ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿ ಪದ್ಮಸಾಲಿ ಲಕ್ಷ್ಮೀದೇವಮ್ಮ

By: ಸ ರಘುನಾಥ
Subscribe to Oneindia Kannada

'ಕೈಲಿ ಶಕ್ತಿಯಿತ್ತು, ಕಣ್ಣಲ್ಲಿ ದೃಷ್ಟಿ ಇತ್ತು, ಬದುಕಿಗೆ ಕೂಲಿಯಿತ್ತು. ದೇವರ ದಯೆ ಇತ್ತು. ಅವನು ಮಾಡಿದ, ನಾನು ಮಾಡಿದೆ ಅಷ್ಟೆ' ಎಂದು 84 ವರ್ಷದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ವಳಗೇರನಹಳ್ಳಿಯ ಪದ್ಮಸಾಲಿ ಲಕ್ಷ್ಮೀದೇವಮ್ಮ, ತಾವು ಮಾಡಿದ ಸಾಧನೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ಹೇಳಿದ ಮಾತಿದು.

ಹೆರಿಗೆ ಮಾಡಿದರೆ ಕೈತುಂಬಿ ಸೋರುವಷ್ಟು ಹಣ ಬರುತ್ತದೆ, ಪ್ರಚಾರ, ಪ್ರಶಸ್ತಿ ಎಂಬುದಿದೆ ಎಂಬುದೂ ತಿಳಿಯದ ಈಕೆ ತಮ್ಮ ಐವತ್ತು ವರ್ಷಗಳ ಸುದೀರ್ಘ ಸೂಲಗಿತ್ತಿ ಕಾಯಕದಲ್ಲಿ ಮಾಡಿಸಿದ ಹೆರಿಗೆಗಳ ಸಂಖ್ಯೆ ಒಂದು ಸಾವಿರಕ್ಕೂ ಅಧಿಕ.

ಮಳೆಗಾಲದ ಲೇಖನದಲ್ಲಿ ಮನಸಾರೆ ತೋಯಿರಿ...

ಲೆಕ್ಕವಿಲ್ಲದಷ್ಟು ಸಲ ಹಿಟ್ಟು-ಗೊಜ್ಜು ಮಾಡಿ ಬಡಿಸಿರುವ ಮತ್ತು ಉಂಡಿರುವ ಈ ತಾಯಿಯನ್ನು 'ಹಿಟ್ಟು-ಗೊಜ್ಜು' ಅಂಕಣಕ್ಕಾಗಿ ಮಾತನಾಡಿಸಿದಾಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.

ಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದು

ಈಗಲೂ ಹೆರಿಗೆ ಮಾಡಿಸುವ ಆಸೆ ಇದೆ. ಆದರೆ 'ಕಣ್ಣುಗಳು ಕೂಸೋಗವೆ' (ಕಾಣದಾಗಿವೆ). ಆ ದೇವರು ಕಣ್ಣುಗಳಲ್ಲಿ ಬೆಳಕು ಇಟ್ಟದ್ದರೆ ಕೈಗೂ ಶಕ್ತಿ ಇರುತ್ತಿತ್ತು. ಆದರೆ ಕಣ್ಣೇ ಇಲ್ಲದಂತೆ ಆಗೋಗಿದೆ ಎಂದು ವಿಷಾದಿಸಿದರು.

ತಾಯಿಯಿಂದ ಪ್ರೇರಣೆ

ತಾಯಿಯಿಂದ ಪ್ರೇರಣೆ

ಬಡತನದಲ್ಲಿ ಹುಟ್ಟಿ ಬೆಳೆದ ಇವರ ಕೈ ಹಿಡಿದವರು ಬಡವರೇ ಆದ ರಂಗಪ್ಪ. ಇಬ್ಬರೂ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದರು. ತಾಯಿ ಅಚ್ಚಮ್ಮ ಹೆರಿಗೆಗಳನ್ನು ಮಾಡುತ್ತಿದ್ದುದ್ದನ್ನು ನೋಡಿ ಅದರಂತೆ ನಾನೂ ಮಾಡಬೇಕೆಂದು ಕಲಿತೆ. ನನ್ನ ಮೂವತ್ತನೇ ವಯಸ್ಸಿನಲ್ಲಿ ಮೊದಲ ಹೆರಿಗೆ ಮಾಡಿದೆ ಎಂದು ನೆಪಿಸಿಕೊಂಡು, ಗಂಡನ ಪ್ರೋತ್ಷಾಹವನ್ನು ಸ್ಮರಿಸಿದರು.

ಲಚ್ಮೀದೇವಮ್ಮನಿದ್ದಾಳೆ ಎಂಬ ನಂಬಿಕೆ

ಲಚ್ಮೀದೇವಮ್ಮನಿದ್ದಾಳೆ ಎಂಬ ನಂಬಿಕೆ

ಹೆರಿಗೆಯಲ್ಲಿ ಕೈ ಪಳಗಿದಂತೆ ವಳಗೇರನಹಳ್ಳಿ ಮತ್ತು ಸುತ್ತಲ ಗ್ರಾಮಗಳ ಗರ್ಭಿಣಿಯರಿಗೆ ಅವರ ಮನೆಯವರಿಗೆ ಲಚ್ಮೀದೇವಮ್ಮನಿದ್ದಾಳೆ ಎಂಬ ನಂಬಿಕೆ ಹುಟ್ಟಿತ್ತು. ಅದರಂತೆ ಇವರು ಹೆರಿಗೆ ಮಾಡುತ್ತಿದ್ದರು. ನೀವು ಮಾಡಿದ ಹೆರಿಗೆಗಳಲ್ಲಿ ಅತ್ಯಂತ ಕಷ್ಟ ಎನಿಸಿದ ಹೆರಿಗೆ ಯಾವುದೆಂದು ಕೇಳಿದ ಪ್ರಶ್ನೆಗೆ, ಲಚ್ಚುಮಕ್ಕ ಎಂಬ ಹೆಂಗಸಿನ ಹೊಟ್ಟೆಯಲ್ಲಿದ್ದ ಎರಡೂ ಮಕ್ಕಳು ಹೊಟ್ಟೆಯಲ್ಲೇ ಸತ್ತು ಹೋಗಿದ್ದವು. ಆಗ ಹತ್ತಿರದಲ್ಲಿ ಆಸ್ಪತ್ರೆ ಇರಲಿಲ್ಲ. ಪೇಟೆ ಆಸ್ಪತ್ರೆಗೆ ಹೋಗುವುದಕ್ಕೆ ಅನುಕೂಲವಿರಲಿಲ್ಲ. ದೇವರ ಮೇಲೆ ಭಾರ ಹಾಕಿ, ಆಕೆಗೆ ಧೈರ್ಯ ಹೇಳಿ, ಉಪಾಯವಾಗಿ ಕೈ ಹಾಕಿ ಎಳೆದು ಹಾಕಿಬಿಟ್ಟೆ.

ದೊಡ್ಡ ಜೀವ ಉಳಿದುಕೊಂಡಿತು

ದೊಡ್ಡ ಜೀವ ಉಳಿದುಕೊಂಡಿತು

ಉಸಿರಿರದವು ಹೊರಗೆ ಬಂದವು. ಪುಣ್ಯ ಗಟ್ಟಿಗಿತ್ತು. ದೊಡ್ಡ ಜೀವ ಉಳಿದುಕೊಂಡಿತು ಎಂದು ಸಾಭಿನಯ ತೋರಿಸಿ ಅದು ಇದೀಗ ನಡೆದಂತೆ ನಿಟ್ಟುಸಿರು ಬಿಟ್ಟರು. ಹೆರಿಗೆ ಸಮಯದಲ್ಲಿ ಮೊದಲು ಮಗುವಿನ ತಲೆ ಹೊರಬಂದರೆ ಕಷ್ಟವಿಲ್ಲ. ಆದರೆ ಕೈಯೋ ಕಾಲೋ ಬಂದರೆ ತುಂಬಾ ಕಷ್ಟ. ಒಂದು ಹೆರಿಗೆಯಲ್ಲಿ ಹೀಗಾಗಿತ್ತು. ಆಗ ಆ ಬಸುರಿಗೆ ದೇವರ ಧ್ಯಾನ ಮಾಡಲು ಹೇಳಿ ಮೆಲ್ಲಗೆ ಆ ಕೈಯನ್ನು ಒಳಕ್ಕೆ ತಳ್ಳಿಬಿಟ್ಟೆ. ಆ ಹೆಣ್ಣು ಜೀವ ಹೋದಂತೆ ಕಿರುಚಿಕೊಂಡಳು. ಆ ಕ್ಷಣದಲ್ಲಿ ನನಗೆ ಕೈಕಾಲು ಆಡಲಿಲ್ಲ. ಆ ಮೇಲೆ ಎರಡು ಜೀವ ಎರಡಾದಾಗ ದೇವರಿದ್ದಾನೆ ಅನ್ನಿಸಿತು ಎಂದು ಇನ್ನೊಂದು ಕಷ್ಟದ ಪ್ರಸಂಗವನ್ನು ಹೇಳಿದರು. ಹಾಗೆ ಗರ್ಭಜಲ ಬತ್ತಿದ ಹೆರಿಗೆಗಳನ್ನು ನೆನೆಸಿಕೊಂಡರು.

ನಮೂದಾಗದ ದಾಖಲೆ

ನಮೂದಾಗದ ದಾಖಲೆ

ಗರ್ಭದಲ್ಲೇ ನಿರ್ಜೀವಾದ ನಾಲ್ಕು ಮಕ್ಕಳನ್ನು ಹೊರತೆಗೆದು ತಾಯಿಯ ಜೀವವನ್ನೂ ಉಳಿಸಿದ್ದು ನಮೂದಾಗದ ದಾಖಲೆ. ಬಸಿರಲ್ಲಿ ಎರಡು ಮಕ್ಕಳನ್ನು ಹೊತ್ತು ಹೆರಿಗೆಗೆ ಕಷ್ಟವಾಗಿದ್ದ ಭಜಂತ್ರಿ ಜಯಮ್ಮನ ಹೆರಿಗೆಯನ್ನು ಸಲೀಸಾಗಿ ಮಾಡಿದ್ದರು. ಆ ಎರಡು ಮಕ್ಕಳು ಈಗ ತಾತಂದಿರಾಗಿ ಈಕೆಯ ಕಣ್ಣ ಮುಂದೆಯೇ ಇದ್ದಾರೆ.

ಎಲ್ಲ ಅನುಕೂಲಗಳಿರುವ ನುರಿತ ವೈದ್ಯರಿಗೂ ಕಷ್ಟ

ಎಲ್ಲ ಅನುಕೂಲಗಳಿರುವ ನುರಿತ ವೈದ್ಯರಿಗೂ ಕಷ್ಟ

ಈ ಕುರಿತು ಶ್ರೀನಿವಾಸಪುರದ ವೈದ್ಯ ವೈ.ವಿ. ವೆಂಕಟಾಚಲ ಅವರನ್ನು ಅಭಿಪ್ರಾಯ ಕೇಳಿದಾಗ, ಗರ್ಭದಲ್ಲಿಯೇ ಮರಣಿಸಿದ ಮಕ್ಕಳನ್ನು ತಾಯಿ ಪ್ರಾಣಕ್ಕೆ ಅಪಾಯವಾಗದಂತೆ ಹೊರತೆಗೆಯುವುದು ಎಲ್ಲ ಅನುಕೂಲಗಳಿರುವ ನುರಿತ ವೈದ್ಯರಿಗೂ ಕಷ್ಟ. ಹಾಗೆ ಗರ್ಭಜಲ ಹರಿದು ಹೋದ ಹೆರಿಗೆಯೂ ಕಷ್ಟ. ಇಂಥ ಕಷ್ಟಕರ ಹೆರಿಗೆಗಳನ್ನು ಈಕೆ ಮಾಡಿರುವುದುನ್ನು ನೋಡಿದರೆ ಈಕೆ ನಿಸ್ಸಂಶಯವಾಗಿ ಮಹಾನ್ ಪ್ರಸೂತಿತಜ್ಞೆ ಎಂದು ಪ್ರಶಂಸಿದರು. ಹಾಗೆಯೇ ಆಕೆ ಬಸುರಿಯರನ್ನು ಮಲಗಿಸಿಯೇ ಹೆರಿಗೆ ಮಾಡುತ್ತಿದ್ದ ವಿಧಾನದ ಕುರಿತು ಇದು ರಿಲ್ಯಾಕ್ಸ್ ಮಾಡಿ ಹೆರಿಗೆ ಮಾಡುವ ಉತ್ತಮ ವಿಧಾನವೆಂದು ಹೇಳಿದರು.

ಪ್ರತಿ ಹೆರಿಗೆಯೂ ಪ್ರಶಸ್ತಿ, ಗೌರವ, ಸನ್ಮಾನ

ಪ್ರತಿ ಹೆರಿಗೆಯೂ ಪ್ರಶಸ್ತಿ, ಗೌರವ, ಸನ್ಮಾನ

ತಮ್ಮ ಅನುಭವಗಳ ಕುರಿತು ಹೇಳುವಾಗ ಕಾಣಿಸದ ಕಣ್ಣುಗಳಲ್ಲಿ ಹೊಳಪು ತುಂಬಿ, ಕ್ಲಿಷ್ಟಕರವಾದ ಹೆರಿಗೆಯನ್ನು ಯಶಸ್ವಿಯಾಗಿ ನೆರವೇರಿಸಿ ಬಂದ ಪ್ರಸೂತಿ ತಜ್ಞರಂತೆ ಉತ್ಸಾಹದಿಂದ ವಿವರಿಸುವ ಈ ತಾಯಂದಿರ ತಾಯಿ, ಒಮ್ಮೆ ಆಹ್ವಾನದ ಮೇರೆಗೆ ನರ್ಸುಗಳಿಗೆ ತರಬೇತಿ ಕೊಟ್ಟು ಬಂದಿದ್ದಾರೆ. ಬಡತನವಿದ್ದೂ, ಹಣದ ಅವಶ್ಯಕತೆ ಇದ್ದೂ ಒಂದು ಬಿಡಿಕಾಸನ್ನೂ ಆಶಿಸದ ಈ ಮಹಾಮಾತೆಗೆ ತಾನು ಮಾಡಿದ ಪ್ರತಿ ಹೆರಿಗೆಯೂ ಪ್ರಶಸ್ತಿ, ಗೌರವ, ಸನ್ಮಾನ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kolar district Srinivasapura taluk midwife Lakshmidevamma has handled more than one thousand maternity cases. Here Oneindia Kannada columnist Sa Raghunatha interview with her.
Please Wait while comments are loading...