ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ್ ಅಂಕಣ: ನಮ್ಮೂರ ಶನಿಗಳೆಂದು ಬಿರುದಾಯಿತು

By ಸ. ರಘುನಾಥ್
|
Google Oneindia Kannada News

ನರಸಿಂಗನ ಅವತಾರಗಳು ಒಂದೆರಡಾಗಿದ್ದರೆ ಕ್ರಮದಲ್ಲಿ ನೆನಪಿಟ್ಟುಕೊಳ್ಳಬಹುದಿತ್ತು, ಬಾಯಿಪಾಠ ಮಾಡಿದ ಪದ್ಯದಂತೆ. ಒಂದು ಪದ್ಯ ಓದುತ್ತಿರುವಾಗಲೇ ಇನ್ನೊಂದು ಪದ್ಯ ಕೊಟ್ಟಂತೆ ಅವನ ಕೆಲಸಗಳು ಇರುತ್ತಿದ್ದವು. ಒಂದನ್ನು ಹೇಳುವಾಗ ಇನ್ನೊಂದಾವುದೋ ನೆನಪಿಗೆ ಬಂದು, ಹಿಂದಿನದು ಅರೆಬರೆಯಾಗಿ ಬಿಡುತ್ತದೆ.

ಹೋಗಲಿ ಬೊಡೆಪ್ಪ, ಪಿಲ್ಲಣ್ಣನ ಕುರಿತಾದರೂ ಒಂದು ಕ್ರಮಬದ್ಧತೆ ಸಾಧ್ಯವೇ ಎಂದರೆ ಅದೂ ಆಗದು. ಆ ಇಬ್ಬರ ಬಗ್ಗೆ ಹೇಳಲು ಹೋದರೆ ನರಸಿಂಗನೂ ಬಂದುಬಿಡುತ್ತಿದ್ದ. ಏಕೆಂದರೆ ಮೂವರದೂ ಒಂದೇ ರೀತಿಯ ನಡೆ ಮತ್ತು ಕೆಲಸ. ಅವರಲ್ಲಿ ಯಾರೊಬ್ಬರನ್ನು ಕುರಿತು ಹೇಳಿದರೂ ಅದು ಅವರೆಲ್ಲರದೂ ಆಗಿಬಿಟ್ಟಿರುರುತ್ತದೆ. ಅದು ಅವರ ಗೆಳೆತನ.

ಹುಡುಗರಿಗೆ ಈಜು ಕಲಿಸುವ ಯೋಜನೆ

ಒಂದು ಬೇಸಿಗೆಯಲ್ಲಿ ಕಲಿಯಲು ಬಯಸಿದ ಹುಡುಗರಿಗೆ ಈಜು ಕಲಿಸುವ ಯೋಜನೆ ಹಾಕಿಕೊಂಡರು. ಅಂಥವರಿಗೆ ನೀರಿಗೆ ಬಿದ್ದಾಗ ಏನೇ ಆಗಲಿ ನೀರು ಕುಡಿಯಬಾರದು. ಕೈಕಾಲು ಬಡಿಯುತ್ತಿರಬೇಕೆಂದು ಬೋಧಿಸುತ್ತಿದ್ದರು. ಬೋಡೆಪ್ಪ, ಪಿಲ್ಲಣ್ಣ ಹುಡುಗರು ನೋಡುವಂತೆ ಬಾವಿಗೆ ಧುಮುಕಿ ಈಜುತ್ತ, ಬಾಯಿಗೆ ಬಂದ ನೀರನ್ನು ಉಗಿಯುತ್ತ, ಕೈಕಾಲು ಬಡಿದು ಈಜುತ್ತಿದ್ದರು. ನರಸಿಂಗ ಆಗಲೇ ಒಂದು ಸುತ್ತು ಈಜಿ ಬಂದು, ಕೆಳಗಿನ ಮೆಟ್ಟಿಲ ಮೇಲೆ ನಿಂತು ನೋಡುತ್ತಿದ್ದ.

 Sa Raghunath Column: Narasingaraya And His Group Gives Trouble To Villagers

ಒಂದಿಬ್ಬರನ್ನು ನೀರಿಗೆ ದೂಡಿಬಿಡುತ್ತಿದ್ದ ನರಸಿಂಗ

ಹುಡುಗರಲ್ಲಿ ಧೈರ್ಯವಿದ್ದ ಒಂದಿಬ್ಬರನ್ನು ನೀರಿಗೆ ದೂಡಿಬಿಡುತ್ತಿದ್ದ. ಅವರು ಗಾಬರಿಯಿಂದ ಚೀರಾಡುತ್ತಿದ್ದರೆ ಪಿಲ್ಲಣ್ಣ, ಬೋಡೆಪ್ಪ ಹೊಟ್ಟೆಯಡಿಗೆ ಕೈಕೊಟ್ಟು ಗಾಬರಿಯಿಂದ ಬಿಡಿಸಿ ಈಜಿಸುತ್ತಿದ್ದರು. ನರಸಿಂಗನಿಗೆ ಪುಕ್ಕಲು ಅನ್ನಿಸಿದವರಿಗೆ ಸೊಂಟಕ್ಕೆ ಹಗ್ಗಕಟ್ಟಿ ನೀರಿಗಿಳಿಸಿ ಹಗ್ಗ ಹಿಡಿದು ನಿಂತಿರುತ್ತಿದ್ದ. ಇದು ಮೊದಲ ಪಾಠ. ಒಣಗಿದ ಕತ್ತಾಳೆಯ ಮರದ ಎರಡು ಮೂರು ತುಂಟುಗಳಿಗೆ ತೊಳೆ ಹಾಕಿ, ಅದರಲ್ಲಿ ನೀಲಗಿರಿ ಇಲ್ಲವೆ ಸಾರ್ವೆ ಕಡ್ಡಿಗಳನ್ನು ಗಟ್ಟಿಯಾಗಿ ಸೇರಿಸಿ, ಅದನ್ನು ಸೊಂಟಕ್ಕೆ ಕಟ್ಟಿ ಸ್ವತಂತ್ರವಾಗಿ ಈಜಲು ಬಿಟ್ಟು ಉಸ್ತುವಾರಿ ನಡೆಸುತ್ತಿದ್ದುದು ಎರಡನೆಯ ಪಾಠ. ಇದರಲ್ಲಿ ಯಶಸ್ವಿಯಾದವರಿಗೆ ಮೇಲಿಂದ ಧುಮುಕುವುದು, ಡೈವ್ ಹೊಡೆಯುದು ಕಲಿಸುತ್ತಿದ್ದರು. ಇಲ್ಲಿಗೆ ಆ ಬ್ಯಾಚಿಗೆ ಈಜು ಕಲಿಸುವುದು ಮುಗಿದಂತೆ. ಹೀಗಿವರು ಊರಿನ ಅರ್ಧದಷ್ಟು ಮಕ್ಕಳಿಗೆ ಈಜಿನ ಗುರುಗಳು.

ಮಕ್ಕಳಿಗೆ ಕಲಿಸಿದ ಆಟಗಳಲ್ಲಿ ಮರಕೋತಿ ಆಟವೂ ಒಂದು

ಇದೊಂದೇ ಅಲ್ಲ, ಮರ ಹತ್ತುವುದಕ್ಕೂ ಗುರುಗಳಿವರೇ. ಇದನ್ನು ತಿಳಿದ ದುಗ್ಗಪ್ಪ, ಗೆಳೆಯರೊಂದಿಗೆ ಮಾತಿಗೆ ಕುಳಿತಾಗ, ಈ ಹೈಕಳು ಮರ ಹತ್ತೋದನ್ನು ಕಲಿಸುವುದು ಮಂಗನಾಟಕ್ಕೆ. ಅಲ್ಲದೆ ಹಣ್ಣು ಕಾಯಿ ಕಿತ್ತು ನುಂಗೋಕೆ ಎಂದು ನಗಸಾರವಾಗಿ ಹೇಳುತ್ತಿದ್ದ.

ಇವರು ಮಕ್ಕಳಿಗೆ ಕಲಿಸಿದ ಆಟಗಳಲ್ಲಿ ಮರಕೋತಿ ಆಟವೂ ಒಂದು. ಇದರಿದಾಗಿ ರಜೆಯ ದಿನಗಳಲ್ಲಿ ಶಾಲೆಯ ಮಕ್ಕಳು ಇರುತ್ತಿದ್ದುದು ಮರಗಳ ಕೆಳಗೆ. ಮನೆಯವರು ಬಂದು ಗದರಿಸಿಯೋ, ಒಂದೇಟು ಹಾಕಿಯೋ ಕರೆದೊಯ್ಯಬೇಕಿತ್ತು. ದನ ಕಾಯಲು ಹೋಗುತ್ತಿದ್ದ ಹುಡುಗರು ಮರಗಳ ಮೇಲಿರುತ್ತಿದ್ದುದರಿಂದ ದನಗಳು ಬೆಳೆ ಮೇದ ದೂರುಗಳು ದಿನೇ ದಿನೇ ಹೆಚ್ಚುತ್ತಿದ್ದವು.

ಕೊಟ್ಟ ಬಿರುದು 'ನಮ್ಮೂರ ಶನಿಗಳು'

ದನ ಮೇಯಿತೆಂದು ಇಂದು ಜಗಳ ಕಾದವರು ನಾಳೆ ಜಗಳಕ್ಕೆ ಸಿಗುವಂತಾಗುತ್ತಿತ್ತು. ಇದು ಊರಿನ ಸಮಸ್ಯೆಯಾಗಿ ಪರಿಣಮಿಸಿದಾಗ ಕಂಡುಕೊಂಡ ಪರಿಹಾರವೆಂದರೆ, ಪ್ರತಿ ಭಾನುವಾರ ಮನೆಯವರಾದವರು ದನಕಾಯಲು ಹೋಗಿ ಹುಡುಗರಿಗೆ ರಜೆ ಕೊಡುವುದು. ಉಳಿದ ದಿನಗಳಲ್ಲಿ ಮರವೇರಿ ಆಡಿದರೆ ಹುಟ್ಟಲಿಲ್ಲ ಅನ್ನಿಸಿ ಬಿಡುತ್ತೇವೆ ಎಂದು ತಾಕೀತು ಮಾಡಿದ್ದು. ಇಲ್ಲಿ ನರಸಿಂಗನ ಗುಂಪಿಗೆ ಕಬ್ಬಾಳ ಪಾಪಯ್ಯ ಕೊಟ್ಟ ಬಿರುದು 'ನಮ್ಮೂರ ಶನಿಗಳು'.

English summary
One summer, Narasingaraya planned to teach swimming to boys who wanted to learn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X