• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ. ರಘುನಾಥ ಅಂಕಣ: ಗುರಿಯತ್ತ ನಿಲ್ಲಿಸಿದ ನರಸಿಂಗರಾಯ

By ಸ. ರಘುನಾಥ
|
Google Oneindia Kannada News

ನಾನು ಎಲ್‌ಎಲ್‌ಬಿ ಮುಗಿಸಿದೆ. ಮತ್ತೆ ಕೆಲವರು ಪದವಿ ಪಡೆದಿದ್ದರು. ಒಂದಿಬ್ಬರು ಶಿಕ್ಷಕ ತರಬೇತಿ ಪಡೆದಿದ್ದರು. ನನ್ನ ಅಪ್ಪ ಯಾರಾದರೂ ಒಳ್ಳೆಯ ಲಾಯರನ್ನು ನೋಡಿ ಜೂನಿಯರ್ ಆಗಿ ಸೇರು ಎಂದ. ನಾನೂ ಒಪ್ಪಿದೆ. ಹೀಗಿರುವಾಗ ಒಂದು ದಿನ ನರಸಿಂಗ ಬೀರಪ್ಪನ ಹೊಂಗೆ ತೋಪಿನಲ್ಲಿ ನಮ್ಮನ್ನೆಲ್ಲ ಸೇರಿಸಿದ.

ಚಿಂತಾಮಣಿ ಕಳ್ಳೇಬೀಜ
ಒಂದು ಕೆಜಿ ಚಿಂತಾಮಣಿ ಕಳ್ಳೇಬೀಜ, ಒಂದರ್ಧ ಕೆಜಿಯಷ್ಟು ಬಳ್ಳಾರಿ ಈರುಳ್ಳಿ ತಂದಿದ್ದ. ಪಿಲ್ಲಣ್ಣ ಒಂದು ಕೊಡ ಕುಡಿಯುವ ನೀರನ್ನು ಹೆಗಲಲ್ಲಿ ಹೊತ್ತು ತಂದಿದ್ದ. ಬೋಡೆಪ್ಪ ತಲೆಗೆ ಸುತ್ತಿದ್ದ ಟವೆಲ್ಲನ್ನು ಹಾಸಿ, ಅದರ ಮೇಲೆ ಕಳ್ಳೇಬೀಜ ಸುರಿದ. ಅವನೊಂದಿಗೆ ನರಸಿಂಗ ಈರುಳ್ಳಿ ಗೆಡ್ಡಗಳನ್ನು ಕೈಯಿಂದ ಜಜ್ಜಿ ಜಜ್ಜಿ ಇಟ್ಟ. ಎಲ್ಲರೂ ಸುತ್ತ ಕುಳಿತು ತಿನ್ನತೊಡಗಿದಾಗ, ನರಸಿಂಗ ಮಾತು ಪ್ರಾರಂಭಿಸಿದ.

ದೊಡ್ಡ ನಿರೀಕ್ಷೆಯನ್ನು ನನ್ನ ಮನಸ್ಸಿಗೆ ತುಂಬಿದ
"ಮಹೇಶ ಎಲ್‌ಎಲ್‌ಬಿ ಮಾಡಿದೆ ಸಂತೋಷ. ಈಗಲೇ ಲಾಯರಾಗಬೇಡ. ಎಲ್‍ಎಲ್‍ಎಂ ಮಾಡು. ನೀನು ಸುಪ್ರೀಂ ಕೋರ್ಟ್‌ ಜಡ್ಜ್ ಆಗಬೇಕು,'' ಎಂದು ದೊಡ್ಡ ನಿರೀಕ್ಷೆಯನ್ನು ನನ್ನ ಮನಸ್ಸಿಗೆ ತುಂಬಿದ. ನಮ್ಮ ಊರಿನವರು ಇಂಥ ಡಿಪಾರ್ಟುಮೆಂಟಿನಲ್ಲಿ ಇಲ್ಲವಲ್ಲ ಅನ್ನಿಸಬಾರದು. ನಿಮ್ಮಲ್ಲಿ ಬುದ್ಧಿ, ಸಾಮರ್ಥ್ಯವಿದೆ. ಅವನ್ನು ಮುಂದಿಟ್ಟು ನಡೆಯಿರಿ. ಬಡತನ, ಅನಾನುಕೂಲ ಇರುವುದೇ. ಜೊತೆಗೆ ನಾವಿರುತ್ತೇವೆ. ಮುನ್ನಡೆಯೋಣ. ಸಾಧನೆ ನಿಮ್ಮದು, ಹೆಮ್ಮೆ ಊರಿನದಾಗಲಿ ಎಂದು ನುಡಿದ.

ಉದ್ಯೋಗ ಅಂತ ಹೋದರೆ ಊರಿನಲ್ಲಿ ಇರೋರು ಯಾರು?
ಯಾರಿಗೆ ಹೇಗೊ, ನನಗೆ ಇದು ಭಾವುಕನ ಭಾಷಣ, ಸಾಧ್ಯವಾಗದ್ದು ಅನ್ನಿಸಲಿಲ್ಲ. ಬೋಡೆಪ್ಪ, ಎಲ್ಲರಿಗೂ ಕುಡಿಯಲು ನೀರು ಕೊಡುತ್ತ ಹೇಳಿದ, ನರಸಿಂಗನದು ಬರೀ ಮಾತಲ್ಲ, ನೀವೂ ಓದಬಹುದಿತ್ತಲ್ಲ ಎಂದು ಕೇಳೀರಿ. ಓದಿ ಉದ್ಯೋಗ ಅಂತ ಹೋದರೆ ಊರಿನಲ್ಲಿ ಇರೋರು ಯಾರು? ಹೆಬ್ಬೆಟ್ಟು ಒತ್ತದಷ್ಟು ಓದಿದ್ದೇ ಸಾಕು ನಮಗೆ. ನಿಮ್ಮ ಪರವಾಗಿ ನಾವು ಊರಿನಲ್ಲಿರುತ್ತೇವೆ. ನಮ್ಮ ಪರವಾಗಿ ನೀವು ಮುಂದುವರೆಯಿರಿ ಎಂದ. ಅವರ ಮಾತಿನ ಪ್ರಭಾವಕ್ಕೆ ಅಲ್ಲಿದ್ದವರೆಲ್ಲ ಒಳಗಾದರೆಂದಲ್ಲ. ನಾವೊಂದಿಷ್ಟು ಮಂದಿ ಒಳಗಾದುದುದಂತೂ ದಿಟ.

ನನ್ನಿಂದ ಖರ್ಚು ಮಾಡಲಾಗದು
ನಾನು ಎಲ್‍ಎಲ್‍ಎಂ ಮಾಡುವುದಾಗಿ ಹೇಳಿದಾಗ ಅಪ್ಪ, ನಿನ್ನೆ ಆಡಿದ ಮಾತು ಏನಾಯ್ತು? ಹೇಳಿಕೊಟ್ಟವರಾರು? ಆ ಪಡಪೋಸಿ ನರಸಿಂಗನೆ ಎಂದ. ಗೊತ್ತಿರುವುದನ್ನು ಕೇಳುವುದೇಕೆ ಎಂದೆ. ನನ್ನಿಂದ ಖರ್ಚು ಮಾಡಲಾಗದು ಎಂದ. ಬೇಡವೆಂದೆ. ನಿನಗೆ ನರಗಳು ಬಲಿತುಕೊಂಡಿವೆ. ಅದಕ್ಕೇ ಹೀಗಾಡುತಿದ್ದಿ ಎಂದು ಕೆಂಗಣ್ಣು ಬಿಟ್ಟ. ನಾನು, ನನ್ನ ನಿರ್ಣಯ ಅಚಲ ಎನ್ನುವಂತೆ ನಿಂತಲ್ಲೆ ನಿಂತಿದ್ದೆ. ನನ್ನ ಮೇಲಿನ ಸಿಟ್ಟನ್ನು ಅಮ್ಮನ ಮೇಲೆ ಬಿಟ್ಟ. ಅವನ ಅಧೀನ ಹೆಣ್ಣು ಕಣ್ಣೀರನ್ನು ಸೆರಗಿನಲ್ಲಿ ಒರೆಸಿಕೊಂಡಳು.

ಹಿರಿಯರಿಂದ ಬುದ್ಧಿ ಹೇಳಿಸಿಕೊಂಡ ಅಪ್ಪ ಮೆತ್ತಗಾದ
ನರಸಿಂಗನ ಗೆಳೆಯರು ಊರಿನಲ್ಲಿ ಯಾರು ಯಾರಿಗೆ ಏನೇನು ಹೇಳಿದರೋ. ನಾನೂ ಸೇರಿದಂತೆ ಮೂವರಿಗೆ ಪ್ರವೇಶ ಶುಲ್ಕ, ಒಂದಿಷ್ಟು ದಿನಕ್ಕೆ ಖರ್ಚಿಗಾಗುವಷ್ಟು ಹಣ ಹೊಂದಿಸಿಕೊಟ್ಟರು. ಹಿರಿಯರಿಂದ ಬುದ್ಧಿ ಹೇಳಿಸಿಕೊಂಡ ಅಪ್ಪ ಮೆತ್ತಗಾದ. ನಾನು ಎಲ್‍ಎಲ್‍ಎಂ ಮಾಡಿದ್ದು ಹೀಗೆ. ನನ್ನನ್ನು ಕಂಡಾಗಲೆಲ್ಲ ನರಸಿಂಗ, ನಮ್ಮ ಜಡ್ಜ್ ಸಾಹೇಬರು ಹೇಗಿದ್ದಾರೆ ಎಂದು ಕೇಳಿ, ನಾನಾಗಬೇಕಾದುದನ್ನು ನೆನಪಿಸುತ್ತಿದ್ದ.

ಪಿಲ್ಲಣ್ಣ, ಬೋಡೆಪ್ಪ ಹಿಮ್ಮೇಳವಾಗುತ್ತಿದ್ದರು
ಹೀಗೆಯೇ ಒಬ್ಬರನ್ನು ಡಿಸಿ ಸಾಹೇಬರೇ ಎಂದರೆ, ಇನ್ನೊಬ್ಬರನ್ನು ತಹಶೀಲ್ದಾರ್ ಸಾಹೇಬರೇ, ಮತ್ತೊಬ್ಬರನ್ನು ರೇಂಜ್ ಆಫೀಸರೇ, ಮಗದೊಬ್ಬರನ್ನು ಡಾಕ್ಟರು ದೇವ್ರು, ಹಾಗೊಬ್ಬರನ್ನು ಇಂಜನಿಯರ್ ಸಾಹೇಬರೆ ಎಂದು ಕರೆಯುತಿದ್ದ. ಪಿಲ್ಲಣ್ಣ, ಬೋಡೆಪ್ಪ ಅವನಿಗೆ ಹಿಮ್ಮೇಳವಾಗುತ್ತಿದ್ದರು. ಇವರಿಂದಾಗಿ ಊರಿನಲ್ಲಿಯೂ ಹೀಗೆ ಕರೆಯುವುದು ಪ್ರಾರಂಭವಾದುದು ಎಷ್ಟರ ಮಟ್ಟಿಗೆಂದರೆ, ನಮ್ಮ ಹೆಸರುಗಳನ್ನು ನಾವು ಮರೆಯುವಷ್ಟು. ಇದು ನಮ್ಮನ್ನು ಛಲಗಾರರನ್ನಾಗಿ ಮಾಡಿ ಗುರಿಯತ್ತ ನಡೆಸಿತು. ಒಂದು ದಿನ ನರಸಿಂಗ, ನಮ್ಮ ಊರಿನ ಹೆಣ್ಣುಮಕ್ಕಳಲ್ಲಿ ಯಾರಾದರು ಡಾಕ್ಟರಾಗಬೇಕು ಎಂದು ಹೇಳಿದ.

English summary
Do the LLM after doing the LLB. Narsinga's big expectation was that you should become a Supreme Court Judge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X