ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸಂತ, ನೀನು ಸೊಂಟ ಚಿವುಟಿದ್ದರಿಂದಲೇ ನಾನು ತುಟಿ ಕಚ್ಚಿಕೊಂಡೆ

By ಸ ರಘುನಾಥ, ಕೋಲಾರ
|
Google Oneindia Kannada News

ವಸಂತ, ಪ್ರಿಯ ವಸಂತ,

ನೀನು ಬಂದುದು ನಮ್ಮ ಮನೆಗೇ ವಸಂತ ಬಂದಂತೆ ಅನಿಸಿತು. ಬಿಳಿ ಪಂಚೆ, ಅಂಗಿ ತೊಟ್ಟು ಬಂದಿದ್ದೆ. ಬಂದುದು ವಸಂತನಲ್ಲ, ನನ್ನ ಪ್ರೀತಿ ಈ ರೂಪದಲ್ಲಿ ಬಂದಿದೆ ಅನಿಸಿತು. ಧವಳ ಉಡುಗೆಯ ಪ್ರೀತಿ ಚಂದ್ರಾಮ ನೀನು. ನನ್ನನ್ನು ಕಾಮರೂಪಿ ಎಂದು ಕವಿತೆಯಲಿ ಹಾಡಿದ್ದೆ. ನೀನೇ ಕಾಮರೂಪಿ ಕಣೋ!

ಋತುಗಳ ರಾಜ ವಸಂತನ ಎಲ್ಲ ರೂಪ, ರಂಗು ನಿನಗಿದೆ. ನೀನು ಕಣ್ಣಲ್ಲಿ ನನ್ನ ಕುಣಿಸುತ್ತಿ. ನಗೆಯಲ್ಲಿ ಸವಿಯಾಗಿ ನರಳಿಸುತ್ತಿ. ಮಾತಿನಲ್ಲಿ ನನ್ನೆದೆಯ ಹೂವಾಗಿಸುತ್ತಿ. ನನ್ನ ಭಾವದ ನವಿಲು ನೀನು. ನನ್ನೆದೆಯ ತಾಪಕ್ಕೆ ತುಂತುರು ಮಳೆ ನೀನು. ನಲ್ಲೆಯ ಮನ ಬಲ್ಲ ನಲ್ಲ ನೀನು. ಶೃಂಗಾರ ಸಹಸ್ರನಾಮ ರಚಿಸುವ ಶಕ್ತಿ ನನಗಿದ್ದಿದ್ದರೆ ನಿನ್ನನ್ನು ಬಣ್ಣಿಸಿ ಬಣ್ಣಿಸಿ ತಣಿಯುತ್ತಿದ್ದೆ, ದಣಿಯುತಿದ್ದೆ ವಸಂತ.

ನಾ ಮುಡಿದ ಮಲ್ಲಿಗೆ ಪರಿಮಳವ ನಿನ್ನ ತಲುಪಿಸಲೆಂದು ಗಾಳಿಯನು ಬೇಡಿದೆ...ನಾ ಮುಡಿದ ಮಲ್ಲಿಗೆ ಪರಿಮಳವ ನಿನ್ನ ತಲುಪಿಸಲೆಂದು ಗಾಳಿಯನು ಬೇಡಿದೆ...

ನಿನ್ನ ಪ್ರೀತಿಗೆ ಮಣಿವೆ, ಅದರ ರೀತಿಗೆ ಮಣಿವೆ. ನನ್ನ ಮನ್ಮಥ ಮಾರ ಸುಕುಮಾರ, ರಾಜ, ಚೆನ್ನರಸ, ತೊಳೆದ ಸ್ವಾತಿ ಮುತ್ತೇ, ನನ್ನ ಸರ್ವಸ್ವವೇ ಇನ್ನೆಷ್ಟು ದಿನ ಈ ಅಗಲಿಕೆ? ನನ್ನ ಸುಡುವ ಬಿಸಿಯುಸಿರು ತಂಪಾಗುವುದೆಂದಿಗೆ?

Love letter series: Vasanta visits lady love Shakuntala house

ನೀನು ಬರುವ ಸುದ್ದಿಯನ್ನು ಪತ್ರವೇನೋ ತಂದಿತು. ಬರುವ ಸುಳಿವು ಯಾವುದರಿಂದ ಸಿಕ್ಕೀತು ಎಂದು ಯೋಚಿಸುತ್ತಿದ್ದೆ. ರೈಲಿನ ಶಿಳ್ಳೆ? ಅದು ಅಕಸ್ಮಾತ್ ತಡವಾದರೆ, ನಿನಗೆ ಕಾಯುವ ತಾಳ್ಮೆಯಿರದೆ, ಮೂರು ಬಸ್ಸು ಬದಲಿಸಲು ಬೇಸರಿಸದೆ ಬಸ್ಸಿನಲ್ಲಿಯೇ ಬಂದುಬಿಟ್ಟರೆ? ನಮ್ಮೂರ ಮಣ್ಣುರಸ್ತೆಯಲ್ಲಿ ಅದು ಬರುವಾಗ ಎಬ್ಬಿಸಿದ ಧೂಳೆ? ಬಾಡಿಗೆ ಕಾರಿನಲ್ಲೇನಾದರೂ ಬಂದುಬಿಟ್ಟರೆ? ಮನೆ ಮುಂದೆ ನಿಲ್ಲುತ್ತ ಮಾಡುವ ಹಾರನ್ನೇ? ಎಲ್ಲ ಸಾದ್ಯತೆ ಇರುವಾಗ ಕಣ್ಣು, ಕಿವಿ, ಮೂಗು, ಮನಸ್ಸುಗಳನ್ನು ಜಾಗೃತಗೊಳಿಸಿ ಕಾಯುತ್ತಿದ್ದೆ.

ರೈಲಿನ ಶಿಳ್ಳು ಕೇಳಿಸಿತು. ನೀನು ರೈಲಿನಲ್ಲಿಯೇ ಬಂದಿದ್ದೆ. ನಡೆದು ಬರುವ ನೀನು ಕಣ್ಣಿಗೆ ಕಂಡೆ. ನೀನು ಹತ್ತಿರಾಗುತ್ತ ಆಗುತ್ತ, ಮನಸ್ಸು ಅರಳುತ್ತ ಅರಳುತ್ತ ನೀನು ನಗುವಾಗಲೇ ನನ್ನ ತುಟಿಯು ನಗೆ ಮುಡಿಯಿತು. ಬಂದೆ, ಬಂದೇಬಿಟ್ಟೆ ಸನಿಹ ಸನಿಹ. ನನ್ನ ಕಾತರದ ಕಣ್ಣಿಗೆ ಹಬ್ಬವಾಗಿಸಲೋ, ನಿನ್ನ ಕಾತರವೋ ಬಾಗಿಲಲ್ಲಿಯೇ ಚೀಲ ಕೈಗಿತ್ತೆ.

ನನ್ನೀ ವಿರಹ ವೇದನೆಗೆ ಹಿತದ ಮದ್ದು ನೀನು, ವೈದ್ಯ ನೀನು...ನನ್ನೀ ವಿರಹ ವೇದನೆಗೆ ಹಿತದ ಮದ್ದು ನೀನು, ವೈದ್ಯ ನೀನು...

ನಾನು ಅಲ್ಲಿಯೇ ತೆರೆದು ನೋಡಿದೆ. ಜೋಡಿ ತಾವರೆ. ಒಳಬಂದು ಹೊರ ತೆಗೆದು ಕೈಲಿ ಹಿಡಿದಾಗ, ನೀನು, ಒಂದು ನಾನೆಂದು, ಇನ್ನೊಂದು ನೀನೆಂದು ಸನ್ನೆ ಮಾಡಿದೆ. ಅಷ್ಟು ಹೊತ್ತಿಗೆ ಅಮ್ಮ ಹೊರಬಂದಳು. ಅವಳ ಸೆರಗಿನ ಹಿಂದೆಯೇ ಅಪ್ಪ. ಇಬ್ಬರೂ ಕೂಡಿ ಅಳಿಯನಿಗೆ ಔತಣದಡುಗೆ ಮಾಡುತ್ತಿದ್ದರು.

ಅಪ್ಪ ಕೈ-ಕಾಲು ತೊಳೆಯೆಂದು ನಿನಗೆ ಹೇಳಿದರೆ, ಒಳಗೆ ಬಂದು ಪಾನಕ ತಂದು ಕೊಡೆಂದು ಅಮ್ಮ ಹೇಳಿದಳು. ಮತ್ತೆ ಅವರಿಬ್ಬರು ಅಡುಗೆಮನೆ ಸೇರಿಕೊಂಡರು.

ಅರಿಶಿಣದ ಮೈಯ ನನ್ನ ಶಕುಂತಲೆ ಬರುವಳು ನಾಚುತ್ತ ಹಸೆಗೆಅರಿಶಿಣದ ಮೈಯ ನನ್ನ ಶಕುಂತಲೆ ಬರುವಳು ನಾಚುತ್ತ ಹಸೆಗೆ

ನೀನು ಪಾನಕದ ಲೋಟ ಹಿಡಿದು ನೀರು ಕುಡಿದಿದ್ದ ಲೋಟಕ್ಕೆ ಅರ್ಧ ಬಗ್ಗಿಸಿ ನನಗೆ ಕೊಟ್ಟು ಕುಡಿಯುತ್ತ, ತಾವರೆ ಚೆಂದವೆ? ನಮ್ಮ ಕೊಳದಲ್ಲಿ ಅರಳಿದ ನಿನ್ನ ತಾವರೆ ಎಂದೆ. ನಾನು, ಹೌದು ನನ್ನ ತಾವರೆ. ನೀ ನನ್ನ ತಾವರೆ ಎಂದೆ. ತಾವರೆಯನ್ನು ಹೋಲಿಸುವುದು ಹೆಣ್ಣಿಗೆ ಎಂದು ನನ್ನ ಸೊಂಟ ಚಿವುಟಿದೆ. ಹಾ ಎನ್ನುವವಳಿದ್ದು ತುಟಿ ಕಚ್ಚಿ ಹಿಡಿದೆ. ಆಗ ನೀನು ಅದು ನನ್ನದು ನೀನೇಕೆ ಈಗಲೇ ಕಚ್ಚಿದೆ ಎಂದು ಜಡೆ ಹಿಡಿದೆಳೆದು ಹೇಳಿದೆ. ಅಡುಗೆ ಮನೆ ಬಾಗಿಲಿಗೆ ಬಂದ ಅಮ್ಮ ಕೆಮ್ಮಿದಳು.

ಊಟಕ್ಕೆ ಕುಳಿತಾಗ ಅಪ್ಪ ಹೇಳಿದರು, ನಿಮ್ಮ ಕೆಂಚಪ್ಪನಿಗೆ ಸರಿ ಜೋಡಿ ಹೆಣ್ಣು ಇದ್ದಾಳೆ. ಬಡತನದಲ್ಲಿ ಬೆಳೆದ ಹುಡುಗಿ. ಹೊಂದಿಕೊಂಡು ಹೋಗುವ ಸ್ವಭಾವದಳು. ಸುಮ್ಮನೇ ಬಾ ಎಂದಿರುವೆವು. ಇನ್ನೇನು ಬಂದಾಳು. ನೀನು ಒಪ್ಪಿದರೆ ಆಯಿತೆಂದು ಶಕುಂತಲೆ ಹೇಳಿದಳು ಎಂದು ಹೇಳುತ್ತಿರುವಾಗಲೇ ಆ ಹುಡುಗಿ ನೀಲ ಬಂದೇಬಿಟ್ಟಳು. ಕೆಂಚಪ್ಪನ ಕಪ್ಪು ಮೈ ಬಣ್ಣವೇ ಅವಳದು. ಸುಂದರಿ.

ಸಂಜೆಗೆ ಹಿಂತಿರುಗುವ ಅದೇ ರೈಲಿಗೆ ನೀನು ಹೊರಟೆ. ಅಪ್ಪ ರೈಲು ನಿಲ್ದಾಣದವರೆಗೆ ನಿನಗೆ ಜೊತೆಯಾದರು. ಜೋಡಿ ತಾವರೆಯ ಕಂಡ ನೀಲ ಅದರಲ್ಲಿ ಒಂದನ್ನು ಎತ್ತಿಕೊಂಡು ಕೆನ್ನೆಗೆ ಸವರಿಕೊಂಡು, ನಿಮ್ಮೂರಿಂದಾ ಅಂದಳು. ನಿನ್ನೂರಿಂದೂನೂ ಅಂದೆ. ಅರ್ಥವಾಗದಿದ್ದರೂ ನಕ್ಕಳು. ನೀನು ಬಂದೆ, ಹೊರಟುಬಿಟ್ಟೆ. ನನಗೆ ನೀನು ಬಂದುದೇ ಕನಸು ಅನ್ನಿಸುತ್ತಿದೆ, ಏಕೆ ವಸಂತ?

English summary
Here is the love letter series by Oneindia columnist Sa Raghunatha. Vasanta visits his lady love Shankutala house. Their conversation in this letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X