ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಮಹಾನಟಿ ಸಾವಿತ್ರಿಯವರ ವಿಷಾದಗಾಥೆಯ ಮುಂದುವರೆದ ಭಾಗ

|
Google Oneindia Kannada News

...ಇದೇ ಹಾಡು ಸಾವಿತ್ರಿಯವರ ಮರಣವನ್ನು, ಬದುಕನ್ನು, ಅವರ ಹಿನ್ನೆಲೆಯನ್ನು ಗಮನಿಸಿದಾಗ ನಮಗೆ ಹಿಂದಿಯ ಮೀನಾಕುಮಾರಿ, ಕನ್ನಡದ ಕಲ್ಪನಾ ಅವರಿಗೂ ಅನ್ವಯವಾಗುತ್ತೆ ಅನಿಸುತ್ತದೆ. ಸಾವಿತ್ರಿಯವರಿಗೆ ಈ ದೇವದಾಸು ಚಿತ್ರದ ಇನ್ನೊಂದು ಹಾಡು ಕೂಡಾ ಅನ್ವಯವಾಗುತ್ತದೆ.

"ಕಲಿಮಿ ಲೇಮುಲು ಕಷ್ಟ ಸುಖಾಲು
ಕಾವಡಿಲೊ ಕುಂಟಲನಿ ಭಯಮೇಲೋಯ್
ಕಾವಡಿ ಕುಯ್ಯೋನೆಯ್ ಕುಂಡಲು ಮನ್ನೇನೋಯ್
ಕನುಗುಂಟೆ ಸತ್ಯಮಿಂತೇನೋಯ್"
(ಸಿರಿಯು ಬಡತನ, ಕಷ್ಟ ಸುಖಗಳು
ಕಾವಡಿಲಿ ಮಡಿಕೆಗಳೆನುವ ಭಯವೇಕೋ
ಕಾವಡಿ ಕಟ್ಟಿಗೆಯೋ, ಮಡಕೆಗಳು ಮಣ್ಣೋ..
ಅರಿತರೆ ಸತ್ಯವಿಲ್ಲಟೀನೋ)

 ಸ. ರಘುನಾಥ ಅಂಕಣ: ಮೆಲುಕಿಗೆ ಬಂದ 'ಮಹಾನಟಿ’ ಸಾವಿತ್ರಿಯವರ ವಿಷಾದಗಾಥೆ ಸ. ರಘುನಾಥ ಅಂಕಣ: ಮೆಲುಕಿಗೆ ಬಂದ 'ಮಹಾನಟಿ’ ಸಾವಿತ್ರಿಯವರ ವಿಷಾದಗಾಥೆ

ಇದು ಸಾವಿತ್ರಿಯವರ ಬದುಕು ಅಷ್ಟೇ ಅಲ್ಲ. ಸಂಪಾದಿಸಿ-ಕಳೆದುಕೊಂಡತಹ ಅನೇಕ ಮಂದಿಯ ಜೀವನದ ಒಂದು ಸತ್ಯ, ತತ್ವ ಇಷ್ಟೇ ಅನಿಸುತ್ತದೆ. ಇಲ್ಲಿ ಕಲ್ಪನಾರವರು ಆಗಿರಬಹುದು, ಜಯಂತಿಯವರಾಗಿರಬಹುದು. ಜಯಂತಿಯವರು ಮೊದಲು ಬಹಳಷ್ಟು ಕಳೆದುಕೊಂಡರು, ಮೀನಾಕುಮಾರಿಯವರಂತೂ ತೀರಾ ಬರಿಗೈ ಆಗಿದ್ದರು.

Sa Raghunatha Column: A Continuing Part of Mahanati Savitris Regrettable Story

ಸಾವಿತ್ರಿಗೂ ಸಾವು ಇತ್ರಿ
ಸಿರಿತನಗಳು ಬಡತನಗಳು ಕಷ್ಟ ಸುಖಗಳು ಕಾವಡಿಯ ಮಡಿಕೆಗಳು. ಕಾವಡಿಯ ಮಡಿಕೆ ಜಾರಿ ಬಿದ್ದರೂ ಒಡೆದು ಹೋಗುತ್ತದೆ. ಕಾವಡಿಯ ಹೆಗಲ ಮೇಲಿರುವ ಕೋಲು ಮುರಿದರೂ ಒಡೆದು ಹೋಗುತ್ತದೆ. ಆ ಗಡಿಗೆಯೂ ಉಳಿಯುವುದಿಲ್ಲ, ನೀರೂ ಉಳಿಯುವುದಿಲ್ಲ ಈ ಹಾಡಿನಲ್ಲಿರುವ ತತ್ವ, ಜೀವನದಲ್ಲಿರುವ ಸತ್ಯದರ್ಶನ ಸಾವಿತ್ರಿಯವರಿಗೆ ದರ್ಶನವಾಗಿರುವ ಸಾಧ್ಯತೆ ಇದೆ.

ಇಂತಹ ದರ್ಶನ-ಸತ್ಯಗಳು ಸಾವನ್ನು ತಡೆಯುವುದಿಲ್ಲ. ಆದ್ದರಿಂದಲೇ 26ನೇ ಡಿಸೆಂಬರ್ 1981ರಂದು ಸಾವಿತ್ರಿಯವರು ಸಾವಿಗೆ ಶರಣಾದರು. ಅಂದು ಈ ಮಹಾನಟಿ ಇಹದ ಎಲ್ಲ ಋಣಗಳಿಂದ ಮುಕ್ತರಾದರು. ನಮ್ಮ ವೈಎನ್‌ಕೆ ಅವರ ಪದ್ಯದ ಶೈಲಿಯಲ್ಲಿ ಹೇಳುವದಾದರೆ ಅದು ಹೀಗಿರುತ್ತದೆ. 'ಸಾವಿತ್ರಿಗೂ ಸಾವು ಇತ್ರಿ'.

Sa Raghunatha Column: A Continuing Part of Mahanati Savitris Regrettable Story

ಸಾವು ಸಾವಿತ್ರಿಯವರನ್ನು ತಪ್ಪಾಗಿ ಆಯ್ದುಕೊಂಡು ಬಂದುದಲ್ಲ
ಆ ವಯಸ್ಸಿನಲ್ಲಿ ಸಾವು ಸಾವಿತ್ರಿಯವರನ್ನು ತಪ್ಪಾಗಿ ಆಯ್ದುಕೊಂಡು ಬಂದುದಲ್ಲ. ತಾವಾಗಿಯೇ ಕರೆದುಕೊಂಡುದು ಅಥವಾ ಕರೆದುಕೊಳ್ಳುವಂತೆ ಮಾಡಿದವರದು. ಅಪರಾಧಿಗಳು ಯಾರು ಎಂದು ನಿರ್ಣಯಿಸುವುದು ಹೊರಗಿನ ನಮಗೆ ಸಾಧ್ಯವಿಲ್ಲ. ಅದು ಅಲಮೇಲು ಅವರಿಗೆ, ಜೈಮಿನಿ ಗಣೇಶನ್ ಅವರಿಗೆ, ಸಾವಿತ್ರಿಯವರಿಗೆ, ಅವರ ಮಕ್ಕಳಿಗೆ ಮಾತ್ರ ಗೊತ್ತಿರುವಂತಹುದು. ಆಕೆಯನ್ನೊಳಗೊಂಡಂತೆ ಅವರವರಾರೂ ಹೇಳಿದ್ದಿಲ್ಲ. ಆದರೆ ಸಾವಿತ್ರಿ ಇಲ್ಲವಾದುದು ಮಾತ್ರ ಸತ್ಯ.

ಸಾವಿತ್ರಿ ಮಹಾನಟಿ ಎಂದು ಕೀರ್ತಿಶಾಲಿಯಾದರು. ಹಾಗೆಂದು ಗುರುತಿಸಿ ನುಡಿದವರಂತೂ ಅಂತಿಥವರಲ್ಲ. ಮಹಾನಟಿ ಎಂದು ಗೌರವದಿಂದ, ಅಭಿಮಾನದಿಂದ ಕರೆಯುವುದಕ್ಕೆ ಕಾರಣ ಅವರು ನಟಿಸಿದ ಚಿತ್ರಗಳ ಪಾತ್ರಗಳು ಹಾಗು ದೊರೆತ ಪಾತ್ರಗಳು. 'ಮೂಗಮನಸಲು, ದೇವದಾಸು, ಡಾ. ಚಕ್ರವರ್ತಿ ಮುಂತಾದ ಚಿತ್ರಗಳ ಪಾತ್ರಗಳು ಅವರನ್ನು 'ಮಹಾನಟಿ' ಎನಿಸಿಕೊಳ್ಳುವೆತ್ತರಕ್ಕೆ ಬೆಳೆಸಿದವು. ಸಂಘ-ಸಂಸ್ಥೆಗಳು ಘನವಾದ ವೇದಿಕೆಯಲ್ಲಿ ಸನ್ಮಾನಿಸಿ, ಮಹಾನಟಿ ಎಂದು ಬಿರುದು ಕೊಟ್ಟದ್ದಲ್ಲ ಅವರನ್ನು ಮೊಟ್ಟಮೊದಲು ಮಹಾನಟಿ ಎಂದು ಕರೆದವರು ತೆಲುಗು ಕಲಾಮಾತೆಯ ಎರಡು ಕಣ್ಣುಗಳು ಎಂದು ಭಾವಿಸಿದ್ದ ಎನ್.ಟಿ. ರಾಮ್‌ರಾವ್ ಮತ್ತು ಅಕ್ಕಿನೇನಿ ನಾಗೇಶ್ವರರಾವ್ ಅವರು.

Sa Raghunatha Column: A Continuing Part of Mahanati Savitris Regrettable Story

ಮಹಾನಟರ ಬಾಯಿಯಲ್ಲಿ ಇಂತಹ ಬಹುದೊಡ್ಡ ಗೌರವದ ಮಾತು
ಇಬ್ಬರೂ ನಮ್ಮ ಕನ್ನಡದಲ್ಲಿ ರಾಜಕುಮಾರ್, ವಿಷ್ಣುವರ್ಧನ್ ಇದ್ದ ಹಾಗೆ. ಆ ಮಹಾನಟರ ಬಾಯಿಯಲ್ಲಿ ಇಂತಹ ಬಹುದೊಡ್ಡ ಗೌರವದ ಮಾತು ಬಂದಿತ್ತೆಂದರೆ, ಸಾವಿತ್ರಿಯವರ ಅರ್ಹತೆ, ಯೋಗ್ಯತೆ, ಪ್ರತಿಭೆ ಎಂತಹದ್ದು ಎಂದು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿದೆ.

ಇದೇ ಸಂದರ್ಭದಲ್ಲಿ ನೆನಪಾಗುವ ವಿಷಯವೆಂದರೆ, ವಾಣಿಶ್ರೀಯವರಿಗೆ ಇದ್ದ ಕೊರಗು. ಇವರು ಎನ್.ಟಿ. ರಾಮರಾವ್ ಮತ್ತು ನಾಗೇಶ್ವರ್‍ರಾವ್‌ರೊಂದಿಗೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರೆಂದೂ ಆಕೆಗೆ ನೀನು ಚೆನ್ನಾಗಿ ಅಭಿನಯಿಸಿದೆ, ನೀನು ಒಳ್ಳೆ ನಟಿ ಎಂದವರಲ್ಲ. ವಾಣಿಶ್ರೀಯವರಿಗೇಕೆ ಇಂತಹ ಇಂತಹ ಮೆಚ್ಚುಗೆ ಸಿಗಲಿಲ್ಲವೊ?!

ಸಾವಿತ್ರಿಯವರು ಮಹಾನಟಿ ಎಂದು ಕರೆಸಿಕೊಳ್ಳಲು ಕಾರಣವಾದ ಅನೇಕ ಸಿನಿಮಾಗಳಲ್ಲಿ ಕೆಲವನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಅವರು 51ರಲ್ಲಿ ಚಿತ್ರರಂಗಕ್ಕೆ ಬಂದರೆಂದು ಹೇಳಿದೆ. ಮುಖ್ಯವಾಗಿ ಅವರು ತೆಲುಗು ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯ ಬೆಳಕು ಚೆಲ್ಲಲು ಪ್ರಾರಂಭಿಸಿದ್ದು 1952ರಲ್ಲಿ ಬಂದ 'ಪೆಳ್ಳಿ ಚೇಸಿ ಚೂಡು (ಮದುವೆಮಾಡಿ ನೋಡು) ಸಿನಿಮಾದ ಮೂಲಕ. ಆ ಸಿನಿಮಾದ ಪಾತ್ರದ ಹೆಸರು ಸಾವಿತ್ರಿಯೆಂದೇ.

ಸಾವಿತ್ರಿ ಪಾರ್ವತಿಯಾಗಿ ನಟನೆ
ಮೊದಲು ಬಂಗಾಳಿಯಲ್ಲಿ ನಿರ್ಮಾಣಗೊಂಡು, 1953ರಲ್ಲಿ ತೆಲುಗಿನಲ್ಲಿ ನಿರ್ಮಾಣಗೊಂಡುದು 'ದೇವದಾಸು'. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕ್ಲಾಸಿಕಲ್ ಎನಿಸಿಕೊಂಡ ಕಲಾಕೃತಿ ಅದು. ನಂತರದ ದಿನಗಳಲ್ಲಿ ಇತರ ಭಾಷೆಗಳಲ್ಲಿ ತೆರೆಕಂಡಿತಾದರೂ ತೆಲುಗು ಚಿತ್ರವನ್ನು ಸರಿಗಟ್ಟಲಿಲ್ಲ. ಮಹಾನಟರೆನಿಸಿಕೊಂಡವರೇ ತಾವೇಕೆ ದೇವದಾಸನ ಪಾತ್ರದಲ್ಲಿ ನಟಿಸಿದೆವೊ ಎಂದು ಸಂಕೋಚಪಟ್ಟದ್ದಕ್ಕೆ ಪುರಾವೆಗಳುಂಟು. ಈ ಸಿನಿಮಾದಲ್ಲಿ ನಾಗೇಶ್ವರರಾವ್ ದೇವದಾಸು ಆಗಿ ನಟಿಸಿದ್ದರೆ, ಸಾವಿತ್ರಿ ಪಾರ್ವತಿಯಾಗಿ ನಟಿಸಿದ್ದಾರೆ.

1970ರ ಸುಮಾರಿಗೆ ದೇವದಾಸು ಮತ್ತೊಮ್ಮೆ ತೆಲುಗಿನಲ್ಲಿ ನಿರ್ಮಾಣವಾಗಿ ತೆರೆ ಕಂಡಿತು. ತೆಲುಗು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಎಂದೇ ಖ್ಯಾತರಾಗಿದ್ದ ಕೃಷ್ಣ ನಾಯಕನಾಗಿದ್ದ ಈ ಚಿತ್ರ ಓಡಿದ್ದು 50 ದಿನಗಳು ಮಾತ್ರ. ಆಗಲೇ ಮರುಪ್ರದರ್ಶನಕ್ಕೆ ಬಂದ ಹಳೇ ದೇವದಾಸು 200 ದಿನಗಳು ಪ್ರದರ್ಶನ ಕಂಡಿತು. 1953ರ ದೇವದಾಸು ಪುನಃ ಈ ಮಟ್ಟಿಗೆ ಜನಪ್ರಿಯವಾಗಲು ಮುಖ್ಯ ಕಾರಣ ಅದರ ನಿರ್ದೇಶಕ ವೇದಾಂತಂ ರಾಘವಯ್ಯ ಅವರ ಪ್ರತಿಭೆ. ಸಾವಿತ್ರಿ-ನಾಗೇಶ್ವರರಾವ್‍ರ ಪಾತ್ರೋಚೊಚಿತ ಮನೋಜ್ಞ ಅಭಿನಯ, ರಾಗಸಂಯೋಜನೆ, ಘಟಸಾಲರ ಗಾಯನ, ಸಮುದ್ರಾಲ (ಸೀನಿಯರ್) ರಾಘವಾಚಾರ್ಯರ ಭಾವಾರ್ಥ ಗರ್ಭಿತ ಗೀತೆಗಳು.

ಸಾವಿತ್ರಿ- ಎನ್.ಟಿ. ರಾಮರಾವ್‌ರ ಅಭಿನಯ
1955ರಲ್ಲಿ 'ಅಧಾರ್ಂಗಿ' ಎನ್ನುವ ಸಿನಿಮಾ ಬಂದಿತು. ಅದರಲ್ಲಿ ಪದ್ಮಾ ಎನ್ನುವ ಪಾತ್ರ ಸಾವಿತ್ರಿಯವರದು. ಅದೇ ವರ್ಷ ಬಂದ 'ಕನ್ಯಾಶುಲ್ಕ'ದಲ್ಲಿ ಮಧುಮತಿ ಪಾತ್ರ ನಿರ್ವಹಿಸಿದರು. ಮತ್ತೊಂದು ಸಿನಿಮಾ 'ಮಿಸ್ಸಮ್ಮ'ದಲ್ಲಿ ಮೇರಿ ಪಾತ್ರ. 'ಆಡವಾರಿ ಮಾಟಲಕು ಅರ್ಥಾಲೇ ವೇರುಲೇ' (ಹೆಂಗಸರ ಮಾತುಗಳಿಗೆ ಅರ್ಥಗಳೇ ಬೇರೆ) ಹಾಡು ಇಂದಿಗೂ ತನ್ನ ಮಾಧುರ್ಯದಿಂದ, ಸಾವಿತ್ರಿ- ಎನ್.ಟಿ. ರಾಮರಾವ್‌ರ ಅಭಿನಯದಿಂದಾಗಿ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಈ ಹಾಡಿನಲ್ಲಿ ಸಾವಿತ್ರಿಯವರು ಊದಿಸಿಕೊಂಡ ಮುಖ, ಸಿಡುಕುಭಾವ, ದುಮುದುಮು ನಡಿಗೆಯ ವೈಖರಿ ನೋಡಿಯೇ ಅನುಭವಿಸುವಂಥದು. ವರ್ಷಗಳ ನಂತರ ತೆರೆಗೆ ಬಂದ ಪವನ್ ಕಲ್ಯಾಣರ ಇದೇ ಹಾಡನ್ನು ಬಳಸಿಕೊಂಡಿದೆ.

1957ರಲ್ಲಿ ತೆರೆಕಂಡ ಮಾಯಾಬಜಾರ್ ಚಿತ್ರದಲ್ಲಿ ಸಾವಿತ್ರಿ ಶಶಿರೇಖಾ ಪಾತ್ರ ವಹಿಸಿದ್ದರು. ಶಶಿರೇಖಾ ಪಾತ್ರದಲ್ಲಿ ಇವರ ನಟನೆಯ ಜೊತೆಗೆ ನಾಗೇಶ್ವರ್‍ರಾವ್ ಅವರು ಅಭಿಮನ್ಯು. ಶಶಿರೇಖೆಯ ಅರಮನೆಗೆ ಕಾವಲು ಇರುತ್ತದೆ. ಕಾವಲಿನ ಕಣ್ತಪ್ಪಿಸಿ ಕಿಟಕಿಯ ಮೂಲಕ ಇಳಿದು ಬರಬೇಕು. ಅಭಿಮನ್ಯು ಗೋಡೆಗೆ ಬಾಣಗಳನ್ನು ಬಿಟ್ಟು ಮೆಟ್ಟಿಲುಗಳನ್ನು ಮಾಡುತ್ತಾನೆ, ಶಶಿರೇಖೆ ಬಾಣದ ಮೆಟ್ಟಿಲುಗಳಿದು ಬರುತ್ತಾಳೆ. ಮುಂದಿನ ದೃಶ್ಯದಲ್ಲಿ ನದೀತೀರ. ಅಲ್ಲೊಂದು ದೋಣಿ. ಅದರಲ್ಲಿ 'ಲಾಹಿರಿ ಲಾಹಿರಿ ಲೋ' ಎಂಬ ಯುಗಳಗೀತೆಯೊಂದಿಗೆ ಇವರ ವಿಹಾರ. ಈ ಹಾಡಿಗೆ ರಸಿಕರು ಇಂದಿಗೂ ಮಣೆಹಾಕಿದ್ದಾರೆ.

'ಗುಂಡಮ್ಮ ಕಥಾ'ದಲ್ಲಿ ಲಕ್ಷ್ಮಿಯ ಪಾತ್ರ
1960ರಲ್ಲಿ 'ಚಿವರಕು ಮಿಗಿಲೇದಿ' ಚಿತ್ರ ತೆರೆಕಂಡಿತು. ಅದರಲ್ಲಿ ಪದ್ಮಾ ಎನ್ನುವ ಪಾತ್ರ ಈ ನಟಿಯದು. ನಟನೆಯೂ ಉತ್ತಮ ಮಟ್ಟದ್ದು. 1961ರಲ್ಲಿ 'ವೆಲಗು ನೀಡಲು' (ಬೆಳಕು ನೆರಳು) ಚಿತ್ರದಲ್ಲಿ ಸುಗುಣ ಎನ್ನುವ ಪಾತ್ರ. 1962ರಲ್ಲಿ ಬಂದ ಯಶಸ್ವೀ ಸಿನೆಮಾ 'ಗುಂಡಮ್ಮ ಕಥಾ'ದಲ್ಲಿ ಲಕ್ಷ್ಮಿಯ ಪಾತ್ರ. ಎನ್‌ಟಿಆರ್ ಜೋಡಿ. ಇಲ್ಲೊಂದು ಸಂಗತಿಯೆಂದರೆ, ನಾನು ನೋಡಿದ ಮೊಟ್ಟಮೊದಲ ಸಿನಿಮಾವದು. ಮಾಲೂರಿಗೆ ಬಂದಿದ್ದ ಟೂರಿಂಗ್ ಟಾಕೀಸಿನಲ್ಲಿ ನೋಡಿದೆ. ನಾನಾಗ ಮೂರನೆಯ ತರಗತಿ ಓದುತ್ತಿದ್ದೆ. ನನ್ನ ಅತ್ತೆಯರಾದ ಜಯಮ್ಮ, ಸೀತಮ್ಮ ಎಂಬುವವರೊಂದಿಗೆ ನೋಡಿದ್ದೆ.

1963ರಲ್ಲಿ ನರ್ತನಶಾಲಾದಲ್ಲಿ ದ್ರೌಪದಿಯಾಗಿ ಸಾವಿತ್ರಿ ಅಭಿನಯಿಸಿದರು. ಆಮೇಲೆ ಬಂದಿದ್ದು 'ಮೂಗಮನಸುಲು'. ಕಪ್ಪು-ಬಿಳುಪು ಚಿತ್ರ. ಹಗಲು ರಾತ್ರಿಗಳಲ್ಲಿ ಕಂಡುಬರುವ ಗೋದಾವರಿಯ ದಿವ್ಯ ಸೌಂದರ್ಯಾನುಭವವನ್ನು ಈ ಚಿತ್ರ ಮನಸ್ಸಿಗೆ ಕಟ್ಟಿಕೊಡುತ್ತದೆ. ಚಿತ್ರೀಕರಣ ಅಷ್ಟು ಅದ್ಬುತವಾಗಿದೆ. 1964ರಲ್ಲಿ ಬಂದ ಅತಿಮುಖ್ಯ ಚಿತ್ರ 'ಡಾಕ್ಟರ್ ಚಕ್ರವರ್ತಿ'. ಇದರಲ್ಲಿ ಸಾವಿತ್ರಿ ಮಾಧವಿಯಾಗಿ ನಟಿಸಿದ್ದಾರೆ. ನಾಗೇಶ್ವರರಾವ್, ಜಗ್ಗಯ್ಯ ನಾಯಕನಟರು. ಇದು ಈ ಮೂವರ ಅಭಿನಯದ ಮೈಲುಗಲ್ಲುಗಳಲ್ಲಿ ಒಂದು. 1965ರಲ್ಲಿ ಬಂದ 'ಸುಮಂಗಲಿ'ಯಲ್ಲಿ ಶಾರದಾ ಎನ್ನುವ ಪಾತ್ರ ಸಾವಿತ್ರಿಯವರದು. 1966ರಲ್ಲಿ ಬಂದ ಇನ್ನೊಂದು ಒಳ್ಳೆಯ ಚಿತ್ರ 'ನವರಾತ್ರಿ'. ಇದರಲ್ಲಿ ರಾಧಾ ಎನ್ನುವ ಪಾತ್ರ. ಈ ಚಿತ್ರಗಳು, ಹೆಸರಿಸಬೇಕಾದ ಇನ್ನಷ್ಟು ಚಿತ್ರಗಳು ಈ ಅಭಿನೇತ್ರಿ ನಟನೆಯ ಮೂಲಕವೇ ಏರಿದ ಎತ್ತರಗಳನ್ನು ಇಂದಿಗೂ ಉಳಿಸಿವೆ.

ಸಾವಿತ್ರಿ ನಟನೆಯ ಮೂಲಕ ಒಂದು ಹೆಜ್ಜೆ ಮುಂದೆ
ಈ ಮಾತುಗಳನ್ನು ಕೇಳುವಾಗ ಅಂದು ತೆಲುಗಿನಲ್ಲಿ ಸಾವಿತ್ರಿಯವರಿಗೆ ಸವಾಲಾಗಿ ಯಾವ ನಾಯಕಿ ನಟಿಯರಿರಲಿಲ್ಲವೆ ಅನ್ನಿಸುವುದುಂಟು. ಇದಕ್ಕೆ ಇದ್ದರು ಎಂಬ ಉತ್ತರವಿದೆ. ಸಾವಿತ್ರಿ ಸಿನಿಮಾ ರಂಗಕ್ಕೆ ಬಂದ ಕಾಲದಲ್ಲಿ ದೊಡ್ಡ ಪ್ರತಿಭೆಯ ಪಿ. ಭಾನುಮತಿ ಇದ್ದರು. ಇವರು ಸ್ವತಃ ಗಾಯಕಿ, ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ಕೂಡ. ಇನ್ನೊಬ್ಬ ಸುಂದರ ತಾರೆ ಅಂಜಲಿದೇವಿ. ಸಾವಿತ್ರಿಯವರ ಜೊತೆಗೆ ಪಾತ್ರಗಳನ್ನು ಮಾಡಿಕೊಂಡು ಬಂದು ದೊಡ್ಡನಟಿಯಾಗಿ ಬೆಳೆದ ಜಮುನಾ. ಕನ್ನಡಿಗರಿಗೆ ಚಿರಪರಿಚಿತರಾದ ಬಿ. ಸರೋಜಾದೇವಿ, ಕೆ.ಆರ್. ವಿಜಯಾ. ಇವರೆಲ್ಲ ಪ್ರತಿಷ್ಠಿತ ನಟಿಯರೆನಿಸಿದ್ದ ಕಾಲದಲ್ಲಿಯೇ ಸಾವಿತ್ರಿ ನಟನೆಯ ಮೂಲಕ ಒಂದು ಹೆಜ್ಜೆ ಮುಂದೆ ಇದ್ದರು. ಮಹಾನಟಿಯೆಂಬ ಮೇರು ಕೀರ್ತಿಗೆ ಅರ್ಹರೂ, ಪಾತ್ರರೂ ಆದರು.

ತಮಿಳು ಚಿತ್ರರಂಗದಲ್ಲಿಯೂ 'ಭಳಿರೇ' ಎನಿಸಿಕೊಂಡ ಸಾವಿತ್ರಿಯವರು 100 ಸಿನಿಮಾಗಳಲ್ಲಿ ನಟಿಸಿದರು. 1959ರಲ್ಲಿ ಬಂದ 'ಕಳತ್ತೂರು ಕಣ್ಣಮ್ಮ' 1961ರಲ್ಲಿ 'ಪಾಶಮಲರ್', 1963ರಲ್ಲಿ 'ಕರ್ಪಗಂ, ಕರ್ಣನ್' ಸಿನೆಮಾಗಳು ಬಂದವು. ಕರ್ಣನ್ ಚಿತ್ರ ತೆಲುಗಿನ 'ಶ್ರೀ ಕೃಷ್ಣ ಪಾಂಡವಿಯಂ' ಚಿತ್ರದ ರೀಮೇಕ್. 1964 ರಲ್ಲಿ 'ಕೈಕೊಡುತ್ತದೈವಂ', 1956ರಲ್ಲಿ ತಮಳರು ವಿಶೇಷವಾಗಿ ಮೆಚ್ಚಿದ 'ತಿರುವಿಳ ಯಾಡಲ್' ಚಿತ್ರ ಬಂದಿತು

'ಸಿಂಗಲ್ ಟೇಕ್ ಅಭಿನೇತ್ರಿ' ಎನಿಸಿಕೊಂಡ ಪ್ರತಿಭೆ
ಒಟ್ಟು ಚಿತ್ರರಂಗದಲ್ಲಿ ಸಾವಿತ್ರಿಯವರ 'ಸಿಗ್ನೇಚರ್' ಅನ್ನುವುದು ಅವರ ಮುಖ್ಯವೆನಿಸುವ ಚಿತ್ರಗಳಲ್ಲಿ ಕಾಣಿಸುತ್ತದೆ. ಅವರ ಕಣ್ಣು, ಮುಖಭಾವ, ಪಾತ್ರದ ಅಂತರ್ಭಾವವನ್ನು ಅರಿತು ಆ ಪಾತ್ರವೇ ತಾನಾಗಿಬಿಡುವ ಅಭಿನಯ, ಸಹಪಾತ್ರಗಳೊಂದಿಗೆ ಸಮನ್ವಯತೆಯ ಸಾಮೀಪ್ಯ, ಭಾಷೆಯ ಒಳಸೌಂದರ್ಯವರಿತು ನುಡಿಯುವ ಶೈಲಿ ಅವರ ಸಿಗ್ನೇಚರ್. ಜೊತೆಗೆ ಯಾವುದೇ ದೃಶ್ಯ, ಸಂಭಾಷಣೆ ಇದ್ದರೂ 'ಸಿಂಗಲ್ ಟೇಕ್ ಅಭಿನೇತ್ರಿ' ಎನಿಸಿಕೊಂಡ ಪ್ರತಿಭೆ. ಈ ಪ್ರತಿಭೆ ಅಭಿನಯಕ್ಕೆ ಮಾತ್ರ ಸೀತವಾದುದಲ್ಲ. ಗಾಯನ, ನಿರ್ದೇಶನದಲ್ಲಿಯೂ ಹರಡಿಕೊಂಡಿತ್ತು. 'ಮೂಗ ಮನಸುಲು' ಚಿತ್ರವನ್ನು 'ಪ್ರಾಪ್ತಂ' ಹೆಸರಿನಲ್ಲಿ ತಮಿಳಿನಲ್ಲಿ ನಿರ್ದೇಶಿಸಿ, ನಾಯಕಿಯಾಗಿಯೂ ನಟಿಸಿದರು. ಮೂಲಚಿತ್ರವನ್ನು ತಮಿಳಿನಲ್ಲಿ ಮರುನಿರ್ಮಾಣ ಮಾಡಲು ಹಕ್ಕುಗಳನ್ನು ಪಡೆಯುವ ಮೊದಲು ತಮ್ಮೊಡನೆ ಚರ್ಚಿಸಲಿಲ್ಲವೆಂದು ಜಮಿನೀ ಗಣೇಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದುರದೃಷ್ಟವೆಂದರೆ ಮೂಗಮನಸುಲು ಚಿತ್ರ ಕಂಡ ಯಶಸ್ಸನ್ನು ಈ ಚಿತ್ರ ತಮಿಳಿನಲ್ಲಿ ಪಡೆಯಲಿಲ್ಲ.

ಸಾವಿತ್ರಿಯವರಿಗೆ ಚಿತ್ರರಂಗದ ಬಾಹುಬಂಧನ ಚುಂಬನ ಗಟ್ಟಿಯಾದುದು. ಈ ಅದೃಷ್ಟ ಕೆಲವರದು ಮಾತ್ರ. ಚಿತ್ರರಂಗ ಚುಂಬಿಸಿದವರನ್ನೆಲ್ಲಾ ಅಪ್ಪಿಕೊಳ್ಳದು ಎಂಬುದು ಈ ಕ್ಷಾತ್ರ ತೋರಿದ ಸತ್ಯ. ಚಿತ್ರಸೀಮೆಯ ಕೀರ್ತಿಕನ್ಯೆ ಬಹು ಚಂಚಲೆ. ಸಾವಿತ್ರಿ ಈ ಚಂಚಲೆಯನ್ನು ಒಲಿಸಿ ಅಪ್ಪಿದ ನಟಿ. ಅದೃಷ್ಟವೂ ಈಕೆಯಿಂದ ದೂರ ಸರಿದಿರಲಿಲ್ಲ. ಸ್ವಯಂ ಪ್ರತಿಭೆಯೊಂದಿಗೆ ಗಾಢ ಶ್ರದ್ಧೆಯ ಅಭಿನಯ, ಅದಕ್ಕೆ ಯೋಗ್ಯವಾದ ಪರಿಶ್ರಮ ಅವರನ್ನು ಎತ್ತರಕ್ಕೆ ಬೆಳೆಸಿತು. ಮಹಾನಟಿಯನ್ನಾಗಿ ರೂಪಿಸಿತು. ಕೀರ್ತಿಯ ಉತ್ತುಂಗಕ್ಕೆ ಕರೆದೊಯ್ಯಿತು.

ಪಾಂಡವ ವನವಾಸಂ ಚಿತ್ರದ 'ಹಿಮಗಿರಿ ಸೊಗಸಲು' ಹಾಡು
ಸಾವಿತ್ರಿ ಅನೇಕ ನಟರ ಜೊತೆಲಿ ನಟಿಸಿದ್ದಾರೆ. ತಮಿಳಿನಲ್ಲಿ ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಮುಂತಾದವರೊಂದಿಗೆ ನಟಿಸಿದ್ದಾರೆ. ತೆಲುಗಿನಲ್ಲಿಯೂ ಅಷ್ಟೆ. ಆದರೆ ಅಭಿನಯದಲ್ಲಿ ಎನ್.ಟಿ. ರಾಮರಾವ್, ಎ. ನಾಗೇಶ್ವರರಾವ್‍ರೊಡನೆ ಇದ್ದ ಅನ್ಯೋನ್ಯತೆ ಬೇರೆ ನಟರೊಂದಿಗೆ ಅಭಿನಯಿಸುವಾಗ ಆ ಪ್ರಮಾಣದಲ್ಲಿ ಸಾಧ್ಯವಾಗಿರಲಿಲ್ಲ ಅನ್ನಿಸಿದೆ. ಎನ್.ಟಿ. ರಾಮರಾವ್- ಸಾವಿತ್ರಿ ಒಳ್ಳೆಯ ಜೋಡಿ. 'ಪಾಂಡವ ವನವಾಸಂ' ಚಿತ್ರದ 'ಹಿಮಗಿರಿ ಸೊಗಸಲು' ಹಾಡು ನೋಡಿದರೆ ಈ ಮಾತು ಅರ್ಥವಾಗುತ್ತದೆ. ನಾಗೇಶ್ವರರಾವ್- ಸಾವಿತ್ರಿ ಅವರದು ಅನುರೂಪ ಜೋಡಿ.

ಸಾವಿತ್ರಿಯವರ ಗೆಲುವಿನಲ್ಲಿ ಹಿನ್ನೆಲೆ ಗಾಯಕಿಯರ ಪಾಲು ಬಹುವಾಗಿದೆ, ಇವರಿಗೆ ಪಿ. ಲೀಲಾ, ಜಿಕ್ಕಿ, ಪಿ. ಸುಶೀಲಾ, ಜಮುನಾರಾಣಿ ಹಾಡಿದ್ದಾರೆ. ಈ ಎಲ್ಲವೂ ಕೂಡಿ ತಂದ ಕೀರ್ತಿ ಅವರ ಪಾಲಿನದು.

ತೆಲುಗು ಚಿತ್ರರಂಗ 'ಮಹಾನಟಿ' ಚಿತ್ರವನ್ನು ನಿರ್ಮಿಸಿತು
ಸಾವಿತ್ರಿಯವರ ಕೇಶ-ವಸ್ತ್ರ- ವಿನ್ಯಾಸ ಅಂದಿನ, ಇಂದಿನ 'ತೆಲುಗು ಅಮ್ಮಾಯಲು' (ತೆಲುಗು ಹುಡುಗಿಯರು) ಆಕರ್ಷಣೆಗೆ ಒಳಗಾದವರು. ಶಾಲಾ ಹೆಣ್ಣುಮಕ್ಕಳು ವಿವಿಧ ವೇಷಭೂಷಣ ಸ್ಪರ್ಧೆಗಳಲ್ಲಿ ಸಾವಿತ್ರಿಯವರಂತೆ ಅಲಂಕರಿಸಿಕೊಂಡು ಭಾಗವಹಿಸುವುದಿದೆ. ಈ ರೀತಿಯ ಪ್ರಭಾವ ಬೀರಿದ ಕನ್ನಡ ಚಲನಚಿತ್ರ ನಟಿ ಕಲ್ಪನಾ ಅವರು. 'ಬೆಳ್ಳಿಮೋಡ' ಚಿತ್ರ ತೆರೆಕಂಡ ಕಾಲದಲ್ಲಿ 'ಬೆಳ್ಳಿಮೋಡ ಸೀರೆ'ಗಳು ಕನ್ನಡ ಲಲನೆಯ ಮೈ ಮೇಲೆ ಮೆರೆದುದಿದ್ದವು.

ಸಾವಿತ್ರಿಯವರಂತಹ ಅಭಿನೇತ್ರಿಯ ಋಣವನ್ನು ತೆಲುಗು ಚಿತ್ರರಂಗ 'ಮಹಾನಟಿ' ಚಿತ್ರವನ್ನು ನಿರ್ಮಿಸಿ ತೀರಿಸಿಕೊಂಡಿತು. ವಿಶ್ವ ಚಿತ್ರರಂಗಕ್ಕೆ ತೆಲುಗಿನ ಮೂಲಕ ಭಾರತೀಯ ಚಲನಚಿತ್ರ ರಂಗ ಕೊಟ್ಟ ದೊಡ್ಡ ಕೊಡುಗೆ ಈ ಚಿತ್ರ. ಪ್ರತಿಭಾವಂತ ನಟಿಯೊಬ್ಬಳ ಬದುಕು ಮತ್ತು ನೆನಪುಗಳು ಚಿರಕಾಲ ಉಳಿಯುವಂತೆ ಮಾಡಿದ ಚಿತ್ರ ಇದು.

ಕನ್ನಡದಲ್ಲಿ ಇಂತಹ ಅರ್ಹತೆಯುಳ್ಳ ನಟಿಯರಲ್ಲಿ ಕಲ್ಪನಾ ಒಬ್ಬರು. ಆದರೆ ಕನ್ನಡ ಚಿತ್ರರಂಗಕ್ಕೆ ಇಂತಹ ಒಂದು ದೊಡ್ಡ ಮನಸ್ಸು ಈವರೆಗೆ ಬಂದಿಲ್ಲ. ಇದು ನಿಜಕ್ಕೂ ವಿಷಾದಕರ. ಸ್ಮಾರಕಗಳ ನಿರ್ಮಾಣದ ವಿಚಾರದಲ್ಲಿಯೂ ನಮ್ಮ ಅನೇಕ ಅಭಿನೇತ್ರಿಯರು ಅದೃಷ್ಟಹೀನರು.

English summary
Sa Raghunatha Column: Regrettable Story of Mahanati Savitri, she is one of the leading actress who has influenced Indian cinema.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X