• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾವರೆ ಕೊಳದಲಿ ಬಿಟ್ಟ ಹೂವು ಕೊಟ್ಟು ಬರಲು ನಾನೇ ನಿನ್ನಲ್ಲಿಗೆ ಬರುವೆ...

By ಸ ರಘುನಾಥ, ಕೋಲಾರ
|

ಮಾತುಗಳ ಅರ್ಥ ಸುಗಂಧದಲ್ಲಿ ಅದ್ದಿ ಕೊಡುವ ಶಕುಂತಲೇ,

ನಿನ್ನ ಭಾವನಾ ನುಡಿ ಚಿತ್ರಗಳನ್ನು ಓದುವಾಗ ನೀನು ಇತಿಹಾಸದ ವಿದ್ಯಾರ್ಥಿಯಾಗಿದ್ದೆ ಎಂಬುದನ್ನು ನಂಬಲಾಗಲಿಲ್ಲ. ನೀನು ನರಸಿಂಹಸ್ವಾಮಿ ಅವರ ಇಲ್ಲವೆ ಬೇಂದ್ರೆಯವರ ಗುಪ್ತಶಿಷ್ಯಳಿರಬಹುದು ಅಥವಾ ಇಬ್ಬರ ಶಿಷ್ಯೆಯೂ ಆಗಿದ್ದೆ ಅನ್ನಿಸಿತು. ನಲುಮೆಯಿಂದಾದವಳು ನೀನು ಶಕುಂತಲೆ.

ಕೊಳದಲ್ಲಿ ಬಿತ್ತಲು ಕೆಂಚಪ್ಪ ತಾವರೆಗೆಡ್ಡೆಗಳನ್ನು ತಂದನಲ್ಲ, ಅವುಗಳ ಜೊತೆಯಲ್ಲಿ ಎಲೆ ಸಹಿತದ ಎರಡು ಗೆಡ್ಡೆಗಳನ್ನೂ ತಂದಿದ್ದ. ಹೀಗೇಕೆ ಎಂದಿದ್ದಕ್ಕೆ ಅದು ಗುಟ್ಟು ಅಂದಿದ್ದ. ಆ ಎರಡು ಉಳಿದವುಗಳಿಗಿಂತ ಬೇಗ ಬೆಳೆದು ಹೂ ಅರಳಿಸಿವೆ. ಅವನ್ನು ಕಂಡು ಕೆಂಚಪ್ಪ ಆ ಗುಟ್ಟನ್ನು ಒಡೆದ. ಅವು ನಾನು, ನೀನಂತೆ. ಅವುಗಳಂತೆ ನಾವಿಬ್ಬರು ಬೇಗ ಒಂದಾಗಬೇಕಂತೆ. ನೋಡಲು ಒರಟನಾಗಿ ಕಾಣುವ ಅವನ ಮನಸ್ಸು ಎಷ್ಟು ಕೋಮಲ ಎಂದು ಈಗ ತಿಳಿಯಿತು.

ನನ್ನೀ ವಿರಹ ವೇದನೆಗೆ ಹಿತದ ಮದ್ದು ನೀನು, ವೈದ್ಯ ನೀನು...

'ವಸಂತ, ಈ ಹೂವುಗಳನ್ನ ಶಕುಂತಲಮ್ಮನಿಗೆ ಕೊಟ್ಟು ಬರಬೇಕು' ಅಂದ. ಆಗಲಿ. ಹೊಲ ತೋಟದ ಕಡೆ ನಾನಿರುತ್ತೇನೆ. ವಸಂತನನ್ನು ಶಕುಂತಲೆಯ ಊರಿಗೆ ಕಳಿಸಿಕೊಡಿ. ಶಾನೆ ದಿನಗಳಾದವು ಹೋಗಿಬಂದು ಎಂದು ಅಪ್ಪನಿಗೆ ಶಿಫಾರಸು ಮಾಡು ಎಂದು ಹೇಳಿದೆ. ಅದಕ್ಕವನು, ನೀನು ಹೋಗೋಕಲ್ಲ ಹೇಳಿದ್ದು. ನಾನು ಹೋಗೋಕೆ ಅಂದ.

ನೀನು ಹೇಗೋ ಹೂ ತಕೊಂಡು ಹೋಗಿ ಕೊಡುತ್ತಿ ಎಂದೆ. ಹೀಗೆ ಎಂದು ಅಭಿನಯಿಸಿ ತೋರಿಸಿ, ನಾನು ಹೋಗಿ ಹೂ ಕೊಟ್ಟು, ಅಲ್ಲಿ ನನಗೊಂದು ಹೆಣ್ಣು ನೋಡಲು ಹೇಳುತ್ತೇನೆ. ನಾವಿಬ್ಬರೂ ಒಂದೇ ಊರಲ್ಲಿ ಮದುವೆಯಾದರೆ ಜೊತೆಯಲ್ಲಿ ಅತ್ತೆ ಮನೆಗೆ ಹೋಗಿ ಬರಬಹುದು. ನನಗೆ ರೈಲು ಖರ್ಚು ಉಳಿಯುತ್ತೆ ಅಂದ.

ಓ, ಬಲು ಬಡ್ಡಿಮಗ ನೀನು ಎಂದು ಬೆನ್ನಿಗೆ ಗುದ್ದಿದೆ. ಅದನ್ನು ನಾನೂ ಮಾಡಬಹುದಲ್ಲ ಅಂದೆ. ರೈಲು ಖರ್ಚು ಉಳಿಸಿಕೊಳ್ಳಲು ಕೈ ಕೊಡುತ್ತಿ ಅನ್ನೋ ಗುಮಾನಿ ಅಂದ. ಈ ಶಕುಂತಲೆ ತಾವರೆಕೊಳದಾಣೆ ಕೈ ಕೊಡಲ್ಲ ಅಂದೆ. ಹಾಗಾದರೆ ನಂಬಿಕೆ ಬಂತು ಅಂದ.

ಕೆಂಚಪ್ಪ ನನ್ನ ಜೊತೆಗಾರ. ಓದಿನಲ್ಲಿ ಆಸಕ್ತಿ ಇರದೆ ಶಾಲೆ ಬಿಟ್ಟಿದ್ದ. ದೂರದ ಸಂಬಂಧಿ ಕೂಡ. ತುಂಬಾ ಸೊಗಸಾಗಿ ಹಾಡುತ್ತಾನೆ. ಹುಣಸೇಕಾಯಿ ಉದುರಿಸುವಾಗ ಹಾಡುವ ಶೃಂಗಾರದ 'ಯಾಲಪದ'ಗಳನ್ನು ಅವನಂತೆ ಹಾಡುವವರು ನಮ್ಮೂರಿನಲ್ಲಿಲ್ಲ.

ಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳು

'ಹುಟ್ಟಿದಾಗ ಹೂಳಿದ್ದು ಹುಣಿಸೆ/ ಅದು ಹೂವು ಬಿಟ್ಟಾಗ/ ಆಹಾ ಅವಳು ಉಟ್ಟಳೋ ದಾವಣಿ ಸೀರೆ/ ಅವಳು ಸೊಗಸೆಲ್ಲ ಆಹ, ಸೊಗಸೆಲ್ಲ/ ಬಚ್ಚಿಟ್ಟಳು ಅದರ ಒಳಗೆ.' ಇಂಥ ನೂರಾರು ಹಾಡುಗಳನ್ನು ಹಾಡುತ್ತಾನೆ. ನಿಮ್ಮೂರಿನಲ್ಲಿ ಅವನಿಗೊಂದು ಹೆಣ್ಣು ನೋಡಲು ನಿನ್ನ ಅಮ್ಮ- ಅಪ್ಪನಿಗೆ ಹೇಳು.

ಶಕುಂತಲೇ, ಆ ಜೋಡಿ ಹೂವುಗಳು ಎಷ್ಟು ಚೆಂದ ಅರಳಿವೆ ಗೊತ್ತೆ? ನನ್ನ ಪಕ್ಕ ನಗೆಮೊಗದ ನೀನು ನಿಂತಂತೆ! ಕಣ್ಣಲ್ಲೇ ಏನೋ ಹೇಳಿದಂತೆ. ನಾನು ನಿನ್ನ ಕಿವಿಯಲ್ಲಿ ಅದಕ್ಕೆ ತಕ್ಕ ಮಾತು ಪಿಸುಗುಟ್ಟಿದಂತೆ. ನಿನ್ನ ಮುಖ ಕೆಂಪೇರಿದಂತೆ. ಒಂದು ವಿಚಿತ್ರವೆಂದರೆ ನೀನು ತಾವರೆಯಾದರೆ ನಾನು ದುಂಬಿಯಾಗಬೇಕಿತ್ತಲ್ಲವೆ? ಇದು ಅಸಹಜ ಪರಿಣಾಮವಲ್ಲವೆ? ಹೀಗೆ ಯೋಚಿಸುವಾಗ ಮೂಡಿದ ಕವಿತೆ ಇದು:

ಕಾಮರೂಪಿ ಶಕುಂತಲೆ ಈ ಸಂಜೆ

ಕಮಲವಾಗಿ ಅರಳಿ ಬಂದು

ಯಾವ ಮಂತ್ರಜಲವೊ ಎರಚಿ

ನನ್ನ ತನ್ನ ಪಕ್ಕ ಹೂವ ಮಾಡಿ

ದುಂಬಿಯಾಗೊ ಆಸೆ ಇರಲಿ

ಮೊದಲ ರಾತ್ರಿಗೆಂದಳು.

ಕೆಂಚಪ್ಪನ ಮಧ್ಯಸ್ಥಿಕೆಯಲ್ಲಿ ನಿಮ್ಮೂರಿಗೆ ಬರಲು ಅಪ್ಪ 'ಕೆಂಚಪ್ಪನೂ ನಿನ್ನ ಪರ ನಿಂತನೋ' ಎಂದು ನಗುತ್ತ ಒಪ್ಪಿಗೆ ನೀಡಿದರು. ನಾಳೆ ಗೌನಿಪಲ್ಲಿ ಸಂತೆ. ಅಲ್ಲಿ ನಿನಗಿಷ್ಟವಾದ ಡಬ್ಬಾ ನಾರೆಮ್ಮನ ಅಂಗಡಿಯ ಬೆಣ್ಣೆಮುರುಕು ಕಟ್ಟಿಸಿಕೊಂಡು, ನಾಡಿದ್ದು ಬೆಳಗಿನ ರೈಲಿಗೆ ಹೊರಟು ಬರುತ್ತೇನೆ. ನಿನ್ನ ಮುಂದೆ ಬಾಗಿ, ಜೀ ಹುಜೂರ್ ಎನ್ನುತ್ತೇನೆ. ಹಾಂ, ಆ ನಿನ್ನ ಮಾತು ತಪ್ಪಿದ ಗಿಳಿ ಸೀಬೆಗಿಡಕ್ಕೆ ಬಂದರೆ, 'ವಸಂತ ಬಂದು ನಿನಗೆ ತಕ್ಕ ಶಾಸ್ತಿ ಮಾಡುತ್ತಾನೆ' ಎಂದು ಹೇಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is the love letter series by Oneindia Kannada columnist Sa Raghunatha. Here is the Vasantha- young man wants to give the lotus flower to his lady love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more