ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಅನ್ನ ಪ್ರಸಾದವಾಗಿಯೂ, ಪ್ರಸಾದ ನೀಡುವ ಭಕ್ತಿಯಲ್ಲಿಯೂ

|
Google Oneindia Kannada News

ಅನ್ನವನಿಕ್ಕಿದರೆ ಪುಣ್ಯವಹುದು, ವಸ್ತ್ರವ ಕೊಟ್ಟರೆ ಧರ್ಮವಹುದು,
ಹಣವ ಕೊಟ್ಟರೆ ಶ್ರೀಯಹುದು.
ತ್ರಿಕರಣ ಶುದ್ಧವಾಗಿ ನೆನೆದರೆ ಮುಕ್ತಿಯಹುದು,
ಕೂಡಲಚೆನ್ನಸಂಗಯ್ಯನಲ್ಲಿ

ಜಗತ್ತಿನ ಬಹುದೊಡ್ಡ ಸಮಸ್ಯೆ ಅವಮಾನ ಮತ್ತು ಹಸಿವು. ಹಸಿವಾದಾಗ ಅನ್ನ ಸಿಗದಿದ್ದರೆ ಅಗಣಿತ ಕೋಟಿ ಧನದ ಧನಿಕನೂ ದೀನನಾಗುತ್ತಾನೆ. ಬಡವನಂತೂ ಹಸಿವೆಯ ನೆಂಟ, ಬಂಟ. ಈ ಅನ್ನ ಬರಿದೆ ಅಗುಳಲ್ಲ, ತುತ್ತಲ್ಲ, ಕೂಳಲ್ಲ. ಅದು ನಿಂದಾತೀತ. 'ಅನ್ನವನ್ನು ನಿಂದಿಸಲಾಗದು' ಎನ್ನುತ್ತದೆ ಆರ್ಯವಾಕ್ಕು. ಇದೇ ಅನ್ನ ದೇವರಿಗಿಟ್ಟರೆ ನೈವೇದ್ಯ.

ಇದರ ಬಗ್ಗೆ ಶರಣರದು ಇನ್ನೊಂದು ಹೆಜ್ಜೆ ಮುಂದೆ. ಸ್ವೀಕರಿಸುವವ ಭಕ್ತನಾಗಿರಬೇಕು, ಶರಣನಾಗಿರಬೇಕು. ಏಕೆಂದರೆ ಅದು ಪ್ರಸಾದ. ಬಂಗಾರದ ತಟ್ಟೆಯಲ್ಲಿ ಬಡಿಸಲಿ, ಹರಿದೆಲೆಯಲ್ಲಿರಲಿ, ಅರಸುಣ್ಣಲಿ, ಆಳುಣ್ಣಲಿ ಹೆಸರೊಂದೆ, 'ಅನ್ನ'. ಆ ಅನ್ನವನ್ನು ಉಣ್ಣುವವರ ಮುಂದೆ ಸುರಿದರೆ ಅನ್ನವಿಕ್ಕಿದಂತಾಗದು.

Sa Raghunatha Column: Anna, Prasada and Devotion in Vachanas

ಇದನ್ನು ವಚನಗಳು ಹತ್ತಾರು ವಿಧಗಳಲ್ಲಿ ನಿರೂಪಿಸಿವೆ. ಚೆನ್ನಬಸವಣ್ಣನವರೂ ಆ ಕುರಿತು ಒಂದು ಆದರ್ಶದ ನೆಲೆಯನ್ನು ಕಟ್ಟಿಕೊಡುತ್ತಾರೆ. ಇದು ಆರೋಗಣೆಯನಿಕ್ಕವ ಧರ್ಮ. ಈ ಧರ್ಮ ಮಾರ್ಗವನ್ನು ಚೆನ್ನಬಸವಣ್ಣವರು ಕೆಲವು ವಚನಗಳಲ್ಲಿ ಕಾಣಿಸುರುವರು.

ಅನ್ನವಿಕ್ಕಿದರೆ ಪುಣ್ಯ, ಬಟ್ಟೆಕೊಟ್ಟರೆ ಧರ್ಮ, ಹಣ ನೀಡಿದರೆ ಸಿರಿ ಒಲಿಯುವುದು. ಈ ಮೂರೂ ತ್ರಿಕರಣ ಶುದ್ಧಿಯಲ್ಲಿರಬೇಕು. ಹಾಗೆಯೇ ಕೂಡಲಚೆನ್ನಸಂಗಯ್ಯನಲ್ಲಿ. ಆಗಷ್ಟೆ ಪುಣ್ಯವೆನ್ನುವ ಚೆನ್ನಬಸವಣ್ಣ, ಇನ್ನೊಂದು ವಚನದಲ್ಲಿ ಅನ್ನ(ಪ್ರಸಾದ)ವನ್ನು ಸ್ವೀಕರಿಸುವ ಆದರ್ಶವನ್ನು ನಿರ್ಮಿಸುವರು.

ಉದಾಸೀನ ಮಾಡಿದರೆ ಮುಟ್ಟಲಾಗದು, ಅದು ಅನರ್ಪಿತವೆನಿಸೂದು,
ವಿನಯದಿಂದ ನೀಡಿದರೆ ಮುಟ್ಟುವುದು, ಅರ್ಪಿತವ ಮಾಡುವುದು,
ಕೂಡಲಚೆನ್ನಸಂಗಯ್ಯಾ
ಅಂತಪ್ಪ ಲಿಂಗಾಭಿಮಾನಿಯ ಎನಗೆ ತೋರಯ್ಯ.

ಇಲ್ಲಿ ಸ್ವೀಕರಣದ ಸಿದ್ಧಾಂತ ತಾನೇ ತಾನಾಗಿ ರೂಪಗೊಂಡಿದೆ. ಹೀಗೆ ರೂಪಿಸುವ ಅನುಭವ ಚೆನ್ನಬಸವಣ್ಣನವರಲ್ಲಿತ್ತು. ಇದು ಬಸವಣ್ಣನವರಿಂದ ಹರಿದು ಈತನನ್ನು ತಲುಪಿದ್ದೀತು. ಈ ವಚನ ಜಾನಪದ ತ್ರಿಪದಿಯನ್ನು ಇದರ ನೆರಳಾಗಿ ನೆನಪಿಗೆ ತರುತ್ತದೆ.

ಕೊಟ್ಟು ಕುದಿಯಲಿ ಬೇಡ ಇಟ್ಟು ಹಂಗಿಸಬೇಡ
ಎಷ್ಟುಂಡರೆಂದೆನಬೇಡ | ಈ ಮೂರು
ಸೇರ್ಯಾವ ಶಿವನ ಸದರೀಗಿ ಎಂಬ ಈ ತ್ರಿಪದಿಯ ಆಶಯಕ್ಕು
ಉದಾಸೀನ ಮಾಡಿದರೆ ಮುಟ್ಟಲಾಗದು, ಅದು ಅನರ್ಪಿತವೆನಿಸೂದು,
ವಿನಯದಿಂದ ನೀಡಿದರೆ ಮುಟ್ಟುವುದು, ಅರ್ಪಿತವ ಮಾಡುವುದು, ಅನ್ನುವ ಚೆನ್ನಬಸವಣ್ಣವರ ಭಾವನೆಗೂ ಸಾಮ್ಯ ಎಷ್ಟು ಹತ್ತಿರದಲ್ಲಿದೆ ಎಂಬುದನ್ನು ಕಾಣಬಹುದು. ಹೀಗೇಕೆಂದರೆ ಜಾನಪದರು ಶರಣರಿಗೆ ಶರಣೆಂದ ಶರಣರು ತಾನೆ.

ಉಣಲಿಕ್ಕುವುದರಲ್ಲಿ ಪುಣ್ಯ ಕಾಣುವ(ಅನ್ನವನಿಕ್ಕಿದರೆ ಪುಣ್ಯವಹುದು), ಮಾನ ಉಳಿಸುವ ಬಟ್ಟೆಕೊಟ್ಟರೆ ಧರ್ಮ (ವಸ್ತ್ರವ ಕೊಟ್ಟರೆ ಧರ್ಮವಹುದು) ಎಂದು ಚೆನ್ನಬಸವಣ್ಣ ಹೇಳಿದರೂ ಒಂದು ಬರೀ ಕ್ರಿಯೆಯಾಗಿ ನೀಡಿದರೆ ನಿರುಪಯುಕ್ತವೆಂಬುದನ್ನು ಸಾರುತ್ತಾರೆ. ಅದೂ ಮನಮುಟ್ಟಿ ಉತ್ತರ ಹುಡುಕಿಕಳ್ಳುವಂಥ ಪ್ರಶ್ನೆಯ ಮೂಲಕ, ಆ ಎರಡು ಪ್ರಶ್ನೆ ಅರಿವಿನ ಮೂಲಕ್ಕೆ ಕರೆದೊಯ್ಯುವುದಾಗಿರುವುದು ಪ್ರಧಾನ. ಅಂಬಲಿಯನೆರೆದವರೆಲ್ಲ ಭಕ್ತರೆ? ಕಂಬಳಿಯ ಕೊಟ್ಟವರೆಲ್ಲ ಭಕ್ತರೆ?

ವಚನಗಳಲ್ಲಿ ಪ್ರಶ್ನೆಯ ಮುಂದಲ್ಲೇ ಉತ್ತರವಿರುವುದು ಸಾಮಾನ್ಯ. ಈ ಪ್ರಶ್ನೆಗೆ ಈ ಉತ್ತರ ನಾ ಕಂಡದ್ದು. ಇನ್ನೊಂದಿದ್ದರೆ ಕಂಡುಕೊಳ್ಳಬಹುದು ಎಂಬ 'ಉಪದೇಶ'ದಾಚಿನ ಅರಿವು ಇದಕ್ಕೆ ಕಾರಣವಿದ್ದೀತು. ಇದನ್ನು ಶರಣರಿಗೆ 'ಅನುಭವ ಮಂಟಪ' ತೋರಿದ್ದೀತೆ ಅನ್ನಿಸಿವಂತೆ ಮಾಡುತ್ತದೆ ಅಂಬಲಿಯನೆರೆದವರೆಲ್ಲ ಭಕ್ತರೆ? ಕಂಬಳಿಯ ಕೊಟ್ಟವರೆಲ್ಲ ಭಕ್ತರೆ? ಚೆನ್ನಬಸವಣ್ಣನವರ ಈ ನುಡಿತ.

Recommended Video

Pant out of 3rd Test? ಕುತೂಹಲ ಮೂಡಿಸಿದ ಸಾಹ ಟ್ವಿಟ್ಟರ್ ಪೋಸ್ಟ್:ಇವತ್ತು ಯಾರು ಇನ್ ಯಾರು ಔಟ್?|Oneindia Kannada

ಆಯ್ತಲ್ಲ ಈ ವಿಚಾರ ಎಂದು ಮುಗಿಸದಂತೆ ಚೆನ್ನಬಸವಣ್ಣ ಸೂಕ್ಷ್ಮವೊಂದನ್ನು ಮುಂದಿಡುತ್ತಾರೆ. ಅಂಬಲಿಯನೆರೆದವರೆಲ್ಲ ಭಕ್ತರೆ? ಕಂಬಳಿಯ ಕೊಟ್ಟವರೆಲ್ಲ ಭಕ್ತರೆ? ಎಂದು ಕೇಳಿದ ವಚನದಲ್ಲಿಯೇ
ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿಧಪದವಲ್ಲದೆ
ತನುಮನಧನವ ನೆರೆಯಿತ್ತು, ತನ್ನ ಹರಿವರಿಯದನ್ನಕ್ಕ
ಕೂಡಲಚೆನ್ನಸಂಗಯ್ಯನಲ್ಲಿ ಅದೆಂತು ಸದ್ಭಕ್ತರೆಂಬೆ!
ಗಳಿಕೆ, ಅದರ ಮಾರ್ಗ, ಅರ್ಹ ರೀತಿಯ ಬಳಕೆ, ಈ ಎಲ್ಲಕ್ಕೂ ಭಕ್ತಿಯೇ ಮಾರ್ಗ. ಧರ್ಮ ಮೂಲಕವಾದ ಗಳಿಕೆ(ಅರ್ಥ) ಭಕ್ತಿಸಹಿತದ್ದಾದಾಗಲೇ ಅನ್ನ ದಾಸೋಹಕ್ಕೆ ಅರ್ಹ. ಇದನ್ನು ಆಯ್ದಕ್ಕಿ ಮಾರಯ್ಯ ಮತ್ತಾತನ ಮಡದಿ ಲಕ್ಕಮ್ಮರು ಪ್ರತಿನಿಧಿಸುತ್ತಾರೆ. ಅದರ ದಾರಿಗ ಶರಣ. ಶರಣತ್ವವೇ ಮುಕ್ತಿ ಎಂಬುದನ್ನು ಚೆನ್ನಬಸವಣ್ಣ ತನ್ನ 'ಪರಿಮಳದ ವಚನ'ಗಳ ಮೂಲಕ ಲೋಕದ ಮುಂದಿಟ್ಟಿದ್ದಾರೆ.

ಅನ್ನ ನೀಡುವವನು ಶರಣ(ರೈತನೂ ಶರಣನೇ. ಕುವೆಂಪು ಯೋಗಿಯೆಂದಿರುವುದು ಇಲ್ಲಿ ಸಾಂದರ್ಭಿಕ ಪ್ರಸ್ತಾಪನೆ). ಇವನಿಗೆ ಅದನ್ನು ನೀಡುವುದು ಬೆಳೆ. ಆ ಬೆಳೆಯನ್ನು ನೀಡುವವನಾರು? ಇದಕ್ಕೆ ದೇವರದಾಸಿಮಯ್ಯನವರು 'ಇಳೆ ನಿಮ್ಮ ದಾನ/ ಬೆಳೆ ನಿಮ್ಮ ದಾನ' ಎಂದು ಉತ್ತರಿಸಿರುವರು. ದಾನವಾಗಿ ಪಡೆದದ್ದರ ಸಂಪೂರ್ಣ ಹಕ್ಕು ಪಡೆದವನದಲ್ಲ. ಅದು ಇಂತಿಷ್ಟಾಗಿ ದಾನವಾಗಬೇಕು. ಇದು ಚೆನ್ನಬಸವಣ್ಣನವರ ಇಂಗಿತವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

English summary
Sa Raghunatha Column; Anna, Prasada and Devotion in Sharanara Vachana's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X