ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ್ ಅಂಕಣ: ನರಸಿಂಗ ಇರಲಿಲ್ಲ, ಸಿಗಲಿಲ್ಲ

By ಸ. ರಘುನಾಥ್
|
Google Oneindia Kannada News

'ಮಹೇಶ ಎಲ್‌ಎಲ್‌ಬಿ ಮಾಡಿದೆ ಸಂತೋಷ. ಈಗಲೇ ಲಾಯರಾಗಬೇಡ. ಎಲ್‍ಎಲ್‍ಎಂ ಮಾಡು. ನೀನು ಸುಪ್ರೀಂ ಕೋರ್ಟ್‌ ಜಡ್ಜ್ ಆಗಬೇಕು,' ಎಂದು ದೊಡ್ಡ ನಿರೀಕ್ಷೆಯನ್ನು ನನ್ನ ಮನಸ್ಸಿಗೆ ತುಂಬಿದ. ನಮ್ಮ ಊರಿನವರು ಇಂಥ ಡಿಪಾರ್ಟುಮೆಂಟಿನಲ್ಲಿ ಇಲ್ಲವಲ್ಲ ಅನ್ನಿಸಬಾರದು. ನಿಮ್ಮಲ್ಲಿ ಬುದ್ಧಿ, ಸಾಮರ್ಥ್ಯವಿದೆ. ಅವನ್ನು ಮುಂದಿಟ್ಟು ನಡೆಯಿರಿ. ಬಡತನ, ಅನಾನುಕೂಲ ಇರುವುದೇ. ಜೊತೆಗೆ ನಾವಿರುತ್ತೇವೆ. ಮುನ್ನಡೆಯೋಣ. ಸಾಧನೆ ನಿಮ್ಮದು, ಹೆಮ್ಮೆ ಊರಿನದಾಗಲಿ ಎಂದು ನುಡಿದ.

ಯಾರಿಗೆ ಹೇಗೊ, ನನಗೆ ಇದು ಭಾವುಕನ ಭಾಷಣ, ಸಾಧ್ಯವಾಗದ್ದು ಅನ್ನಿಸಲಿಲ್ಲ. ಬೋಡೆಪ್ಪ, ಎಲ್ಲರಿಗೂ ಕುಡಿಯಲು ನೀರು ಕೊಡುತ್ತ ಹೇಳಿದ, ನರಸಿಂಗನದು ಬರೀ ಮಾತಲ್ಲ, ನೀವೂ ಓದಬಹುದಿತ್ತಲ್ಲ ಎಂದು ಕೇಳೀರಿ. ಓದಿ ಉದ್ಯೋಗ ಅಂತ ಹೋದರೆ ಊರಿನಲ್ಲಿ ಇರೋರು ಯಾರು? ಹೆಬ್ಬೆಟ್ಟು ಒತ್ತದಷ್ಟು ಓದಿದ್ದೇ ಸಾಕು ನಮಗೆ. ನಿಮ್ಮ ಪರವಾಗಿ ನಾವು ಊರಿನಲ್ಲಿರುತ್ತೇವೆ. ನಮ್ಮ ಪರವಾಗಿ ನೀವು ಮುಂದುವರೆಯಿರಿ ಎಂದ. ಅವರ ಮಾತಿನ ಪ್ರಭಾವಕ್ಕೆ ಅಲ್ಲಿದ್ದವರೆಲ್ಲ ಒಳಗಾದರೆಂದಲ್ಲ. ನಾವೊಂದಿಷ್ಟು ಮಂದಿ ಒಳಗಾದುದುದಂತೂ ದಿಟ.

ನರಸಿಂಗನ ಗೆಳೆಯರು ಊರಿನಲ್ಲಿ ಯಾರು ಯಾರಿಗೆ ಏನೇನು ಹೇಳಿದರೋ. ನಾನೂ ಸೇರಿದಂತೆ ಮೂವರಿಗೆ ಪ್ರವೇಶ ಶುಲ್ಕ, ಒಂದಿಷ್ಟು ದಿನಕ್ಕೆ ಖರ್ಚಿಗಾಗುವಷ್ಟು ಹಣ ಹೊಂದಿಸಿಕೊಟ್ಟರು. ಹಿರಿಯರಿಂದ ಬುದ್ಧಿ ಹೇಳಿಸಿಕೊಂಡ ಅಪ್ಪ ಮೆತ್ತಗಾದ. ನಾನು ಎಲ್‍ಎಲ್‍ಎಂ ಮಾಡಿದ್ದು ಹೀಗೆ. ನನ್ನನ್ನು ಕಂಡಾಗಲೆಲ್ಲ ನರಸಿಂಗ, ನಮ್ಮ ಜಡ್ಜ್ ಸಾಹೇಬರು ಹೇಗಿದ್ದಾರೆ ಎಂದು ಕೇಳಿ, ನಾನಾಗಬೇಕಾದುದನ್ನು ನೆನಪಿಸುತ್ತಿದ್ದ.

Sa Raghunath Column: Narasinga Was Not There, Couldnt Get Him

"ನಾನು ಮಹೇಶನೆಂದು ಏನೇನು ಹೇಳಿದೆ, ಅವೆಲ್ಲವು ಪ್ರಾರಂಭದಲ್ಲಿ ಹೇಳಬೇಕಿದ್ದುದು. ನರಸಿಂಗನ ಕುರಿತು ಬರೆಯಲು ಬಂದ ಬರಹಗಾರ ರುದ್ರೇಶ ಗಮನ ಕೊಟ್ಟಿದ್ದು ಬಾಲ್ಯ ದಾಟಿದ್ದ ದಿನಗಳಿಂದ ಮುಂದಕ್ಕೆ. ಹಾಗಾಗಿ ಈ ಇಷ್ಟನ್ನು ರುದ್ರೇಶರನ್ನು ಕರೆಸಿ ಹೇಳುವ ಅಗತ್ಯ ನನ್ನದಾಯಿತು. ಹೀಗೆ ಬೇರೆ ಯಾರಾದರು ಹೇಳಿದ್ದರೆ ಹಸ್ತಕ್ಷೇಪ ಅನ್ನುತ್ತಿದ್ದರೇನೊ? ನಾನೊಬ್ಬ ನ್ಯಾಯಾಧೀಶ.''

ಅಲ್ಲದೆ ನರಸಿಂಗನ ಬಾಲ್ಯದೊಂದಿಗೆ ಇದ್ದವನು ಎಂಬೆರಡು ಸಂಗತಿಯಿಂದಾಗಿ, ಲೋಪವೂ ಆದೀತೆಂದು ಮನಗಂಡು, ನಿಮ್ಮದೇ ನಿರೂಪಣೆಯಲ್ಲಿ ಇರಲಿ. ಹಾಗೆಯೇ ತೆಗೆದುಕೊಳ್ಳುತ್ತೇನೆಂದು ಹೇಳಿದರು. ಆಗದೆಂದಿದ್ದರೆ ನಾನೇನೂ ಮಾಡಲಾಗುತ್ತಿರಲಿಲ್ಲ. ಹೀಗೇಕೆ ಮಾಡಿದಿರಿ ಎಂದು ಕೇಳಿದೆ. ಅದರಲ್ಲಿ ಅಂಥ ವಿಶೇಷ ಇದ್ದಿರಲಾರದು ಅನ್ನಿಸಿದ್ದಕ್ಕೆ ಹೀಗಾಯಿತು ಎಂದರು.

ನಾನು ಹೇಳುವುದನ್ನು ನಿಮ್ಮ ನಿರೂಪಣೆಯಲ್ಲಿ ಪ್ರಾರಂಭಕ್ಕೆ ಸೇರಿಸಿಕೊಳ್ಳಬಹುದಲ್ಲ ಎಂದೆ. ಆದೀತು. ಆದರೆ ಬೇಡ. ನೀವೇ ಹೇಳಿದಂತಿರಲಿ ಅಂದರು. ಇದು ಕೂಡಿಕೊಳ್ಳದೆ ಪ್ರತ್ಯೇಕವಾಗಿ ಉಳಿದು, ದೋಷವೆನ್ನಿಸದೆ ಎಂದು ಪ್ರಶ್ನಿಸಿದೆ. ನಿಜವೇ ಆದರೂ ಹೀಗೆಯೇ ಇರಲಿ ಎಂದರು. ಇನ್ನೊಮ್ಮೆ ಯೋಚಿಸಿ. ನನಗಿದು ಸರಿಯೆನಿಸುತ್ತಿಲ್ಲವೆಂದೆ. ನರಸಿಂಗರಾಯ ಹಣ್ಣಿನ ಮರ. ಅದು ಮೊಳಕೆಯೊಡೆದುದನ್ನು ನೀವು ದೃಶ್ಯೀಕರಿಸಿರುವುದು ಸರಿಯಿದೆ. ನಾನೇ ಬರೆದೆನಾದರೆ, ಎಷ್ಟೋ ಜಾರಿ ಹೋಗುವುದು. ಉದಾಹರಣೆಗೆ ಹೇಳುವೆ, ನಿಮ್ಮ ತಂದೆಯವರ ಕುರಿತು ನೀವು ಬರೆದಂತೆ ನಾನು ಬರೆಯಲಾಗುತ್ತಿರಲಿಲ್ಲ. ನನ್ನಿಂದ ಹೀಗೆ ಆಗಿರುವುದುಂಟು. ನರಸಿಂರಾಯರೇ ಹೇಳಿದ್ದರೆ ಆ ಮಾತು ಬೇರೆ ಅಂದರು. ನನಗೂ ನಿಜ ಅನ್ನಿಸಿತು.

'ನನ್ನಿಂದ ಹೀಗೆ ಆಗಿರುವುದುಂಟು. ನರಸಿಂರಾಯರೇ ಹೇಳಿದ್ದರೆ ಆ ಮಾತು ಬೇರೆ' ಅಂದ ರುದ್ರೇಶರ ಮಾತು ಕೇಳಿದ ಮೇಲೆ, ನಾನು ಬರೆದು ಕೊಟ್ಟಿರುವುದನ್ನು ಒಮ್ಮೆ ಓದಬೇಕೆನಿಸಿತು. ಅದನ್ನೇ ಹೇಳಿ, ಇಸಿದುಕೊಂಡು ಓದಿದೆ. ಅಪ್ಪನ ಬಗ್ಗೆ ಹೇಳಿರುವ ರೀತಿ ಕಟುವೇ ಅನ್ನಿಸಿತು. ಅವನಿದ್ದುದೇ ಹಾಗೆ, ಕಟುವಲ್ಲ. ನರಸಿಂಗನನ್ನು ಚಿತ್ರಿಸಿರುವ ರೀತಿಯಲ್ಲಿ ಯಾವುದು ಅತೀ ಅಥವಾ ಲೋಪವಿದೆ ಅನ್ನಿಸಲಿಲ್ಲ.

ನರಸಿಂಗನನ್ನು ಭೇಟಿ ಮಾಡಿದ್ದೀರ ಎಂದು ಕೇಳಿದೆ. ಮೊದಲ ದಿನ ಕಂಡಿದ್ದೆ. ತನ್ನ ಬಗ್ಗೆ ಬರೆಯುದೇನೂ ಇಲ್ಲ. ಬಂದಿದ್ದೀರಿ. ಊರನ್ನು ನೋಡಿಕೊಂಡು ಹೋಗಿ ಅಂದುಬಿಟ್ಟರು. ಕಡೆಯ ದಿನ ಮನೆಗೆ ಹೋದೆ, ಇರಲಿಲ್ಲ.

'ಇರಲಿಲ್ಲ' ಎಂದು ರುದ್ರೇಶ ಹೇಳಿದ್ದು ನಿಜವಾಯಿತು. ನರಸಿಂಗ ಇರಲಿಲ್ಲ. ಸಿಗಲಿಲ್ಲ.

English summary
Sa Raghunath Column: He was not there when Rudresh went home to visit Narasinga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X