ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇಷಪ್ಪನ ಹನುಮಾವತಾರದ ಸಿಕ್ಕಾಪಟ್ಟೆ ಮನರಂಜನೆ ನಿಮ್ಮೊಂದಿಗಿಷ್ಟು

By ಸ.ರಘುನಾಥ, ಕೋಲಾರ
|
Google Oneindia Kannada News

ಮಲಿಯಪ್ಪನಹಳ್ಳಿಯಲ್ಲಿ ಕೇಳಿಕೆಯಾಗಲಿ, ನಾಟಕವಾಗಲಿ ಸುತ್ತಲ ಹಳ್ಳಿಗಳಲ್ಲಿ ಬಲು 'ಪೇಮಸ್ಸು'. ಕೇಳಿಕೆಗಳು ತೆಲುಗಿನವು, ನಾಟಕಗಳು ಕನ್ನಡದವು. ಆಡುತ್ತಿದ್ದ ನಾಟಕಗಳು ಎರಡೇ. ಒಂದು ಸಂಪೂರ್ಣ ರಾಮಾಯಣ, ಇನ್ನೊಂದು ಸದಾರಮೆ.

ನಮ್ಮ ಊರಿನಲ್ಲಿ ಒಂದು ಪರಿಪಾಠವಿತ್ತು. ಅದೆಂದರೆ ಇಂಥ ಪಾತ್ರ ಇಂಥವರಿಗೇ ಎಂಬುದು. ಇದು ಎಲ್ಲರಿಗೂ ಅಲ್ಲ, ಕೆಲವರಿಗೆ ಮಾತ್ರ. ಇಲ್ಲವೆಂದರೆ ಜಗಳ. ಕಡೆಗೆ 'ಆಟ' ಜರುಗುವುದೇ ದುಸ್ತರವಾಗಿಬಿಡುತ್ತಿತ್ತು. ದುರ್ಯೋಧನ ದೊಡ್ಡ ಕ್ರಿಷ್ಣಪ್ಪನೋರ ನಾರಾಯಣಪ್ಪ, ನಾರದ ಆತನ ತಮ್ಮ ಆಂಜನಪ್ಪ, ಬಲರಾಮ ಭಜಂತ್ರಿ ಮುನಿಕ್ರಿಷ್ಣಪ್ಪ, ಶಶಿರೇಖೆ ಯಾಲಗಿರಿಯಪ್ಪ, ಘಟೋದ್ಗಚ (ಘಟೋತ್ಕಚ) ಕಬ್ಬಾಳದ ಪಾಪಯ್ಯ... ಏನು ಮಾಡಿದರೂ ಇವರಿಂದ ಆ ಪಾರ್ಟುಗಳನ್ನು ತಪ್ಪಿಲು ಆಗುತ್ತಿರಲಿಲ್ಲ.

ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ

ಇವರು ಪಾರ್ಟು ಭದ್ರರಾಗಿದ್ದರು. ನೂರು ಹೋಗಲಿ ಆರು ಬರಲಿ ಆ ಪಾರ್ಟುಗಳನ್ನು ಮಾತ್ರ ಬಿಡುತ್ತಿರಲಿಲ್ಲ. ಅವರಿಗೆ ಊರಿನಲ್ಲಿ ಅಂಥ ಬೆಂಬಲವೂ ಇತ್ತು. ಹಾಗೆ ಬೆಂಬಲವಿದ್ದವರಲ್ಲಿ ಹನುಮಂತನ ಪಾರ್ಟಿನ ಶೇಷಪ್ಪನೂ ಒಬ್ಬ. ಈತ ಊರದೇವತೆ ಚಲ್ಲಾಪುರಮ್ಮ, ಮತ್ತು ಗೋಪಾಲಸ್ವಾಮಿ ಗುಡಿಗಳ ಪೂಜಾರಿಯಾಗಿದ್ದವನಿಗೆ ನಾಟಕದ ಖಯಾಲಿ. ಕಪ್ಪು ಮೈಯ, ಚಿಕ್ಕ ಕಣ್ಣ, ಸಣಕಲ ಗಿಡ್ಡನಿಗೆ ಹನುಮಂತನ ಪಾರ್ಟು!

ಮಂತ್ರ, ನಾಟಕಾಭ್ಯಾಸ ಒಟ್ಟೊಟ್ಟಿಗೆ

ಮಂತ್ರ, ನಾಟಕಾಭ್ಯಾಸ ಒಟ್ಟೊಟ್ಟಿಗೆ

ಶೇಷಪ್ಪ ಜಮಾಯಿಂಪಿ(ತಾಲೀಮು)ನಲ್ಲಿ ಅಭ್ಯಾಸ ಮಾಡುತ್ತಿದ್ದರೂ ಪೂಜೆಯ ನಡುವಿನಂತರದಲ್ಲಿ ತನ್ನ ಪಾತ್ರದ ಮಾತು, ಮಟ್ಟುಗಳನ್ನು ಹೇಳಿಕೊಳ್ಳುತ್ತಾ ಪಕ್ಕಾ ಮಾಡಿಕೊಳ್ಳುತ್ತಿದ್ದ. ಅವು ಕೇಳಲು ಮಂತ್ರದಂತೆಯೇ ಇರುತ್ತಿದ್ದವು. ಹಾಗಾಗಿ ಜನರಿಗೆ ನಾಟಕದ್ದಾವುದು, ದೇವರದ್ದಾವುದು ಎಂದು ಗೊಂದಲವುಂಟಾಗುತ್ತಿತ್ತು.

ಯಾವ ದೇವರಾದರೇನು?

ಯಾವ ದೇವರಾದರೇನು?

ಹೀಗೆ ಶೇಷಪ್ಪ ತಾಲೀಮು ನಡೆಸುತ್ತಿರುವಾಗ ಯಾರಾದರೂ ಪೂಜೆಗೆ ಬಂದರೆ ಹಾಡಿಕೊಳ್ಳುತ್ತಲೇ ಪೂಜಾ ಸಾಮಗ್ರಿಗಳನ್ನು ಪಡೆದು ಗರ್ಭಗುಡಿಗೆ ಒಯ್ಯುತ್ತಿದ್ದ. ಹಾಡು ಮುಗಿಯುತ್ತಲೆ ಅಸಲೀ ಪೂಜೆ ಪ್ರಾರಂಭ. ಇದೇನು ಪೂಜಾರಪ್ಪ ಚಲ್ಲಾಪುರಮ್ಮನಿಗೆ ರಾಮನಾಮ ಎಂದರೆ ಇವಳೂ ದೇವರು, ಹಾಡ್ತಿರೋದೂ ದೇವರ ನಾಮವೇ. ಯಾವ ದೇವರಾದರೇನು, ಯಾವ ನಾಮವಾದರೇನು ಅನ್ನುತ್ತಿದ್ದ.

ಅಶೋಕವನದ ಎಫೆಕ್ಟ್

ಅಶೋಕವನದ ಎಫೆಕ್ಟ್

ನಾಟಕದಲ್ಲಿ ರಾವಣನ ಮುಂದೆ ಹಾಜರು ಪಡಿಸುವುದರೊಂದಿಗೆ ಹನುಮನಿಗೆ ಪ್ರವೇಶ ನೀಡಲಾಗಿತ್ತು. ಇದು ಶೇಷಪ್ಪನಿಗೆ ಸಮ್ಮತವಿರಲಿಲ್ಲ. ಆದರೂ ಸಮ್ಮತಿ ಇರುವವನಂತೆ ಸುಮ್ಮನಿದ್ದ. ಯಾವಾಗ ರಂಗದ ಮೇಲಕ್ಕೆ ಬಂದನೋ ರಂಗದಲ್ಲಿ ಹೆಚ್ಚು ಹೊತ್ತು ಇರಬೇಕೆಂಬ ಇರಾದೆ ಹುಟ್ಟಿಕೊಂಡಿತು. ಅವಕಾಶಕ್ಕಾಗಿ ಕಾಯುತ್ತಿದ್ದ. ಇನ್ನೇನು ತೋಕೆಗೆ ಬೆಂಕಿ ಹಚ್ಚಬೇಕು ಶೇಷಪ್ಪ ಛಂಗನೆ ನೆಗೆದ. ಅಶೋಕವನದ 'ಎಪೆಟ್'(ಎಫೆಕ್ಟ್)ಗಾಗಿ ರಂಗದ ಪಕ್ಕದಲ್ಲೇ ನೆಟ್ಟಿದ್ದ ಮಾವಿನ ದೊಡ್ಡ ಕೊಂಬೆ ಏರಿ ಬಿಟ್ಟ.

ಗುಡಿಯ ಮೇಲಕ್ಕೆ ಜಿಗಿದ

ಗುಡಿಯ ಮೇಲಕ್ಕೆ ಜಿಗಿದ

ಹಣ್ಣುಗಳ ಭ್ರಮೆ ಹುಟ್ಟಿಸಲು ಕೊಂಬೆಗಳಿಗೆ ಹಸುರು, ಹಳದಿ ಬಣ್ಣಗಳ ಬತ್ತಾಸುಗಳನ್ನು ಕಟ್ಟಿದ್ದರು. ಕೊಂಬೆ ಹತ್ತಿದ ಶೇಷಪ್ಪ ಅವುಗಳನ್ನು ಕಿತ್ತು ಕಡಿದ. ಮಕ್ಕಳತ್ತಲೂ ಎಸೆದ. ಥೇಟು ಕೋತಿಯಂತೆಯೆ. ಜನ ಖುಷಿಗೊಂಡರು. ಸಿಳ್ಳೆ ಹೊಡೆದರು. ಶೇಷಪ್ಪ ಹುರುಪುಗೊಂಡ. ಆವೇಶಕ್ಕೆ ಒಳಗಾದ. ಪಕ್ಕದಲ್ಲೇ ಕೊಂಚ ಎತ್ತರಕ್ಕೆ ಮಾರೆಮ್ಮನ ಗುಡಿಯಿತ್ತು. ಅದರ ಮೇಲಕ್ಕೆ ಜಿಗಿದ. ಅದೇ ಹುಮ್ಮಸ್ಸಿನಲ್ಲಿ ಇನ್ನಷ್ಟು ಎತ್ತರಕ್ಕಿದ್ದ ಚಲ್ಲಾಪುರಮ್ಮನ ಗುಡಿಯ ಮಾಡಿನ ಮೇಲಕ್ಕೂ ಜಿಗಿದುಬಿಟ್ಟ.

ನಿಚ್ಚಣಿಕೆ ತತ್ತಾರೋ ಲಚ್ಮಿನಾರಾಯಣ

ನಿಚ್ಚಣಿಕೆ ತತ್ತಾರೋ ಲಚ್ಮಿನಾರಾಯಣ

ಅಲ್ಲಿಂದ ನೋಡುತ್ತಾನೆ, ಎದೆ ಧಸಕ್ಕೆಂದಿತು. ಪಾತಾಳ ಕಂಡಂತಾಯಿತು. ಜನರಲ್ಲಿ ಉತ್ಸಾಹವೋ ಉತ್ಸಾಹ. ಜಿಗಿ ಜಿಗಿ ಎಂಬ ಕೂಗು. ಜಿಗಿದರೆ ಸೊಂಟದ ಮೂಳೆ ಮುರಿಯುವುದು ಗ್ಯಾರಂಟಿ. ನೆರವಿಲ್ಲದೆ ಇಳಿಯುವಂತಿಲ್ಲ. ಎಲ್ಲರೂ ನೋಡುವಂತೆ ನೆರವಿನಿಂದ ಇಳಿದರೆ ತನಗೂ ತನ್ನ ಪಾತ್ರಕ್ಕೂ ಅವಮಾನ. ಶೇಷಪ್ಪ ತಬ್ಬಿಬ್ಬುಗೊಂಡ. ಕ್ಷಣವಷ್ಟೆ. ಸಾವರಿಸಿಕೊಂಡು ಅಲ್ಲಿಂದಲೆ 'ದರುವು' ತೆಗೆದು ಹಾಡತೊಡಗಿದ.

ಎಕ್ಕೋದೇನೊ ಎಕ್ಕಿದ್ನಿ

ಇಳಿಯಾಕ ಆಗ್ಲಿಲ್ಲ

ನಿಚ್ಚಣಿಕೆ ತತ್ತಾರೊ

ಲಚ್ಮಿನಾರಾಯಣ

ಸಿಟ್ಟಾದ ರಾವಣ

ಸಿಟ್ಟಾದ ರಾವಣ

ಅಷ್ಟೆ. ಹಾರ್ಮೋನಿಯಂ ಮಾಸ್ಟರ್ ಬಾರಿಸಿಯೇಬಿಟ್ಟ. ತಬಲವೂ ನುಡಿಯಿತು. ತಾಳವೂ ಆಡಿತು. ನನ್ನ ತಾತ 'ಹಂಗನ್ನು' ಅಂದದ್ದೆ, ಶೇಷಪ್ಪ ಮತ್ತೆ ಎತ್ತಿಕೊಂಡ. ತಾತ ತನ್ನ ಪಕ್ಕದಲ್ಲೇ ಇದ್ದ ಅವನ ಮಗ ಲಕ್ಷ್ಮೀನಾರಾಯಣಪ್ಪನಿಗೆ 'ಬೇಗ ಹೋಗಿ ಗುಡಿ ಹಿಂದೆ ಏಣಿ ಹಾಕೊ' ಎಂದ. ಅವನು ಓಡಿದ. ಹಾಡುತ್ತ ಹಾಡುತ್ತ ಹಿಂದಿಂದಕ್ಕೆ ಸರಿದ ಶೇಷಪ್ಪ ಅದೃಶ್ಯನಾದ. ನಿಮಿಷದಲ್ಲೇ ರಾವಣನ ಎದುರು ನಿಂತ. ಈ ಅಧಿಕ ಪ್ರಸಂಗದಿಂದ ಸಿಟ್ಟಿನಲ್ಲಿದ್ದ ರಾವಣ 'ಎತ್ತ ಹಾಳಾಗಿ ಹೋಗಿದ್ದೆಯೋ ಕೋತಿ' ಎಂದು ಗುಡುಗಿದ.

ಕೋತಿಗೆ ತದುಕಿ, ಬಾಲಕ್ಕೆ ಬೆಂಕಿ ಇಡಿ

ಕೋತಿಗೆ ತದುಕಿ, ಬಾಲಕ್ಕೆ ಬೆಂಕಿ ಇಡಿ

ಕೂಡಲೇ ಶೇಷಪ್ಪ, 'ಸುಡಬೇಕಲ್ಲ ನಿನ್ನ ಲಂಕೆಯ. ನೋಡಿ ಬರಲು ಹೋಗಿದ್ದೆನೋ ರಾಕ್ಷಸ' ಎಂದು ಬಾಲವನ್ನು ಆಡಿಸಿದ. ಮೊದಲೇ ಪಿತ್ತ ನೆತ್ತಿಗೇರಿದ್ದ ರಾವಣ(ಪಾತ್ರಧಾರಿ) ಶೇಷಪ್ಪನ ಮೇಲಿನ ಸಿಟ್ಟನ್ನು ಪಾತ್ರ ಸಹಜ ಸಿಟ್ಟಾಗಿಸಿ 'ಈ ಕೋತಿಗೆ ಎರಡು ತದುಕಿ ಬಾಲಕ್ಕೆ ಬೆಂಕಿ ಇಡಿ' ಎಂದು ಕಟಕಟ ಹಲ್ಲು ಕಡಿದ. ಸನ್ನಿವೇಶವನ್ನು ಅರ್ಥ ಮಾಡಿಕೊಂಡವರು ಬಿದ್ದು ಬಿದ್ದು ನಕ್ಕರು. ಈ ಪ್ರಸಂಗ ಊರೂರ ಮಾತಾಯಿತು. ಶೇಷಪ್ಪನಿಗೆ ಹನುಮಂತನ ಪಾತ್ರ ಕಾಯಂ ಆಯಿತು.

English summary
Kolar is the place influenced by Kannada and Telugu. Kannada plays are favorite to rural background people. Here is an interesting drama situation explains Oneindia Kannada columnist Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X