ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ.ರಘುನಾಥ ಅಂಕಣ: ಊರಿಗೆ ಊರೇ ಹೆಜ್ಜೆ ಹಾಕಿತು

By ಸ ರಘುನಾಥ
|
Google Oneindia Kannada News

ಧ್ವನಿ ಮರೆತು ಅಟ್ಟದ ಮೇಲೆ, ಟ್ರಂಕಿನ ಒಳಗೆ, ಗರ್ಭಗುಡಿ ಪೀಠದ ಕೆಳಗೆ ಬಿದ್ದಿದ್ದ ತಾಳಗಳು ಧ್ವನಿಗುಟ್ಟಿದವು. ಚೆನ್ನದಾಸರಿ ವೆಂಕಟೇಶಪ್ಪನ ಮನೆ ಗೋಡೆಯಲ್ಲಿ ನೇತಾಡುತ್ತಿದ್ದ ತಂಬೂರಿ ಶ್ರುತಿಗೊಂಡಿತು. ಮನೆಗಳಲ್ಲಿ ಉಳಿದಿದ್ದ ಹೆಂಗಸರು ಗೋಪಾಲಸ್ವಾಮಿ ಗುಡಿ ಮುಂದಿನ ಭಜನೆಗೆ ಧ್ವನಿಗೂಡಿಸುತ್ತ ಮನೆಗೆಲಸಗಳಲ್ಲಿ ನಿರತರಾದರು. ದಿನಗಳೆದಂತೆ ಮೂಲೆಯಲ್ಲಿ ತೂಕಡಿಸುತ್ತಿದ್ದ ಮುದಿಯರು ಉಲ್ಲಾಸದಿಂದ ತಮ್ಮ ಕಾಲದ ಇಂಥ ದಿನಗಳನ್ನು ನೆನೆಯುತ್ತ ಭಜನೆಗೆ ಬರತೊಡಗಿದರು.

ಗರಡಿ ಮನೆಯನ್ನು ಕಡತೂರಿನ ಪೈಲ್ವಾನ್ ಸಿದ್ದಪ್ಪ ಉದ್ಘಾಟಿಸಿದ್ದಲ್ಲದೇ ತಾಲೀಮು ಕೊಡಲು ನಿಂತ. ಆ ದಿನಗಳಲ್ಲಿ ಅವನು ಒಂದೊಂದು ಮನೆಯ ಅಥಿತಿ. ಇಷ್ಟು ಕಾಲಕ್ಕೆ ತನ್ನ ವಿದ್ಯೆಗೊಂದು ಗೌರವ ಎಂಬ ಹೆಮ್ಮೆ ಅವನಿಗೆ.

ಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕುಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕು

ಕೋಲಾರದ ಪುರುಷೋತ್ತಮರಾಯ ಹಾಗೂ ಸುನಂದ ಕೂಡಿ ಸಂಗೀತ ತರಗತಿಯನ್ನು ಪ್ರಾರಂಭಿಸಿದರು. ಅವಳ ಹೆಗಲಿಗೆ ಆಗಲೇ ಪ್ರಾರಂಭಿಸಿದ 'ನಮ್ಮೂರ ಹೆಣ್ಣುಗಳ ಕಲಿಕೆಯ ಮಡಿಲು' ನಿರ್ವಹಿಸುವ ಹೊಣೆಯೂ ಏರಿತು. ವಿದ್ಯಾರ್ಥಿಗಳಿಗೆ ತೆರೆದ ಉಚಿತ ಖಾಸಗಿ ತರಗತಿಗಳ ನಿರ್ವಹಣೆಯನ್ನು ನರಸಿಂಗರಾಯನೊಂದಿಗೆ ಮದುವೆಯಾಗಿ ಊರಿಗೆ ಬಂದ ಪದವೀಧರೆ ಸುಹಾಸಿನಿ, ಆಲ್ಲಿಯ ಗಣಿತೋಪಾಧ್ಯಾಯ ಗಜೇಂದ್ರರಾಜು ಹಂಚಿಕೊಂಡರು.

Sa Raghunath Column: Stepped By Villagers

'ನಮ್ಮೂರ ಶಿಕ್ಷಣ ನಿಧಿ'ಯ ಲೆಕ್ಕ ನೀಡಿಕೆಯ ಹೊಣೆಗೆ ಬೀರಣ್ಣ ಮತ್ತು ಮುನೆಕ್ಕ ಟೊಂಕಕಟ್ಟಿದರಲ್ಲದೆ, ಅವರೇ ದುಗ್ಗಪ್ಪ, ರಂಗ, ಪಿಳ್ಳಣ್ಣ, ಕುಳ್ಳಪ್ಪ, ಮುನೆಂಕಟೇಗೌಡನನ್ನೊಳಗೊಂಡ ಹಿರಿಯರ ಸಮಿತಿಯನ್ನು ರಚಿಸಿಕೊಂಡರು. 'ನಮ್ಮೂರ ಕಲ್ಯಾಣ ಸಂಘ' ಕೆಂಪರಾಜನ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದಿತು.

ನರಸಿಂಗರಾಯನ ಸಲಹೆಯಂತೆ ಇದರಲ್ಲಿ ಒಬ್ಬ ವಿದ್ಯಾರ್ಥಿನಿ, ಒಬ್ಬ ವಿದ್ಯಾರ್ಥಿ ಸೇರಿದಂತೆ ಒಟ್ಟು ಹನ್ನೊಂದು ಮಂದಿ ಇದ್ದರು. ಈ ಸಂಘ ಎಲ್ಲದರೊಂದಿಗೆ ಸಂಪರ್ಕದಲ್ಲಿರಬೇಕೆಂದು ನರಸಿಂಗರಾಯ ಇತರೆ ನಿಯಮಗಳೊಂದಿಗೆ ನಿಯಮವಾಗಿ ಸೇರಿಸಿದ. ಸಮಾಧಾನ, ಸಹಕಾರದ ಕೊರತೆ ಕಂಡುಬಂದಕೂಡಲೆ ನಮ್ಮೂರ ಕಲ್ಯಣ ಸಂಘ ಹಿರಿಯರ ಸಮಿತಿಯೊಂದಿಗೆ ಚರ್ಚಿಸಿ ಸರಿಪಡಿಸಬೇಕೆಂದು, ಇದರಲ್ಲಿ ಯಾವುದೇ ತಡವಿರಬಾರದೆಂಬ ನಿಂಬಂಧನೆಯನ್ನೂ ಮಾಡಲಾಯಿತು.

ತಮಟೆ ನುಡಿಸುವುದನ್ನು ಕಲಿಸಲು ಮುನಿನಾರಾಯಣಿಗೆ ವಿಘ್ನವೊಂದು ಎದುರಾಯಿತು. 'ಕುಲಸ್ಥರು ದನದ ಚರ್ಮದ ತಮಟೆಯನ್ನು ಹಿಡಿದು ಬಾರಿಸುವುದೇ? ಮಾತು ಯಾರಿಂದ ಹೊರಟಿತೊ ತಿಳಿಯದಾದರೂ ಕಲಿಯ ಬಯಸಿದ್ದವರು ಹಿಂಜರಿದರು. ಇದು ಬಗೆ ಹರಿಯದೆ, ತಮಟೆ ಕಲಿಸುವುದು ನಿಂತರೆ, ಇದರ ಪರಿಣಾಮಗಳು ಉಳಿದೆಲ್ಲ ಕಾರ್ಯಗಳ ಮೇಲೆ ಆಗುವುದಿತ್ತು.

ಎಲ್ಲವೂ ಸುಲಭ ಸರಳವಾಗುತ್ತಿದ್ದಾಗ ಇದು ದೊಡ್ಡ ಸಮಸ್ಯೆಯೇ ಆಗಿ ನಿಂತಿತು. ನರಸಿಗರಾಯ ಚಿಂತೆಯಲ್ಲಿ ಬಿದ್ದ. ಅಪ್ಪಯ್ಯ ಎಚ್ಚರಿಕೆಯಿಂದ ಹೆಜ್ಜೆ ಹಾಕಲು ಸೂಚಿಸಿದ. ಮೌನದಲ್ಲಿದ್ದ ಸುನಂದ, ಭಜನೆ ಮನೆಯಲ್ಲಿ ಇದಕ್ಕೆ ಪರಿಹಾರವಿದೆ ಎಂದಳು ಹಾಗೂ ವಿವರಿಸಿದಳು.

ಸುನಂದಳ ಸಲಹೆಯಂತೆ ನರಸಿಂಗರಾಯ ಹೊದಲಿಯ ಕೋನಿಗ ಹನುಮಪ್ಪ ಹಾಡುತ್ತಿದ್ದ ಪದವೊಂದನ್ನು ನೆನಪಿಸಿಕೊಂಡು ಅಲ್ಲಲ್ಲಿ ಮಾರ್ಪಡಿಸಿ ಪದಕಟ್ಟಿದ. ಅದನ್ನು ಅವನು, ಸುನಂದ ಹಾಡುವುದೆಂದಾಗಿ ತಾಲೀಮು ನಡೆಸಿದರು. ಭಜನೆಗೆ ಎಲ್ಲರೂ ಬರಬೇಕೆಂದು ಸಾರಲಾಯಿತು.

ಗುರುಸಿದ್ಧದೇವಾ ನೀ ತೋರಿದ ಭಾವ

ಜಗದಲ್ಲಿ ಮರೆಯೋದು ಉಂಟಾ

ಚರ್ಮಕ್ಕೆ ಮೀರಿದ ಗುಣವಿಲ್ಲ ಇನ್ನೊಂದು

ಚರ್ಮವನುಟ್ಟ ಮಾದೇವಿ ವಲ್ಲಭ

ಅವನ ದಮರು ಚರ್ಮ

ಭಕ್ತ ಕಣ್ಣಪ್ಪ ತೊಟ್ಟಿದ್ದು ಚರ್ಮ

ಮದುವೆ ಡೋಲಿಗು ಚರ್ಮ

ಬೆಳಗೆದ್ದು ನಮಿಸೋದು

ಮುಟ್ಟಿ ಗೋಮಾತೆಯ ಚರ್ಮ

ನಮ್ಮ ಮೈ ಹೊದಿಕೆಯೆ ಚರ್ಮ

ಒಂದು ಚರ್ಮಕೆ ಗುಣ ಇನ್ನೊಂದಕವಗುಣ

ಎಲ್ಲಿಂದ ಬುರುತಾದೊ ಹೇಳಿದ ಗುರುವಿಲ್ಲ

ತಿಳಿಯ ಬೇಕಿಂಥ ಮಾತಿನ ಮರ್ಮ

ತಂಬೂರಿ ಪದದ ಧಾಟಿಯಲ್ಲಿ ಹಾಡಿದ್ದು, ಅನೇಕರ ಮನ ಮುಟ್ಟಿತು. ಐದಾರು ಮಂದಿ ತಮ್ಮ ಮಕ್ಕಳನ್ನು ತಮಟೆ ಕಲಿಯಲು ಕಳುಹಿಸಲು ಒಪ್ಪಿದರು. ಮೊದಲು ಇಷ್ಟಾಗಲಿ, ಮುಂದೆ ನೋಡೋಣ ಅಂದುಕೊಂಡರು. ಭಜನೆ ಮಂದಿರ ಸಮಸ್ಯೆಯೊಂದು ಪರಿಹಾರವಾದುದಕ್ಕೆ ಸಾಕ್ಷಿಯಾಯಿತು.

English summary
The Palastra house was inaugurated by Pailwan Siddappa of Kadatur and standing to give a workout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X