• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ.ರಘುನಾಥ ಅಂಕಣ: ಎತ್ತಪೋದಳೋ ಕಾಂತೆ ಸುಭಾಷಿಣಿ ಸುಹಾಸಿನಿಯು

By ಸ.ರಘುನಾಥ್
|
Google Oneindia Kannada News

ಸುನಂದ ನಾಟಕದಲ್ಲಿ ಪಾತ್ರವಹಿಸುವುದು ಬೇಡವೆಂದು ಡಾ.ಚಂದ್ರಕಲ ನಿಷ್ಟುರವಾಗಿ ಹೇಳಿದ್ದರಿಂದ ಅವಳು ಪ್ರೇಕ್ಷಕಳಾಗಿ ಕುಳಿತಿದ್ದಳು. ಮನೆಗೆ ಮರಳುವಾಗ, ಅನ್ನಮಯ್ಯನ ಕಥೆ ಮಾಡುವಾಗ ಮನಸ್ಸಿನಲ್ಲಿ ಅರಳಿದ್ದ ಅಲಮೇಲು ಮಂಗಳ ಬಗ್ಗೆ ಅನ್ನಮಯ್ಯ ರಚಿಸಿದ್ದ ಕೀರ್ತನೆಗಳಲ್ಲಿ ಕೆಲವನ್ನು ಕನ್ನಡಕ್ಕೆ ಅನುವಾದಿಸಿ ನೃತ್ಯ ರೂಪಕ ಬರೆಯುವಂತೆ ನರಸಿಂಗರಾಯನ್ನು ಒತ್ತಾಯಿಸಿ ಒಪ್ಪಿಸಿದಳು. ಅದಕ್ಕೆ ಬೇಕಿದ್ದ ಕೀರ್ತನೆಗಳನ್ನು ಆಯ್ದುಕೊಟ್ಟಳು.

ಮೊದಲಿಗೆ ಅವನ್ನು ಅನುವಾದಿಸಿ, ನಂತರ ರೂಪಕಕ್ಕೆ ಅಳವಡಿಸುವುದೆಂದು ಚರ್ಚಿಸಿ ತೀಮಾನಿಸಿದರು. ರೂಪಕಕ್ಕೆ 'ಅಲಮೇಲುಮಂಗಳ ಶೃಂಗಾರ ವೈಭವ'ವೆಂದು ಹೆಸರಿಟ್ಟರು. ಸುನಂದಳ ದೇಹಸ್ಥಿತಿಯನ್ನು ಗಮನಿಸಿ ಒಂದು ಗಂಟೆ ಅವಧಿಗೆ ರೂಪಕವನ್ನು ರೂಪಿಸಲು ನರಸಿಂಗರಾಯ ನಿಶ್ಚಯಿಸಿದ. ಅವಳು ಸೂಚಿಸಿದ ಹದಿನೈದು ಪದಗಳಲ್ಲಿ ಐದನ್ನು ಆಯ್ದುಕೊಂಡು ಅನುವಾದಿಸಿದ. ಗಣಪತಿ ಸ್ತುತಿಗೆ ತಾನೇ ಒಂದು ಪದ್ಯ ಕಟ್ಟಿ, ಸರಸ್ವತಿ ಪ್ರಾರ್ಥನೆಗೆ ಪುರಂದರದಾಸರ 'ಪಾಲಿಸಮ್ಮ ಮುದ್ದು ಶಾರದೆ' ಕೀರ್ತನೆಯನ್ನು ತೆಗೆದುಕೊಂಡ.

ಸ ರಘುನಾಥ ಅಂಕಣ; ಅವನಿಗೆ ಪಾರ್ಟೂ ಕೊಡು, ಸುನಂದಾಳನ್ನೂ ಕೊಟ್ಟುಬಿಡು...ಸ ರಘುನಾಥ ಅಂಕಣ; ಅವನಿಗೆ ಪಾರ್ಟೂ ಕೊಡು, ಸುನಂದಾಳನ್ನೂ ಕೊಟ್ಟುಬಿಡು...

ನಾಲ್ಕು ಗೀತೆಗಳ ಆಯ್ಕೆ ಮಾಡಿಕೊಂಡ

'ಸುಮಗಳು ಸುರಿಯಲು ಆಡಿದಳೊ

ಮುಂಗುರುಳು ಕುಲುಕಿಸಿ ಅಲಮೇಲುಮಂಗ' ಮೊದಲ ಗೀತೆ.

'ಕುಲುಕದೆ ನಡೆಯಿರೆ ಲಲನೆಯರೆ

ಜಲಜಲನುದಿರ್ಯಾವು ಜಾಜಿಗಳು ನಮ್ಮಮ್ಮನಿಗೆ' ಎರಡನೆಯದು. ಮೂರನೆಯದಾಗಿ,

'ತರುಣಿ ನಿನ್ನಯ ಮುನಿಸು ಎಂತಹುದು ಲಲನೆ ಈ ವೇಳೆ

ಕರುಣಿಸಳಲ್ಲೊ ವೇಂಕಟನಾಥಾ' ಎಂಬ ಗೀತೆಯಾದರೆ,

ಯಾವ ಪರಿ ಮೋಹವೋ ಎಂಥ ತವಕವೊ ಏನೊ,

ತಟಕನೆ ತನುವೆಲ್ಲ ಮರೆದುದು ಗೆಳತಿ' ನಾಲ್ಕನೆಯದಾಗಿಯೂ, ಮಂಗಳ ಗೀತೆಯಾಗಿ 'ಕ್ಷೀರಾಬ್ದಿ ಕನ್ನಿಕೆಗೆ ಶ್ರೀಮಹಾಲಕ್ಷ್ಮಿಗೆ

ನೀರಜಾಲಯೆಗೆ ನೀಲಾಂಜನ' ಎಂಬ ಕೀರ್ತನೆಯನ್ನು ಆಯ್ಕೆ ಮಾಡಿಕೊಂಡ.

ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಿದ ಆಳೆತ್ತರದ ವೇದಿಕೆ

ಸುನಂದಳಿಗೆ ಆಪ್ತರಾಗಿದ್ದ ಅನಂತಪುರಂ ಜೋಸುಲ ಸದಾನಂದ ಶಾಸ್ತ್ರಿಗಳು ಅಭ್ಯಾಸದ ಸಮಯದಲ್ಲಿ ಹಾಜರಿದ್ದು, ಓರೆಕೋರೆಗಳನ್ನು ತಿದ್ದಿದರು. ನೃತ್ಯ ಕಾರ್ಯಕ್ರಮ ಗನಿಬಂಡೆಯ ವೆಂಕಟರಮಣಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಿದ ಆಳೆತ್ತರದ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮ ಹೆಸರಿಗೆ ತಕ್ಕಂತಿತ್ತು ಅಮ್ಮಾಯಿ. ವೆಂಕಟರಮಣನು ಅಲಮೇಲುಮಂಗಳ ಸಮೇತ ಬಂದು ನೋಡಿ ಆನಂದಿಸಿರುತ್ತಾನೆ ಎಂದು ಪ್ರಶಂಸಿದರು. ಹರ್ಷಿತರಾದ ಅರ್ಚಕರು ಶಾಸ್ತ್ರಿಗಳ ಕೈಯಿಂದ ದಂಪಿತಿಗೆ ಸನ್ಮಾನ ಮಾಡಿಸಿದರು.

ಎತ್ತರದಿಂದ ಜಿಗಿದು ಸುನಂದಳನ್ನು ಎತ್ತಿದ

ಸುನಂದ ವೇದಿಕೆಯಿಂದ ಇಳಿಯಲು ಮೊದಲನೆಯ ಮೆಟ್ಟಿಲಿನಿಂದ ಎರಡನೆಯ ಮೆಟ್ಟಿಲಿಗೆ ಕಾಲೂರಬೇಕು, ಅಳು ಇಳಿಯಲು ಜಾಗಕೊಡುವ ಅವಸರದಲ್ಲಿ ಮುಂದಿನ ಮೆಟ್ಟಿಲಿಗಳ ಮೇಲಿದ್ದವರು ದಡದಡ ಇಳಿಯುವಾಗ ಒತ್ತಡ ಹೆಚ್ಚಿ ಆ ಹಳೆಯ ತಗಡಿನ ಎಣಿ ಬಾಗಿತು. ಯಾವ ಆಸರೆಯೂ ಇರದ ಸುನಂದಳಿಗೆ ಆಯ ತಪ್ಪಿತು. ಅದನ್ನು ಗಮನಿಸಿದ ಅರ್ಚಕ ಅವಳನ್ನು ಹಿಡಿದುಕೊಳ್ಳುವ ಪ್ರಯತ್ನದಲ್ಲಿ ಜೋಲಿ ಹೊಡೆದ. ಸುನಂದ ಕೆಳಗುರುಳಿದಳು. ಅರ್ಚಕ ಅವಳ ಮೇಲೆ ಉರುಳಿದ. ನರಸಿಂಗರಾಯ ಅಷ್ಟು ಎತ್ತರದಿಂದ ಜಿಗಿದು ಸುನಂದಳನ್ನು ಎತ್ತಿದ. ಅವಳಿಗೆ ರಕ್ತಸ್ರಾವದೊಂದಿಗೆ ಪ್ರಜ್ಞೆ ತಪ್ಪಿತು. ಆಸ್ಪತ್ರೆಗೆ ಸಾಗಿಸುತ್ತಿದಾಗ ದಾರಿಯಲ್ಲಿ ಕೊನೆಯುಸಿರೆಳೆದಳು.

ಎಲ್ಲ ಬಲ್ಲವನು ನರಸಿಂಗರಾಯ

ನರಸಿಂಗರಾಯನಿಗೆ ಮಂಕು ಹಿಡಿಯಿತು. ಏನು ಮಾಡಲೂ ತೋಚುತ್ತಿರಲಿಲ್ಲ. ಅಳಬೇಕೆನಿಸುತ್ತಿತ್ತು. ಆದರೆ ಅಳು ಬರುತ್ತಿರಲಿಲ್ಲ. ಸಂಕಟದಿಂದ ಒದ್ದಾಡುತ್ತಿದ್ದ. ಏನಾಗಿ ಹೋಯಿತು, ಯಾಕಾಯಿತು? ಬದುಕು ಹೀಗಾದರೆ ಜೀವಿಸಲು ಯಾವ ಭರವಸೆ? ಇನ್ನೊಬ್ಬರ ನೋವಿಗೆ ಸಾಂತ್ವನ ಹೇಳುವಷ್ಟು ಸುಲಭವಲ್ಲ ತನ್ನನ್ನು ತಾನು ಸಾಂತ್ವನಗೊಳಿಸಿಕೊಳ್ಳುವುದು ಅನ್ನಿಸಿತು. ಎಲ್ಲ ಬಲ್ಲವನು ನರಸಿಂಗರಾಯ. ಅವನಿಗೆ ಏನು ಹೇಳಲು ಸಾಧ್ಯವೆಂದು ಹತ್ತಿರದವರು ಅಂದುಕೊಂಡು, ಅವನ ಬಳಿಯಿದ್ದರೂ ಮೌನವಾಗಿದ್ದರು.

ತಲ್ಲಣಿಸದಿರು ಕಂಡ್ಯ ತಾಳು ಮನವೆ

ಅವನಿಗೆ 'ಲೋಕವೆಂಬ ಬೆಂಗಾಡಿನಲಿ ಏಕಾಂಗಿಯು ನಾನು, ಎಲ್ಲರಿಗೂ ನಾನು ನನಗಾರು ಇಲ್ಲ' ಎಂಬ ಕವಿ ಮಾತು ನೆನಪಾಯಿತು. ಮನಸ್ಸು ನಿಜವೇ ಎಂದು ಕೇಳಿತು. ಈ ಎಲ್ಲರ ಮೌನ ನನಗಾಗಿ ಮಿಡಿಯುತ್ತಿರುವುದು ಅರ್ಥವಿಲ್ಲದ್ದೆ ಅನ್ನಿಸಿತು. ಸುನಂದ ತನ್ನ ಬದುಕಿನಲ್ಲಿ ಏನೆಲ್ಲ ಅನುಭವಿಸಿದಳು. ಅದನ್ನು ಕೊರಗಾಗಿಸಿಕೊಂಡು ಕೂರದೆ ಭವಿಷ್ಯದ ಭರವಸೆಯ ದಾರಿ ಹುಡುಕಿದಳು.

ಈಗ ನನ್ನ ಗತಿಯೂ ಅದೇ ಆಗಬೇಕು. ಆಗಷ್ಟೇ ಅವಳಿಗೆ ಗೌರವ ಸಲ್ಲಿಸಿದಂತೆ ಅಂದುಕೊಂಡ. ಅವಳಿಗೆ ಪ್ರಿಯವಾಗಿದ್ದ ದಾಸರಪದ 'ತಲ್ಲಣಿಸದಿರು ಕಂಡ್ಯ ತಾಳು ಮನವೆ' ನೆನಪಾಯಿತು. ಇಡೀ ಪದವನು ಹಾಡಿದ. ಪಕ್ಕ ಕುಳಿತಿದ್ದವರು ಆಶ್ಚರ್ಯದಿಂದ ಅವನನ್ನು ಮಿಕಿಮಿಕಿ ನೋಡಿದರು. ಅವನು ಅವರ ಮುಖ ನೋಡಿ ಮುಗುಳು ನಕ್ಕ. ಅವರೆಲ್ಲ ನಿಟ್ಟುಸಿರು ಬಿಟ್ಟರು.

English summary
Narasingaraya's wife Sunanda died during a dance performance at the Venkataramanaswamy temple in Ganibande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X