ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಟ್ರಗುಳಿಯ ಕೋಣಾಪಹರಣ ಪ್ರಹಸನ; ಅಮಲಲಿದ್ದು ಅಡ್ಡಕಸುಬಿಗಳಾದರು!

|
Google Oneindia Kannada News

ಕಳ್ಳರ ಖಯಾಲಿಗಳು ಅವರ ಕಳ್ಳತನದಂತೆಯೇ ವಿಭಿನ್ನ, ವೈವಿಧ್ಯಮಯ. ಯಾವ ಕಳ್ಳ ಯಾವುದನ್ನು, ಹೇಗೆ ಕದಿಯುತ್ತಾನೆಂದು ಬಲ್ಲವರಿಲ್ಲ. ಕ್ರಿಯಾ ಯೋಜನೆಯಂತೆ ಯಶಸ್ಸು ಅವರದು. ಅವರ ಈ ಯೋಜನೆಗಳು ಅವರಿಗೆ ಮಾತ್ರ ತಿಳಿದಿರುತ್ತವೆ. ಪೂರ್ವಸಿದ್ಧತೆ, ಆಲೋಚನೆಯಿರದೆ ಕದಿಯುವುದಷ್ಟೇ ಪ್ರೇರಣೆಯಾದರೆ ಸಿಕ್ಕಿಬೀಳುವುದು ಗ್ಯಾರಂಟಿ. ಇದಕ್ಕೊಂದು ಉದಾಹರಣೆ ಕೊಟ್ರಗುಳಿ ಕೋಣನ ಅಪಹರಣ ಪ್ರಸಂಗ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಟೀ ಅಂಗಡಿ, ಕ್ಷೌರದಂಗಡಿ ಸುದ್ದಿ ಕೇಂದ್ರಗಳಷ್ಟೇ ಅಲ್ಲ, ಗೆಳೆತನವನ್ನು ಬೆಸೆಯುವ ಕೇಂದ್ರಗಳು ಸಹ. ಇದರ ಸಾಲಿಗೆ ಬರುವ ಇನ್ನೊಂದು ಪ್ರಮುಖ ಅಂಗಡಿಯೆಂದರೆ 'ಗುಂಡು' ಅಂಗಡಿ. ಕೆಲವರು ಹಗೆಗಳಾಗುವುದು, ಆಪ್ತರಾಗುದೂ ಇಲ್ಲಿಯೇ. ಮುದ್ದಲಪ್ಪಗಾರಿ ಗಂಗುಲಪ್ಪ, ಸಾಪಲ ಲಕ್ಷ್ಮಯ್ಯ, ಯರ್ರಂವಾರಿಪಲ್ಲಿ ಸೀನ ಗೆಳೆಯರಾಗಿ ಆಪ್ತರಾದುದು ಇಲ್ಲಿಯೇ.

ಕೂಲಿಗೆ ಹೋದಾಗ ರಾತ್ರಿಗೆ ಹೊಲ- ತೋಟಗಳಲ್ಲಿ ಕದಿಯಲು ಏನು ಸಿಗುವುದೆಂದು ಅಜಮಾಯಿಷಿ ಮಾಡಿ, ಸಂಜೆ ಸಾರಾಯಂಗಡಿಯಲ್ಲಿ ಕುಳಿತು ಸಮಾಲೋಚಿಸಿ, ಗುಂಡೇರಿಸಿ, ನೇರ ಅಲ್ಲಿಗೆ ಹೋದರೆಂದರೆ ಹಗಲು ನೋಡಿ ಬಂದುದು ಮಾಯ! ತೆಂಗು, ಮಾವು, ಮುಸುಕಿನ ಜೋಳದ ತೆನೆ, ಮನೆಗಳ ಮೇಲೆ ಒಣ ಹಾಕಿದ್ದ ನೆಲಗಡಲೆ, ಹುಣಿಸೆಕಾಯಿ ಹೀಗೆ ಸುಲಭದ ಕಳ್ಳತನ ಅವರದಾಗಿತ್ತು. ಯಾರ ಕೈಗೂ ಸಿಗದಿದ್ದುದರಿಂದ ಇವರು ಕಳ್ಳರೆನಿಸಿರಲಿಲ್ಲ.

ಗುಂಡಿನ ಕಿಕ್ಕು, ಮೆಣಸಿನ ಖಾರದ ಅಮಲು

ಗುಂಡಿನ ಕಿಕ್ಕು, ಮೆಣಸಿನ ಖಾರದ ಅಮಲು

ಎಲ್ಲ ದಿನಗಳೂ ಒಂದೇ ಅಲ್ಲ. ಅದೃಷ್ಟ ಯಾವಾಗಲೂ ನೆಟ್ಟಗಿರುವುದಿಲ್ಲ ಎಂಬುದನ್ನು ಅರಿಯದಿರುವಷ್ಟರ ಮಟ್ಟಿಗೆ ಅಮಾಯಕರು. ಈ ಅಮಾಯಕತನದಲ್ಲಿಯೇ ಸಾರಾಯಿ ಅಂಗಡಿಯಲ್ಲಿ ಕುಳಿತು, ಮತ್ತೇರುತ್ತಿದ್ದಂತೆ ಒಳಗಿನ 'ಪರಮಾತ್ಮ'ನನ್ನು ಜಾಗೃತಗೊಳಿಸಿ, ಅಮಾವಾಸ್ಯೆಯ ದಿನವಾದ ಮರು ದಿನ ತಮ್ಮ ಊರಿನಿಂದ ಎರಡು ಮೈಲಿ ದೂರದ ಕೊಟ್ರಗುಳಿಯ ವೆಂಕಟಮ್ಮನ ಕೋಣಾಪಹರಣಕ್ಕೆ ನಿಶ್ಚಯಿಸಿದರು. ಅವರು ಕದಿಯುವುದಕ್ಕೂ ಗುಂಡಿನ ಪ್ರಮಾಣಕ್ಕೂ ಕೊಂಚ ಸಂಬಂಧವುಂಟು. ಚಿಲ್ಲರೆ ಕಳ್ಳತನವಾದರೆ 1-2 ಕ್ವಾರ್ಟರ್, ಎರಡೆರಡು ಬೋಂಡ. ದೊಡ್ಡ ರೀತಿಯ ಕದಿಯುವಿಕೆ ಇದ್ದರೆ 3 ಕ್ವಾರ್ಟರ್ ಮತ್ತು ಕೊಂಚ ಉಪ್ಪಿನಕಾಯಿ. ಜೊತಗೆ ಎರಡು ಮೂರು ಖಾರದ ಮೆಣಸಿನಕಾಯಿ ಬಜ್ಜಿ. ಮರಳಿ ಯತ್ನವಾದರೆ ಫುಲ್ ಬಾಟಲ್ ಜೊತೆಗೆ ಬೋಂಡ ಮೆಣಸಿಕಾಯಿ ಬಜ್ಜಿ ಮಿಕ್ಸ್. ಅಂದು ಕೋಣನ ಕಳುವು ಬಹು ದೊಡ್ಡದು. ಹಾಗಾಗಿ ಫುಲ್ ಬಾಟಲ್ ಗುಂಡಿನ ಕಿಕ್ಕು ಮತ್ತು ಮೆಣಸಿನಕಾಯಿ ಖಾರದ ಅಮಲು ಏರಿತ್ತು.

ಅಂಗಳದಲ್ಲಿ ಮೆಲುಕು ಹಾಕುತ್ತಾ ನಿಂತಿತ್ತು ಕೋಣ

ಅಂಗಳದಲ್ಲಿ ಮೆಲುಕು ಹಾಕುತ್ತಾ ನಿಂತಿತ್ತು ಕೋಣ

ಮರು ದಿನ ಅವರು ಕೂಲಿಗೆ ಹೋಗಲಿಲ್ಲ. ಪರಿಚಯದವರ ಮನೆಗಳಿಗೆ ಹೋಗಿ, ಒಳ್ಳೆ ಕೊಬ್ಬಿದ ಕೋಣನ ಉಡ್ಡೆಬಾಡು ಕೊಡುವುದಾಗಿ ಹೇಳಿ, ಅಡ್ವಾನ್ಸು ಪಡೆದರು. ಕೆಲವರಿಗೆ ರಕ್ತ ಕೊಡುವುದಾಗಿ ಅಡ್ವಾನ್ಸಿನೊಂದಿಗೆ ಗಿನ್ನೆ(ಬಟ್ಟಲು)ಗಳನ್ನು ಇಸಿದುಕೊಂಡರು. ಸಂಜೆಯಾಯಿತು. ಸಾರಾಯಿ ಅಂಗಡಿ ಕರೆಯಿತು. ಅಡ್ವಾನ್ಸು ದುಡ್ಡು ಚೆಡ್ಡಿ ಜೇಬಿನಲ್ಲಿ ಕುಣಿಯುತ್ತಿತ್ತು. ಕೋಣ ಕದಿಯುವ ಧೈರ್ಯಕ್ಕೆ ಎಂದಿಗಿಂತ ಹೆಚ್ಚಿಗೆ ಹೊಟ್ಟೆಗಿಳಿಸುತ್ತ, ಬರಲಿರುವ ಹಣದ ಲೆಕ್ಕ ಹಾಕಿದರು. ಐನೂರು ದಾಟಿದ ಲೆಕ್ಕ ಗುಂಡಿನ ಜೊತೆ ಸೇರಿ ತಲೆಯನ್ನು ಗಿರಗಿರನೆ ತಿರುಗಿಸಿತು. ಕೋಣ ಕರೆದಂತಾಯಿತು. ಎದ್ದು ಕೊಟ್ರಗುಳಿ ದಾರಿ ಹಿಡಿದರು. ಯಾರದೋ ಹೊಲದಲ್ಲಿದ್ದ ಮೇವಿನ ಜೋಳದ ನಾಕಾರು ಕರೆ(ದಂಟು) ಗಳನ್ನು ಕಿತ್ತುಕೊಂಡರು. ಚೆಡ್ಡಿ ಜೋಬುಗಳಲ್ಲಿದ್ದ ಕ್ವಾರ್ಟರ್ ಬಾಟಲಿಗಳು ಮಾದಕತೆಯಿಂದ ಟುಳುಕ್ ಟುಳುಕ್ ರಾಗ ತೆಗೆಯುತ್ತಿದ್ದವು. ರಾತ್ರಿ ಹತ್ತು ಗಂಟೆ. ಕೊಟ್ರಗುಳಿ ನಿದ್ದೆಯಲ್ಲಿತ್ತು. ಕೋಣ ಅಂಗಳದಲ್ಲಿ ಮೆಲುಕು ಹಾಕುತ್ತ ಮಲಗಿತ್ತು.

ಮನೆಯಿಂದ ಆಚೆ ಬಂದಳು ವೆಂಕಟಮ್ಮ

ಮನೆಯಿಂದ ಆಚೆ ಬಂದಳು ವೆಂಕಟಮ್ಮ

ಅವರು ಅದಕ್ಕೆ ಹಸಿದಂಟನ್ನು ತೋರಿಸಿದರು. ಅದು ಎದ್ದು ನಿಂತಾಗ ಸೀನ ಹಗ್ಗ ಬಿಚ್ಚಿದ. ಗಂಗುಲಪ್ಪನ ಕೈಲಿದ್ದ ಹಸಿ ಮೇವಿನತ್ತ ಹೆಜ್ಜೆ ಹಾಕಿತು. ಅವನು ಮುಂದಕ್ಕೆ ಹೆಜ್ಜೆ ಹಾಕಿದಂತೆ ಅದು ಹಿಂಬಾಲಿಸಿತು. ಊರು ದಾಟುತ್ತಲೇ ಅದರ ಹಗ್ಗ ಹಿಡಿದು, ತಮ್ಮ ಊರ ಹೊರಗಿನ ದೊಡ್ಡಬಂಡೆಗೆ ತಂದರು. ಜೇಬುಗಳಲ್ಲಿದ್ದ ಗುಂಡು ಕೆಣಕಿತು. ಅಮಲಿನ ಮೇಲೆ ಅಮಲು. ಕೋಣದ ಕತ್ತಿಗೆ ಕತ್ತಿ ಇಟ್ಟು ಇಳಿಸಬೇಕು. ಅಷ್ಟರಲ್ಲಿ ಅಪಾಯ ಗ್ರಹಿಸಿದ ಕೋಣ ವಂಯ್ ಎಂದು ಕೊಟ್ರಗುಳಿ ದಿಕ್ಕಿಗೆ ಓಡಿತು. ಅದರ ಹಿಂದೆ ಇವರು. ಕೋಣ ಓಡಿ ತನ್ನ ಮನೆ ಮುಂದೆ ನಿಂತು ವಂಯ್ ಎಂದಿತು. ಅದರ ಕೂಗಿಗೆ ವೆಂಕಟಮ್ಮ ಹೊರಬಂದಳು. ಆ ಮೂವರೂ ಗೋಡೆ ಮರೆಗೆ ಸರಿದರು. ಕೋಣ ಹಗ್ಗ ಬಿಚ್ಚಿಕೊಂಡಿದೆಯೆಂದು ವೆಂಕಟಮ್ಮ ಗಟ್ಟಿಯಾಗಿ ಗೂಟಕ್ಕೆ ಕಟ್ಟಿ, ಒಮ್ಮೆ ಎಳೆದು ನೋಡಿ, ಹೋಗಿ ಮಲಗಿಕೊಂಡಳು. ಮತ್ತೆ ಜೋಳದ ದಂಟಿನ ಹಸಿ ವಾಸನೆಗೆ ಮನಸೋತಿತು ಕೋಣ.

ಅಮಲಿನಲ್ಲಿ ಹಗೇವಿಗೆ ಬಿದ್ದ ಸೀನ

ಅಮಲಿನಲ್ಲಿ ಹಗೇವಿಗೆ ಬಿದ್ದ ಸೀನ

ಅಮಲಿನ ಮಂಕು, ಹಣ ಕೊಟ್ಟವರ ಕುರಿತಾದ ದಿಗಿಲು ಮತಿ ಕೆಡಿಸಿತ್ತು. ಗಂಗುಲಪ್ಪ, ಸೀನ ಕೋಣನ ಮೂಗುದಾರ ಹಿಡಿದುಕೊಂಡರು. ಲಕ್ಷ್ಮಯ್ಯ ನಡುಕದ ಕೈಯಲ್ಲಿ ಕತ್ತಿ ಹಿಡಿದು ದುರ್ಬಲವಾಗಿ ಅದರ ಕೊರಳಿಗೆ ಹೆಟ್ಟಿದ ಕೂಡಲೆ ಕೋಣ ವಂಯ್ ಎಂದು ಭಯದಲ್ಲಿ ಮುಂದಕ್ಕೆ ನುಗ್ಗಿ ಅವರನ್ನು ಕಲ್ಲುಗಳ ಮೇಲೆ ತಳ್ಳಿ ಕೊಟ್ರಗುಳಿಯತ್ತ ವೇಗವಾಗಿ ಓಡಿದ ಮೇಲೆ ಸಿಟ್ಟು ಬೇಸರದಲ್ಲಿ ಊರಿನತ್ತ ಹೊರಟರು. ಅಂದು ಸಂಜೆ ಹನುಮಪ್ಪ ತನ್ನ ಮನೆ ಅಂಚಿನ ಹಗೇವನ್ನು ತೆರೆದಿದ್ದ. ರಾತ್ರಿಯೆಲ್ಲ ಗಾಳಿ ಆಡಲಿ ಎಂದು ಮಕ್ಕರಿಯನ್ನು ಅದರ ಬಾಯಿಗೆ ಇರಿಸಿದ್ದ. ಇನ್ನೂ ಇಳಿಯದ ಅಮಲಿನಲ್ಲಿದ್ದ ಸೀನ ಮಕ್ಕರಿಯಲ್ಲಿ ಕಾಲಿಟ್ಟ. ಅದು ಅವನೊಂದಿಗೆ ಹಗೇವಿಗೆ ಬಿದ್ದಿತ್ತು. ಅವನು ಹೋ ಎಂದು ಅರಚಿದ. ನಾಯಿಗಳು ಬೊವ್ ಎಂದು ಎದ್ದವು. ಯಾರೀ ರಾಗಿ ಕದಿಯಲು ಬಂದಿದ್ದಾರೆಂದು ಹನುಮಪ್ಪನ ಮನೆಯವರು ಲಾಟೀನಿನೊಂದಿಗೆ ಬಂದರು.

ಕಾಲಿಗೆ ಹಗ್ಗ ಕಟ್ಟಿದ್ದರೆ ಕೆಲಸ ಸಲೀಸಾಗ್ತಿತ್ತಲ್ರೋ

ಕಾಲಿಗೆ ಹಗ್ಗ ಕಟ್ಟಿದ್ದರೆ ಕೆಲಸ ಸಲೀಸಾಗ್ತಿತ್ತಲ್ರೋ

ನೆರೆಯವರೂ ಎದ್ದು ಬಂದರು. ಓಡಲಿದ್ದ ಗಂಗುಲಪ್ಪ, ಲಕ್ಷ್ಮಯ್ಯರನ್ನು ಹಿಡಿದು ತದುಕುತ್ತಲೇ ಹಗೇವಿಗೆ ಹಗ್ಗ ಇಳಿಸಿ, ಸೀನನನ್ನು ಮೇಲಕ್ಕೆತ್ತಿ ಹಿಡಿದು ಕಜ್ಜಾಯ ತಿನ್ನಿಸಿದರು. ಏಟುಗಳಿಗೆ ಗುಂಡಿನ ಮತ್ತು ಹಾರಿ ಹೋಗಿತ್ತು. ನಡೆದುದನ್ನು ಜನರ ಮುಂದೆ ಕಕ್ಕಿದರು. ಮರು ದಿನ ಪಂಚಾಯಿತಿ ಸೇರಿ ತಲೆಗೆ ಐವತ್ತು ರೂಪಾಯಿ ಜುಲ್ಮಾನೆ ಹಾಕಿದ್ದಲ್ಲದೆ, ಬಾಡಿಗಾಗಿ ತೆಗೆದುಕೊಂಡಿದ್ದ ಅಡ್ವಾನ್ಸು ಹಣವನ್ನು ಕೂಡಲೇ ಹಿಂದಿರುಗಿಸುವಂತೆ ತಾಕೀತು ಮಾಡಿದರು. ಆ ಹಣವನ್ನು ಅವರ ಹೆಂಡತಿ- ಮಕ್ಕಳು ಅವರಿಗೆ ಹಿಡಿಶಾಪ ಹಾಕುತ್ತಲೇ ಕೋಳಿಗಳನ್ನು ಮಾರಿ ಕಟ್ಟಿದರು. ಪಂಚಾಯಿತಿ ನಡೆಯುತ್ತಿದ್ದಾಗ ದೂರ ಕುಳಿತು ಗಮನಿಸುತ್ತಿದ್ದ ಮಾರಮ್ಮನ ಗುಡಿಯ ಪೂಜಾರಿ ಸಂಜೀವಯ್ಯ ಅವರನ್ನು ಬಳಿಗೆ ಕರೆದು, 'ಅಲ್ರಲೇ ದಡ್ನನ್ಮಕ್ಳ, ಕಾಲುಗಳು ಕಟ್ಟಿ, ಕೆಳಕೆ ದಬ್ಬಿ, ಅದುಮಿ ಹಿಡಕಂಡು, ಮೂಗುದಾರ ಹಿಡಿದು ಕತ್ತುನ ಆಕಾಸಕೆತ್ತಿ ಕತ್ತಿಯೇಟು ಹಾಕೋದಲ್ಲೇನ್ರಲೇ. ಅಮಲು ಮುಂಡೆ ಮುಳುಗಿಸಿದಳಲ್ಲೊ ನಿಮ್ನ' ಅಂದ. ಅವರಿಗೆ ತಾವು ಮಾಡಿದ ಪ್ರಮಾದದ ಅರಿವಾದುದು ಆಗಲೇ.

English summary
Live stock theft attempt story of rural Karnataka. This incident took place in Kolar. Narrated by Oneindia Kannada columnist Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X