ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಕಾಡಿನಲ್ಲಿ ಬಾಳು ಕಂಡ ಕೊಂಡಕಾವಿಲಿ (ಜೇನು) ಪೆದ್ದನ್ನ

By ಸ. ರಘುನಾಥ
|
Google Oneindia Kannada News

1982ರ ಆದಿಯಲ್ಲಿ ಅಸಹಾಯಕ ಗರ್ಭಿಣಿ ಭಿಕ್ಷುಕಿಯ ನೆರವಿಗೆ ಮುಂದಾದುದು 'ನಮ್ಮ ಮಕ್ಕಳು' ಎಂದಾಗಲೂ ಹದಿಮೂರು ವರ್ಷಗಳು ಹಿಡಿದವು. ಇದು ಆರಂಭವಾದ ಎರಡನೆಯ ವರ್ಷದಾರಂಭದಲ್ಲಿ ಗಾಯಗೊಂದ ನಕ್ಷತ್ರದಾಮೆಯೊಂದರ ಆರೈಕೆಯೊಂದಿಗೆ 'ಮಡಿಲು' ಪ್ರಾರಂಭವಾಯಿತು. ಗಾಯಗೊಂಡ ಇಂಥ ಜೀವಿಗಳ ಸರಿಯಾದ ಆರೈಕೆಗೆ ಕಾಡು ಜೀವನ ಬಲ್ಲ, ಅಕ್ಕರೆಯುಳ್ಳ ಒಬ್ಬರ ಹುಡುಕಾಟದಲ್ಲಿ ತೊಡಗಿದ್ದೆ.

ಗಾಯಗೊಂಡ ಪ್ರಾಣಿಗಳ ಆರೈಕೆಗೆ ಜೊತೆಯಾಗುತ್ತಿದ್ದ, ಪಾಠ ಓದದ ಮಗಳನ್ನು ಹೊಡೆದೆನೆಂದು, ಜಗಳವಾಡಿ ತೀವ್ರವಾಗಿ ನನ್ನನ್ನು ದ್ವೇಷಿಸಿದ್ದು, ಅದೇ ಮಗಳು ತೀವ್ರ ಅನಾರೋಗ್ಯ ಗುರಿಯಾದಾಗ, ನನ್ನಿಂದ ವೈದ್ಯಕೀಯ ನೆರವು ಪಡೆದು ಆಪ್ತನಾದ ಗೌನಿಪಲ್ಲಿಯ ಶ್ರೀರಾಮುಲು ಎಂಬಾತ. ಸುನ್ನಕಲ್ಲು ಕಾಡಿನಲ್ಲಿ ಪೆದ್ದನ್ನ ಎಂಬಾತ 'ಅಡವಿಗಂಗಮ್ಮ'ನನ್ನು ಪೂಜಿಸುತ್ತ ಒಂಟಿಯಾಗಿದ್ದಾನೆ. ಮಂಗಳವಾರದ ಸಂತೆಗೆ ಬರುತ್ತಾನೆ ಎಂದು ಹೇಳಿದ. ಶ್ರೀರಾಮುಲು ಜೊತೆಯಲ್ಲಿ 'ದುಗ್ಗು' (ಕಡ್ಡಿಪುಡಿ) ಕೊಳ್ಳುತ್ತಿದ್ದ ಪೆದ್ದನ್ನನನ್ನು ಕಂಡೆ. ಪರಿಚಯವಾಗುವುದರೊಂದಿಗೆ ಗೆಳೆಯನಾದ.

ಮನೆತನದ ಹೆಸರಿನೊಂದಿಗೆ ಕೊಂಡಕಾವಿಲಿ (ಬೆಟ್ಟಗಾವಲ) ಪೆದ್ದನ್ನ. ಜೇನು ಸಂಗ್ರಹಿಸಿ (ಜೆನ್ನೊಣಗಳಿಗೆ ಪ್ರಾಣ ಹಾನಿಯಾಗದಂತೆ) ಮಾರಿ ಬಂದ ಹಣದಿಂದ ಅಡವಿಗಂಗಮ್ಮನಿಗೆ ಗುಡಿ ಕಟ್ಟಿಸುತ್ತ, ನನಗೆ ಪರಿಚಿಯವಾಗುವ ಹಿಂದಿನ ಇಪ್ಪತ್ತು ವರ್ಷಗಳಿಂದ ಅಲ್ಲಿಯೇ ವಾಸವಿದ್ದ ಪೆದ್ದನ್ನನಿಗಾದ ಕುರುಚಲು ಕಾಡಿನ ಪ್ರತಿಯೊಂದರೊಂದಿಗೆ ಸ್ನೇಹವಿದೆ.

Sa. Raghunath Column: Kondakavili Peddanna Lives In Forest

ಪೆದ್ದನ್ನನೊಮ್ಮೆ ತೆಲುಗಿನ ಮಹಾನಟ (ಮುಂದೆ ಆಂಧ್ರದ ಮುಖ್ಯಮಂತ್ರಿಯಾದ) ಎನ್.ಟಿ. ರಾಮರಾವ್ 'ರಾಜು- ಪೇದ' ಸಿನೆಮಾ ಶೂಟಿಂಗ್ ಮುಗಿಸಿಕೊಂಡು ಪಲಮನೇರು ಕಾಡಿನ ರಸ್ತೆಯಲ್ಲಿ ಹೋಗುತ್ತಿದ್ದಾಗ, ಪೆದ್ದನ್ನ ಜೇನು ಕೀಳುತ್ತಿದ್ದುದ್ದನ್ನು ಕಂಡು, ಕಾರನ್ನು ನಿಲ್ಲಿಸಿ, ಜೇನು ಕೇಳಿದರಂತೆ. ಅವರನ್ನು ಕಂಡು ದೇವರನ್ನು ಕಂಡಂತೆ ರೋಮಾಂಚಿತನಾಗಿದ್ದ ಪೆದ್ದನ್ನ, ಅಷ್ಟೂ ಜೇನನ್ನು ಕೊಡಲು ಮುಂದಾದಾಗ, ತಡೆದು ಕೈ ಒಡ್ಡಿದರಂತೆ. ಇವನು ಬೊಗಸೆಗೆ ಹಾಕಿದ ಜೇನನ್ನು ನೆಕ್ಕುತ್ತ, ಅವರದೇ ಶೈಲಿಯಲ್ಲಿ 'ಭಲೇಗಾ ಉಂದಿ ಬ್ರದರ್' (ಭಲೇ ಇದೆ ಬ್ರದರ್) ಎಂದು, ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡು ಪಲಮನೇರಿನಲ್ಲಿ ಬಿಟ್ಟರಂತೆ.

ದಾರಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಓದಿಸಲು ಹೇಳಿದ್ದರಿಂದಲೇ ಓದಿಸಿದ್ದು ಎನ್ನುವ ಪೆದ್ದನ್ನ, 'ಅಟ್ಲಾಂಟಿ ಮಹಾನುಭಾವುಡು ಚೆಪ್ಪಿನಂಕ ಮಾಟ ಮರಿಸೇಕುಂದಾ?' (ಅಂತಹ ಮಹಾನುಭಾವನೇ ಹೇಳಿದ ಮೇಲೆ ಮಾತು ಮರೆಯುವುದಕ್ಕಿದೆಯೆ?) ಎಂದು ಕಥೆಯಾಗಿ ಹೇಳಿದ. ನಿನ್ನ 'ಕೊಂಡಕಾವಿಲಿ' ಜೊತೆಗೆ 'ಜೇನು' ಸೇರಿಸಿಕೊ ಎಂದೆನಲ್ಲದೆ, ಇವನನ್ನು ಕುರಿತು 'ಕಾಡಿನ ಗೆಳೆಯ ಜೇನು ಪೆದ್ದನ್ನ' ಎಂದು ಪತ್ರಿಕೆಯೊಂದಕ್ಕೆ ಬರೆದೆ. ಈಗ ಎರಡು ಹೆಸರುಗಳೂ ಉಳಿದಿವೆ. ಪ್ರಕಟವಾಗಲಿರುವ ನನ್ನ 'ಗನ್ನೇರಿ' ಖಂಡಕಾವ್ಯದಲ್ಲಿ ಬರುವ ಜೇನು ಪೆದ್ದನ್ನನೂ ಇವನೇ.

Sa. Raghunath Column: Kondakavili Peddanna Lives In Forest

ಪೆದ್ದನ್ನನಿಗೀಗ ಎಂಬತ್ತು ವರ್ಷ. ನಮ್ಮಿಬ್ಬರ ಸ್ನೇಹಕ್ಕೆ ಕೊಂಚ ಅತ್ತಿತ್ತ ಇಪ್ಪತ್ತನಾಲ್ಕು ವರ್ಷ. ಕಾಡಿನಲ್ಲಿ ಒಂಟಿಯಾಗಿರುವ ತನ್ನ ರಕ್ಷಕಿ 'ಆ ಯಮ್ಮೇ' (ಆ ತಾಯಿಯೇ) ಎಂದು ನಂಬಿರುವ ಪೆದ್ದನ್ನ, ಗಟ್ಟಿಮುಟ್ಟಾಗಿದ್ದಾನೆ. ನಾವು 'ಹಸಿರು ಹೊನ್ನು ಬಳಗ'ದವರು ನೆಟ್ಟ ಗಿಡಗಳಿಗೆ ನೀರು ಹಾಕುವಾಗ ಬಿದ್ದು ಬಲಭುಜದ ಕೀಲು ಜಾರಿ, ಕಾಲಿಗೆ ಪೆಟ್ಟಾಗಿ ನೋವು ಅನುಭವಿಸುವುದು ಬಿಟ್ಟರೆ ಆರೋಗ್ಯವಂತನೇ. ಗುಡಿಗೆ ಬರುವವಗೆ ಸಣ್ಣಪುಟ್ಟ ಖಾಯಿಲೆ ಇದ್ದರೆ ಮದ್ದು ಕೊಡುತ್ತಾನೆ. ಮಂಗಳವಾರ, ಶುಕ್ರವಾರ, ಭಾನುವಾರ ಈ ಕಾರ್ಯಕ್ಕೆ ಮೀಸಲು.

ಪೆದ್ದನ್ನ ಕಾಡು ಸೇರಿದ್ದು ಮಡದಿಯ (ಕೊಂಡಕಾವಿಲಿ ತಿರುಮಲಮ್ಮ) ಮರಣದ ನಂತರ. ಕಾಡು ಸೇರಿದ ಮೇಲೆ ಬೇಟೆಯಾಡುವುದನ್ನು ಸಂಪೂರ್ಣ ನಿಲ್ಲಿಸಿ, ತನ್ನ ಮಿತಿಯಲ್ಲಿ ಬೇಟೆಗಾರರಿಂದ ಪ್ರಾಣಿಗಳನ್ನು ರಕ್ಷಿಸುತ್ತಾನೆ. ದೇವಸ್ಥಾನದ ಪಾಸಲೆಯ ಗಿಡಮರಗಳಿಗೆ ಕೊಡಲಿ, ಮಚ್ಚು, ಗರಗಸ ಬೀಳುವುದನ್ನು ತಡೆಯುತ್ತಾನೆ. ಜೇನು ಸಿಕ್ಕಿದಾಗ ಶ್ರೀನಿವಾಸಪುರಕ್ಕೆ ಹೋಗಿ ಪರಿಚಿತರಿಗೆ ಮಾರುತ್ತಾನೆ. ಬಂದ ಹಣವನ್ನು ದೇವಸ್ಥಾನಕ್ಕೆ ವಿನಿಯೋಗಿಸುತ್ತಾನೆ. ಇವನು ಕೊಡುವ ಜೇನನ್ನು ಕನ್ನಡದ ಅನೇಕ ಲೇಖಕರು, ನನ್ನ ಗೆಳೆಯರು ಸವಿದಿದ್ದಾರೆ. ಇವನು ನನಗೆ ಕೊಟ್ಟ ಜೇನು ಹತ್ತು ವರ್ಷಗಳಿಂದ ಕೆಡದೆ ಇದೆ. ಎಷ್ಟು ವರ್ಷಗಳು ಕೆಡದಂತೆ ಇರುತ್ತದೆ ಎಂದು ಪರೀಕ್ಷಿಸಲು ಬಳಸದೆ ಇರಿಸಿದ್ದೇನೆ.

Sa. Raghunath Column: Kondakavili Peddanna Lives In Forest

ಗುಡಿಯ ಹೊರಗೆ ಇರಿಸಿದ 'ಕೋಂಡ್ಲೆ ಒಲೆ' (ಜೋಡಿ ಒಲೆ) ಮೇಲೆ ಮುದ್ದೆಗೆ ಎಸರಿಟ್ಟು, ಗಿನ್ನೆಯಲ್ಲಿ (ಬಟ್ಟಲು) ಹುಣಿಸೆಹಣ್ಣು ನೆನೆಹಾಕಿ, ಮುದ್ದೆ ತೊಳೆಸಿದ ಕೂಡಲೇ ಕಿವುಚುವ ಹಸಿಗೊಜ್ಜಿನಲ್ಲಿ ಬಿಸಿಬಿಸಿ ಮುದ್ದೆ ತುತ್ತು ಮಾಡಿ ಗುಳುಂಗುಳುಂ ಎಂದು ನುಂಗುತ್ತಿದ್ದ ಅಮೃತವೇ ಬಂದು ಕುಡಿಯೆಂದರೂ ಈಗ ಒಲ್ಲೆನೆನ್ನುವ ಮನಸ್ಸಾಗದಿರದು. ಹಸುರಿನ ಬೆಳಕಿನಲ್ಲಿ ಮೀಯುತ್ತ ಉಣ್ಣುವ ಸುಖಕ್ಕೆ ಉಪಮೆ ಎಂದರೆ ಆ ಸುಖವೇ.

ತನ್ನ ಹಿರಿಯರ ಬಗ್ಗೆ ಹೇಳುವಾಗ ಪೆದ್ದನ್ನನ ಹೆಮ್ಮೆ ಪಡುತ್ತಾನೆ. ತಾಯಿ ಕೊಂಡಕಾವಿಲಿ ಕದಿರಮ್ಮ. ತಂದೆ ಕೊಂಡಕಾವಿಲಿ ನಾಗಪ್ಪ. ತಾತ ಕೊಂಡಕಾವಲಿ ಪೆದ್ದಗ. ಚಿಕ್ಕತಾತ ನಕ್ಕಲ ಕದಿರಿಗ. ಈ ಚಿಕ್ಕತಾತನ ಬಗ್ಗೆ ಉಬ್ಬಿನಿಂದ ಹೇಳುತ್ತಾನೆ. ಈತ ಚಿರತೆಯನ್ನು ಕೊಂದಿದ್ದರಿಂದ ಈ ಹೆಸರು ಬಂದಿತಂತೆ. (ಚಿರತೆಗೆ ತೆಲುಗಿನಲ್ಲಿ ಪೆದ್ದನಕ್ಕ, ಚಿರತಪುಲಿ ಅನ್ನುವರು). ಒಮ್ಮೆ ಈತ ಅಣ್ಣನೊಂದಿಗೆ ಕೋಟೆ ಕಾಯುತ್ತಿದಾಗ ಚಿರತೆಯೊಂದು ಕೋಟೆಯತ್ತ ನುಗ್ಗಿ ಬರುತ್ತಿತ್ತಂತೆ.

ಕದಿರಪ್ಪ ಅದನ್ನು ಕೈಲಿದ್ದ ಮಚ್ಚಿನಿಂದಲೇ ಎದುರಿಸಿ, ಹೋರಾಡಿ ಅದರ ನಡುನೆತ್ತಿಗೆ ಹೊಡೆದು ಕೊಂದನಂತೆ. ಈ ಸುದ್ದಿ ಮೈಸೂರರಸರ ಕಿವಿಗೆ ಬಿದ್ದು, ಈತನನ್ನು ಕರೆಸಿಕೊಂಡು ಏನು ಬಹುಮಾನ ಬೇಕೆಂದು ಕೇಳಿದಾಗ, 'ಮಾಫೀ ಲೈಸೆನ್ಸ್ ಬಂದೂಕು' ನೀಡಬೇಕೆಂದು ಕೋರಿದನಂತೆ. ಆತನ ಮರಣದ ನಂತರ ಅರಸಿನವರು ಅದನ್ನು ಹಿಂದಕ್ಕೆ ಪಡೆದರಂತೆ ಅನ್ನುವ ಪೆದ್ದನ್ನ, ಹಲವು ಕತೆಗಳನ್ನೂ ಹೇಳುತ್ತಾನೆ. ನಾನು ಹಿಂದೆ ಇದೇ ಅಂಕಣದಲ್ಲಿ ಬರೆದ 'ಪ್ರೇಮ ತೀಗೆ'ಗೆ (ಪ್ರೀತಿಯ ಬಳ್ಳಿ) ಇವನೇ ಕಾರಣ. ಚಿಕ್ಕಂದಿನ ಬರಗಾಲದ ದಿನಗಳಲ್ಲಿ ತಿಂದಿದ್ದ ಈಚಲ ಗೆಡ್ಡೆ(ಕುಂಭ) ಮತ್ತೆ ತಿಂದಿದ್ದು ಈತನ ಜೊತೆಯಲ್ಲಿ, ನನ್ನ ಅರವತ್ತನೆಯ ವಯಸ್ಸಿನಲ್ಲಿ.

ಈಗಲೂ ಪೆದ್ದನ್ನ ಗುಡಿಯ ಸುತ್ತಲಿನ ಕಾಡಿಗೆ ಅನಧಿಕೃತ ಕಾವಲುಗಾರ. ಇಲ್ಲಿ ಮರಗಳ್ಳತನ ನಿಯಂತ್ರಣದಲ್ಲಿದೆ. ಬೇಸಿಗೆಯಲ್ಲಿ ವಿಕೃತ ಬುದ್ಧಿಯವರು ಬೆಟ್ಟ- ಕಾಡಿಗೆ ಕಿಚ್ಚಿಕ್ಕುವ ಚೇಷ್ಟೆಗೆ ಕಡಿವಾಣ ಇದ್ದಿದೆ. ತನ್ನ ಕಾರ್ಯದ ಬೆಲೆ ಗೊತ್ತಿಲ್ಲದಷ್ಟು ಮುಗ್ಧ ಮನಸ್ಸು ಪೆದ್ದನ್ನನದು.

English summary
Sa. Raghunath Column: In the Sunnakallu forest, Peddanna alone is worshiping Adavi Gangamma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X