• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ ರಘುನಾಥ ಅಂಕಣ; ದ್ವೇಷದ ಕಿಚ್ಚು, ಹುಣಿಸೆ ಕೊರಳಿಗೆ ಮಚ್ಚು

By ಸ ರಘುನಾಥ, ಕೋಲಾರ
|

ಮುನೆಕ್ಕನ ಮನೆಯಲ್ಲಿ ತಡವಾಗಿ ಊಟ ಮಾಡಿದ್ದ ನರಸಿಂಗರಾಯನಿಗೆ ರಾತ್ರಿಯ ಊಟ ಬೇಡವೆನಿಸಿತು. ಕರಿಬೇವು ಕಿವುಚಿ ಹಾಕಿದ ಒಂದು ಲೋಟ ನೀರು ಮಜ್ಜಿಗೆ ಕುಡಿದು ನಾಟಕದ ಪ್ರತಿಯನ್ನು ಮುಂದಿಟ್ಟುಕೊಂಡ. ಸೋಮೇಶನಿಗೆ ಯಾವ ಪಾತ್ರವೆಂಬ ಯೋಚನೆ ಬಂದಿತು.

   ಕುಂದಾಪುರದ ಪುಟ್ಟ ಬಾಲಕಿಯ ಬಾಯಲ್ಲಿ ಮಂಕುತಿಮ್ಮನ‌ ಕಗ್ಗ | Mankku timmana Kagga | DVG

   ಯೋಚಿಸುತ್ತಿರುವಾಗ, ಅದು ಬದಿಗೆ ಸರಿದು, ಮನಸ್ಸು ಮುನೆಕ್ಕನ ಕೋಪ ತಣ್ಣಗಾದಲ್ಲಿನಿಂದ ಹಿಮ್ಮುಖವಾಗಿ ಚಲಿಸುತ್ತ, ಸುನಂದಾ ಮುನೆಕ್ಕನ ಮನೆ ಸೇರಿದಲ್ಲಿಗೆ ಹೋಯಿತು. ಗುಡ್ಡದ ಮೇಲೆ ನಿಂತು ಸುತ್ತಲೂ ನೋಡುವವನಂತೆ ನೋಡಿದ. ಬೇಸ್ತವಾರದ ಸಭೆಯವರೆಗೆ ತಾನೆಲ್ಲಿಯೂ ಕಾಣಲಿಲ್ಲ. ಆದರೂ ಅವನು ಹಲವರ ಬಾಯಿಗೆ ಬಿದ್ದಿದ್ದ. ಸುನಂದಾ ಬೇಟೆಯ ಬಾಣದ ಗುರಿಯಲ್ಲಿಯೇ ಇದ್ದಳು. ಮುಖ್ಯವಾಗಿ ಮುನೆಕ್ಕ ಗುರಿಗಳನ್ನು ಮುರಿದಿದ್ದಳು.

   ಮುಂದಿನ ದಾರಿಗಳು ನೇರವಾಗಿ ಗೋಚರಿಸಿದವು. ಮನಸ್ಸಿನಲ್ಲಿ ಹಿತದ ಗಾಳಿ ನವಿರಾಗಿ ಬೀಸಿತು. ಸೋಮೇಶನಿಗೆ ರಾಜಮಾರ್ತಾಂಡನ ಪಾತ್ರ ಕೊಡಬಹುದು. ಇದರಿಂದ ಅವನ ಮನಸ್ಸಿನಲ್ಲಿ ಕೆಡುಕಿನ ಶೇಷವೇನಾದರೂ ಉಳಿದಿದ್ದರೆ ತೊಳೆದು ಹೋದೀತು ಎಂದುಕೊಂಡ. ಈ ಬಗ್ಗೆ ಅಮ್ಮ, ಅಪ್ಪ, ಮೋಟಪ್ಪ, ಮುಖ್ಯವಾಗಿ ಮುನೆಕ್ಕ, ಸುನಂದಾರೊಂದಿಗೆ ಮಾತಾಡಬೇಕೆಂದುಕೊಂಡ. ನಿದ್ದೆ ಕಣ್ಣು ಕಚ್ಚಿತು. ಮಲಗಿದ.

   ಕನಸು. ಹುಣಿಸೆ ಮರಗಳ ತುಂಬ ಫಸಲು. ತಾನೊಂದು ಮರದ ಮೇಲೆ, ಬೊಡೆಪ್ಪ, ಪಿಲ್ಲಣ್ಣ, ಸೋಮೇಶ ಒಂದೊಂದು ಮರಹತ್ತಿ ಕಾಯಿ ಉದುರಿಸುತ್ತಿದ್ದರು. ಅಮ್ಮ, ಮುನೆಕ್ಕ, ಸುನಂದಾ ಕಾಯಿ ಆಯುತ್ತಿದ್ದರು. ಅಪ್ಪ ಎಷ್ಟು ಮಣ ಹಣ್ಣಾದೀತೆಂದು ಅಂದಾಜು ಮಾಡುತ್ತಿದ್ದ. 'ನೀರು ಸೇದೊ ಹುಡುಗಿ ನೀನ್ನ/ ಸೊಗಸು ನೋಡಿ ನಿದ್ದೆಗೆಟ್ಟೆ/ ಬಿಡುವೆನೇನೆ ನಿನ್ನ/ ಎಗರಿಸಿಕೊಂಡು ಹೋಗದೆ' ಎಂದು ಬೋಡೆಪ್ಪ ಹಾಡಿದರೆ, 'ಎಲೆ ತೋಟದ ಬಳ್ಳಿ ಚೆಂದುಳ್ಳಿ/ ನಾ ಅಗಸೆ ಮರವೆ/ ನೀ ಬಂದು ತಬ್ಬಿಕೊಳ್ಳೆ/ ಮಾವನ ಮಗಳೆ' ಎಂದು ಪಿಲ್ಲಣ್ಣ ದರುವೆತ್ತಿಕೊಂಡ. ನರಸಿಂಗ ನೀನೂ ಒಂದನ್ನು ಅಂದ. 'ನೀರು ತುಂಬಿದ ಬಿಂದಿಗೆ/ ಎತ್ತಲೆಂದು ಕರೆಯುವೆ/ ಮುತ್ತು ಕೊಟ್ಟರೆ ಕೆನ್ನೆಗೆ/ ಎತ್ತಿ ಇಡುವೆ ಬಳ್ಳಿ ನಡುವಿಗೆ' ಎಂದು ಹಾಡುತ್ತಿರುವಾಗ ಕನಸನ್ನು ಕಡಿಯಿತು ಬಾಗಿಲು ಬಡಿದ ಸದ್ದು.

   ಚಿಕ್ಕಹಟ್ಟಿಯ ಹನುಮಪ್ಪ ಅಂಗಳದಲ್ಲಿ ನಿಂತು, 'ಅಪ್ಪಯ್ಯ ನಿಮ್ಮ ಹುಣಿಸೆ ಗಿಡಗಳನ್ನು ರಾತ್ರಿ ಯಾರೋ ಕಳ್ಳನನ್ನ ಮಕ್ಳು ಕತ್ತರಿಸಿ ಹಾಕಿದ್ದಾರೆ ಹುಲ್ಲಿಗಂತ ಹೋದೋನು ನೋಡಿದೆ' ಎಂದು ಹೇಳುತ್ತಿದ್ದ. ದಡಬಡಿಸಿ ಎದ್ದ ನರಸಿಂಗರಾಯ ತೋಪಿನತ್ತ ಓಡಿದ. ಉಳಿದವರು ಅವನ ಹಿಂದೆ.

   ತೋಪಿನ ಮಧ್ಯಭಾಗದ ಗಿಡಗಳ ಕೊಂಬೆಗಳೆಲ್ಲ ನೆಲದ ಮೇಲೆ ಬಿದ್ದಿದ್ದವು. ನರಸಿಂಗರಾಯ ಗಳಗಳ ಅತ್ತ. ಅಮ್ಮ ನರಸಿಂಗ ಎಂದು ಅಪ್ಪಿಕೊಂಡು ಅತ್ತಳು. ಅಪ್ಪಯ್ಯ ಮೂಕನಾಗಿದ್ದ. ಮುನೆಕ್ಕ 'ಅವರ ಕೈ ಸೇದಿ ಹೋಗ, ಅವರು ನೆಗೆದು ಬೀಳ, ಅವರು ಯಾರಂತ ಗೊತ್ತಾದರೆ ಅವರ ಮೀಸೆಗೆ ಉಚ್ಚೆ ಹೊಯ್ದು ಬೋಡಿಸಿಯೇನು' ಎಂದು ಶಪಿಸಿ, ಬೈಯುತ್ತ ಹಿಡಿಹಿಡಿ ಮಣ್ಣೆತ್ತಿ ತೂರುತ್ತಿದ್ದಳು.

   ಬೋಡೆಪ್ಪ, ಪಿಲ್ಲಣ್ಣರ ಗುಮಾನಿ ಕಣ್ಣುಗಳು ಸೋಮೇಶನತ್ತ ನೋಡುತ್ತಿದ್ದವು. ಅವನು ಅವರ ಹತ್ತಿರ ಬಂದು, 'ನಮ್ಮ ತಾಯಾಣೆ ನನಗೆ ಗೊತ್ತಿಲ್ಲ' ಎಂದು ಪಿಸುಗುಟ್ಟಿದ. ಸುನಂದಾ ದಿಕ್ಕೆಟ್ಟು ನಿಂತಿದ್ದಳು. ಇದು ರಂಗ, ಸಿದ್ದರ ಕೆಲಸವೆಂದು ಯಾರಿಗೆ ಯಾರೂ ಹೇಳಬೇಕಿರಲಿಲ್ಲ. ಆದರೆ ಸಾಬೀತುಪಡಿಸುವುದು ಸಾಧ್ಯವಿರಲಿಲ್ಲ. 'ಬೀರಣ್ಣನ ಮೇಲೆ ಅವರು ಹಗೆ ತೀರಿಸಿಕೊಳ್ಳಬೇಕಿತ್ತು. ಅಪ್ಪಯ್ಯನತ್ತ ತಿರುಗಿಸಿದ್ದೇಕೆ? ಅವನು ಗಟ್ಟಿಗನೆಂದೆ? ಎಂಬ ಪ್ರಶ್ನೆ ಪಿಲ್ಲಣ್ಣ, ಬೋಡೆಪ್ಪರ ಹೊರತಾಗಿ ಎಲ್ಲರದೂ ಆಗಿತ್ತು. ಸಭೆ ಮುಗಿದ ಮೇಲೆ ಅವರು ಉಪಾಯದಿಂದ ಆ ಇಬ್ಬರನ್ನೂ ಗೋಪಾಲಸ್ವಾಮಿ ಗುಡಿಯ ಹಿಂದಕ್ಕೆ ಗುಟ್ಟಾಗಿ ಕರೆದೊಯ್ದು ಚೆನ್ನಾಗಿ ತದುಕಿದ್ದರು. ಈಗ ಗೆಳೆಯರಿಬ್ಬರ ಸ್ಥಿತಿ ಕಳ್ಳನ ಹೆಂಡತಿ ಅಳುವಂತೆಯೂ ಇಲ್ಲ, ಸುಮ್ಮನಿರುವಂತೆಯೂ ಇಲ್ಲ ಎಂಬಂತಾಗಿತ್ತು.

   English summary
   Narasingaraya got a dream of destroying tamarind trees...
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X