ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ನನ್ನ ತವರು- ಮಂದಿ ಕಲಿಸಿದ ವಿದ್ಯೆ- ತೋರಿದ ದಾರಿಯಲ್ಲಿ

By ಸ. ರಘುನಾಥ
|
Google Oneindia Kannada News

ಹೆಣ್ಣಿಗೆ ಮಾತ್ರ ತವರೆಂಬುದಲ್ಲ. ಹುಟ್ಟಿದ ಊರು ಗಂಡಸಿಗೂ ತವರೇ. ಅದನ್ನು ನೆನೆಯುವ, ಬಣ್ಣಿಸುವ, ಆನಂದಿಸುವ ಭಾಗ್ಯದಲ್ಲಿ ಗಂಡಸೂ ಇರುವವನೇ. ಅಂತಹವರಲ್ಲಿ ನಾನೂ ಒಬ್ಬ.

ನನ್ನ ಹುಟ್ಟಿದೂರು ಮಲಿಯಪ್ಪನಹಳ್ಳಿ. ಮಾಲೂರಿಗೆ ಬಂದು ಹೋಗುವ ರೈಲಿನ ಕೂಗು ರಾತ್ರಿಯ ಪ್ರಶಾಂತತೆಯಲ್ಲಿ ನನ್ನೂರಿನ ಸಹಿತ ಸುತ್ತಲಿನ ಚವ್ವೇನಹಳ್ಳಿ, ಡೊಡ್ಡಕಡತೂರು, ಚಿಕ್ಕಕಡತೂರು, ಓಬಳಾಪುರ, ಕನಿವೇನಹಳ್ಳಿ, ಬಾವನಳ್ಳಿ, ಉಮ್ಮಲು, ಅಬ್ಬೇನಹಳ್ಳಿಗಳಿಗೂ ಕೇಳಿಸಿ, ಮಾಲೂರು ನಮಗೆಲ್ಲ ಎಷ್ಟು ಹತ್ತಿರ ಎಂದು ಹೇಳುತ್ತಿತ್ತು.

ಮಾಲೂರು ಕರಗಕ್ಕೆ ಕರೆದೊಯ್ಯುವುದಾಗಿ ಆಸೆ ಹುಟ್ಟಿಸಿದ್ದರು
ತಾತ ನಾರಾಯಣರಾವ್, ಅವನ ಪಕ್ಕ ಮಲಗುತ್ತಿದ್ದ ನಾನು, ಅಡುಗೆ ಮನೆ ಹೊಸ್ತಿಲಿಗೆ ತಲೆಯಿಟ್ಟು ಮಲಗುತ್ತಿದ್ದ ಅಜ್ಜಿ ವೆಂಕಮ್ಮ, ರಾತ್ರಿ ಹೊತ್ತು ಚಲಿಸುತ್ತಿದ್ದ ರೈಲುಗಳ ಕೂಗನ್ನು ಆಲಿಸುತ್ತಿದ್ದೆವು. ಆಗೆಲ್ಲ ನನಗೆ ಮಾಲೂರು ಕರಗ ನೆನಪಾಗಿ, ಆದು ಇನ್ನೆಷ್ಟು ದಿನ ಹತ್ತಿರವೆಂದು ಎಣಿಸುತ್ತ, ಅದನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದ ಸೋದರಮಾವ ಗೋಪಣ್ಣ ಹೇಳುವ ಕೆಲಸಗಳನ್ನು, ಅದರಲ್ಲಿಯೂ ಎತ್ತುಗಳಿಗೆ ಜೋಳಕರೆ ತಿನಿಸುವ ಕೆಲಸ ಮಾಡಿ ಮೆಚ್ಚಿಸಬೇಕು ಎಂದು ನಿರ್ಧರಿಸುತ್ತಿದ್ದೆ.

ಈ ಮಾವ ಆಸೆಗಳನ್ನು ಹುಟ್ಟಿಸಿ ಮಾಡಿಸುತ್ತಿದ್ದ ಕೆಲಸ ಒಂದೆರಡಲ್ಲ. ಕೊಯ್ಲಿಗೆ ಬಂದ ಹುರುಳಿ ಹೊಲದಲ್ಲಿನ ಹುಚ್ಚೆಳ್ಳು ಗಿಡಗಳನ್ನು ಕಿತ್ತವರನ್ನು 'ಹುಚ್ಚೆಳ್ಳಮ್ಮನ ಪರಿಷೆ'ಗೆ ಕರೆದೊಯ್ಯುವುದಾಗಿ, ಎತ್ತುಗಳಿಗೆ ಮೇವು ಹಾಕಿ, ನೀರು ಕುಡಿಸಿ, ಸಂಜೆ ಹುರುಳಿ ನುಚ್ಚು ಇಟ್ಟರೆ ಚವ್ವೇನಹಳ್ಳಿಯ 'ಬಾಬಯ್ಯನ ಜಲ್ದಿ'ಗೆ, ಕಣದಲ್ಲಿ ಅರಿಬಿಡಲು ಬಂದರೆ ಕೇಳಿಕೆಗೆ, ಈ ಎಲ್ಲ ಕೆಲಸ ಮಾಡಿದರೆ ಮಾಲೂರು ಕರಗಕ್ಕೆ ಕರೆದೊಯ್ಯುವುದಾಗಿ ಆಸೆ ಹುಟ್ಟಿಸಿ, ಕೆಲಸಗಳನ್ನು ಮಾಡಿಸುತ್ತಿದ್ದ. ಆದರೆ ಹುಚ್ಚೆಳ್ಳಮ್ಮನ ಪರಿಷೆ ಎಲ್ಲಿ ನೆರೆಯುತ್ತಿತ್ತೆಂದು ನನಗೆ ಇಂದಿಗೂ ತಿಳಿದಿಲ್ಲ.

sa raghunatha column: My hometown and the People taught me life lesson

ಓದಿದ ಗಿಣಿ ಮಲತಿಂತು
ಕರಗ ತೋರಿಸಲು ಬೆಳಗಿನಜಾವ ಹೊರಡಿಸುತ್ತಿದ್ದ. ನಾವು ಮಾಲೂರನ್ನು ಮುಟ್ಟುವ ಹೊತ್ತಿಗೆ ಕರಗದಮ್ಮ ಧರ್ಮರಾಯನ ಗುಡಿಯಲ್ಲಿ ಬೆಚ್ಚಗಿರುತ್ತಿದ್ದಳು. ದೊಡ್ಡ ಹೂಪಲ್ಲಕ್ಕಿಯನ್ನು ತೋರಿಸಿ ಕರಗವೆಂದು ನಂಬಿಸುತ್ತಿದ್ದ. ಮಾಲೂರಿನ ಮುನ್ಸಿಪಲ್ ಹೈಯರ್ ಸೆಕೆಂಡರಿ ಸ್ಕೂಲಿಗೆ ಸೇರಿದ ನಂತರವೇ ತಿಳಿದಿದ್ದು, ಅವನು ತೋರಿಸುತ್ತಿದ್ದುದು ಕರಗವಲ್ಲವೆಂದು.

ಮಲಿಯಪ್ಪನಹಳ್ಳಿ, ಮಾಲೂರು ನನ್ನ ವಿಶ್ವವಿದ್ಯಾಲಯಗಳು. ನನ್ನ ಅಜ್ಜಿ, ತಾತ, ನನ್ನೂರಿನ ಜನ, ಅದರಲ್ಲಿಯೂ ನನ್ನ ದುಷ್ಟಬುದ್ದಿಯಿಂದಾಗಿ ಬೈಯ್ಯುತ್ತಿದ್ದ ಹೆಂಗಸರು ನನಗೆ ಪ್ರೊಫೆಸರ್ಸ್. 'ನಿನಕೇನು ರ್ವಾಗ ಬಂದದೋ ನನ ಬಟ್ಟೆ? ದೊಡ್ಡಮ್ಮಣ್ಣಿನ ಅಂಗೆ ಗೋಳಿಕ್ಯಂತಿ, ಅದೆಂಗೆ ಐನೋರಾಗುಟ್ಟಿದಿಯೋ ಮುಂಡಿಮಗನೆ, ನಿನ ಬುದ್ದಿ ಯಾರ ಎಕ್ಕಡ ತಿಂತಿರ್ತದೆ ಅಂತೀನಿ...' ಮೋಟಪ್ಪ ಒಂದು ಸಲ 'ಓದಿದ ಗಿಣಿ ಮಲತಿಂತು' ಅಂತಾರಲ್ಲ ಹಂಗೆ ನೋಡು ಐನೋರೆ ನಿನ ಬುದ್ದಿ' ಅಂದಿದ್ದ.

ಇಡ್ಲಿ, ಚಟ್ನಿ ಪಾರ್ಸೆಲ್ ಕಟ್ಟಿಸಿಕೊಂಡು ತಿಂದಿದ್ದು
ಕೊಡಲಿ ಸರಿಯಿಲ್ಲವೆಂದು ನನ್ನಜ್ಜಿಯ ಮೇಲೆ ಸಿಡುಕುತ್ತಿದ್ದಾಗ ಶಿವಾರಪಟ್ಟಣ ಚಿನ್ನಪ್ಪ 'ಕೆಲ್ಸ ಮಾಡೊ ಆಳು ನೆಟ್ಟಿಗಿದ್ರೆ ಯಾಣ (ಸಾಧನ) ಏನು ಮಾಡ್ತದೆ' ಎಂದು ಇನ್ನೊಂದು ಪಾಠ ಕಲಿಸಿದ. ಹಿಂದಿನಿಂದ ಬಾವಿಗೆ ತಳ್ಳಿ ಈಜು ಕಲಿಸಿದ್ದು ನೂಟಿವೆ ಚಿನ್ನಾರಪ್ಪನ ಮಗ ರಾಮಪ್ಪ. ಹೀಗೆ...

ನಾನು ಮೊದಲು ಸಿನೆಮಾ ನೋಡಿದ್ದು ಮಾಲೂರಿನ ಟೆಂಟಿನಲ್ಲಿ. ಅದು 'ಗುಂಡಮ್ಮ ಕಥ.' ಕರೆದುಕೊಂಡು ಹೋದವರು ಅತ್ತೆಯರಾದ ಜಯ್ಯಮ್ಮ ಮತ್ತು ಸೀತಮ್ಮ. ಆ ರಾತ್ರಿ ಇದ್ದುದು ನಮ್ಮ ಮನೆ ಪುರೋಹಿರಾದ ಸೀತಾರಾಮಶಾಸ್ತ್ರಿಗಳ ಮನೆಯಲ್ಲಿ. ಬೆಳಗ್ಗೆ ಗುರುಪ್ರಸಾದ್ ಹೋಟೆಲ್‌ನಲ್ಲಿ ಇಡ್ಲಿ, ಚಟ್ನಿ ಪಾರ್ಸೆಲ್ ಕಟ್ಟಿಸಿಕೊಂಡು ತಿಂದಿದ್ದು ನಮ್ಮೂರಿನ ದಾರಿಯಲ್ಲಿನ ಬಾಬುರಾಯನ ಕುಂಟೆಯಲ್ಲಿ ಮುಖ ತೊಳೆದು, ಅದೇ ನೀರನ್ನು ಕುಡಿದು.

ಬೆಲ್ಟ್ ತಿರುಗಿಸುತ್ತ ಕಾಯುತ್ತಿದ್ದರು
ಪ್ರತಿ ಶನಿವಾರ ಸುದ್ದಕುಂಟೆ ಆಂಜನೇಯಸ್ವಾಮಿ ಗುಡಿಯ ಪ್ರಸಾದ ತಿನ್ನದೆ ನಾವು, ಮಲಿಯಪ್ಪಯಪ್ಪನಹಳ್ಳಿಯ ಹುಡುಗರು ಶಾಲೆಗೆ ಹೋದದ್ದಿಲ್ಲ. ತಡವಾದವರಿಗಾಗಿ ಡ್ರಿಲ್ ಮಾಸ್ಟರ್ ಮಾಲೂರು ಸೊಣ್ಣಪ್ಪ ವಿಜಲ್ ಬೆಲ್ಟ್ ತಿರುಗಿಸುತ್ತ ಕಾಯುತ್ತಿದ್ದರು. ಅವರನ್ನು ನೋಡುತ್ತಲೇ ಏಟು ಬಿದ್ದಂತೆ ಮುಡ್ಡಿ ಉರಿಯುತ್ತಿತ್ತು. ಗುಂಪಿನಲ್ಲಿ ಏಟು ತಪ್ಪಿಸಿಕೊಂಡವರು ದಾರಿಯುದ್ದ ಜಂಬಕೊಚ್ಚುತ್ತಿದ್ದರು.

ಇಂಗ್ಲಿಷ್ ಮೇಷ್ಟ್ರು ಡಿ.ಆರ್.ಎನ್. ಐದನ್ನು ಮೂವ್ವತ್ತೈದು ಮಾಡಿ ಪಾಸು ಮಾಡದೆ ಹೋಗಿದ್ದರೆ ನಾನಂತೂ ಹತ್ತನೆಯ ತರಗತಿಯನ್ನೂ ಮುಟ್ಟುತ್ತಿರಲಿಲ್ಲ. ಗಣಿತದ ಮೇಷ್ಟ್ರು ಎಚ್.ಆರ್.ಆರ್ ಪುಣ್ಯಕೋಟಿಯಂಥವರು. ಎಚ್.ಎಸ್. ಎನ್. 'ಮೆಡಿಸನ್' ಎನ್ನುತ್ತಲೇ ಗಿಲ್ಲಿ ಗಿಲ್ಲಿ ಕಲಿಸುತ್ತಿದ್ದರು. ಸುಂದರವಾಗಿ ಕಾಣುತ್ತಿದ್ದ ಎಂ.ಬಿ.ಎ. ಮೇಡಂ ಕಲಿಸಿದ್ದು ಹಿಂದಿ. ಅವರ ಅಣ್ಣ ಎಂ.ಬಿ.ಸಿ. ತರಗತಿಗೆ ಬಂದಕೂಡಲೇ ಹೇಳುತ್ತಿದ್ದುದು 'ಅರ್ಥ್ ಈಜ್ ಲೈಕ್ ಎ ಬಾಲ್.'

ತಂಗಳುಂಡು ಹೋದವರಿಗೆ ತೂಕಡಿಕೆ
ಎಸ್.ಎಲ್. ಮೇಷ್ಟ್ರು ಎಷ್ಟು ಇಂಗ್ಲಿಷ್ ಕಲಿಸಿದರೋ ನೆನಪಿಲ್ಲ. ಆದರೆ 'ಥರ್ಡ್ ಪರ್ಸನ್ ಸಿಂಗಿಲರ್‍ಕು ಎಸ್ ಲಗಾನ' ಎಂಬುದಂತೂ ನೆನಪಿದೆ. ಜಿ.ಎನ್.ಜಿ. ಮೇಷ್ಟ್ರು ಬಯಾಲಜಿ. ಅದಿದ್ದುದು ಎರಡನೆಯ ಪೀರಿಯಡ್‍ನಲ್ಲಿ. ಬೆಳಿಗ್ಗೆ ತಂಗಳುಂಡು ಹೋದವರಿಗೆ ಆ ವೇಳೆಯಲ್ಲಿ ತೂಕಡಿಕೆ. ಅವರು ಉಕ್ತಲೇಖನ ರೂಪದಲ್ಲಿ ನೋಟ್ಸ್ ಕೊಡುತ್ತಿದ್ದರು. ಹಾಳೆಯ ತುಂಬ ಬರೀ ಗೆರೆಗಳೇ.

ಶಿಕ್ಷೆ- ಬೆಂಚಿನ ಮೇಲೆ ನಿಲ್ಲುವುದು. ಹತ್ತನೆಯ ತರಗತಿಯಲ್ಲಿದ್ದಾಗ ಎಂ.ಆರ್.ಎನ್. 'ಫ್ರೀ ಟ್ಯೂಷನ್' ಮಾಡಿ ಉದ್ಧರಿಸಿದರು. ಇದರ ಪರಿಣಾಮವೆಂದರೆ, ನಾನು ಮೇಷ್ಟ್ರು ಅಂತಾದಾಗ ಬಡಮಕ್ಕಳಿಗೆ ಹೆಚ್ಚುವರಿಯಾಗಿ ಕಲಿಸಲು ಪ್ರೇರಣೆಯಾಯಿತು. ವಾಮನಾಕಾರದ ಸಂಸ್ಕೃತ ಮೇಷ್ಟ್ರು ಎನ್.ಎಸ್. ಶಿವರಾಮ ಪುರಾಣಿಕರು. ಸುಭಾಷಿತಗಳಿಗೆ ಒತ್ತುಕೊಟ್ಟು ಕಲಿಸುತ್ತಿದ್ದುದು ಅವರ ವಿಶೇಷ.

ನಾನು ಅವರಂತೆಯೇ ಪಾಠ ಮಾಡಿದ್ದೇನೆ
ಮುಖ್ಯೋಪಾಧ್ಯಾಯರಾಗಿದ್ದ ಎಂ. ಸೀತಾರಾಮಯ್ಯನವರ ಕುರಿತು ಹೇಳಲೆಬೇಕು. ಎಡಗೈ ಮುಂಭಾಗಕ್ಕೆ ಗಡಿಯಾರ, ಅದೇ ಕೈಯ ಹೆಬ್ಬೆರಳು ಮತ್ತು ಕಿರುವೆರಳು ನಡುವೆ ಉಳಿದ ಬೆರಳುಗಳ ಹಿಮ್ಮಾಸರೆಯಲ್ಲಿ ಪುಸ್ತಕ ಹಿಡಿದು, ಮೇಜಿಗೊರಗಿ ನಿಂತು ಪಾಠ ಮಾಡುತ್ತಿದ್ದ ಭಂಗಿ ಆಕರ್ಷಕ. ಅದರ ಪರಿಣಾಮವಾಗಿ ನಾನು ಅವರಂತೆಯೇ ಪಾಠ ಮಾಡಿದ್ದೇನೆ. ಅವರ ಪಾಠದ ವೈಶಿಷ್ಟ್ಯವೆಂದರೆ ಇಂಗ್ಲಿಷನ್ನು ಕನ್ನಡದೊಂದಿಗೆ ಹೇಳಿ, ಕನ್ನಡದ ಮೂಲಕ ಇಂಗ್ಲಿಷ್‌ಗೆ ಕರೆದೊಯ್ಯುತ್ತಿದ್ದುದು.

ಹಾಗಾಗಿ 'ಲಾರ್ಡ್ ಅಲಿನ್ಸ್ ಡಾಟರ್, ಆನ್ ಹಿಸ್ ಬ್ಲೈಂಡ್‍ನೆಸ್...' ಪದ್ಯಗಳು, ದಿ ನೆಕ್ಲೆಸ್, ದಿ ಗಿಫ್ಟ್ ಆಫ್ ದಿ ಮ್ಯಾಗಿ, ಆಲ್ ಅಬೌಟ್ ದಿ ಆಗ್...' ಗದ್ಯ ಇಂದಿಗೂ ನೆನಪಿನಲ್ಲಿ ಉಳಿದಿವೆ. ಅವರಿಂದಾಗಿ ನಾನು ಮುಂದೆ ಮಾಸ್ತಿಯವರ ಕಥೆಗಳನ್ನು ಓದಿದ್ದು. ಮಾಸ್ತಿಯವರ 'ಮೊಸರಿನ ಮಂಗಮ್ಮ' ಕಥೆಯ ಇಂಗ್ಲಿಷ್ ಅವತರಣಿಕೆಯನ್ನು ಪಾಠ ಮಾಡುವಾಗ ಮಾಸ್ತಿ ಇಂಗ್ಲಿಷ್‌ನಲ್ಲಿ ಬರೆದು ಕನ್ನಡಕ್ಕೆ ತಂದರೇನು ಅನ್ನುವಂತಿತ್ತು ಸೀತಾರಾಮಯ್ಯನವರ ಪಾಠ.

ವಾಟ್ ಈಜ್ ಯುವರ್ ನೇಮ್ ಈಜ್ ರಘುನಾಥ
ಪ್ರಾಥಮಿಕ ಶಾಲೆಯಲ್ಲಿ ಓನಾಮ ಕಲಿಸಿದ್ದು ಲೀಲಾವತಿ ಮೇಡಂ. ಗಜೇಂದ್ರರಾಜು ಉಕ್ತಲೇಖನದ ಮೂಲಕ ನನ್ನ ತಾತ ಕಲಿಸಿದ ಕಾಗುಣಿತವನ್ನು ಬಳಸುವುದು ಹೇಗೆಂದು ಕಲಿಸಿದರು. ದೊಡ್ಡಕಡತೂರು ಶಾಲೆಯಲ್ಲಿ ವಡಗೇರನಹಳ್ಳಿ ಮುನೆಪ್ಪ ಮೇಷ್ಟ್ರು ನನಗೆ ಗಣಿತ ಕಲಿಸುವಲ್ಲಿ ಸೋತು ಪಾಸು ಮಾಡಿದ್ದೊಂದ್ದು ಮಧುರ ನೆನಪು. ಮುಖ್ಯೋಪಾಧ್ಯಾರಾಗಿದ್ದ ಪಿಳ್ಳಪ್ಪ ಮೇಷ್ಟ್ರು 'ಶನಿಮುಂಡೇದೆ' ಎಂದು ರೂಲುದೊಣ್ಣೆ ಬೀಸಿ ಇಂಗ್ಲೀಷ್ ಕಲಿಸಲು ಆಗದಿದ್ದರೂ ಪಿರ್ರೆಯ ಮೇಲೆ ಮೂಡುತಿದ್ದ ಬಾಸುಂಡೆಗಳು ಈಗಲೂ ಚಿತ್ತದಲ್ಲಿ ಚಿತ್ರಿತವಾಗಿದೆ.

ಆರನೆಯ ತರಗತಿಯಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದ ವೆಂಕಟಸುಬ್ಬಯ್ಯಶೆಟ್ಟಿ ಮೇಷ್ಟ್ರು, ಒಂದೇ ಒಂದು ಪ್ರಶ್ನೆಗೆ ಆನ್ಸರ್ ಹೇಳಿಬಿಡು ಪಾಸು ಮಾಡಿಬಿಡುತ್ತೇನೆ ಎಂದು ಕೇಳಿದ್ದು, 'ವಾಟ್ ಈಜ್ ಯುವರ್ ನೇಮ್?' ಎಂದು. 'ವಾಟ್ ಈಜ್ ಯುವರ್ ನೇಮ್ ಈಜ್ ರಘುನಾಥ' ಎಂದು ಹೇಳುತ್ತಿರುವಾಗಲೇ 'ಈ ಜನ್ಮದಲ್ಲಿ ನೀನು ಪಾಸಾಗೊಲ್ಲ ಕುಕ್ಕರಿಸು' ಎಂದರು. ಇಲ್ಲಿ ನಾನು ಉದ್ಧಾರವಾಗೊಲ್ಲವೆಂದು ಸೋದರತ್ತೆ ಶಾರದಮ್ಮ ಸೇರಿಸಿದ್ದು ಸಿದ್ಧಗಂಗಾ ಮಠಕ್ಕೆ. ಇದಕ್ಕೆ ಬೇರೆಯ ಕಾರಣಗಳೂ ಇದ್ದವು.

ತಿಂಗಳಿಗೆ ಅರವತ್ತು ರೂಪಾಯಿ ಸಂಬಳ
ಮಾಲೂರು ಶಾಲೆಯಲ್ಲಿ ಆಪ್ತ ಗೆಳೆಯರಾಗಿದ್ದವರಲ್ಲಿ ನಾರಾಯಣಸ್ವಾಮಿ, (ಈಗಿವನು ಕೋಲಾರದಲ್ಲಿ ಹುವ್ವಿನ ವ್ಯಾಪಾರಿ). ಎಂ.ಎ. ಕನಕದಾಸ. (ಈಗಲೂ ಮಾಲೂರಿನಲ್ಲಿರುವ). ಆಗಾಗ ತಮ್ಮಯ್ಯ, ಕೋಟಿಲಿಂಗ, ವೇಣುಗೋಪಾಲ ವಹ್ನಿ ಹೀರೋಗಳಂತೆ ಶಾಲೆಯ ಬಳಿಗೆ ಬರುತ್ತಿದ್ದರು. ನಂತರದಲ್ಲಿ ಗೆಳೆಯರಾದವರು. ಇವರಿಂದಲೇ ನನಗೆ ನಾಟಕ ರಂಗದ ಪರಿಸರ ಪರಿಚಯವಾದುದು. ಇವರ ಮೂಲಕ 'ಜನ್ನಿ' (ಫ್ಲೋರ್ ಮಿಲ್ ಜಗನ್ನಾಥ), ಲಚ್ಚಿ (ಲಕ್ಷ್ಮೀನಾರಾಯಣ), ಜಾನ್ ಅಲ್ಮೆಡ ಗೆಳೆಯರಾದುದು.

ಕೋಟಾ ಶ್ರೀನಿವಾಸ ಶೆಟ್ಟರು ಕೆಲಕಾಲ ನನಗೆ ತಮ್ಮ ಮನೆಯಲ್ಲಿ ಕೂರಿಸಿ ಲೆಕ್ಕ ಬರೆಯುವ ಕೆಲಸ ಕೊಟ್ಟರು. ಲೆಕ್ಕ ಬರಸಿದ್ದು ಅಷ್ಟರಲ್ಲೆ ಇದೆ. ತಿಂಗಳಿಗೆ ಅರವತ್ತು ರೂಪಾಯಿ ಸಂಬಳವನ್ನಂತೂ ಕೊಡುತ್ತಿದ್ದರು. ಅವರ ಮಡದಿ, ಮಗಳು (ಇಬ್ಬರ ಹೆಸರೂ ನೆನಪಿಲ್ಲ) ಹಣ್ಣು, ಬಿಸಿಬಿಸಿ ಹಾಲು ಕೊಟ್ಟು ಹಸಿವೆ ನೀಗುತ್ತಿದ್ದರು. ಪ್ರಸಿದ್ಧ ಹಾಸ್ಯ ಲೇಖಕ ಎಂ.ಎಸ್. ನರಸಿಂಹಮೂರ್ತಿಯವರ ತಾಯಿ ತಿಂಡಿ ಕೊಡುವರೇಂದೇ ಕೆಟ್ಟದ್ದಾಗಿ ಬರೆಯುತ್ತಿದ್ದ ಪದ್ಯ, ಕಥೆಗಳನ್ನು ಎಂ.ಎಸ್.ಎನ್. ಅವರಿಗೆ ತೋರಿಸಲು ಹೋಗುತ್ತಿದ್ದೆ. ಅವರಿಂದಾಗಿ ರೋಟರಿ ಕ್ಲಬ್‌ನಲ್ಲಿ ನಾನು ಮೊದಲಿಗೆ ಕವಿತೆ ಓದಿದೆ.

ತಾತನಿಂದ ಕಲಿತಿದ್ದು ನನ್ನ ವೃತ್ತಿಯಲ್ಲಿ ನೆರವಾಯಿತು
ಮಾಲೂರು ತಾಲೂಕು ಕಚೇರಿಯಲ್ಲಿ ಅಂಕಿ- ಸಂಖ್ಯೆ ವಿಭಾಗದಲ್ಲಿದ್ದ ನನ್ನೂರಿನ ಬೈರಮ್ಮ ತಾಯಿಯ ಮಗ ಕೃಷ್ಣಪ್ಪ ಅಲ್ಲಿಯೇ ದರಖಾಸ್ತು ಗುಮಾಸ್ತರ ಬಳಿ ಸೇರಿಸಿದರು. ಅವರು ದಿನಕ್ಕೆ ಎರಡು ರೂಪಾಯಿ ಐವತ್ತು ಪೈಸೆ ಕೊಡುತ್ತಿದ್ದರು. ಅವರ ಬಳಿ ಫೈಲು ಮಾಡುವುದು, ಫ್ರಂ ಅಂಡ್ ಟು ಪುಸ್ತಕ ನಿರ್ವಹಣೆ ಇತ್ಯಾದಿ ಕಲಿತೆ. ಇದು ನನ್ನ ಹೆಡ್ಮಾಸ್ತರು ಹುದ್ದೆ ನಿರ್ವಹಿಸಲು ನೆರವಾಯಿತು. ವ್ಯಾವಹಾರಿಕ ಪತ್ರ, ಆಸ್ತಿ ಕ್ರಯ, ಭೋಗ್ಯ ಪತ್ರ ಬರೆಯುವುದನ್ನು ನನ್ನ ತಾತನಿಂದ ಕಲಿತಿದ್ದು ನನ್ನ ವೃತ್ತಿಯಲ್ಲಿ ನೆರವಾಯಿತು. ಅಲ್ಲದೆ ತೆಲುಗು ಕತೆಗಾರ ಪಾಲಗುಮ್ಮಿ ಪದ್ಮರಾಜರ 'ಕರಣಂ ಕನಕಯ್ಯ ವೀಲುನಾಮ' (ಶಾನುಬೋಗ ಕನಕಯ್ಯನ ಉಯಿಲು) ಕಥೆಯನ್ನು ಅನುವಾದಿಸುವಾಗ ಉಪಯೋಗಕ್ಕೆ ಬಂದಿತು.

'ನಿಮಗೆ ಬೈಯುವುದು ಇಷ್ಟವೋ, ಬೈಸಿಕೊಳ್ಳುವುದೋ' ಎಂಬ ಲೇಖನ ಈ ಸೀಮೆಯ ಬೈಗುಳದ ರೀತಿಯನ್ನು, 'ನಾ ಪೆಟ್ಟಕೋಡಿಪುಂಜು ಪೋಯೆಗದರಾ ನರಸಿಂಹ' ಲೇಖನದ ಮೊದಲ ಪ್ಯಾರಾ ಈ ಬೈಗುಳಗಳಿಂದ ಕೂಡಿದೆ. ಬೈಗುಳದ ಬಗ್ಗೆ ಹೇಳಿದ್ದೇಕೆಂದರೆ, ಇದರಿಂದ ನಾನು ಕೆಲವು ವ್ಯಾಕರಣಾಂಶಗಳನ್ನು, ವಿವಿಧ ಲಯಗಳನ್ನು ಕಂಡುಕೊಂಡಿದ್ದೇನೆ. ತುತ್ತಿಗಾಗಿ ಹಂಬಲಿಸುತ್ತಿದ್ದ ಆ ದಿನಗಳಲ್ಲಿ ನನ್ನನ್ನು ಬಾಗಿಲ ಮರೆಯಲ್ಲಿ ಕೂರಿಸಿ 'ಇಟ್ಟಿಕ್ಕಿದ' ಹನಿಮಕ್ಕ ಮುಂತಾದ ತಾಯಂದಿರು ಕಲಿಸಿದ್ದು, ಹಸಿದವರನ್ನು ಗೌರವಿಸಿ ಅನ್ನವಿಕ್ಕುವುದನ್ನು, ಹಾಗಾಗಿ ನನ್ನ ನೆತ್ತರಿನಲ್ಲಿ ಎಲ್ಲ ಜಾತಿಯವರ ಮನೆ ಅನ್ನದ ಋಣವಿದೆ.

ಒಂದು ರೀತಿಯ ಲವಲವಿಕೆ ಸಿಗುತ್ತದೆ
ನನ್ನ ಅನೇಕ ಗೆಳೆಯರಿಗೆ ನನ್ನಿಂದ ಬೈಸಿಕೊಳ್ಳುವುದೆಂದರೆ ಮೋಜು. ಅಂತಹವರಲ್ಲಿ ವಿಜ್ಞಾನ ಲೇಖಕ ಎಚ್.ಎ. ಪುರುಷೋತ್ತಮರಾವ್, ಭವಾನಿ ಶಂಕರ್ ಮೊದಲಾದವರಿದ್ದಾರೆ. ಹಾಗೆಯೇ ಬೈಯುವವರೂ ಕೂಡ. ನನಗೆ ಈ ಎರಡೂ ಇಷ್ಟವೆ. ಅಶ್ಲೀಲತೆಯೆಂದು ಮೂಗು ಮುರಿಯದೆ ಕಲಿತರೆ, ಆಡಿದರೆ ಒಂದು ರೀತಿಯ ಲವಲವಿಕೆ ಸಿಗುತ್ತದೆ ಎಂಬುದು ನನ್ನ ಅನುಭವ. ಆದರೆ ಇಂತಹ ಎಲ್ಲವೂ ಸಾರ್ವಜನಿಕವಾಗದು. ಆತ್ಮೀಯ ಬಳಗದಲ್ಲಿ ಅನಪೇಕ್ಷಿತವಲ್ಲ. ಭಾಷೆಯ ಸೊಗಸಿನಲ್ಲಿ ಇದರ ಪ್ರಭಾವವೂ ಇರುವುದೇ. ಬರವಣಿಗೆಗೆ ಈ ಶಬ್ದಗಳು ಶೈಲಿ, ರೂಪವನ್ನು ತಂದುಕೊಳ್ಳುವುದನ್ನು ಕಲಿಸುತ್ತದೆ. ನನಗೆ ಇದನ್ನು ಕಲಿಸಿದವರು ಈ ನನ್ನ ಜನ.

Recommended Video

ಇದೇ ನೋಡಿ ಲಕ್ನೋ ತಂಡದ ಪ್ಲೇಯಿಂಗ್ 11 !! | Oneindia Kannada

ನಾನು ಬರೆದ ಹಲವು ಕಥೆಗಳ ನಿರೂಪಣೆಯ ಭಾಷೆ ಇಲ್ಲಿನ ಮೊರಸುನಾಡಿನದು. ಇದನ್ನು ಕಲಿತಿದ್ದು 'ಜನ ವಿಶ್ವವಿದ್ಯಾಲಯದಲ್ಲಿ. 'ಮೊರಸುನಾಡು ಕನ್ನಡ' ಪುಸ್ತಕ ಬರೆಯಲು ಇವರೇ ಕಾರಣ. ಈ ಜನರ ನುಡಿಗನ್ನಡದಿಂದಲೇ 'ಮೊರಸುನಾಡು ಕನ್ನಡ ನಿಘಂಟು' ರಚನಾ ಪ್ರಗತಿಯಲ್ಲಿದೆ. ನನ್ನ ತವರು ನನಗೆ ಎಷ್ಟೊಂದು ಕಲಿಸಿದೆ ಎಂಬ ಕೃತಜ್ಞತೆ, ವಿನಯದಿಂದ ಶರಣೆನ್ನುವೆ.

English summary
Sa. Raghunatha Column: My Hometown Maliyappanahalli and People Taught Me Life Lesson in childhood days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X