮತವೇ.

ಸಂಗೀತ ಗೀತೆಯ ಸಾಹಿತ್ಯದ ಅರ್ಥಕ್ಕಲ್ಲ. ಸಾಹಿತ್ಯ ಸಂಗೀತದ ವಿಶ್ಲೇಷಣೆಗಲ್ಲ. ಎರಡರ ಸಂಲಗ್ನತೆಯು ಸಂವಹನಕ್ಕಾಗಿ. ಸಾಹಿತ್ಯ ಸಂಗೀತದಷ್ಟೇ ಕವಿ- ಗಾಯಕ ಮುಖ್ಯ. ನಮಗೆ ನಮ್ಮ ಕನ್ನಡದಲ್ಲಿ ಇಂತಹ ಗೀತೆಗಳು ಎಷ್ಟೋ ಇವೆ. ಹಾಗೆಯೇ ಅನ್ಯ ಭಾಷೆಗಳಲ್ಲಿಯೂ ಇವೆ. ಅವುಗಳನ್ನು ತಿಳಿಯುವುದೂ ನಮಗೆ ಲಾಭವೆ.

Sa Raghunatha Column: Condolences Songs are Song of Centuries

ಅರ್ಧ ಶತಮಾನಕ್ಕೂ ಹಿಂದಿನದಾಗಿದ್ದು (1964), ಇಂದಿಗೂ ಮನಮನಗಳಲ್ಲಿ ಉಳಿದ 'ಮೂಗ ಮನಸುಲು' ಎಂಬ ಚಿತ್ರದ 'ಪಾಡುತ ತೀಯಗಾ ಚಲ್ಲಗಾ' ಗೀತೆಯನ್ನು ಮೂಲಕ್ಕೆ ನಿಷ್ಠವಾಗಿ ಅನುವಾದಿಸಿಕೊಂಡಿದೆ. ಪಲ್ಲವಿ ನಿದ್ದೆ ಮಾಡಿಸಲು ಜೋಗುಳ ಹಾಡಿದಂತಿದೆ- 'ಹಾಡುವೆ ಸವಿಯಲಿ ಹಿತದಲಿ/ ಮಗುವಿನಂತೆ ನಿದುರಿಸು ಅಮ್ಮನೇ ಬಂಗಾರದಮ್ಮನೇ'

ಮೊದಲನೇ ಚರಣ ಪಲ್ಲವಿಯ ಉದ್ದೇಶವನ್ನು ತಿಳಿಸುತ್ತದೆ. ಮನಸ್ಸು ಪ್ರಕ್ಷುಬ್ಧಗೊಂಡ ವ್ಯಕ್ತಿಯನ್ನು ಹಾಡಿ ಮಲಗಿಸುತ್ತ, ನಿದ್ದೆ ಮಾಡಬೇಕೆಂದು ಆಹ್ವಾನಿಸುತ್ತದೆ. ಏಕೆಂದರೆ, 'ನಿದುರೆ ಮಾಡೆ ಮನಸು ಕೊಂಚ ಹಗುರಗೊಳುವುದು/ ಹಗುರಗೊಂಡ ಮನಸು ಮಧುರ ಕನಸು ಕಾಂಬುದು'. ಆ ಕನಸಿನ ಅಗತ್ಯ ತಿಳಿಯಿತು. ಆದು ಒಂದು ಸಂಪತ್ತು. ಆದರೆ ಅದನ್ನು ದೋಚುವ 'ದೊರೆ'ಗಳೂ ಇದ್ದಾರೆ. 'ಕನಸೆ ನಮಗೆ ಉಳಿದುಬಿಡುವ ಸಿರಿಯು ಅಂತ್ಯಕೆ/ ಆ ಸಿರಿಯ ಕೂಡ ದೋಚಿಕೊಳುವ ದೊರೆಗಳೇತಕೆ?' ಬಡತನದ ಸಂಪತ್ತು ಕನಸು. ಅದನ್ನೂ ದೋಚುವುದು ಬಡವರ ಭವಿಷ್ಯದ ಭರವಸೆಗಳನ್ನು ಕಿತ್ತು ಹಾಕಿದಂತೆ.

ಎರಡನೇ ಚರಣ ಸಾಂತ್ವನದ್ದು. ಈ ಬದುಕನ್ನು ಬಾಳಿ ಹೋದವರು ಒಳ್ಳೆಯವರು. ಇರುವವರು ಅವರ ಮಧುರ ಸ್ಮೃತಿಗಳೆಂದು ಹೇಳಿ, ಅವರ ನೆನಪಿನೊಂದಿಗೆ ಜೀವನ ಸಾಗಿಸುವ ಧೃತಿಗೆ ತರುವುದಾಗಿದೆ. 'ಎದೆಯ ಕಿಚ್ಚನಾರಿಸುವ ತಣ್ಣೀರು ಕಣ್ಣೀರು/ ಇರು ಎಂದರು ಎರದಮ್ಮ ಬಹಳ ದಿನಗಳು/ ಹೋದವರೆಲ್ಲರು ಒಳ್ಳೆಜನಗಳು/ ಇರುವವರು ಹೋದವರ ಮಧುರ ಸ್ಮೃತಿಗಳು.' ಇಲ್ಲಿ ಕನ್ನಡ ಗೀತೆಯೊಂದರ 'ಸವಿನೆನಪುಗಳು ಬೇಕು ಸವಿಯಲೀ ಬದುಕು' ಎಂಬ ಸಾಲು ನೆನಪಾಗುವುದು ಸಹಜ.

ಕಡೆಯ ಚರಣ ತಾತ್ವಿಕ ನೆಲೆಯನ್ನು ಮುಟ್ಟಿದೆ. ಇಲ್ಲಿ ಮನಸ್ಸು (ಆತ್ಮ) ಅಳಿಯದೆಂಬ ಪ್ರಾಕೃತ ಭಾವ ಕಾಣಿಸಿಕೊಂಡಿದೆ. ಜೊತೆಗೆ ಗೆಳೆತನದ ಗಟ್ಟಿ ಬೆಸುಗೆಯನ್ನು ಸಾದರಪಡಿಸುತ್ತದೆ. ಇದೂ ಸಹ ಅವಿನಾಶಿಯೆಂಬುದನ್ನು ಪ್ರತಿಪಾದಿಸುತ್ತದೆ. 'ಮನುಷ ಹೋದರೇನಂತೆ ಮನಸು ಇರುವುದು/ ಮನಸಿನೊಡನೆ ಮನಸೆಂದು ಬೆರೆತು ಇರುವುದು/ ಹುಟ್ಟು ಸಾವು ಇರದುದಮ್ಮ ಸ್ನೇಹವೆಂಬುದು/ ಜನುಮ ಜನುಮಕದು ಮತ್ತೆ ಗಟ್ಟಿಗೊಳುವುದು.'

ಈ ಹಾಡು ನೈರಾಶ್ಯತೆಯಿಂದ ಬಿಡಿಸಿ, ಬದುಕಿನ ಆಸೆ ಮೂಡಲು ಅಗತ್ಯವಾದ ಭರವಸೆಯ ಮುನ್ನೆಲೆಯನ್ನು ನಿರ್ಮಿಸುತ್ತದೆ. ಇದು ನೊಂದ ಜೀವಿಯ ಸಾಂತ್ವನ ಗೀತೆ. ಜೊತೆಯಲ್ಲಿಯೇ ಅನುಭಾವದ ಛಾಯೆಯಲ್ಲಿ ಬದುಕಿನ ಹಿತದ ಪಯಣಕ್ಕೆ ಅಣಿಗೊಳಿಸುತ್ತದೆ.

ತೆಲುಗು ಸಾಹಿತ್ಯ ಲೋಕದಲ್ಲಿ ಮತ್ತು ಕೇಳುಗ-ಓದುಗರಲ್ಲಿ 'ಮನಸುಕವಿ'ಎಂದು ಮುದ್ರೆ ಒತ್ತಿರುವ ಆಚಾರ್ಯ ಆತ್ರೇಯ ಈ ಗೀತೆಯ ರಚನಕಾರರು. 'ಭಾವಸಾರ' ಅರಿತ ರಾಗ ಸಂಯೋಜನೆ ಪ್ರಸಿದ್ಧ ಸಂಗೀತ ನಿರ್ದೇಶಕ ಕೆ.ವಿ. ಮಹದೇವನ್ ಅವರದು. ಸಾಗಿತ್ಯ, ಸಂಗೀತದ ಮನೋಭಾವವನ್ನು ರಕ್ತಗತ ಮಾಡಿಕೊಂಡ, ಕನ್ನಡಿಗರಿಗೂ ಚಿರಪರಿಚಿತ ಗಾಯಕ ಘಂಟಸಾಲ ತಮ್ಮ ಶಾರೀರದ ಮಾಧುರ್ಯವನ್ನು ತುಂಬಿ ತುಂಬಿ ಹಾಡಿ, ಕವಿ, ರಾಗ ಸಂಯೋಜಕರಿಬ್ಬರನ್ನೂ ಮರೆವೆಯ ಮುಸುಕು ಕವಿಯದಂತೆ ಮಾಡಿದ್ದಾರೆ.

ಹಾಡುವೆ ಸವಿಯಲಿ ತಂಪಲಿ
ಹಸುಗೂಸಿನಂತೆ ನಿದುರಿಸು ಅಮ್ಮನೆ ಚೆಂದದಮ್ಮನೆ

ನಿದುರೆ ಮಾಡೆ ಮನಸು ಕೊಂಚ ಹಗುರಗೊಳುವುದು
ಹಗುರಗೊಂಡ ಮನಸು ಸವಿಯ ಕನಸು ಕಾಂಬುದು
ಕನಸೆ ನಮಗೆ ಉಳಿದುಬಿಡುವ ಸಿರಿಯು ಅಂತ್ಯಕೆ
ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ

ಎದೆಯ ಉರಿಯ ಆರಿಸುವ ತಣ್ಣೀರೆ ಕಣ್ಣೀರು
ಇರು ಎಂದರು ಇರದುದಮ್ಮ ಬಹಳ ದಿನಗಳು
ಹೋದವರು ಎಲ್ಲರು ಒಳ್ಳೆ ಜನಗಳು
ಇದ್ದವರು ಹೋದವರ ಮಧುರ ಸ್ಮೃತಿಗಳು

ಮನುಷ ಹೋದ ಮಾತ್ರಕೇನು ಮನಸು ಇರುವುದು
ಮನಸಿನೊಡನೆ ಮನಸೆಂದಿಗು ಬೆರೆತು ಇರುವುದು
ಸಾವು ಹುಟ್ಟು ಇರದುದಮ್ಮ ಸ್ನೇಹವೆಂಬುದು
ಜನುಮ ಜನುಮಕದು ಮತ್ತೆ ಗಟ್ಟಿಗೊಳುವುದು

English summary
Sa Raghunatha Column: Condolences Songs is Song for Centuries, It is a time to feel good, regret, fun, pleasure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X