• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾನಪದ ಕಲಾವಿದರ ಬದುಕಿಗೆ ಭಿಕ್ಷಾಟನೆಯೇ ಅಂತಿಮವೇ?

By ಸ ರಘುನಾಥ, ಕೋಲಾರ
|

'ಏನಿಮಿಷಾನಿಕಿ ಏಮಿ ಜರುಗುನೋ ಎವರೂಹಿಂಚೆದದೋ, ಭಲೆ ಮಂಚಿ ರೋಜು ಪಸಂದೈನ ರೋಜು...' ಹಾಡು ಕಿವಿಗೆ ಬಿದ್ದಾಗ ಯಾರಪ್ಪಾ ಈ ಕೊರೊನಾ ದರ್ಬಾರಿನ ದಿನಗಳಲ್ಲಿ ಹಾಡಲು ಬಂದಿರುವುದೆಂದು ಕುತೂಹಲದಿಂದ ಹೆಜ್ಜೆ ಹಾಕಿದಾಗ, ಶ್ರೀನಿವಾಸಪುರದ ರಾಮಕೃಷ್ಣ ರಸ್ತೆಯ ಟೀ ಅಂಗಡಿಯ ಮುಂದೆ ಇಬ್ಬರು ತಬಲ, ಹಾರ್ಮಣಿಯೊಂದಿಗೆ ಹಾಡುತ್ತಿದ್ದರು. ಧ್ವನಿ ಭಿಕ್ಷುಕರ ಧ್ವನಿಯಂತೆ ಒಡಕೊಡಕಾಗಿರಲಿಲ್ಲ. ನನ್ನ ಅನುಭವದಂತೆ ಅವರು ಬಿದಿಭಾಗವತರೋ, ತೊಗಲು ಗೊಂಬೆಯವರೋ, ದಬ್ಬ ಬೈಸ್ಕೋಪಿನವರ ಮನೆತನದವರೋ, ಜಾನಪದ ರೂಕಗಳನ್ನು ಹಾಡುತ್ತಿದ್ದವರೋ ಆಗಿರಬೇಕೆಂದು, ಅವರಿಗೆ ಟೀ ಕುಡಿಸಿ ಪರಿಚಯಮಾಡಿಕೊಂಡು ಮಾತಿಗೆಳೆದೆ. ಅವರು ಪಾವಗಡದಿಂದ ಹಾಡುತ್ತ ಊರಿಂದೂರಿಗೆ ಬಂದ ತೊಗಲುಗೊಂಬೆ ಕಲಾವಿದರಾಗಿದ್ದರು.

ಅವರ ಹಿರಿಯರು ಕೋಲಾರ ಜಿಲ್ಲೆಯಲ್ಲಿದ್ದು, ಆಟ ಸಿಗದೆ ಪಾವಗಡಕ್ಕೆ ಹೋಗಿ ನೆಲೆಸಿದ್ದರು. ಸಂಬಂಧಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮಲಾಟಪುರ, ಗುಡಿಬಂದೆ, ಆಂಧ್ರದ ಅನಂತಪುರಂನ ಲೇಪಾಕ್ಷಿ, ನಿಮ್ಮಲಕುಂಟದಲ್ಲಿದ್ದಾರೆ. ಗೌನಿಪಲ್ಲಿಯಲ್ಲಿ ಮಾರಪ್ಪನವರ ಮರಣದ ನಂತರ ಒಂದೂ ಕುಟುಂಬವಿಲ್ಲ.

ಸರ್ಕಾರಗಳ ಲಗಾಮನ್ನು ಕಚ್ಚಿಕೊಂಡಿದೆ ಕೊರೊನಾ ಎಂಬ ಈ ಹುಚ್ಚು ಕುದುರೆ

ಬೊಮ್ಮಲಾಟಪುರದ ಶಂಕರಪ್ಪ - ಆಂಜಮ್ಮ (ಎಲ್.ಬಸವರಾಜು ಪ್ರತಿಷ್ಠಾನ (2016) ಪ್ರಶಸ್ತಿ ಪಡೆದಾಕೆ), ಶ್ರೀನಿವಾಸ - ಸುಮಲತಾ ಮತ್ತು ನಾಕಾರು ಕುಟುಂಬಗಳು ಸಂಕ್ರಾಂತಿ ಮುಗಿದೊಡನೆ ತೊಗಲು ಗೊಂಬೆಗಳನ್ನು ಹೊತ್ತು ಶ್ರೀನಿವಾಸಪುರ ತಾಲೂಕಿನ ಹಳ್ಳಿಗಳಲ್ಲಿ ಪ್ರದರ್ಶನಕ್ಕಾಗಿ ತಿರುಗಾಡುವುದುಂಟು. ಅದೃಷ್ಟವಿದ್ದು ಆಟ ಕೊಟ್ಟಲ್ಲಿ ಪ್ರದರ್ಶನ, ಬೆಳಿಗ್ಗೆ ಮನೆಗಳ ಮುಂದೆ ದವಸಾಟನೆ. ಇವರ ಹಾಗು ಪಾವಗಡದಿಂದ ಬಂದಿದ್ದವರ ಕ್ರಿಯೆಯಲ್ಲಿ ಯಾವ ವ್ಯತ್ಯಾಸವೂ ಇರದು.

ಪಾವಗಡದಿಂದ ಬಂದ ಬೊಮ್ಮಲಾಟಲ ಜಗದೀಶ, ಮುತ್ಯಲುರು 'ಪೆದ್ದ ಬಾಲಶಿಕ್ಷ' ಓದಿಕೊಂಡವರು ಕುಲವೃತ್ತಿಯನ್ನು ಕೈ ಹಿಡಿದು ಕಲೆಯೊಂದಿಗೆ ಬಡತನವನ್ನು ಹೊದ್ದವರು. 'ಮೇಮು ಇಕ್ಕಡಿ ತಳಾದಾರ್ಲು' (ನಾವು ಇಲ್ಲಿನ ಸ್ಥಳೀಕರು)' ಅದಕ್ಕಾಗಿಯೇ ಬರುತ್ತೇವೆ ಎನ್ನುವ ಇವರು ಇಲ್ಲಿ ಅಲೆದಾಡಿದಷ್ಟು ದಿನ ಹಾಡುತ್ತ ಭಿಕ್ಷೆ ಬೇಡುತ್ತಾರೆ. ಮಳೆಗಾಲದ ಹೊತ್ತಿಗೆ ಊರು ಸೇರಿಕೊಳ್ಳುತ್ತಾರೆ. ಇವರಲ್ಲಿ ಅನೇಕರು ಇಂದಿಗೂ ಮನೆಮಾರು ಇಲ್ಲದವರು.

"ಜಾನಪದ ಸಿರಿ" ಸಿರಿಯಜ್ಜಿಯ ನೆನಪಿಗೆ ಸ್ಮಾರಕವಾದರೂ ಬೇಡವೇ?

ಇವರಂತೆ ಹಾಡಿ ತಿರುಪೆ ಪಡೆಯುವವರು ಮದನಪಲ್ಲೆ, ಕೃಷ್ಣಗಿರಿ, ಹೊಸೂರು, ಬೇರಿಕಿ ಕಡೆಗಳಿಂದಲೂ ಬರುತ್ತಾರೆ. ಇವರು ಹೆಚ್ಚಿಗೆ ಹಾಡುವುದು ಘಂಟಸಾಲ ಅವರ ಹಾಡುಗಳನ್ನು. ಇವರು, ಬಹುಮಂದಿ ಭಿಕ್ಷುಕರು ಘಂಟಸಾಲರನ್ನು 'ಪಾಟಲ ದೇವುಡು' ಎಂದು ಭಕ್ತಿ ಗೌರವದಿಂದ ಸ್ಮರಿಸುತ್ತಾರೆ. ಹೆಂಗಸರು ಜೊತೆಗಿದ್ದರೆ ಘಂಟಸಾಲ- ಪಿ.ಸುಶೀಲ ಅವರ ಹಾಡುಗಳನ್ನೇ ಹಾಡುವುದು. ಇಂಥವರೂ ಸುಲಭವಾಗಿ ಹಾಡುವಂತಹ ನೂರಾರು ಹಾಡುಗಳನ್ನು ಅವರು ಹಾಡಿರುವುದರಿಂದಲೇ ಅವರು ಇವರಿಗೆ ದಶಕಗಳಿಂದ 'ಪಾಟಲ ದೇವುಡು' ಆಗಿ ಜೀವಂತವಾಗಿದ್ದಾರೆ.

ಘಂಟಸಾಲ ಇಂತಹವರಿಗೆ, ತಿರುಪೆಯವರಿಗೆ ಹಾಡುಗಳನ್ನು ಕೊಟ್ಟು ಋಣ ತೀರಿಸಿಕೊಂಡರು. ಆದರೆ ನಾವು ಇವರನ್ನು ಭಿಕ್ಷೆಗೆ ಬಿಟ್ಟು, ಆಟ ಪ್ರದರ್ಶಿಸುವ ಅವಕಾಶಗಳನ್ನೂ ಕುಗ್ಗಿಸುತ್ತ ಭಿಕ್ಷಕ ಬದುಕಿಗೆ ದೂಡುತ್ತಿದ್ದೇವೆ. ಇಂತಹ ಕಲಾವಿದರ ಬದುಕಿಗೆ ಭಿಕ್ಷಾಟನೆಯೇ ಅಂತಿಮವೇ? ಎಂಬ ಪ್ರಶ್ನೆಯ ಉತ್ತರವನ್ನು ಮುಂದೂಡುತ್ತಲೇ ಇದ್ದೇವೆ. ಜಾನಪದದ ಹೆಸರಿನ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ವೈಭವಗಳನ್ನು ಇಂತಹ ಜಾನಪದ ಕಲಾವಿದರ ದೀನ ಬದುಕುಗಳು ಬೀದಿ ಬೀದಿಗಳಲ್ಲಿ ಅಣಕಿಸುತ್ತಿವೆ.

English summary
We are leading our so many talented artists to begging by rejecting them opportunities,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X