ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಕಪಿಗಳ ದಂಡಿನ ನಾಯಕ

|
Google Oneindia Kannada News

ನರಸಿಂಗ ಇದ್ದಲ್ಲಿ ಹುಡುಗರ ಪಾಳ್ಯವೊಂದು ಕಟ್ಟಿಕೊಳ್ಳುತ್ತಿತ್ತು. ಇವರಿಗೆ ಶಾಲೆಯೂ ಆಟದ ಮೈದಾನವೂ ಒಂದೇ. ಗಜೇಂದ್ರರಾಜು ಮೇಷ್ಟ್ರು ಬೈದು, ಹೊಡೆದು, ಎಮ್ಮೆ ಚರ್ಮದವರೆಂದು, ಉದ್ಧಾರದ ಲಕ್ಷಣದವರಲ್ಲವೆಂದು, ಓದುವ ಮಕ್ಕಳನ್ನು ಕೆಡಿಸಬಾರದೆಂದು, ಈ ಪಟಾಲಮ್ಮಿಗೆ ಒಂದು ಮೂಲೆಯಲ್ಲಿ ಜಾಗ ಮಾಡಿ ಕೂರಿಸುತ್ತಿದ್ದರು. ಆದರೆ ಒಂದಿಷ್ಟಾದರೂ ಕಲಿಯದೆ ಬಿಡುತ್ತರಲಿಲ್ಲ. ಬೋಡಪ್ಪನ ಅಪ್ಪನಂತು, ಇವನ ಕೈಕಾಲು ಮುರಿದು ಹಾಕಿ, ಹೇಳಿಕಳಿಸಿ ಸಾರು. ಹೊತ್ತುಕೊಂಡು ಹೋಗಿ ಪುತ್ತೂರು ಕಟ್ಟು ಹಾಕಿಸುತ್ತೇನೆ ಅಂದಿದ್ದ. ಪಿಲ್ಲಣ್ಣನ ಅಪ್ಪ, ನನ್ನವರೆಗೆ ಬರಬೇಡಿ. ನೀವು ಏನು ಬೇಕಾದರೂ ಮಾಡಿ, ನಾನು ಕೇಳೋನಲ್ಲ ಅಂದುಬಿಟ್ಟಿದ್ದ. ಅಪ್ಪಯ್ಯನದು ಒಂದೇ ಮಾತು- ಇಂತಹ ಮಕ್ಕಳನನ್ನು ತಿದ್ದುವುದು ನಿಮಗೆ ಗೊತ್ತಿಲ್ಲದೆ ಏನಿಲ್ಲ.

ನಿನ್ನೆ ಇದ್ದ ಬುದ್ಧಿ ಇಂದು ಏನಾಯ್ತು

ಮೇಷ್ಟ್ರು ನೀತಿಕಥೆಗಳನ್ನು ಹೇಳುತ್ತಿದ್ದುದು ಮುಖ್ಯವಾಗಿ ಈ ಗುಂಪಿಗಾಗಿಯೇ ಎಂದು ಹೈಸ್ಕೂಲಿನಲ್ಲಿದ್ದಾಗ ಅನ್ನಿಸಿತು. ನರಸಿಂಗ ಎಷ್ಟೋ ಶ್ರದ್ಧೆಯಿಂದ ಕೇಳುತ್ತಿದ್ದ. ಇವನೇ ಹೀಗಿರುವಾಗ ನಾವೇನು ಕಡಿಮೆ ಎಂಬಂತೆ ಉಳಿದವರೂ ಕೇಳಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸುತ್ತ ಕಥೆ ಹೇಳುತ್ತಿದ್ದ ಮೇಷ್ಟ್ರಿಗೆ ಸರಿದಾರಿಗೆ ಬರುತ್ತಿದ್ದಾರೆಂಬ ಸಂತೋಷ. ಈ ಸಂತೋಷವನ್ನು ಅವರು ಅನುಭವಿಸಲು ಬಿಡುತ್ತಿದ್ದುದು ಮರುದಿನ ಶಾಲೆ ಪ್ರಾರಂಭವಾಗುವವರೆಗೆ ಮಾತ್ರ. ಅವರು ಅಸಹನೆಯಿಂದ, ನಿನ್ನೆ ಇದ್ದ ಬುದ್ಧಿ ಇಂದು ಏನಾಯ್ತು ಅನ್ನುತ್ತಿದ್ದರು. ಎಲ್ಲರ ಪರವಾಗಿ ನರಸಿಂಗ ಹೇಳುತ್ತಿದ್ದ, ಹಾಗೇ ಇದೆ ಸಾ.

Sa Raghunath Column: Narasingaraya Is Captain Of Friends Group

ನರಸಿಂಗ ಒಂದು ಪದವನ್ನೂ ತಪ್ಪಾಗಿ ಬರೆಯುತ್ತಿದ್ದವನಲ್ಲ

ಮೇಷ್ಟ್ರು ಕನ್ನಡವನ್ನು ಹೆಚ್ಚಿಗೆ ಕಲಿಸುತ್ತಿದ್ದುದು ಊಕ್ತ ಲೇಖನದ ಮೂಲಕ. ನರಸಿಂಗ ಒಂದು ಪದವನ್ನೂ ತಪ್ಪಾಗಿ ಬರೆಯುತ್ತಿದ್ದವನಲ್ಲ. ಇದರಿಂದ ಅವರಿಗೆ ನರಸಿಂಗನೆಂದರೆ ಹೆಮ್ಮೆ. ಬುದ್ಧಿವಂತ ನೀನು. ಆದರೆ ಸಹವಾಸ ದೋಷ ಅನ್ನುತ್ತಿದ್ದರು. ಅವನು ತಲೆ ಕೆರೆದುಕೊಳ್ಳುತ್ತ ಗೆಳೆಯರತ್ತ ಓರೆನೋಟ ಬೀರಿ ನಗುತ್ತಿದ್ದ. ದೋಷ ಅವರದಲ್ಲ, ಇವನದು ಎಂದು ನಾನು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ.

ಇಂಗ್ಲೀಷ್ ಕಲಿಕೆಗೆ ಮೂಗು ಮುರಿದ

ಹಳ್ಳಿಯ ಮಕ್ಕಳು ಒಂದಿಷ್ಟು ಇಂಗ್ಲಿಷ್ ಕಲಿತರೆ ಸನ್ನೆ ಎಂಬ ಆಸೆ ಅವರದು. ಆ ಪ್ರಯತ್ನಕ್ಕೂ ಕೈ ಹಾಕಿದ್ದರು. ಇಂಗ್ಲಿಷ್ ಕಲಿಕೆಯಲ್ಲಿ ಸ್ಪೆಲ್ಲಿಂಗ್ ಮುಖ್ಯ. ಸ್ಪೆಲ್ಲಿಂಗ್ ಎಂದರೆ ಕನ್ನಡದಲ್ಲಿ ಕಾಗುಣಿತ ಇದ್ದ ಹಾಗೆ. ನೇಮ್ ಅನ್ನುವುದಕ್ಕೆ ಸ್ಪೆಲಿಂಗ್, ಎನ್‍ಎಎಂಇ. ಹೆಸರಿಗೆ ಹ ಕೇತ್ವ ಸ ತಕಟ್ಟು ರ ಕೊಂಬು ಅನ್ನುವಂತೆ ಎಂದು ಹೇಳುತ್ತಿದ್ದರು. ಮುಂದೆ ಇದರಿಂದ ನನಗಂತೂ ಅನುಕೂಲವಾಯಿತು. ನರಸಿಂಗ ಇಂಗ್ಲೀಷ್ ಕಲಿಕೆಗೆ ಮೂಗು ಮುರಿದ. ಹಾಗಾಗಿ ಅವನು ಇಂಗ್ಲಿಷ್ ಕಲಿತಿದ್ದು ಸ್ವಲ್ಪ. ಅವನು ಹತ್ತನೆಯ ತರಗತಿಯಲ್ಲಿ ಫೇಲಾಗಿದ್ದು ಇಂಗ್ಲಿಷ್ ಮತ್ತು ಗಣಿತದಲ್ಲಿ.

ನರಸಿಂಗನ ಗೆಳೆಯರ ಗುಂಪು ಏನೆಲ್ಲ ಮಾಡುತ್ತಿತ್ತು ಅನ್ನುವುದಕ್ಕಿಂತ, ಏನನ್ನು ಮಾಡದೆ ಬಿಟ್ಟಿಲ್ಲ ಎಂದು ಹುಡುಕಿದರೆ ಏನೂ ಸಿಗುತ್ತಿರಲಿಲ್ಲ. ಬೈಯಲಿ, ಹೊಡೆಯಲಿ ಅವರಂತೂ ನೀರಿನಲ್ಲಿ ಮಲಗಿದ ಎಮ್ಮೆಯಂತಿರುತ್ತಿದ್ದರು.

ಹೊಲಗಳಲ್ಲಿ ಕದ್ದು ಬೇಯಿಸಿ ತಿನ್ನುವುದು

ನರಸಿಂಗನ ಕಪಿಗಳ ಗುಂಪು ಅವರೆಕಾಯಿ ಕಾಲದಲ್ಲಿ ರಾತ್ರಿಯ ಊಟವನ್ನು ಮನೆಗಳಲ್ಲಿ ಮಾಡುತ್ತಿದ್ದುದೇ ಕಡಿಮೆ. ರಾತ್ರಿ ವೇಳೆ ಅವರೆಕಾಯಿ ಬೇಯಿಸುವುದು ಇವರ ಕಾರ್ಯಕ್ರಮ. ತಮ್ಮ ಹೊಲಗಳಲ್ಲಿ ದಂಡಿಯಾಗಿದ್ದರೂ ಅವರಿವರ ಹೊಲಗಳಲ್ಲಿ ಕದ್ದು ಬೇಯಿಸಿ ತಿನ್ನುವುದು ಇವರಿಗೆ ಖುಷಿ. ಇಂದು ಯಾರ ಹೊಲವೆಂದು ಸಂಜೆಯೇ ಗುಟ್ಟಾಗಿ ತೀರ್ಮಾನವಾಗುತ್ತಿತ್ತು.

ಇಂಥ ದಿನಗಳಲ್ಲಿ ಇವರಾರಲ್ಲಿಯೂ ಕತ್ತಲ ಭಯವಾಗಲಿ, ಅವರಿವರು ಹೇಳುತ್ತಿದ್ದ ದೆವ್ವಗಳ ಭಯವಾಗಲಿ ಇದ್ದುದಿಲ್ಲ. ದೆವ್ವವೆಂದರೆ ನಡುಗುತ್ತಿದ್ದ ನನ್ನಂತಹವರಿಗೆ ತಾವು ದೆವ್ವವನ್ನು ಕಂಡೆವೆಂದು, ಆ ಕುರಿತು ಕಥೆಯಂತೆ ಹೇಳಿ, ಹೆದರಿಸುತ್ತಿದ್ದರು.

English summary
Sa Raghunath Column: Narasingaraya did not misspell a word of Kannada. so admired to teacher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X