• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರಸಿಂಗರಾಯನೂ, ದೋಸ್ತರೂ ಇಂಗ್ಲಿಷ್ ಪಿಚ್ಚರ್ ‍ಗೆ ಹೋಗಿದ್ದು

By ಸ ರಘುನಾಥ, ಕೋಲಾರ
|

ನಾಟಕ ಕಲಿಸುವುದರಿಂದ ಕೈಗೆ ಸೇರುತ್ತಿದ್ದ ಸಂಭಾವನೆ ರೂಪದ ಹಣದಲ್ಲಿ ನರಸಿಂಗರಾಯನ ಅಪ್ಪ ಉಳಿತಾಯ ಮಾಡಿದ್ದ ಹಣವನ್ನು ಹಿರಿಯ ದುಗ್ಗಪ್ಪನ ಕೈಲಿಟ್ಟು, ಇದರಿಂದ ತನಗೊಂದು ತುಂಡು ನೆಲ ಮಾಡಿಕೊಡುವಂತೆ ವಿನಂತಿಸಿದ್ದ. ಆ ಹಣಕ್ಕೆ ಮೂರು ಗುಂಟೆಯೂ ಬರುವಂತಿರಲಿಲ್ಲ. ಹಾಗೆಂದು ಆಗದೆಂದು ಹೇಳುವ ಮನಸ್ಸು ದುಗ್ಗಪ್ಪನಿಗಿರಲಿಲ್ಲ. ಒಂದೆರಡು ದಿನ ಬಿಟ್ಟು ಬಂದು ಕಾಣಲು ಹೇಳಿ ಕಳಿಸಿದ. ಮಕ್ಕಳು ಹೆಂಡಿರ ಜೊತೆ ಮಾತನಾಡಿದ. ಕಲಾವಿದ, ಒಳ್ಳೆಯವ, ಬದುಕಲಿ. ಕರಿಕಲ್ಲುಗುಡ್ಡದಲ್ಲಿರುವ ನಮ್ಮ ಒಂದು ಎಕರೆಯನ್ನು ಬರೆದು ಕೊಡು. ನಮ್ಮ ತಕರಾರಿಲ್ಲ ಎಂದರು ಅವರು. ದುಗ್ಗಪ್ಪ ನರಸಿಂಗರಾಯನ ಅಪ್ಪ ಕೊಟ್ಟಿದ್ದ ಹಣವನ್ನು ರಿಜಿಸ್ಟರ್ ಮಾಡುವ ಖರ್ಚಿಗೆ ಹಾಕಿ, ಆ ಎಕರೆ ಜಮೀನನ್ನು ಶುದ್ಧಕ್ರಯ ಮಾಡಿಕೊಟ್ಟಿದ್ದ. ಆ ಖುಷ್ಕಿ ನೆಲದಲ್ಲಿ ರಾಗಿಯೋ ಹುರುಳಿಯೋ ಬಿತ್ತುವುದಾಗಿತ್ತು. ನರಸಿಂಗರಾಯ ಭವಿಷ್ಯಕ್ಕಾಗಿ ಇನ್ನೇನಾದರೂ ಮಾಡಬೇಕೆಂದುಕೊಂಡ. ಆಪ್ತ ಗೆಳೆಯರಾದ ಬೊಡಪ್ಪ, ಪಿಲ್ಲಣ್ಣರೊಂದಿಗೆ ಹೇಳಿಕೊಂಡ.

ಓದಲು ಬಾರದ ಮಾತಂಗಿಗೆ ಬರೆದ ಪ್ರೇಮ ಪತ್ರ ಸಿಕ್ಕಿದ್ದು ದನದ ಕೊಟ್ಟಿಗೆಯಲ್ಲಿ

ಅವರಲ್ಲಿ ಬೋಡಪ್ಪ ಪರವಾಗಿಲ್ಲ ಅನ್ನುವ ಸ್ಥಿತಿಯವನು. ಪಿಲ್ಲಣ್ಣನಿಗೆ ತೋಟ ಅನ್ನುವುದಿದ್ದರೂ ಬಾವಿಯಲ್ಲಿ ನೀರು ಇರದೆ ರಾಗಿಯನ್ನು ಮಾತ್ರ ಬೆಳೆಯುತ್ತಿದ್ದ. ಬೋಡಪ್ಪನ ತೋಟದ ಬಾವಿಯಲ್ಲಿ ಅವನ ಬೆಳೆಗೆ ಸರಿಯಾಗುವಷ್ಟು ನೀರಿತ್ತು. ಮೂವರೂ ಕೂಡಿ ಬದುಕು (ಬೇಸಾಯ) ಮಾಡಲು ತೀರ್ಮಾನಿಸಿ, ಉರ್ಲಗಡ್ಡೆ (ಆಲೂಗೆಡ್ಡೆ) ಬೆಳೆದರು. ಅದನ್ನು ಅಗೆದಾಗ ಬರೊಬ್ಬರಿ 150 ಮೂಟೆ ಇಳುವರಿ ಸಿಕ್ಕಿತ್ತು. ಕೊಳ್ಳುದಾರ ತೋಟಕ್ಕೇ ಬಂದರೂ ಕೊಡದೆ, ಮದ್ರಾಸಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರಲ್ಲಿ ಮದ್ರಾಸು ನೋಡುವ ಆಸೆಯೂ ಇತ್ತು. ಹಿಂದೊಮ್ಮೆ ಬೋಡಪ್ಪ ಆಲೂಗಡ್ಡೆಯನ್ನು ಮದ್ರಾಸಿಗೆ ಹೋಗಿ ಮಾರಿಕೊಂಡು ಬಂದಿದ್ದ. ಈ ಹಿನ್ನೆಲೆಯಲ್ಲಿ ಗೆಳೆಯರು ಮೂವರೂ ಆಲೂಗಡ್ಡೆಯೊಂದಿಗೆ ಲಾರಿಯಲ್ಲಿ ಕೂತು, ಖುಷಿಯಿಂದ 'ರೈಟ್ ರೈಟ್. ನಾನ್‍ ಸ್ಟಾಪ್ ಮದ್ರಾಸ್' ಅಂದಿದ್ದರು. ಸಂಜೆ ಅನ್ ಲೋಡ್ ಆಗುತ್ತಲೆ ಡ್ರೈವರ್, ಮಂಡಿ ರೈಟರ್ ನಿಂದ ಬಾಡಿಗೆ ದುಡ್ಡು ಪಡೆದು, ವಾಪಸ್ಸಾಗಲು ಲೋಡನ್ನು ಹುಡುಕಿಕೊಂಡು ಹೊರಟ.

ಮಾಲು ಹರಾಜು ಬೆಳಿಗ್ಗೆಯೇ. ಕಾಲ ಕಳೆಯಲು ಸಿನೆಮಾಗೆ ಹೋಗುವುದೆಂದುಕೊಂಡರು. ರೈಟರ್ ನಲ್ಲಿ ಲೆಕ್ಕ ಬರೆಸಿ ಖರ್ಚಿಗೆ ಕಾಸು ಪಡೆದು, ಅವನು ಹೇಳಿದ ದಾರಿ ಹಿಡಿದು, ಮಾರ್ಕೆಟ್ಟಿಗೆ ಹತ್ತಿರದ ಥಿಯೇಟರಿಗೆ ಹೋದರು. ಆಗಲೇ ತಡವಾಗಿದ್ದುದ್ದರಿಂದ ವಾಲ್ ಪೋಸ್ಟರನ್ನೂ ನೋಡಲಿಲ್ಲ. ಗೇಟ್ ಕೀಪರ್ ಟಾರ್ಚ್ ಹಾಕಿ ತೋರಿಸಿದ ಸೀಟುಗಳಲ್ಲಿ ಕುಳಿತರು. ಅರ್ಥವಾಗದ ತಮಿಳಿನ ಸೈಡ್‍ರೀಲು ಮುಗಿದು ಸಿನೆಮಾ ಶುರುವಾಯಿತು. ಅದು ಇಂಗ್ಲಿಷ್ ಪಿಚ್ಚರ್! ಪಿಲ್ಲಣ್ಣ, 'ಇದು ಇಂಗ್ಲೀಸು ಪಿಚ್ಚರ್ ಅಪ್ಪೋ' ಎಂದ. ನರಸಿಂಗರಾಯ ಇದು ಮದ್ರಾಸೊ ಲೇ. ನಮಗೆ ಗೊತ್ತಿರೊ ಕನ್ನಡ, ತೆಲುಗು ಪಿಚ್ಚರ್ ‍ಗಳು ಇಲ್ಲಿ ಓಡೊಲ್ಲ ಅಂದ.

ಮನೆ ಮುಂದೆಯೇ ಮಾತಂಗಿ ಮದುವೆ, ಓಬಲೇಸುವಿನ ಮನದಾಸೆ

ಸಿನೆಮಾ ನಡೀತಿದ್ದ ಹಾಗೆ ಜನ ಪ್ರತಿಕ್ರಿಯಿಸುತ್ತಿದ್ದರು. ತಾವೂ ಪ್ರತಿಕ್ರಿಯಸಬೇಕು. ಸುಮ್ಮನೆ ಕುಳಿತರೆ ಸುತ್ತಲಿದ್ದವರಿಗೆ ಇವರಿಗೆ ಇಂಗ್ಲಿಷ್ ಬರೊಲ್ಲ ಅಂತ ತಿಳಿದುಬಿಡುತ್ತೆ. ಅದು ಅವಮಾನ ಎಂದು ಭಾವಿಸಿದರು. ಒಬ್ಬರಿಗೊಬ್ಬರು ಮಾತನಾಡಿಕೊಂಡು ಸುತ್ತಲವರನ್ನು ಗಮನಿಸಿ ತಾವೂ ಅವರ ಹಾಗೆ ಮಾಡತೊಡಗಿದರು. ಪಕ್ಕದಲ್ಲಿದ್ದವನಿಗೆ ಇದು ತಿಳೀತು. ಚೇಷ್ಟೆ ಬುದ್ಧಿ ಕೆರಳಿತು. ಇವರಿಗೆ ಕಾಣುವಂತೆ ಚಪ್ಪಳೆ ಹೊಡೆಯುವವನಂತೆ ಕೈ ಎತ್ತಿದ್ದೇ ತಡ, ಚಪ್ಪಳೆ ಹೊಡೆಯುವಂಥದೇನೋ ಬರುತ್ತಿದೆ ಎಂದು ಮುವ್ವರೂ ಚಪ್ಪಾಳೆ ತಟ್ಟಿಬಿಟ್ಟರು. ಅಕ್ಕ ಪಕ್ಕದವರು ಇವರತ್ತ ನೋಡಿ ನಕ್ಕರು. ಓ ಈಗ ನಗುವಂಥದೇನೋ ನಡೀತಿದೆ ಎಂದು ಇವರೂ ನಕ್ಕರೂ. ಇದನ್ನು ನೋಡಿ ಆ ಜನ ಮತ್ತೂ ನಕ್ಕರು. ಇವರೂ ನಕ್ಕರು. ಆಗ ಇವರಿಗೆ ಅವರೆಲ್ಲ ನಗುತ್ತಿರುವುದು ತಮ್ಮನ್ನು ನೋಡಿ ಎಂದು ತಿಳಿಯಿತು. ಈ ಸಿನೆಮಾ ನಮ್ಮಂತೋರಿಗಲ್ಲ ಎಂದು ನಾಚಿಕೊಂಡು ಎದ್ದು ಹೊರಬಂದು, ಮಂಡಿಗೆ ಹಿಂದಿರುಗಿ ಗೋಣಿಚೀಲದ ಮೇಲೆ ಮುದುಡಿಕೊಂಡರು.

ನರಸಿಂಗರಾಯನಿಗೆ ಮಾತಂಗಿಯ ಮೌನ ಸೌಂದರ್ಯದ ಸಾಕ್ಷಾತ್ಕಾರ

ನರಸಿಂಗರಾಯ ಈ ಪ್ರಸಂಗವನ್ನು ಅಮ್ಮನಿಗೆ ಹೇಳಿದ. ಅವಳು ಬಿದ್ದುಬಿದ್ದು ನಕ್ಕವಳು ಅದನ್ನು ಅಲ್ಲಿಗೆ ಬಿಡದೆ ಅಪ್ಪಯ್ಯನಿಗೆ ಹೇಳಿದಳು. ಅಪ್ಪಯ್ಯ ಹಹಹ್ಹಾ ಎಂದ. ಅಮ್ಮನಿಂದಲೇ ಮುನೆಕ್ಕನ ಕಿವಿಗೂ ಸೇರಿತು. ಅಪ್ಪಯ್ಯ ಹರಟೆಯ ನಡುವೆ ದುಗ್ಗಪ್ಪನಿಗೆ ಹೇಳಿದ. ವಿಷಯ ಊರಿಗೇ ಟಾಂಟಾಂ ಆಯಿತು. ಇದರಿಂದ ನರಸಿಂಗರಾಯನೂ ಸೇರಿ ಗೆಳೆಯರಿಗೆ ನಾಚಿಕೆಯಾಯಿತು, ಅವಮಾನವಾಯಿತು ಎಂದೆನಿಸಲಿಲ್ಲ. ಆದರೆ ಹೊಲದ ದಾರಿಯಲ್ಲಿ ಸಿಕ್ಕಿದ ಗೌರಿ, 'ಏನ್ ನರಸಿಂಗರಾಯರು, ಇಂಗ್ಲಿಷ್ ಪಿಚ್ಚರ್ ಹೆಂಗಿತ್ತು?' ಎಂದು ಕೇಳಿ, ಸೆರಗನ್ನು ಬಾಯಿಗಿಟ್ಟು ಕಿಸಕ್ಕೆಂದು ನಕ್ಕು ಕಣ್ಣು ಹೊಡೆದಾಗ ನರಸಿಂಗರಾಯನಿಗೆ ಅವಮಾನವೆನಿಸಿತು. ಪ್ರಚಾರ ಮಾಡಿದವರಲ್ಲಿ ಅಮ್ಮ ಮತ್ತು ಅಪ್ಪಯ್ಯ ಪ್ರಮುಖರಾದುದರಿಂದ ಅವರ ಮೇಲೆ ಕೋಪ ಮಾಡಿಕೊಳ್ಳಲೂ ಅವಕಾಶವಾಗದೆ ಮಾತಿಲ್ಲದೆ ಹೊಲದತ್ತ ಹೆಜ್ಜೆ ಹಾಕುತ್ತ, ಅವಳ ಮಾತಿಗೆ ತಕ್ಕಹಾಗೆ 'ಬರ್ತಿಯ ನಿಂಗೂ ತೋರಿಸ್ತೀನಿ' ಅನ್ನಬೇಕಿತ್ತು ಅಂದುಕೊಂಡ. ಕೂಡಲೇ ಹಾಗೆ ಹೇಳದ್ದು ಒಳ್ಳೇದಾಯಿತು. ಹೇಳಿದ್ದರೆ 'ಹೂಂ. ಯಾವಾಗ ಕರಕೊಂಡು ಹೋಗ್ತಿ?' ಎಂದು ಕೇಳಿದರೂ ಕೇಳುವವಳೇ. ಅವಳ ಮುಂದೆ ಇನ್ನೊಂದು ಸೋಲು ತಪ್ಪಿತು ಎಂದು ಸಮಾಧಾನಗೊಂಡ.

English summary
Oneindia Kannada columnist Sa Raghunatha's Narasingaraya short story series continued. Narasingaraya and his friends went to watch english film in madras, this incident is the highlight of this story,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more