ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ.ರಘುನಾಥ್ ಅಂಕಣ: ಫಲಿಸಿತು ನರಸಿಂಗರಾಯನ ತಂತ್ರ

By ಸ.ರಘುನಾಥ್
|
Google Oneindia Kannada News

ಮಾಡಬೇಕಾದ ಕಸರತ್ತುಗಳನ್ನು ಮಾಡಿ ನರಸಿಂಗರಾಯ ಮತ್ತವನ ಗೆಳೆಯರು ಕೆಂಪರಾಜನು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವಲ್ಲಿ ಯಶ್ವಿಯಾದರು. ಆದರೆ ಪೈಲ್ವಾನ್ ಸಿದ್ಧಪ್ಪನ ಗೆಲುವಿನ ತಕ್ಕಡಿಯ ಮುಳ್ಳು ಅತ್ತಿತ್ತ ಆಡುತ್ತಲೇ ಇತ್ತು.

ಗ್ರಾಮ ಪಂಚಾಯತಿ ಗದ್ದುಗೆ ಹಿಡಿಯಲು ಅವನ ಗೆಲುವು ಅನಿವಾರ್ಯವಾಗಿತ್ತು. ಎದುರು ಪಾರ್ಟಿಯ ಕಡೆಯಿಂದ ಹೆಂಡ, ಹಣ ಹರಿದಿತ್ತು. ಜೊತೆಗೆ ದಿನ ಬಿಟ್ಟು ದಿನ ಕಡತೂರಿನ ಮನೆಗಳಲ್ಲಿ ಫಾರಂ ಕೋಳಿಗಳಿಗೆ ಮಸಾಲೆ ಅರೆಯುತ್ತಿತ್ತು. ಖರ್ಚಿಗೆ ಹಣ, ಜೈಕಾರಕ್ಕೆ ಹೆಂಡ, ನಾಲಿಗೆಗೆ ಚಿಕನ್ ಲೆಗ್ ಪೀಸು.. ಇವೇ ಸಿದ್ಧಪ್ಪನ ಗೆಲುವನ್ನು ಡೋಲಾಯಮಾನ ಸ್ಥಿತಿಯಲ್ಲಿಟ್ಟಿದ್ದವು.

ಒಂದು ಹಂತದಲ್ಲಿ ಸಿದ್ಧಪ್ಪ, ನಾನು ಚುನಾವಣೆಗೆ ನಿಂತಿದ್ದು ಮೂರ್ಖತನವಾಯಿತೇನೋ, ಮರ್ಯಾದೆಯಿಂದಿದ್ದೆ. ಅದನ್ನು ಕಳೆದುಕೊಳ್ಳುವೆನೇನೋ ಎಂದು ಆತಂಕದಲ್ಲಿ ನುಡಿದಿದ್ದ. ನರಸಿಂಗರಾಯನಲ್ಲಿಯೂ ಇದೇ ಆತಂಕ. ಆದರೆ ತೋರಿಸಿಕೊಳ್ಳುವಂತಿರಲಿಲ್ಲ. ಸುಮ್ಮನೆಯೂ ಇರುವಂತಿರಲಿಲ್ಲ. ಏಕೆಂದರೆ ಸಿದ್ಧಪ್ಪ ಚುನಾವಣೆಗೆ ನಿಲ್ಲಲು ಅವನೇ ಮುಖ್ಯ ಪ್ರೇರಕನಾಗಿದ್ದ.

ಸ.ರಘುನಾಥ್ ಅಂಕಣ: ಮುಳ್ಳಿನಮರ ಹತ್ತುವ ಕೆಲಸಸ.ರಘುನಾಥ್ ಅಂಕಣ: ಮುಳ್ಳಿನಮರ ಹತ್ತುವ ಕೆಲಸ

ಚುನಾವಣೆ ರಾಜಕೀಯದಲ್ಲಿ ಪಳಗಿದವರ ಸಲಹೆ-ಸಹಕಾರಿಲ್ಲದೆ ಕೆಲಸವಾಗದು ಅನ್ನಿಸಿತು. ಗೆಳೆಯರೊಡನೆ ಇದನ್ನೇ ಆಡಿದ. ಮಾತು ಬೀರಪ್ಪ, ದುಗ್ಗಪ್ಪ, ಮುನೆಂಕಟೇಗೌಡ, ಅಪ್ಪಯ್ಯ, ಮುನೆಕ್ಕನವರೆಗೂ ಹೋಗಿ ಚರ್ಚೆಗೆ ಬಂದಿತು. ಎಲ್ಲರಿಗೂ ಆಪದ್ಬಾಂಧವನಾಗಿ ಕಂಡವನು ಗೋವಿಂದಪ್ಪ.

Sa Raghunath Column: Kemparaja Elected As The President of Gram Panchayat

ಮನೆಗೆ ಬಂದ ಗುಂಪನ್ನು ಕಂಡ ಗೋವಿಂದಪ್ಪ, ಏನೋ ಗ್ರಹಚಾರ ಬಂತು ಅಂದುಕೊಂಡ. ಎಂಎಲ್ಎ ಗರಡಿಯಲ್ಲಿ ಪಳಗಿದ್ದವನು ನಗೆತಂದುಕೊಂಡು, 'ದೊಡ್ಡೋರೆಲ್ಲ ಬಂದವರೆ. ಕಾಪಿ, ನೀರು ಮಡಗು' ಎಂದು ಎಲ್ಲರಿಗೂ ಕೇಳಿಸುವಂತೆ ಹೆಂಡತಿಗೆ ಹೇಳಿದ.

ವಿಷಯ ಕೇಳಿಸಿಕೊಂಡ ಮೇಲೆ, ಎಂಎಲ್ಎ ರೀತಿಯಲ್ಲೇ ತೊಡೆಯ ಮೇಲೆ ಎಡಗೈ ಆಡಿಸುತ್ತ, ಸಿದ್ಧಪ್ಪನಿಗೆ ಎಗೆನೆಸ್ಟಾಗಿ ನಿಂತಿರೊ ಪೆರುಮಾಳಪ್ಪ ಎಮ್ಮೆಲ್ಯೆ ಮನುಷ್ಯ. ನಾನೇನು ಮಾಡಾಕಾಗುತ್ತೆ? ಪಾರ್ಟಿ ದ್ರೋಹ ಆಗುತ್ತೆ ಅಂದು, ಈ ಹುನ್ನಾರೆಲ್ಲ ನಿಂದೋ ಅನ್ನವಂತೆ ನರಸಿಂಗರಾಯನತ್ತ ನೋಡಿದ. ಅವನು ಮೌನವಾಗಿ ಕೆನ್ನೆ ಬಡಿದುಕೊಂಡ. ನಂಬೋಕಾಗಲ್ಲ ಅಂದ. ನಮ್ಮನ್ನಾ? ಅಂದ ದುಗ್ಗಪ್ಪ. ಅಲ್ಲೋ ಮಹಾರಾಜ. ಏನೋ ಮಾತು ಬಂತು ಅಂದ.

ಸಿದ್ಧಪ್ಪನು ಗೆದ್ರೆ ನಿನ್ನಳೀನು ಪ್ರೆಸಿಡೆಂಟಾಗ್ತಾನೆ. ಅದನ್ನು ತಪ್ಪಿಸ್ತಿಯೇನು? ಎಂದು ಗೆಲುವಿನ ದಾಳವಗಿ ಮಾತು ಎಂದು ಮನೆಂಕಟೇಗೌಡ ಮರ್ಮಕ್ಕೆ ಹೊಡೆದ. ಅಲ್ಲಿ ಕೆಂಪರಾಜನೂ ಇದ್ದುದು ಗೋವಿಂದಪ್ಪನನ್ನು ಇಕ್ಕಟ್ಟಿಗೆ ಹಾಕಿತು. ಈಗ ನೀನು ಸಹಾಯ ಮಾಡಿದರೆ ಮುಂದೆ ನಮ್ಮ ಸಪೋರ್ಟು ನಿನ್ನ ಎಂಲ್ಯೇಗೇ ಎಂದು ಪಿಲ್ಲಣ್ಣ ಅನಿರೀಕ್ಷಿತವಾಗಿ ಘೋಷಿಸಿಬಿಟ್ಟ. ಸಂದರ್ಭವರಿತವರು ಮೌನ ಸಮ್ಮತಿಯೆಂಬಂತೆ ಕುಳಿತರು. ಆಂ, ಊಂ ಅಂದ ಗೋವಿಂದಪ್ಪ, ದುಡ್ಡು ಬಂದಿರೋದು ನನ್ನ ಕೈಗೆ. ಕೆಲವರಿಗೆ ಕೊಡ್ತಿನಿ, ಕೆಲವರಿಗೆ ಕೊಡೊಲ್ಲ.

ದುಡ್ಡು ಕೊಡದೋರ ಓಟುಗಳನ್ನು ನಿಮ್ಮ ಕಡೆ ಮಾಡ್ಕೊಳ್ಳೊ ಕೆಲಸ ನಿಮ್ದು. ಆದರೆ ಇದು ಗುಟ್ಟಾಗಿರಬೇಕು ಅಂದ. ಅಷ್ಟು ಮಾಡು ಮಾರಾಯ ಸಾಕು. ಉಳಿದದ್ದು ನಾವು ನೊಡಿಕೊಳ್ತೇವೆ ಅಂದ ನರಸಿಂಗರಾಯ. ಒಳ್ಳೆ ತೀರ್ಮಾನ ನೋಡು ಎಂದು ಇಷ್ಟು ಜನರ ಮುಂದೆ ನಾರಾಯಣಕ್ಕ ಹೇಳಿದ್ದು ಗೋವಿಂದಪ್ಪನಿಗೆ ಹಿತವಾಗಿತ್ತು.

ತಂತ್ರ ಫಲಿಸಿತು. ಸಿದ್ಧಪ್ಪನೂ ಗೆದ್ದ, ಕೆಂಪರಾಜ ಪಂಚಾಯತಿ ಅಧ್ಯಕ್ಷನಾದ. ಆದರೆ ಗೋವಿಂದಪ್ಪ ಗುಟ್ಟಾಗಿರಬೇಕೆಂದುಕೊಂಡಿದ್ದು ಗುಟ್ಟಾಗಿರಲಿಲ್ಲ. ಸಿದ್ಧಪ್ಪನ ವಿರುದ್ಧ ಸೋತ ಪೆರುಮಾಳಪ್ಪ ಎಮ್ಮೆಲ್ಯೆಗೆ ದೂರುಕೊಟ್ಟ ಅದಕ್ಕೆ ಪ್ರತಿಯಾಗಿ ಗೋವಿಂದಪ್ಪ, ಪಿಲ್ಲಣ್ಣನ ಮಾತನ್ನು ಬಾಣವಾಗಿಸಿ ಎಮ್ಮೆಲ್ಯೆಯ ಎದೆಗೆ ಹೊಡೆದ. ಅದು ನೇರ ತಲುಪಿತು.

ಪೆರುಮಾಳಪ್ಪನದು ಪ್ರಭಾವಿ ಜಾತಿಯಲ್ಲವಾದ್ದರಿಂದ ಅವನ ದೂರನ್ನು ಕಡೆಗಣಿಸಿ, ತನ್ನ ರಾಜಕೀಯ ವರಸೆ ಬಳಸಿ ಅವನನ್ನು ತಣ್ಣಗಾಗಿಸಿದ. ಅವನಲ್ಲಿ ಉಳಿದಿದ್ದ ಅಸಮಾಧಾನವನ್ನು ಹೋಗಲಾಡಿಸಲು ಅಂದು ಅವನನ್ನು ಜೊತೆಯಲ್ಲಿ ಊಟಕ್ಕೆ ಕೂರಿಕೊಂಡು ಸೆಲ್ಫಿ ತೆಗೆಸಿಕೊಂಡು ನಕ್ಕ ನಗೆಯ ಅರ್ಥ ಗೋವಿಂದಪ್ಪನಿಗೆ ತಿಳಿಯಿತು. ಪೆರುಮಾಳಪ್ಪ ಆ ಫೋಟೋವನ್ನು ವೈರಲ್ ಮಾಡಿ ಬೀಗುತ್ತ, ತಾನು ಬಕರಾ ಆದುದನ್ನು ತಿಳಿಯಲೇ ಇಲ್ಲ.

English summary
Narasingaraya and his friends succeeded to Kemparaja elected unanimous.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X