• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ.ರಘುನಾಥ್ ಅಂಕಣ: ಶ್ರೀಕೃಷ್ಣನಿಲ್ಲದೆ ನಿನಗೆಲ್ಲಿ ಪಾರ್ಥ ಪರಾಕ್ರಮ

By ಸ.ರಘುನಾಥ್
|
Google Oneindia Kannada News

ಕೆಂಪರಾಜ ಗ್ರಾಮ ಪಂಚಾಯತಿ ಅಧ್ಯಕ್ಷನಾದ ಮೇಲೆ, ನರಸಿಂಗರಾಯ ತಾನು ಆರಂಭಿಸಿದ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಕೇಳಿಕೊಂಡ. ಅವನಿಗೆ ಬೆಂಬಲವಾಗಿರಲು ಗೆಳೆಯರನ್ನು ಒಪ್ಪಿಸಿದ. ನೀನೇನು ಮಾಡುತ್ತಿ ಎಂದು ಕೇಳಿದ್ದಕ್ಕೆ ಸುನಂದಾ, ನಾಟಕವಿದೆಯಲ್ಲ ಅಂದಳು. ನಮ್ಮ ನಾಟಕಗಳು ನಾಡಿಗೆ ತಲುಪಬೇಕು. ಯುವಕರು ನಟರಾಗಿ ಹೆಸರಾಗಬೇಕು. ಹೀಗಾಗಲು ಅವರಿಗೆ ಅವಕಾಶ ಕೊಡಿ.

ಇನ್ನು ಮುಂದೆ ನಾನು ಮಕ್ಕಳಿಗೆ ಸಂಗೀತವನ್ನಷ್ಟೇ ಕಲಿಸುತ್ತೇನೆ. ಅದೂ ಮುಖ್ಯವೇ. ಉಳಿದಂತೆ ನಿಮ್ಮ ಗೆಳೆಯನಿಗೆ ಸಹಾಯಕಳಾಗಿರುತ್ತೇನೆ ಎಂದಳು. ಹೀಗೆಂದರಾಗದು ಎಂದವರನ್ನು ನರಸಿಂಗರಾಯನೇ ಒಪ್ಪಿಸಿದ. ಈ ನಿರ್ಣಯಕ್ಕೆ ಸಮ್ಮತಿಯೋ ಅಸಮ್ಮತಿಯೋ ಅಪ್ಪಯ್ಯ ಮೌನವಾಗಿದ್ದ. ಅಮ್ಮಯ್ಯನದು ಎಂದಿನ ಹಸನ್ಮಖ. ಹಿರಿಯರು ನರಸಿಂಗರಾಯನಿಗೆ ಸರಿಕಂಡದ್ದು ಮಾಡಲಿ ಎಂದರು.

ಬಬ್ರುವಾಹನ ನಾಟಕವಾಡುವುದೆಂದ ನರಸಿಂಗರಾಯ

ಹುಣಿಸೆತೋಪಿನ ಕಾವಲು, ಫಸಲು ರೂಢಿಸಿ ಕೊಡುವ ಹೊಣೆಯನ್ನು ಬೋಡೆಪ್ಪ ಹೊತ್ತ. ಜಮೀನಿನಲ್ಲಿ ಬೆಳೆ ಬೆಳೆದು ಸಂಸಾರ ಸಾಗಿಸಲು ನೆರವಾಗಲು ಉಳಿದವರು ಸಿದ್ಧರಾದರು. ಕೈ ಖರ್ಚಿಗೆ ಮುನೆಕ್ಕನ ಅಂಗಡಿ ಇದ್ದುದೇ. ಮಗ, ಸೊಸೆ ಮನೆಕಡೆ ಇರುವರೆಂಬ ಸಂತಸ ಅಮ್ಮನದಾದರೆ, ಸುನಂದ ಅಂಗಡಿಯ ಕಡೆ ಗಮನ ಹರಿಸುವಳೆಂಬ ಸಮಾಧಾನ ಮುನೆಕ್ಕನದು.

ಬಬ್ರುವಾಹನ ನಾಟಕವಾಡುವುದೆಂದು ನರಸಿಂಗರಾಯ, ಸುನಂದ ಒಟ್ಟಿಗೆ ಮಾತಾಡಿಕೊಂಡು ಅಪ್ಪಯ್ಯನ ಒಪ್ಪಿಗೆ ಕೇಳಿದರು. ಅವನಿಗೂ ನಾಟಕವೆಂಬುದು ಬೇಕಿತ್ತು, ಒಪ್ಪಿದ. ಹಳಬರಲ್ಲಿ ಬಹಳಷ್ಟು ಮಂದಿ ಪಾತ್ರ ವಹಿಸಲು ಹಿಂದೆ ಸರಿದಿದ್ದರಿಂದ ಹೊಸಬರ ತಲಾಷು ಅನಿವಾರ್ಯವಾಯಿತು. ಮೈಚಳಿ ಇರದ ಹೆಣ್ಣುಮಕ್ಕಳನ್ನು ಸೇರಿಕೊಳ್ಳಲು ಸುನಂದ ಸೂಚಿಸಿದಳು. ಅವರ ಮನೆಯವರನ್ನು ಒಪ್ಪಿಸಲು ಓಡಾಡಿದಳು. ಕೊಂಚ ಮಟ್ಟಿಗೆ ಯಶಸ್ವಿಯಾದಳು.

ತುಂಟ ನಗೆಯಲ್ಲಿ ಕಣ್ಣು ಹೊಡೆದಳು

ಮೊದಲಿಗೆ ಮುಂದೆ ಬಂದವಳು ಅತ್ತೆಮನೆಯ ಕಾಟ ತಡೆಯಲಾರದೆ ತವರು ಸೇರಿದ್ದ ಗೌರಿ. ತನ್ನ ಸಮ್ಮತಿಯ ಮಾತನ್ನು ನರಸಿಂಗರಾಯನಿಗೆ ಹೇಳುವಾಗ ಹಿಂದಿನ ಘಟನೆಯನ್ನು ನೆನೆದು ತುಂಟ ನಗೆಯಲ್ಲಿ ಕಣ್ಣು ಹೊಡೆದಳು. ಇದನ್ನು ಗಮನಿಸಿದ ಮುನೆಕ್ಕ, ಕಳ್ಳಮುಂಡೆ ನೀನು ಎಂದು ನಕ್ಕು ಅವಳ ಸೊಂಟ ಗಿಲ್ಲಿದಳು. ಪಿಲ್ಲಣ್ಣನಾದಿಯಾಗಿ ಗೆಳೆಯರೆಲ್ಲ ಪಾತ್ರಧಾರಿಗಳಾದರು. ನರಸಿಂಗರಾಯ ಬಬ್ರುವಾಹನ, ಸುನಂದ ಚಿತ್ರಾಂಗದೆ. ಗೌರಿಗೆ ಉಲೂಪಿಯ ಪಾತ್ರ. ನಾಟಕದ ಖರ್ಚನ್ನು ಗೋವಿಂದಪ್ಪ ಎಮ್ಮೆಲ್ಯೆ ಹಾಗೂ ಕಂಟ್ರಾಕ್ಟುದಾರರಿಂದ ಕೊಡಿಸುವುದಾಗಿ ಹೇಳಿದ. ಇದರಿಂದ ಖರ್ಚಿನ ಹೊರೆ ಯಾರ ಮೇಲೂ ಬೀಳಲಿಲ್ಲ. ತಾಲೀಮಿನಲ್ಲಿರುವಾಗ ಉಚಿತ ಬೋಂಡ, ಚಕ್ಕುಲಿ, ಟೀ ಸರಬರಾಜಿಗೆ ಮುನೆಕ್ಕ ಸೀರೆ ನೆರಿಗೆಯನ್ನು ಸೊಂಟಕ್ಕೆ ಸಿಕ್ಕಿಸಿದಳು.

ಹಾಡುಗಾರಿಕೆಯ ಜವಾಬ್ದಾರಿ ಸುನಂದಗೆ

ಹೊಸಬರಿಗೆ ಪಾತ್ರಗಳನ್ನು ಪರಿಚಯಿಸಿ ಸಂಭಾಷಣೆ ಹೇಳುವುದು, ರಂಗದ ಮೇಲೆ ಚಲಿಸುವ ಕ್ರಮ, ಹಾವ-ಭಾವಗಳನ್ನು ಪ್ರದರ್ಶಿಸುವ ರೀತಿಯನ್ನು ಕಲಿಸಿಕೊಡಲು ನರಸಿಂಗರಾಯ, ಸುನಂದ, ಆಗಾಗಾ ಅಪ್ಪಯ್ಯ ಶ್ರಮಿಸಬೇಕಿತ್ತು. ಹಾಡುಗಾರಿಕೆಯ ಜವಾಬ್ದಾರಿಯನ್ನು ಸುನಂದ, ಮೋಟಪ್ಪ ವಹಿಸಿಕೊಂಡಿದ್ದರು. ಸಮಯ ನೋಡಿ, ಗೌರಿ ಕೀಟಲೆ ಮಾಡುತ್ತಲೇ ಇದ್ದಳು. ಎಲ್ಲರೂ ಅದನ್ನು ನಗಸಾರವಾಗಿ ತೆಗೆದುಕೊಳ್ಳುತ್ತಿದ್ದರು.

ನರಸಿಂಗರಾಯನ ಮನೆಗೆ ಬಂದ ಗೌರಿ

ಒಮ್ಮೆ ತಾಲೀಮಿಗೆ ಹೋಗುವ ಮುಂಚೆ ನರಸಿಂಗರಾಯನ ಮನೆಗೆ ಬಂದ ಗೌರಿ, ಹರಟೆ ಹೊಡೆಯುತ್ತ ಕುಳಿತಿದ್ದವರ ಜೊತೆ ಸೇರಿಕೊಂಡು, ಎಲೆ ಅರ್ಜುನ, ನಿನಗೆ ದ್ರೌಪದಿ ಪ್ರಿಯಳೊ, ಸುನಂದಳೊ, ಇಲ್ಲ ಈ ಗೌರಿಯೊ ಪೇಳುವಂತವನಾಗು ಎಂದು ಕಣ್ಣು ಮಿಟುಕಿಸಿದಳು. ಆಗ ಸುನಂದ, ಎಲೆ ಸಖಿ ಗೌರಿ ನೀನೇ ಪ್ರಿಯಳೆಂದು ತಿಳಿ ಎಂದಾಗ ಎಂದೂ ಗಟ್ಟಿಯಾಗಿ ನಗದ ಅಪ್ಪಯ್ಯನೂ ಚಪ್ಪಾಳೆ ತಟ್ಟಿ ನಕ್ಕಿದ್ದು ಎಲ್ಲರ ನೆನಪಿನಲ್ಲುಳಿಯುವ ಸಂಗತಿಯಾಗಿತ್ತು.

ನಾಟಕಗಳಲ್ಲಿ ಮೂರನೆಯ ಮನೆ ಹಿಡಿಯುವುದು ಸಾಮಾನ್ಯ

ಅಂದಿನ ಜಮಾಯಿಂಪಿನಲ್ಲಿ (ತಾಲೀಮಿನಲ್ಲಿ) ಆರ್ಮಣಿ (ಹಾರ್ಮೋನಿಯಂ) ಮೇಸ್ಟ್ರು ವೀರಭದ್ರಾಚಾರಿ, ತಬಲಿಗ ಮೋಟಪ್ಪ ಕ್ಷಣ ದಂಗಾಗುವಂತಾಯಿತು. ನಾಟಕಗಳಲ್ಲಿ ಮೂರನೆಯ ಮನೆ ಹಿಡಿಯುವುದು ಸಾಮಾನ್ಯ. ಆದರೆ ಇಂದು ನರಸಿಂಗರಾಯ ಐದನೇ ಮನೆಯವರೆಗೆ ಹಾರ್ಮೋನಿಯಂ ಹಿಡಿಯುವಂತೆ ಮಾಡಿದ್ದು ಅನಿರೀಕ್ಷಿತವಾಗಿತ್ತು. ಅವರು ಸಾವರಿಸಿಕೊಂಡು ಆ ಸವಾಲನ್ನು ಸ್ವೀರಿಸಿದ್ದರು. ಅಪ್ಪಯ್ಯ ನಕ್ಕ.

ಇಂದೀ ಬವರ ಕೇಳ್ ಕಿರೀಟಿ ಹಿಂದೆ ನೀ ಮೆರುದಂತಲ್ಲ ತಿಳಿ

ಹಡೆದವಳೊಡಲ ಅಮಾನಿಸಿದೆ ಕಂದಾ ಎಂದವಳ ಮನ

ನೋಯಿಸಿದೆ ಅಧಿಕವೀ ಪಾಪ ಅನುಭವಿಸದಿರಲಾರೆ ನೀ

ಮಿಗಿಲಾಗಿ ಶ್ರೀಕೃಷ್ಣನಿಲ್ಲದೆ ನಿನಗೆಲ್ಲಿ ಪಾರ್ಥ ಪರಾಕ್ರಮ

ಈ ಪದ್ಯ ಹಾಡುವಾಗ ಈ ಚಮತ್ಕಾರ ನಡೆಸಿದ್ದ ನರಸಿಂಗರಾಯ. ಬಲೆಹುನ್ನಾರು ನಿಂದು ಎಂದು ವೀರಭದ್ರಚಾರಿ ಅಂದಾಗ, ಅವನು ಸುನಂದಳತ್ತ ಬೆರಳು ತೋರಿಸಿದ. ಅವರು ಭಲೇ ಅಮ್ಮಯ್ಯ ಎಂದು ಮೆಚ್ಚುಗೆ ಸೂಚಿಸಿದಾಗ ಅವಳು ಕೈ ಮುಗಿದು ನಿಂತಳು.

English summary
Many others including Narasingaraya, rehearsed for the Babruvahana drama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X