ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಕೆಯಾಚೆಗೆ ಆರ್ಥ ಹಚ್ಚದಿರು, ನಕ್ಕು ಬಿಡು ಒಮ್ಮೆ ಹಗಲಿನಲಿ ಬೆಳದಿಂಗಳಂತೆ

By ಸ ರಘುನಾಥ, ಕೋಲಾರ
|
Google Oneindia Kannada News

ಸುಳಿಬಾಳೆ ಎಲೆ ಬಾಲೆ
ಸರಸಿ ಸುಂದರಿ ಶಕುಂತಲೇ
ಕುಶಲವೆ?

ಕಾಗದದ ತುಂಬ ನಿನ್ನ ರೂಪ ಕಾಂತಿಯೇ ತುಂಬಿ, ಅಕ್ಷರ ಮಸುಕಾಗಿ ಓದಲಾಗದೆ ಹೋದೆ ಕೈ ಸೇರಿದೊಡನೆ. ಹಾಗಾಗಿ ಓಲೆ ಬರೆಯದಾದೆ ಒಡನೆ. ದೀನನಾಗಿ ಕ್ಷಮೆ ಬೇಡುವೆ. ಇರಲಿ ಈ ಬಡಪಾಯಿಯ ಮೇಲೆ ಕರುಣೆ.

ನಿನ್ನ ಕನಸು ಹತ್ತಿರದ ದಿನಗಳಲ್ಲಿ ನಿಜವಾಗಲಿದೆ. ನಿಮ್ಮವರ ಒಪ್ಪಿಗೆಯಲ್ಲಿ ಅಪ್ಪ ಮುಹೂರ್ತ ನಿಶ್ಚಯಿಸಿ ಬಂದಿರುವ. ಸಿದ್ಧತೆಯಲ್ಲಿ ತೊಡಗಿರುವಳು ಅಮ್ಮ. ಮುಂದಿನ ವಾರವೇ ನಮ್ಮಿಬ್ಬರ ಮನೆಗಳಲ್ಲಿ ಮೊಳಗಲಿದೆ ಓಲಗ. ನಂತರ ಏನೇನೆಂದು ಹೇಳಲೇನಿದೆ? ಹಾಲು ಸಕ್ಕರೆ ಬೆರೆಯಲಿದೆ. ನೀನು ಹಾಲು, ನಾನು ಸಕ್ಕರೆ. ರುಚಿ ನಮ್ಮ ಒಲವಿಗೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಮ್ಮ ತೋಟದ ತೆಂಗಿನ ಗರಿಯ ಚಪ್ಪರ. ನಮ್ಮ ಮನೆಯಂಗಳದ ಮಾಮರದ ಚಿಗುರೆಲೆಯ ತೋರಣ. ಗೊನೆ ಜೋತ ಬಾಳೆ ಸ್ವಾಗತದ ಕಮಾನು. ತಣ್ಣನೆಯ ಸಿಹಿ ಎಳನೀರು ದಾಹಕ್ಕೆ. ನಮ್ಮ ಗದ್ದೆಯ ಕಬ್ಬು ಆಲೆಯಾಡಿದ ಬೆಲ್ಲ ದಿಬ್ಬಣದಿ ಪಾನಕಕೆ. ದವನ ಮರುಗದ ಜೊತೆಗೆ ಮಲ್ಲಿಗೆಯ ಸಿಂಗಾರ ಮದುವೆ ಮಂಟಪಕೆ.

Love letter series: You are like a full moon in the day light

ಬಿಳಿಯ ರೇಷಿಮೆ ಸೀರೆ ರವಿಕೆಯಲಿ ಅರಿಶಿಣದ ಮೈಯ ನನ್ನ ಶಕುಂತಲೆ ಬರುವಳು ನಾಚುತ್ತಾ ಹಸೆಗೆ. ಪಕ್ಕ ನಿಲ್ಲುವಳು ನನಗೆ ಒರಗಿಯೂ ಒರಗದಂತೆ. ನನ್ನ ಓರೆ ನೋಟಕ್ಕೆ ಕಾಣುವಳು ವೇಂಕಟೇಶನ ಬದಿ ನಿಂತ ಅಲಮೇಲುಮಂಗಳಂತೆ.

'ಹಸಿರು ತೋರಣ
ನಿತ್ಯ ಕಲ್ಯಾಣ
ಆಗಲಿ ನಮ್ಮ
ಸೀತಾ ಶ್ರೀರಾಮರಿಗೆ'

ಎಂದು ಹಿರಿ ಮತ್ತೈದೆಯರು ಹರಸಿ ಆರತಿ ಬೆಳಗಿದಾಗ, ನೀ ಪಿಸುಗುಡುವೆ ಕಿವಿಯಲ್ಲಿ, ಸೀತೆಗೆ ವನವಾಸವಾಯ್ತು. ಸರಿಯಲ್ಲ ಈ ಹಾಡು. ರುಕ್ಮಣಿ ಕೃಷ್ಣರಿಗೆ ಎಂದಿದ್ದರೆ ಚೆನ್ನ ಎಂದು. ನಾನಾಗ, ರುಕ್ಮಿಣಿಗೆ ಸವತಿಯರು. ನೀನು ಸಿದ್ಧವೇ ಅನ್ನುವೆ. ನಿನ್ನಲ್ಲಿ ಸಿಟ್ಟು ನನಗಷ್ಟೇ ಕಾಣುವಂತೆ. ಆಗೆಷ್ಟು ಅಂದವೋ ನಿನ್ನ ಮುಖ, ಮತ್ತೆ ಮತ್ತೆ ನೋಡುತಿರಬೇಕು ಅನ್ನಿಸುವಂತೆ.

ನಿನ್ನೆದೆ ತಾವರೆ ಮೊಗ್ಗುಗಳು ನಾವೂ ಅರಳಿದೆವೆಂದು ನನ್ನ ಕಣ್ಣುಗಳಿಗೆ ಹೇಳಿದವುನಿನ್ನೆದೆ ತಾವರೆ ಮೊಗ್ಗುಗಳು ನಾವೂ ಅರಳಿದೆವೆಂದು ನನ್ನ ಕಣ್ಣುಗಳಿಗೆ ಹೇಳಿದವು

ನಿನ್ನ ಕಿವಿಯಲ್ಲಿ ಹೇಳುವೆನು, ಕಾಂತೆ ನಿನಗೆ ವನವಾಸವೂ ಇರದು, ಸವತಿಯಂತೂ ಬರಳು. ಹೀಗೆ ಹಾಡುವುದು ಸಂಪ್ರದಾಯಕ್ಕೆ. ಹರಕೆಯಾಚೆಗೆ ಅರ್ಥ ಹಚ್ಚದಿರು. ನಕ್ಕುಬಿಡು ಒಮ್ಮೆ ಈ ಹಗಲಿನಲಿ ಬೆಳದಿಂಗಳಿಳಿದಂತೆ. ಅಂತೆ ನೀ ನಗುವೆ.

ಇದು ನನ್ನ ಕನಸೂ ಹೌದು, ಕಲ್ಪನೆಯೂ ಹೌದು ಶಕುಂತಲೆ. ಇಂಥ ಭಾವನೆಗಳಿಂದಲೇ ನಾವು ಕಟ್ಟುವುದು ಮುಂದಿನ ಬಾಳಿನ ಅಂದದ ಮನೆ. ಇಂದು ನಾವು ಕಟ್ಟಿದ ಈ ಕನಸುಗಳ ಜೊತೆಗೆ ನಾಳೆ ಇಬ್ಬರೂ ಕಾಣುವ ಕನಸುಗಳು ಕೂಡಿ ಬದುಕಿನಲಿ ಬೀಸುವುದು ಸುಖದ ತಂಗಾಳಿ. ಎದೆಯ ಹಾಡುತಿದೆ ನಲ್ಲೆ ಶಕುಂತಲೆ, 'ನಮ್ಮ ಪುಣ್ಯವೇ ಪ್ರೇಮದಲಿ ಪಲ್ಲವಿಸಿ, ನಮ್ಮಿಬ್ಬರನು ಹೀಗೆ ಒಂದು ಗೂಡಿಸಿತೋ ಸಮರಸದ ಸಮ ಜೀವನಕೆ.'

English summary
This is the love letter series by Oneindia Kannada columnist Sa Rghunatha. Here Vasantha writes letter to lady love Shakuntala with imagination of their marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X