• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾ ಮುಡಿದ ಮಲ್ಲಿಗೆ ಪರಿಮಳವ ನಿನ್ನ ತಲುಪಿಸಲೆಂದು ಗಾಳಿಯನು ಬೇಡಿದೆ...

By ಸ ರಘುನಾಥ, ಕೋಲಾರ
|

ನನ್ನ ಮುದ್ದು ಮುದ್ದು ವಸಂತ,

ನಿನ್ನ ಕಾಗದ ಓದಿ ಮೂಕಳಾದೆನೋ ನಲ್ಲ. ಈ ದಿನಗಳಲ್ಲಿ ಮೌನಿಯಾಗುತ್ತಿದ್ದೀಯೆ ಅನ್ನುತ್ತಾಳೆ ಅಮ್ಮ. ಯಾಕೆ ಮಗು ಒಂಥರಾ ಇದ್ದೀ. ಏನು ಬೇಕೆಂದು ಕೇಳುತ್ತಾನೆ ಅಪ್ಪ. ನನಗೆ ಈಗಲೇ ನೀನು ಬೇಕೆಂದು ಹೇಳಬಲ್ಲೆನೇ ಅಪ್ಪನಿಗೆ? ಹೇಳಿದೆ ಅಂದುಕೊ. ಕೊಂಚ ದಿನ ತಾಳು ಮಗಳೇ. ಆ ದಿನವೂ ಬರಲಿದೆ ಅನ್ನುತ್ತಾನೆ.

ಅಮ್ಮನಿಗೆ ತಾವರೆಕೊಳದ ಬಗ್ಗೆ ಗುಟ್ಟಾಗಿ ಹೇಳಿದೆ. ಆದರೆ ಅವಳು ಅಪ್ಪನ ಕಿವಿಗೂ ಹಾಕಿಬಿಟ್ಟಳು. ಅವಳು ನಿನ್ನಮ್ಮನಷ್ಟೇ ತುಂಟಿ ವಸಂತ. ಮೂವರೂ ಕುಳಿತು ಊಟ ಮಾಡುವಾಗ ಅಪ್ಪ 'ಮಗು ನಿನ್ನ ವಸಂತನ ಸಂಭ್ರಮಗಳನ್ನು ನೋಡುತ್ತಿದ್ದರೆ, ಆ ಮನೆಯವರ ಅಕ್ಕರೆಯನ್ನು ನೆನಸಿಕೊಂಡರೆ, ನಮ್ಮಿಬ್ಬರನ್ನೂ ಮರೆತು ಇತ್ತ ಬರುವ ಮನಸ್ಸೇ ನಿನಗಾಗದೇನೋ ಅನ್ನಿಸುತ್ತೆ' ಅಂದ.

ನನ್ನೀ ವಿರಹ ವೇದನೆಗೆ ಹಿತದ ಮದ್ದು ನೀನು, ವೈದ್ಯ ನೀನು...

ಅವನ ಧ್ವನಿಯಲ್ಲಿ ವೇದನೆ, ಸಂತಸ ಮಿಶ್ರಿತವಾದಂತಿತ್ತು. 'ಅಪ್ಪಾ...' ಅಂದೆ. ಮಗು, ಮಗಳಿಗೆ ಇಂಥ ಸುಖದ ಮನೆಯೇ ಬೇಕೆಂದು ಎಲ್ಲ ತಂದೆ-ತಾಯಿಯ ಬಯಕೆ. ನಿನಗಿದು ಸಿಗಲಿದೆ. ಇದಕ್ಕಿಂತ ಅದೃಷ್ಟ ನಮಗಾವುದಿದೆ. ಸುಖವಾಗಿ ಬಾಳು ಎಂದು ಹರಸಿದರು. ಅಮ್ಮ ಸೆರಗಿನಿಂದ ಕಣ್ಣೊರೆಸಿಕೊಂಡಳು.

ಎಂತಹ ಆರ್ದ್ರತೆಯ ತಾಯಿ-ತಂದೆ ಇವರು ವಸಂತ! ನಿಮಗೆಲ್ಲ ಕೃತಜ್ಞತೆ ಎನ್ನಲೆ, ಧನ್ಯವಾದವೆನ್ನಲೆ, ಋಣಿಗಳು ನಾವು ಎನ್ನುವುದೆ? ಏನೂ ತೋಚುತ್ತಿಲ್ಲ. ಈ ಕ್ಷಣದಲ್ಲಿ ನಮ್ಮ ಮನೆ ಮೌನದಲ್ಲಿ ಮುಳುಗಿದೆ. ನಾವು ಮೂಕರಾಗಿ ಮುಖಮುಖ ನೋಡಿಕೊಂಡು ಕುಳಿತೆವು. ಉಣ್ಣದೆಯೇ ಉಂಡಂಥ ತೃಪ್ತಿ.

ನಿನ್ನ ಉಡುಗೊರೆ, ಇದು ಉಡುಗೊರೆ ಅನ್ನಿಸುತ್ತಿಲ್ಲ. ಇದು ನಮ್ಮಿಬ್ಬರ ಸುಂದರ ಜೀವನದ ಸಂಕೇತ ವಸಂತ. ಬದುಕಿನಲ್ಲಿ ನಮ್ಮ ಒಲವನ್ನು ಅರಳಿಸಿ, ಅರಳಿಕೊಳ್ಳುವುದರ ರೂಪಕ. ನಿನ್ನಲ್ಲಿ ಈ ಆಲೋಚನೆ ಬಂದುದಾದರು ಹೇಗೆ? ಪ್ರೀತಿಯ ಕಾಣಿಕೆಯಾಗಿ ಒಡವೆ, ವಸ್ತ್ರಗಳನ್ನು ಕೊಡುವುದು ಸಾಮಾನ್ಯ. ಉಳ್ಳವರು ಕಾರು, ಬಂಗಲೆ ಕೊಡುವರು. ಚರಿತ್ರೆಯಲ್ಲಿ ಅರಮನೆ, ಕೋಟೆ, ನಗರಗಳನ್ನು ಕಟ್ಟಿ ಅವಕ್ಕೆ ತಮ್ಮ ಪ್ರೇಯಸಿ ರಾಣಿಯರ ಹೆಸರಿಟ್ಟವರುಂಟು.

ಮದುವೆಗಿನ್ನು ಸಮಯವಿದೆಯೆಂದು ಅಪ್ಪ-ಅಮ್ಮನೂ ರೇಗಿಸುವರು ವಸಂತ

ಆದರೆ, ಹೀಗೆ ಅನೂಹ್ಯವಾದ ಹೂವಿನ ಕೊಳ ನಿರ್ಮಾಣ ಮಾಡಿದ ಬಗ್ಗೆ ಇತಿಹಾಸ ವಿಷಯದಲ್ಲಿ ಪದವೀಧರೆಯಾದ ನಾನು ಕೇಳಿಲ್ಲ. ಅದರಲ್ಲೂ ಒಬ್ಬ ಸಾಮಾನ್ಯ ರೈತ ಮಾಡಿದ್ದನ್ನಂತೂ ಕೇಳಿಯೇ ಇಲ್ಲ. ನನ್ನನ್ನು ಎಂಥ ಭಾಗ್ಯವಂತಳನ್ನಾಗಿ ಮಾಡಿರುವಿ ವಸಂತ! ನಾನೇನು ಕೊಡಲಿ ನಿನಗೆ? ಈ ಆಲೋಚನೆಯಲ್ಲಿ ದಿನಗಳು ಕಳೆದವು. ಅದಕ್ಕೇ ಕಾಗದ ಬರೆಯುವುದು ತಡವಾದುದು.

ಸಂಜೆ ಹಿತ್ತಲಲ್ಲಿ ನಿಂತಿದ್ದೆ. ಅಲ್ಲಿನ ಸೀಬೆಗಿಡದಲ್ಲಿ ಗಿಳಿ ಕುಳಿತು ದೋರೆಗಾಯನ್ನು ಕಚ್ಚಿ ತಿನ್ನುತ್ತಿತ್ತು. ನೀನು ತಿನ್ನಲು ಗಿಡದಲ್ಲಿ ಹಣ್ಣು ಉಳಿಸಿದವಳು ನಾನು. ಇದಕ್ಕೆ ನೀನೊಂದು ಪ್ರತ್ಯುಪಕಾರ ಮಾಡು. ಹಣ್ಣು ತಿಂದಾದ ಮೇಲೆ ನನ್ನ ವಸಂತನ ಬಳಿಗೆ ಹಾರಿ ನಾನು ನಿನ್ನ ಧ್ಯಾನದಲ್ಲಿದ್ದು, ನಿನ್ನ ಕುಶಲ ಕೇಳಿದೆನೆಂದು ಹೇಳು ಎಂದೆ.

ಅದು ತಿನ್ನುತ್ತಲೇ ಆಗಲೆಂಬಂತೆ ಕೊರಳಾಡಿಸಿತು. ಅಕಸ್ಮಾತ್ ಅದು ಮರೆತೀತೆಂದು ಮಲ್ಲಿಗೆ ಮುಡಿದ ಜಡೆಯನ್ನು ಗಾಳಿಯಲ್ಲಿ ಬೀಸಿ 'ನಾ ಮುಡಿದ ಮಲ್ಲಿಗೆ ಪರಿಮಳವನ್ನು ನನ್ನ ವಸಂತನಿಗೆ ತಲುಪಿಸೆಂದು ಬೇಡಿದೆ'. ಇದೇ ನಿನಗೆ ಕಾಣಿಕೆಯಾಗಿ ಕಳುಹಿಸಲು ನನ್ನಲ್ಲಿದ್ದ ಸಂಪತ್ತು.

ವಸಂತ ಇದು ನನಗೆ ಕಲ್ಪನೆ, ಭ್ರಮೆ ಅನ್ನಿಸಿದ್ದಿಲ್ಲ. ಒಬ್ಬರನ್ನೊಬ್ಬರು ಅರಿತವರಲ್ಲಿ ಇರುವ ಭಾವ ಸೌಗಂಧ ಸಂವಹನ ಸೌಕರ್ಯ. ನಾನೆಷ್ಟು ಸಂಭ್ರಮದ ಸುಖದಲ್ಲಿದ್ದೇನೆಂದರೆ, ನೀನೇನಾದರೂ ಹತ್ತಿರವಿದ್ದಿದ್ದರೆ ನಿನ್ನೆರಡು ಕೈ ಹಿಡಿದು ಅಪ್ಪಾಲೆ ತಿಪ್ಪಾಲೆ ಆಡಿಬಿಡುತ್ತಿದ್ದೆ. ಆಗ ತಲೆ ಸುತ್ತು ಬಂದು ನಿನ್ನ ಎದೆಗೊರಗಿ ವಸಂತ, ವಸಂತ ಎಂದು ಮೆಲ್ಲುಸಿರಲ್ಲಿ ಹಾಡುತ್ತಿದ್ದೆ. ತಾವರೆಕೊಳ ನೋಡುವ ಆಸೆಯಲ್ಲಿ, ಅಲ್ಲಿಗೆ ಬರುವ ಅವಕಾಶಕ್ಕಾಗಿ ಕಾಯುತ್ತಿರುವೆ.

ನಾನು ತಾವರೆ ಕೊಳಕ್ಕಿಳಿದು ಬಾಗಿ ಹೂ ಕೀಳುವ ನಿನ್ನ ಕಲ್ಪನಾ ವಿಹಾರ ಬಹಳ ಮೆಚ್ಚುಗೆಯಾಯಿತು. ನಿನ್ನ ಕಣ್ಣೋಟದ ಸ್ಪರ್ಶ ದೃಶ್ಯವನ್ನು ನೆನೆದೇ ನಾಚಿ ನೀರಾದೆ, ಪುಳಕಿತಳಾದೆ. ಮನದಲ್ಲಿ ಹಾಗಾಗುವ ಆಸೆ ಚಿಗುರು ಬಾಡದಂತೆ ಜೋಪಾನ ಮಾಡಿಕೊಂಡಿರುವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is the love letter series by Oneindia Kannada columnist Sa Raghunatha. Here is the beautiful thinking of build lotus pond by lover and which is praised by lady love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more