ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ನುಡಿಯಲ್ಲಿ ತೆರೆದಿಟ್ಟ ಹುಸಿ ಮರದ ಚಿತ್ರ

|
Google Oneindia Kannada News

ಹುಸಿಯಂಕುರಿಸಿತ್ತು ಹೊಲೆಯನಲ್ಲಿ,
ಹುಸಿ ಎರಡೆಲೆಯಾಯಿತ್ತು ಮಾದಿಗನಲ್ಲಿ,
ಹುಸಿ ನಾಲ್ಕೆಲೆಯಾಯಿತ್ತು ಸಮಗಾರನಲ್ಲಿ,
ಹುಸಿ ಆರೆಲೆಯಾಯಿತ್ತು ಅಗಸನಲ್ಲಿ,
ಹುಸಿ ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ,
ಹುಸಿ ಸಸಿಯಾಯಿತ್ತು ಹಾದರಿಗನಲ್ಲಿ,
ಹುಸಿ ಗಿಡವಾಯಿತ್ತು ಮದ್ಯಪಾನಿಯಲ್ಲಿ,
ಹುಸಿ ಮರವಾಯಿತ್ತು ಜೂಜುಗಾನಲ್ಲಿ,
ಹುಸಿ ಹೂವಾಯಿತ್ತು ಡೊಂಬನಲ್ಲಿ,
ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ,
ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ,
ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ,
ಇಂತೀ ಹುಸಿಯ ನುಡಿವವರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
ಪಾದೋದಕವಿಲ್ಲಾಗಿ ಮೋಕ್ಷವಿಲ್ಲ,
ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನ ಶರಣರು
ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು.

ಸಮಾಜ ಬದುಕಿನ ನೆಲದಲ್ಲಿ ನಿಜದ ಬೀಜದ ಬದಲಿಗೆ ಹುಸಿಯ ಬೀಜ ಬಿದ್ದಿದೆ. ಅದರ ಮೊಳಕೆ ಮತ್ತು ಬೆಳವಣಿಗೆ ಆದ ರೀತಿಯ ಚಿತ್ರ ಬಿಡಿಸಲು ಚೆನ್ನಬಸವಣ್ಣನವರು ತೆಗೆದುಕೊಂಡ ಪಟ(ಕ್ಯಾನ್ವಾಸ್) ಮರ. ಮರ ಅಳಿದರೂ ಮರವೆಂಬ ಭಾವಕ್ಕೆ ಅಳಿವಿರದು. ಹಾಗಾಗಿ ಈ ಆಯ್ಕೆಯೇ ನೈಸರ್ಗಿಕವಾದುದು. ಮರ ಯಾರೂ ನೋಡದ್ದಲ್ಲ. ನೋಡುತ್ತಿರುವ ವಸ್ತುವಿನ ಆಯ್ಕೆಯಲ್ಲಿಯೇ ಈ ವಚನಕಾರನ ಜನರನ್ನು ತಲುಪುವ ನೆಲದ ಪ್ರಜ್ಞೆಯದು. ಹೀಗಾಗಿಯೇ ಚೆನ್ನಬಸವಣ್ಣ ಎಲ್ಲ ಸಾಮಾಜಿಕರ ಹೃದಯಕ್ಕೆ ನೇರ ಪ್ರವೇಶಿಸುವ ದಾರ್ಶನಿಕರಾಗಿ ಕಂಡಿದ್ದು.

Sa. Raghunath Column: A pseudo-tree image In Chennabasavanna Vachana

ಈ ವಚನದ ಕಟ್ಟುವಿಕೆಯಲ್ಲಿ ಮೊಳಕೆಯಿಂದ ಹಣ್ಣಿನವರೆಗಿನ ಕ್ರಮಾನುಕರಣೆಯಿದೆ. ಯಾವ ಹಂತದಲ್ಲೂ ನೈಸರ್ಗಿಕವಲ್ಲದ ಒಂದಂಶವೂ ಇಲ್ಲ. ಬೀಜ ಮೊಳಕೆಯಿಡುವುದು ಎರಡೆರಡು ಎಲೆಗಳಿಂದಲೇ. 'ಹುಸಿ' ಅಂಕರಿಸುವುದು ಕೆಳಮಟ್ಟದಿಂದ, ಅದು ಬೆಳೆದು ವಿಸ್ತರಿಸುತ್ತ ಕಡೆಗೆ ವ್ಯಾಪಕವಾಗುವುದು ಮೇಲಿನ ಮಟ್ಟದಲ್ಲಿ. ಪರಿಣಾಮದಲ್ಲಿ ಇಡೀ ಸಮಾಜವೇ ಇರುತ್ತದೆ.

ವಚನದ ಸಾಲು ಸಾಲಿನಲ್ಲಿ ಸಮಾಜದ ಒಂದೊಂದು ಘಟಕವನ್ನು ಕಾಣುತ್ತೇವೆ. ಅಲ್ಲಿ ಹುಸಿಯ ಹಂತಗಳು ಯಾವುವೆಂಬ ವಿವರಗಳು ಒಂದೊಂದು ಸಾಲಿನಲ್ಲೂ ದೊರೆಯುತ್ತವೆ. ಇಲ್ಲಿ ಹೇಳಿರುವ ಜಾತಿವಾಚಕಗಳು ಆಯಾ ಜಾತಿಗಳಿಗಷ್ಟೇ ಅನ್ವಯವಲ್ಲ; ಸೀಮಿತವಲ್ಲ. ಅದನ್ನು ಹುಸಿಯ ಘಟಕಗಳು ಇಲ್ಲವೆ ಹಂತಗಳೆಂದು ಭಾವಿಸಬೇಕಿದೆ. ನಿಂದೆ ಯಾವ ಶರಣರ ಗುಣವಲ್ಲ. ಲೋಕರೂಢಿಯನ್ನು ಬಳಸುವುದು ಅಪರೂಪಲ್ಲ. ಚೆನ್ನಬಸವಣ್ಣನವರೂ ಇದನ್ನೇ ಮಾಡಿದ್ದಾರೆ. ಇಲ್ಲಿ 'ಹೊಲಸು ತಿಂಬುವವನೇ ಹೊಲೆಯ ...' ಎಂಬ ವಚನವನ್ನು ಪರಿಭಾವಿಸಬೇಕು.

ಜನ ಆದಂತೆ ಆಡಳಿತವೂ ಇರುತ್ತದೆ ಎಂಬುದಕ್ಕೆ ನಮ್ಮ ವರ್ತಮಾನ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ವಚನ ಈ ವರ್ತಮಾನಕ್ಕೆ ಅಂದು ಚೆನ್ನಬಸವಣ್ಣನವರು ತೋರಿದ ಕಾಣ್ಕೆ, ಭವಿಷ್ಯವಾಕ್ಕು, ಕಾಲಜ್ಞಾನವೂ ಆಗಬಹುದಾದುದು. 'ಯಥಾ ರಾಜಾ ತಥಾ ಪ್ರಜಾ' ಎಂಬ ನಾಣ್ಣುಡಿ ಇಲ್ಲಿ ಅವರೋಹಣ ಕ್ರಮದಲ್ಲಿದೆ. ಆನರಲ್ಲಿನ 'ಹುಸಿ'ಯಂತೆ ಅರಸ(ಆಡಳಿತ). ಆ ಎಲ್ಲ ಹುಸಿ 'ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ'. ಇದು ಪ್ರಮುಖವಾದ ಮಾತು. ಆ ತೊಟ್ಟು ಕಳಚಿದ ಹುಸಿಯ ಹಣ್ಣು ಬೀಳುವುದು ಸಮಾಜದ ಮೇಲೆಯೇ. ಅದು ಕೊಳೆತ ಹಣ್ಣೇ ಆಗಿರುತ್ತದೆ. ಹುಸಿಹಣ್ಣಿಗೆ ನಿಜಹಣ್ಣಿನ ಪರಿಮಳ, ಸವಿ ಇರದು. ಸುಳ್ಳು ಪರಿಮಳವೂ ಅಲ್ಲ, ಸವಿಯೂ ಅಲ್ಲ.

ಹುಸಿಯ ಬೀಜ ಎಲೆಗಳಿಡುವವರೆಗಿದು ಒಂದು ಹಂತ. ಇಲ್ಲಿ ಜನ- ಜಾತಿಯಿದೆ. ಸಸಿ, ಗಿಡ, ಮರವಾಗುವುದು ಇನ್ನೊಂದು ಹಂತ. ಇಲ್ಲಿ ಬಂದಿರುವುದು ವಿಷಯ ವ್ಯಸನಿಗಳು. ಹೂ-ಕಾಯಿ ಹಂತದಲ್ಲಿ ವೃತ್ತಿ-ಕಸುಬುದಾದರು ಇದ್ದಾರೆ. ಹಣ್ಣಿನ ಹಂತದಲ್ಲಿ 'ವ್ಯಭಿಚಾರ'. ಆ ಹಣ್ಣು ಮಾಗಿ ಕಳಚು ಕಳಚುವುದು 'ಅರಸ'ನಲ್ಲಿ. ಇಲ್ಲಿಯೇ ಇರುವುದು ಮಾರ್ಮಿಕತೆ. ಎಲ್ಲ ಸುಳ್ಳುಗಳು ಇಲ್ಲಿ ಒಂದಾಗವೆ. ಹೀಗೆ ಒಗ್ಗಟುಗೊಳ್ಳುವ ಸುಳ್ಳು ಎಲ್ಲರಿಗೂ, ಎಲ್ಲದಕ್ಕೂ ಅಹಿತ, ಅಪಾಯ.

ವಚನದ ಕಡೆಯ ಹಂತದಲ್ಲಿ ಚೆನ್ನಬಸವಣ್ಣನವರು ಹುಸಿಯಾಡುವವರು ಯಾವುದಕ್ಕೆ ಎರವಾಗುತ್ತಾರೆ ಎಂದು ತಿಳಿಸು(ಎಚ್ಚರಿ)ವುದು ಹೀಗೆ, 'ಇಂತೀ ಹುಸಿಯ ನುಡಿವವರಿಗೆ/ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,/ ಪಾದೋದಕವಿಲ್ಲಾಗಿ ಮೋಕ್ಷವಿಲ್ಲ'. ಇಂತಹವರು 'ಹುಸಿ'ಯರು ಎಂದು ತೋರ್ಬೆರಳಿಟ್ಟು ತೋರಿದ ಮೇಲೆ ಹುಸಿಯ ಬಿಟ್ಟವರಾರು, ಅವರು ಏನಾದರೆಂದು ಚೆನ್ನಬಸವಣ್ಣ ಶಂಕಾತೀತವಾಗಿ ಹೇಳುತ್ತಾರೆ. 'ನಮ್ಮ ಕೂಡಲಚೆನ್ನಸಂಗಯ್ಯನ ಶರಣರು / ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು' ಇಲ್ಲಿರುವ 'ಬಿಟ್ಟು, ಕಳೆದು' ಎಂಬೆರಡು ಕ್ರಿಯಾಪದಗಳ ಬಳಕೆ ವಿಶೇಷ ಗಮನಕ್ಕೆ ಅರ್ಹವಾದುದು. ಶರಣರು ಹುಸಿಯನ್ನು ಬಿಟ್ಟವರಷ್ಟೇ ಅಲ್ಲ, ಅದನ್ನು ಕಳೆದರು ಎಂಬುದು ಮುಖ್ಯವಾದುದು.

ಚೆನ್ನಬಸವಣ್ಣನವರ ಕುರಿತು ಬಸವ, ಅಲ್ಲಮ, ಅಕ್ಕರಾದಿಯಾಗಿ ಈಗಿನವರು ಏನೇನೆಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವರೋ ಅವುಗಳೊಂದಿಗೆ ಆತ ಶರಣರು, ಆಧಿಕ್ಯರಿಂದ ಮೊದಲುಗೊಂಡು ಜನಸಾಮಾನ್ಯರ ಜೀವನ 'ಶೀಲ'ದ ನಿತ್ಯದನುಸಂಧಾನಿಯೂ ಹೌದು.

Recommended Video

ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ CM ಅಭ್ಯರ್ಥಿ ನಾನಲ್ಲ ಎಂದಿದ್ದು ಯಾಕೆ | Oneindia Kannada

ಚೆನ್ನಬಸವಣ್ಣನವರ ವಚನಗಳಲ್ಲಿ ಗಮನಕ್ಕೆ ಬರುವ ಇನ್ನೊಂದು ಅಂಶವನ್ನು ಕಡೆಯ ಮಾತಾಗಿ ಹೇಳಬೇಕು. ಇತರೆ ವಚನಕಾರರಂತೆ ಅವರೂ ಕಿರಿರೂಪದ ವಚನಗಳನ್ನು ಬರೆದವರೇ. ಆದರೆ ಅವರ ದೀರ್ಘವಚನಗಳೂ ಸಾಕಷ್ಟಿವೆ. 'ಭವಿಷ್ಯಕ್ಕೆ ಹೇಸಿ ಭಕ್ತನಾಗಬೇಕೆಂಬಾತನು' ಎಂಬ ವಚನೆ ಬಹುದೀರ್ಘವಾದುದು. 'ತಾರಕಾಕೃತಿ, ದಂಡಾಕೃತಿ, ಕುಂಡಲಾಕೃತಿ, ... 'ಇದೂ ದೀರ್ಘವೇ. ಇವುಗೊಳಿಟ್ಟಗೆ ಮತ್ತೂ ಹಲವು ದೀರ್ಘ ವಚನಗಳಿವೆ. ಲಯ, ಗತಿ ಶೈಲಿಯಲ್ಲಿ ಕಥನಕವಿತಾ ಛಾಯೆ ಕಂಡುಬರುತ್ತದೆ.

English summary
Sa. Raghunath Column: A Life's pseudo-tree image In Chennabasavanna Vachana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X