ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ.ರಘುನಾಥ ಅಂಕಣ: ಸಂತೆಯ ದಿನದ ಮಾಯಾಬಜಾರು, ಕೂಟೇರಪ್ಪನ ಕೋಟು

By ಸ.ರಘುನಾಥ
|
Google Oneindia Kannada News

ಕೂಟೇರಪ್ಪನ ಕೋಟು ಹೊಲೆಸಿದಾಗ ಅದು ಬೆಳ್ಳಂಬಿಳಿದು. ಅವನು ತೊಟ್ಟ ಕೆಲವು ಕಾಲದವರೆಗೆ ಬಿಳಿಯದಾಗಿಯೇ ಇತ್ತು. ಅದನ್ನು ತೊಟ್ಟ ಕೂಟೇರಪ್ಪ ನಡೆಸಿದ ಕಾರ್ಯ ಚಟುವಟಿಕೆಗಳನ್ನು ತಿಳಿದಾದ ಮೇಲೆ ಅದು ತಳೆದ ಬಣ್ಣ ನಿಮಗೆ ತಿಳಿದುಬಿಡುವುದು.

ಮದುವೆಯಲ್ಲಿ ಮಾವ ಅಳಿಯನಿಗೆ ಕೊಟ್ಟ ಬಳುವಳಿಗಳಲ್ಲಿ ಈ ಕೋಟೂ ಒಂದಂತೆ. ಕೋಟೆಂದರೆ ನಾಲ್ಕು, ಇಲ್ಲವೆ ಹೆಚ್ಚೆಂದರೆ ಐದು ಜೇಬುಗಳು. ಆದರೆ ಕೂಟೇರಪ್ಪನ ಕೋಟಿಗೆ ಎಂಟು ಕಿಸೆಗಳು! ಹೊಲೆಸುವಾಗಲೇ ಎಂಟಿತ್ತೆ? ಹೊಲೆಸಿ ಅವನಿಗೆ ಕೊಟ್ಟಮೇಲೆ ಎಂಟಕ್ಕೆ ಏರಿಸಲಾಯಿತೆ? ಎಂಟೂ ಜೇಬುಗಳನ್ನು ಹೊಲೆದ ದರ್ಜಿ ಒಬ್ಬನೆ, ಬೇರೆ ಬೇರೆಯೆ? ಕೂಟೇರಪ್ಪನೇ ಹೇಳಿ ಹೊಲೆಸಿದ್ದನೆ? ಉತ್ತರ ಬೇಕಿದ್ದರೆ ತನಿಖೆ ಆಗಲೇ ಬೇಕು. ಆ ಖರ್ಚು ಭರಿಸುವವರಿದ್ದರೆ ಕೂಟೇರಪ್ಪನ ಕೋಟಿನಾಣೆ ನನ್ನ ಸಹಕಾರ ಖಂಡಿತಾ ಇರುತ್ತದೆ.

ಮಡದಿಯೊಂದಿಗೆ ಬೇರೆ ಸಂಸಾರ ಹೂಡಿದ
ಆ ಕೋಟು ಅವನಿಗೆ ತುಂಬವೆ ಅನ್ನಬಹುದಾದಷ್ಟು ದೊಗಲೆ. ಜೇಬುಗಳೂ ಅಸಹಜ ಎಂಬಷ್ಟು ದೊಡ್ಡವು. ಎದೆ ಮೇಲಿನ ಜೇಬುಗಳನ್ನು ಬಿಟ್ಟರೆ ಉಳಿದವು ಕಡಿಮೆಯೆಂದರೂ ಪಾವು, ಪಡಿ ಹಿಡಿಸುವಷ್ಟು ದೊಡ್ಡವು. ಇಷ್ಟೆಲ್ಲ ಗಮನಕ್ಕೆ ಬಂದಿದ್ದು, ಮದುವೆಯಾದೊಂದು ಆರು ತಿಂಗಳಿಗೆ. ಅವನು ಮಡದಿಯೊಂದಿಗೆ ಬೇರೆ ಸಂಸಾರ ಹೂಡಿ, ಅದೇ ಕೋಟು ತೊಟ್ಟು ಸಂತೆಗೆ ಹೋಗಿ ಬರಲಿಟ್ಟ ಮೇಲೆಯೇ.

ಕೂಟೇರಪ್ಪ ಬೇಸ್ತವಾರ(ಗುರುವಾರ)ದ ಮಾಲೂರು ಸಂತೆಗೆ ಹೊರಟಾಗ ಕೋಟು ಪಡವಲಕಾಯಿ. ಬರುವಾಗ ಕುಂಬಳಕಾಯಿ ಎಂದು ಹಲವರಿಗೆ ತಿಳಿದ ಗುಟ್ಟಲ್ಲದ ಗುಟ್ಟು. ಕೋಟಿಲ್ಲದೆ ಕೂಟೇರಪ್ಪ ಸಂತೆ ಮಾಡಿ ಬಂದುದನ್ನು ಕಂಡವರಿದ್ದರೆ ಆ ದಿನ, ದಿನಾಂಕವನ್ನು ಖಚಿತಪಡಿಸಿದರೆ ಬಹುಮಾನ ಕೊಡಬಹುದು. ಆ ಆಸೆ ಯಾರಿಗೂ ಹುಟ್ಟುತ್ತಿದ್ದಿಲ್ಲ. ಏಕೆಂದರೆ ಅಂಥದೊಂದು ದಿನವನ್ನು ಕಂಡೆವೆನ್ನುವವರು ಊರಿನವರಿರಲಿ, ಅವನ ಮನೆದೇವರು ತಿರುಪತಿ ತಿಮ್ಮಪ್ಪನೂ ಕಂಡಿರಲಾರನೆಂದರೆ ಯಾರೂ ನಂಬಬೇಕಾದ್ದೇ.

Sa Raghunatha Column: Market Days Mayabazaru, Kooterappas Coat

ಸಂತೆಯೇ ಕೂಟೇರಪ್ಪನ ಕೋಟಿನಲ್ಲಿ ಮನೆಗೆ ಬರುತ್ತಿತ್ತು
ಕೊಂಚ ಅತಿಶಯೋಕ್ತಿಯಲ್ಲಿ ಹೇಳಬಹುದಾದರೆ, ಸಂತೆಯೇ ಕೂಟೇರಪ್ಪನ ಕೋಟಿನಲ್ಲಿ ಮನೆಗೆ ಬರುತ್ತಿತ್ತು. ಅವನಿಗೆ ಸಂತೆ ಮಾಡಲು ಅಗತ್ಯವಾದ ಕೈಚೀಲ ಹೊಲೆಸಲಾಗದಷ್ಟು ಕಷ್ಟವಿತ್ತೆ? ಇರಲಿಲ್ಲ. ಅವನಲ್ಲಿ ಕೈ ಚೀಲ ಇರಲಿಲ್ಲವೆ? ಇತ್ತು. ಬಳಸುತ್ತಿರಲಿಲ್ಲವೆ? ಬಳಸುತ್ತಿದ್ದ. ಮತ್ತೇಕೆ ಕೋಟಿಗೆ ಶಿಕ್ಷೆ? ಪ್ರತ್ಯಕ್ಷ ಸಾಕ್ಷಿ ಪುರಾವೆಗಳಿಲ್ಲದ ಉತ್ತರ ಮುಂದಿದೆ.

ಅವನು ಸಂತೆಯಲ್ಲಿ ಗಿರಾಕಿಗಳ ದಟ್ಟಣೆಯಿರುವ ಅಂಗಡಿಗಳಿಗಷ್ಟೆ ಹೋಗುತ್ತಿದ್ದನಂತೆ. ಜಂಗುಳಿ ನಡುವೆ ಬೆಲೆ ಕೇಳುವ, ಗುಣಮಟ್ಟ ಪರೀಕ್ಷಿಸುವ ನೆಪದಲ್ಲಿ ಕೈಗೆ ತೆಗೆದುಕೊಂಡದ್ದನ್ನು ಅಲ್ಲಿದ್ದವರ ಕಣ್ಣು ತಪ್ಪಿಸಿ ಜೇಬಿಗಿಳಿಸಿ ಬಿಡುವನಂತೆ. ಈ 'ಅಂತೆ'ಗೆ ಪುಷ್ಟಿ ಅವನ ಕೋಟಿನ ಒಂದೇ ಜೇಬಿನಿಂದ ಹೊರಬಂದು ಮನೆಯಲ್ಲಿ ಗುಡ್ಡೆ ಬೀಳುವ ನಾಕಾರು ಸರಕುಗಳು. ವಡೆ- ಬೋಂಡಗಳೂ ಬೆತ್ತಲೆಯಾಗಿಯೆ ಹೊರಬರುತ್ತಿದ್ದವೆಂಬ ಸುದ್ದಿಯುಂಟು.

ಬೋಂಡಗಳಿಗೆ ಎಣ್ಣೆಯ ವಾಸನೆ ಇರುತ್ತಿರಲಿಲ್ಲ
ಹೀಗೆ ಕೂಟೇರಪ್ಪ ತರುತ್ತಿದ್ದ ವಡೆ- ಚಕ್ಕುಲಿ- ಬೋಂಡಗಳಿಗೆ ಎಣ್ಣೆಯ ವಾಸನೆ ಇರುತ್ತಿರಲಿಲ್ಲ. ಕಾರಣ ಅವು ಹೊರಬರುತ್ತಿದ್ದುದ್ದು ಕೊತ್ತಂಬರಿ, ಪುದೀನ, ಹಸಿಮೆಣಸಿನಕಾಯಿ ಇರುತ್ತಿದ್ದ ಜೇಬಿನಿಂದ. ಅದರಿಂದಾಗಿ ಅವಕ್ಕೆ ಈ ಎಲ್ಲವುಗಳ ಹಸಿವಾಸನೆ ಮೆತ್ತಿರುತ್ತಿತ್ತು.

ಇಂತಹ ವಡೆ- ಬೋಂಡ- ಚಕ್ಕುಲಿಗಳನ್ನು ತಿನ್ನುವುದು ನನಗೆ ಪ್ರಿಯವಾಗಿತ್ತು. ಕೂಟೇರಪ್ಪನ ಮಗ, ನನ್ನ ಗೆಳೆಯ ವರದ, ಇವನ್ನು ತಂದು ನನಗೂ ಕೊಡುತ್ತಿದ್ದ. ಇದು ಹೇಗೋ ಮಡಿಹೆಂಗಸಾಗಿದ್ದ ನನ್ನಜ್ಜಿಗೆ ತಿಳಿದು ಹೋಗಿತ್ತು. ಸಂತೆಯ ದಿನದ ಸಂಜೆಯೆಂದರೆ, ವರದ ನನಗೆ ಇವನ್ನು ಕೊಟ್ಟಿರುತ್ತಾನೆ. ನಾನು ತಿಂದಿರುತ್ತೇನೆಂದು ಅವಳು ಬಲ್ಲಳು. ಪಂಚಗವ್ಯ ಕುಡಿಸದೆ, ಮೈಮೇಲೆ ಪ್ರೋಕ್ಷಿಸದೆ, ರಾತ್ರಿ ಊಟ ಹಾಕುತ್ತಿರಲಿಲ್ಲ. ಅಂದು ರಾತ್ರಿ ನಾನುಂಡ ತಟ್ಟೆಯನ್ನು ಬೇರೆ ಇಡಿಸಿ, ಬೆಳಗ್ಗೆ ಹುಣಿಸೆ ಹುಳಿಯಲ್ಲಿ ನನ್ನ ಕೈಯಿಂದಲೇ ತೊಳೆಸದೆ ಇರುತ್ತಿರಲಿಲ್ಲ. ಇಂಥ ದಿನಗಳಲ್ಲಿ ಹೀಗೆ ನನಗೆ ಕುಡಿದ ಎಳೆಗರುವಿನ ಗಂಜಲ ಏನಿಲ್ಲವೆಂದರೂ ಒಂದು ಸೇರಿನಷ್ಟಾದರೂ ನನ್ನ ಹೊಟ್ಟೆ ಹೊಕ್ಕಿದ್ದೀತು.

ಕೋಟು ಮಾತ್ರ ಯೌವ್ವನವನ್ನು ಮರಳಿಸದ ಯಯಾತಿ
ಕೂಟೇರಪ್ಪ ಸಂತೆಗೆ ಕೈಚೀಲ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದೆಂದಿಗೂ ಹೊಟ್ಟೆ ತುಂಬಿಸಿಕೊಂಡ ಪುಣ್ಯಕ್ಕೆ ಬಿದ್ದುದಿಲ್ಲ. ಅದಕ್ಕೆ ಬಾಯಿ ಇದ್ದಿದ್ದರೆ ಕೋಟನ್ನೆಷ್ಟು ಶಪಿಸುತ್ತಿತ್ತೊ ಏನೊ. ಹೀಗೆಯೆ ಅದರ ಆಯಸ್ಸು ಮುಗಿದು ಹೋಗಿತ್ತು.

ಆ ಕೈಚೀಲ ತನ್ನ ಆಯಸ್ಸನ್ನು ಕೋಟಿಗೆರೆದು, ಕೋಟನ್ನು ಯಯಾತಿಯಂತೆ ಮಾಡಿ ಹುತಾತ್ಮವಾಯಿತೆಂದು ಹೇಳಬಹುದು. ಆಮೇಲೆ ಕೂಟೇರಪ್ಪನ ಕೈಗೆ ಇನ್ನೊಂದು ಚೀಲ ಬಂದಿತ್ತು. ಇದೂ ಹಿಂದಿನ ಚೀಲದ ತದ್ರೂಪಿಯಾಗಿತ್ತು. ಮುಂದಿನ ದಿನಗಳಲ್ಲಿ ಇದು ಗಟ್ಟಿತನ ಉಳಿಸಿಕೊಳ್ಳಲಿಲ್ಲವಾದರೂ ತೇಪೆ ಹಾಕಿಸಿಕೊಂಡು ಕೋಟಿನೊಂದಿಗೆ ಸಂತೆ ಕಂಡು ಬರುತ್ತಿತ್ತು. ಕೋಟು ಮಾತ್ರ ಯೌವ್ವನವನ್ನು ಮರಳಿಸದ ಯಯಾತಿಯಂತೆಯೆ ಇತ್ತು.

ಕೂಟೇರಪ್ಪನ ಕೋಟು ವಾರಕ್ಕೊಮ್ಮೆ ಮಾಯಾಬಜಾರು. ಒಂದು ಕಿಸೆಯಿಂದ ಹಿಡಿಯಷ್ಟು ಬೆಂಡೆಕಾಯಿ, ಇನ್ನೊಮ್ಮೆ ಆಲೂಗಡ್ಡೆ, ಮತ್ತೊಮ್ಮೆ ಬದನೆಕಾಯಿ. ಇನ್ನೊಂದು ಜೇಬಿನಿಂದ ಈರುಳ್ಳಿ, ಬೆಳ್ಳುಳ್ಳಿ, ಅಡಕೆ, ಒಂದೆರಡು ಹಿಡಿ ಬೇಳೆಕಾಳು. ಮೊದಲನೇ ಜೇಬಿನಿಂದ ಹೊರಬಂದವೆ ಈ ಜೇಬಿನಿಂದಲೂ ಬರುವುದಿತ್ತು. ಹಿಚುಕಿ ನೀರಾಗಬಹುದಾದ ಟೊಮೆಟೊ, ಬಾಳೆಹಣ್ಣು, ಸೊಪ್ಪು ಇಂತಹವಷ್ಟೇ ಚೀಲದಿಂದ ಹೊರಬರುತ್ತಿದ್ದುದು.

ಕೋಟಿನಲ್ಲೆ ಸರಕು ಸರಂಜಾಮು ತರುತ್ತಿದ್ದ
ಹತ್ತು ರೂಪಾಯಿ ಖರ್ಚುಮಾಡಿ ತರಬಹುದಾದಷ್ಟನ್ನು ಕೂಟೇರಪ್ಪ ಎರಡೇ ರೂಪಾಯಿ ಖರ್ಚುಮಾಡಿ ತರುತ್ತಾನೆ ಎಂಬ ಮಾತೂ ಕೇಳಿಬರುತ್ತಿತ್ತು. ಹಾಗೆಯೇ ಸಂತೆಯಿಂದ ಬರುವ ಕೂಟೇರಪ್ಪನದು 'ಮಾಯಲ ಮರಾಠಿ'ಯ ಕೋಟೆಂದು ಹೇಳುವವರೂ ಇದ್ದರು. ಒಟ್ಟಾರೆಯಲ್ಲಿ ಸಂತೆಯಿಂದ ಬರುವ ಕೂಟೇರಪ್ಪನು ಕೋಟಿನಲ್ಲೆ ಸರಕು ಸರಂಜಾಮು ತರುತ್ತಿದ್ದ. ಒಂದು ಸಂತೆಯ ದಿನ ನೇಗಿಲ ಕಾರೇ ಅವನ ಜೇಬಿನಿಂದ ಹೊರಬಂದಿತ್ತು.

'ಕೈಚೀಲ ಇರೋದೇನ್ಕೆ' ಅಂದರೆ 'ಕೋಟಿರೋದೇನ್ಕೆ' ಅನ್ನುತ್ತಿದ್ದ ಕೂಟೇರಪ್ಪ. ಕೈಚೀಲಕ್ಕೆ ಹಾಕಿದರೆ ತೂಕ ಎಲ್ಲ ಹೆಗಲಿಗೆ ಬೀಳುತ್ತೆ. ಇಲ್ಲಾಂದ್ರೆ ಕೈಗೆ ಬಿದ್ದು ಜಗ್ಗುತ್ತೆ. ಐದು ಮೈಲಿ ನಡೀಬೇಕಲ್ಲ. ಅದೇ ಕೋಟಿನ ಜೇಬುಗಳಲ್ಲಿ ತುಂಬಿಕೊಂಡ್ರೆ ಭಾರ ಒಂದೇ ಕಡೆ ಇರೋಲ್ಲ. ನಡಿಗೇನೂ ಕಷ್ಟವಾಗಲ್ಲ ಅನ್ನುವುದು ಅವನ ಮಾತು. ಮಾತಿನಂತೆ ಕ್ರಿಯೆ.

ಗೋಡೆಯ ಗೂಟಕ್ಕೆ ನೇತುಹಾಕುತ್ತಿದ್ದ
ಕೂಟೇರಪ್ಪ ಸಂತೆ ಮಾಡಿ ಬರುವಾಗ ಕಣ್ಗತ್ತಲೆಯಾಗಿರುತ್ತಿತ್ತು. ಸರಕೆಲ್ಲ ಖಾಲಿಯಾದ ನಂತರ ಕೋಟಿಗೆ ಉಳಿಯುತ್ತಿದ್ದದು ಎಣ್ಣೆಯ ಕಮಟುವಾಸನೆ ಸಹಿತವಾಗಿ ವಡೆ, ಬೋಂಡ ಚಕ್ಕುಲಿಯ ವಾಸನೆ. ಇದು ಇಲಿಗಳಿಗೆ ಪ್ರಿಯವಾದುದಾದ್ದರಿಂದ ಅವುಗಳಿಂದ ಕೋಟಿಗೆ ಉಳಿಗಾಲವಿರದೆಂದು ಅವನ ಸ್ವಾನುಭವವೂ ಕಾಲಜ್ಞಾನವೂ ಆಗಿತ್ತು. ಆದುದರಿಂದ ಅದನ್ನು ಮಡಚಿ ಕೈಚೀಲದಲ್ಲಿ ತುಂಬಿ ಗೋಡೆಯ ಗೂಟಕ್ಕೆ ನೇತುಹಾಕಿ, ವಾಸನೆ ಹಿಡಿದು 'ವಿವಾಹ ಭೋಜನವಿಂದು' ಎಂದು ಬರುತ್ತಿದ್ದ ಇಲಿಗಳಗೆ ನಿರಾಸೆಯುಂಟುಮಾಡುತ್ತಿದ್ದ.

ಮಾರನೆಯ ದವಸದ ಅವನ ಮೊದಲ ಕೆಲಸವೆಂದರೆ, ಚೆನ್ನಪ್ಪನಕೆರೆ ಅಂಗಳಕ್ಕೆ ಕೋಟು, ಚೀಲವೆರಡನ್ನೂ ಕೊಡೊಯ್ದು ಚೌಳುಪ್ಪಿನಲ್ಲಿ ಹೊರಳಿಸಿ, ಶಿವಾರಗೌಡನ ಬಾವಿಯಲ್ಲಿ ಗಸಗಸ ತಿಕ್ಕಿ ತೊಳೆಯುತ್ತಿದ್ದುದು. ಒಗೆದು ಒಣಹಾಕುವ ಮುಂಚೆ ಕಿಸೆ ಕಿಸೆಯನ್ನೂ ಮೂಸಿ ನೋಡುತ್ತಿದ್ದ. ವಾಸನೆ ಸಂಪೂರ್ಣವಾಗಿ ಕಳೆದಿಲ್ಲ ಎಂಬ ಸಣ್ಣ ಗುಮಾನಿ ಮೂಗಿಗೆ ಬಡಿದರೂ ಅವೆರಡಕ್ಕೆ ಮತ್ತೆ ಚೌಳುಪಿನಲ್ಲಿ ಉರುಳುಸೇವೆ ನಡೆಯುತ್ತಿತ್ತು. ವಾರಕ್ಕೊಂದು ದಿನ ತನ್ನ ಕೋಟನ್ನು ಇಲಿಗಳಿಂದ ರಕ್ಷಿಸುವ ಗುರುತರ ಜವಾಬ್ದಾರಿ ಹೊರುತ್ತಿದ್ದ ಚೀಲದ ಮೇಲೆ ಅವನಿಗೆ ಕೋಟಿನ ಮೇಲಿದ್ದಷ್ಟೇ ಅಕ್ಕರೆಯಿತ್ತು.

ಕೋಟು ಬೇಕಾದರೆ ಕತ್ತೆಗೆ ಹೊಡೆದ ಏಟುಗಳನ್ನು ಹಿಂದಕ್ಕೆ ತೆಗೆದುಕೊ
ಹೀಗೆ ಹಲವು ವರ್ಷಗಳು ತನಗೆ ಬಹೂಪಕಾರಿಯಾಗಿದ್ದ ಕೋಟನ್ನು ಚೌಳುಪ್ಪಿನಲ್ಲಿ ಹೊರಳಿಸಿ, ಉರುಳಿಸಿ ಒಗೆದು ತಂದು ಮನೆಯಂಗಳದ ಜಗುಲಿಯ ಮೇಲೆ ಒಣಗಲು ಹಾಕಿ, ಊಟ ಮುಗಿಸಿ ಹೊರಬರುವ ಹೊತ್ತಿಗೆ, ಅಗಸರ ಪಾಟಮ್ಮನ ಕತ್ತೆ ಅರ್ಧದಷ್ಟನ್ನು ಜಗಿದು ಹಾಕಿತ್ತು. ಆಗದು ಕೂಟೇರಪ್ಪನಿಗೆ ಆಜನ್ಮ ಹಗೆಯಾಗಿ ಕಂಡಿತ್ತು. ಪಾಟಮ್ಮನು ಬಂದು ಜಗಳಕ್ಕೆ ನಿಲ್ಲುವಷ್ಟು ಅದನ್ನು ಬಡಿದಿದ್ದ. ತನಗೆ ಅಂತಹುದೇ ಕೋಟು ತಂದುಕೊಡಬೇಕೆಂಬ ಅವನ ವಾದಕ್ಕೆ ಅವಳು ಸೊಪ್ಪು ಹಾಕಲಿಲ್ಲ. ಅಲ್ಲದೆ ಕೋಟು ಬೇಕಾದರೆ ಕತ್ತೆಗೆ ಹೊಡೆದ ಏಟುಗಳನ್ನು ಹಿಂದಕ್ಕೆ ತೆಗೆದುಕೊ ಎಂದು ಪ್ರತಿವಾದ ಹೂಡಿದ್ದಳು. ಅವಳ ಲಾ ಪಾಯಿಂಟಿಗೆ ಪ್ರತಿಯಾದ ಪಾಯಿಂಟು ತನ್ನಲಿಲ್ಲದೆ ಕೂಟೇರಪ್ಪನ ಬಾಯಿ ಬಂದಾಗಿತ್ತು.

ಆದರೆ ಇನ್ನೊಂದು ಕೋಟನ್ನು ಹೊಲೆಸಿಕೊಳ್ಳುವುದು ಅವನಿಂದಾಗಲಿಲ್ಲ. ಸಂತೆಯ ದಿನ ಬಂದಾಗಲೆಲ್ಲ ಕೋಟನ್ನು ನೆನೆಸಿಕೊಂಡು ನೊಂದುಕೊಳ್ಳುತ್ತ ಕತ್ತೆ ಮತ್ತು ಪಾಟಮ್ಮನನ್ನು ಮನಸ್ಸಿನಲ್ಲೇ ಬೈದುಕೊಳ್ಳುತ್ತಿದ್ದ. ಅಷ್ಟು ಮಾತ್ರವಲ್ಲ, ಕೋಟಿಲ್ಲದೆ ಸಂತೆಗೆ ಹೋಗಲಾಗದೆ, ಹೆಂಡತಿಯನ್ನು ಕಳುಹಿಸುತ್ತಿದ್ದ.

ಚಿಲ್ಲರೆಯನ್ನು ತಪ್ಪದೆ ತನಗೇ ತಂದು ಕೊಡಬೇಕೆಂದು ತಾಕೀತು
ಹೆಂಡತಿ ಸಂತೆಗೆ ಹೊರಟು ನಿಂತಾಗ ಉಡುದಾರಕ್ಕೆ ಗಂಟು ಹಾಕಿದ್ದ ಬೀಗದ ಕೈಯನ್ನು ಬಸವನಹುಳು ಚಿಪ್ಪಿನಿಂದ ತಲೆ ಹೊರಹಾಕುವಷ್ಟು ನಿಧಾನವಾಗಿ ಅಥವಾ ಮತ್ತಷ್ಟು ನಿಧಾನವಾಗಿ ತೆಗೆದು, ಪೆಟ್ಟಿಗೆಗೆ ಹಾಕಿದ್ದ ಬೀಗಕ್ಕೆ ನೋವಾದೀತೇನೋ ಎಂದು ಮೆಲ್ಲಗೆ ಅದರ ತೂತಿಗೆ ಸೇರಿಸಿ ಅತಿ ನಿಧಾನವಾಗಿ ತಿರುಗಿಸಿ ತೆಗೆಯುತ್ತಿದ್ದ. ದುಡ್ಡು ಕೊಡುವಾಗಲಂತೂ ಧನಲಕ್ಷ್ಮಿಯನ್ನು ಮನೆಯಿಂದ ಹೊರಗಟ್ಟುತ್ತಿರುವಂತೆ ನೊಂದುಕೊಳ್ಳುತ್ತಿದ್ದ. ನೋಡಿಕೊಂಡು ಖರ್ಚು ಮಾಡುವಂತೆ, ಚಿಲ್ಲರೆಯನ್ನು ತಪ್ಪದೆ ತನಗೇ ತಂದು ಕೊಡಬೇಕೆಂದು ತಾಕೀತು ಮಾಡಿಯೇ ಹಣ ಕೊಡುತ್ತಿದ್ದುದು. ಕೋಟು ಇದ್ದಿದ್ದರೆ ತನಗೆ ಈ ಕಷ್ಟವಿರುತ್ತಿರಲಿಲ್ಲವೆಂದು ಗೊಣಗದೆ ಇರುತ್ತಿರಲಿಲ್ಲ.

ಕೂಟೇರಪ್ಪನ ದೊಣ್ಣೆ ಪೆಟ್ಟುಗಳಿಂದ ಅರಚಲು ಬಾಯಿ ಕಳೆದ ಕತ್ತೆಯ ಬಾಯಿ ಇಂದ ಜಾರಿದ ಕೋಟಿನ ಶೇಷಭಾಗ ಏನಾಯಿತೆಂಬ ಕುತೂಹಲದ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದಿದ್ದೇ ಆದರೆ, ಅವನ ಹೆಂಡತಿ ಸಣ್ಣೀರಮ್ಮ ಹೇಳಿದ್ದನ್ನು ನೀವು ನಂಬುಗೆಯ ಬುದ್ಧಿಯಿಂದ ಕೇಳಿಸಿಕೊಳ್ಳಬೇಕು. ಕೂಟೇರಪ್ಪ ಆ ಅರೆಕೋಟನ್ನು ರಾಗಿ ಮೂಟೆಗೆ ಹೊಚ್ಚಿ, ತಾನು ಮನೆಯಲ್ಲಿ ಇದ್ದಾಗ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮತಿಯಿಲ್ಲದೆ ಚಾಪೆಕಚ್ಚಿ ಮಲಗಿದ ಮಗನನ್ನು ದುಃಖಭರಿತ ತಂದೆ ನೋಡುವಂತೆ ವಿಷಾದದಿಂದ ನೋಡುತ್ತಿದ್ದನಂತೆ.

ಕೂಟೇರಪ್ಪ ಇನ್ನೊಂದು ಕೋಟನ್ನೇಕೆ ಹೊಲೆಸಿಕೊಳ್ಳಲಿಲ್ಲ?
ಆಗೆಲ್ಲ ಸಣ್ಣೀರಮ್ಮನಿಗೆ ಕನಿಕರ ಮಿಳಿತ ಸಿಟ್ಟೂ ಬರುತ್ತಿತ್ತಂತೆ. ಒಂದು ದಿನ 'ಕಾಮದಹನ' ಮಾಡುವಂತೆ ಅಂಗಳದಲ್ಲಿ ಅದನ್ನು ಸುಟ್ಟು ಹಾಕಿದಳಂತೆ. ಇದರಿಂದ ಸಿಟ್ಟು, ದುಃಖ ತಂದುಕೊಂಡ ಕೂಟೇರಪ್ಪ, ಮನೆಯಿಂದ ಹೊರಹೋದವನು ವಾಪಸಾದುದು ರಾತ್ರಿಯ ಊಟದ ಹೊತ್ತಿಗಂತೆ. ಹರಕಲು ಕೋಟು ಕಣ್ಣೆದುರಿನಿಂದ ಮರೆಯಾದ ಮೇಲೆ, ದಿನಕಳೆದಂತೆ ಮರೆತುದಲ್ಲದೆ, ಚೀಲ ಹಿಡಿದು ಸಂತೆಗೆ ಹೋಗಿ ಬರುವವನಾದನೆನ್ನುವುದು ಮಾತು.

ಕೂಟೇರಪ್ಪ ಇನ್ನೊಂದು ಕೋಟನ್ನೇಕೆ ಹೊಲೆಸಿಕೊಳ್ಳಲಿಲ್ಲವೆಂದು ಗೊತ್ತಿದ್ದರೆ ಅದು ಕೂಟೇರಪ್ಪನಿಗೆ ಮತ್ತು ಅವನ ಮನೆದೇವರು ತಿರುಪತಿ ತಿಮ್ಮಪ್ಪನಿಗಷ್ಟೇ. ಈಗ ಕೂಟೇರಪ್ಪ ಜೀವಂತವಿಲ್ಲ. ಹಾಗಾಗಿ ಗೊತ್ತಿರುವುದು ತಿಮ್ಮಪ್ಪನೊಬ್ಬನೆಗೇ. ಅವನು ಭಕ್ತಪರನಾದುದರಿಂದ ಬಾಯಿಬಿಡಲೊಲ್ಲವಾಗಿ ಈಗಿದೊಂದು ದೈವರಹಸ್ಯವೇ ಸರಿ.

Recommended Video

ವಿರಾಟ್ ಕಂಬ್ಯಾಕ್ ಆಗಿದ್ದಕ್ಕೆ ಕೋಚ್ ದ್ರಾವಿಡ್ ತೆಗೆದುಕೊಂಡ ನಿರ್ಧಾರ ಏನು? | Oneindia Kannada

English summary
Sa Raghunatha Column: Kooterappa was taking the coat to fetch groceries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X