ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಮುಂದೆಯೇ ಮಾತಂಗಿ ಮದುವೆ, ಓಬಲೇಸುವಿನ ಮನದಾಸೆ

By ಸ ರಘುನಾಥ, ಕೋಲಾರ
|
Google Oneindia Kannada News

ಮಾತಂಗಿಗೆ ಓದಿಸಲು ಅಮ್ಮ ಕೊಟ್ಟ ಸೀರೆ, ರವಿಕೆ ಕಣದೊಂದಿಗೆ ಓಬಲೇಸುವಿಗೆ ಓದಿಸಲು ಮಲ್ ಪಂಚೆ, ಷರಟು ಪೀಸುಗಳನ್ನು ಬ್ಯಾಗಿನಲ್ಲಿಟ್ಟ ನರಸಿಂಗರಾಯ, ಮರೆಯದೆ ಓಬಲೇಸನ ಪ್ರೇಮಪತ್ರವನ್ನು ಬ್ಯಾಗಿಗೆ ಸೇರಿಸಿದ. ಎತ್ತಿನಗಾಡಿ ಕಟ್ಟುವುದಾಗಿ ಹೇಳಿದಾಗ ಅಮ್ಮ ಬೇಡವೆಂದಳು. ತಾಯಿ- ಮಗ ಕಾಲ್ನಡಿಗೆಯಲ್ಲಿ ಮೂರು ಮೈಲಿ ದೂರದ ಬಾವನಳ್ಳಿಗೆ ನಡೆದರು.

ಮನೆ ಮುಂದೆಯೇ ಮದುವೆ. ಚಿಕ್ಕ ಅಂಗಳದಲ್ಲಿ ಚಪ್ಪರ ಹಾಕಿದ್ದರು. ಹೆಣ್ಣು- ಗಂಡು ಇನ್ನೂ ಹಸೆಗೆ ಬಂದಿರಲಿಲ್ಲ. ಲಚ್ಚಿ ಎದುರಾಗಿ, ಅದ್ಯಾಕೆ ನಡಕಂಡು ಬಂದ್ರಿ ಎಂದು ಒಳಗೆ ಕರೆದುಕೊಂಡು ಹೋದಳು. ಎರಡು ಲೋಟ ಪಾನಕ ತರುವಂತೆ ಮಾತಂಗಿಗೇ ಹೇಳಿದಳು. ಅವಳು ಅಮ್ಮನಿಗೆ ಕೊಟ್ಟು, ನಂತರ 'ತಕ್ಕಳಿ' ಎಂದು ನರಸಿಂಗರಾಯನಿಗೆ ಹೇಳಿದಳು.

‌ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ‌ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ

ಅವಳು ಅವನೊಡನಾಡಿದ ಮೊದಲ ಮೊಟಕು ಮಾತು ಮಾಂದಳಿರ ಮರೆಯಿಂದ ಹೊರಬಂದ ಕೋಗಿಲೆಯ ಧ್ವನಿಯಂತೆ ಕೇಳಿಸಿತು. ಇನ್ನೊಂದು ಮಾತು ಕೇಳಿಸಿಕೊಳ್ಳುವ ಆಸೆಯಿಂದ 'ನೀನು ಕುಡಿ' ಎಂದ. ಆ ವಿಚಿತ್ರಕ್ಕೆ ಅಮ್ಮನೂ ಸೇರಿ ಅಲ್ಲಿದ್ದವರು ಕಿಸಕ್ಕೆಂದು ನಕ್ಕರು. ನಾಚಿ 'ನಂದಾಗದೆ' ಎಂದಳು. ಏನೋ ಹಿತದ ಸಮಾಧಾನ ಅನ್ನಿಸಿ, ಅವಳು ಕೊಟ್ಟ ಬೆಲ್ಲದ ಪಾನಕ ಕುಡಿದ. ನಿಂಬೆಹುಳಿ ಹೆಚ್ಚೆನಿಸಿದರೂ ರುಚಿಯಾಗಿತ್ತು.

Kannada Romantic Story: Matangi Marriage And Obalesu Letter

ಹಸೆಯೇರಲು ಸಮಯವಾದುದರಿಂದ ಓಬಲೇಸು ಕೋಣೆಯಿಂದ ಬಂದ. ಲಚ್ಚಿ ಅಮ್ಮ ಮಗನನ್ನು ಹೊಗಳುತ್ತಲೇ ಪರಿಚಯಿಸಿದಳು. ಅವನು ಅಮ್ಮನಿಗೆ ಕೈ ಮುಗಿದು ನರಸಿಂಗರಾಯನ ಕೈ ಕುಲುಕಿದ. ಗನ್ನು ಹಿಡಿದು ಒರಟಾದ ಗಟ್ಟಿ ಕೈ. ಮಿಲಿಟರಿ ಕೋರೆಮೀಸೆ ಅಡಿಯ ಕಪ್ಪು ತುಟಿಯಲ್ಲಿ ಸ್ನೇಹದ ನಗೆ ಅರಳಿಸಿದ. ಹೆಗಲನ್ನು ಬಳಸಿ ಬನ್ನಿ ಎಂದು ಜೊತೆಯಲ್ಲಿಯೇ ಚಪ್ಪರದಡಿಗೆ ನಡೆದ.

ನರಸಿಂಗರಾಯನಿಗೆ ಮಾತಂಗಿಯ ಮೌನ ಸೌಂದರ್ಯದ ಸಾಕ್ಷಾತ್ಕಾರನರಸಿಂಗರಾಯನಿಗೆ ಮಾತಂಗಿಯ ಮೌನ ಸೌಂದರ್ಯದ ಸಾಕ್ಷಾತ್ಕಾರ

ಮಾತಂಗಿ ಕೈ- ಪಾದಗಳಿಗೆ ಅರಿಸಿನ ಹಚ್ಚಿದ್ದರು. ಅದು ಹೆಚ್ಚೇ ಅನ್ನಿಸುತ್ತಿತ್ತು. ಮುಖಕ್ಕೂ ಅಷ್ಟೇ. ನಡುಹಣೆಯಲ್ಲಿ ಕಾಸಿನಗಲದ ಕುಂಕುಮ. ಕೆನ್ನೆಗೆ ದೃಷ್ಟಿಬೊಟ್ಟು. ಒಂದೊಂದು ಕೈಗೆ ಡಜನ್ನಿಗೆ ಕಡಿಮೆ ಇಲ್ಲದಂತೆ ಹಸಿರು ಸಾಣೆಬಳೆ. ಮೂಗಿನಲ್ಲಿ ಅಂದು ಮನೆಗೆ ಬಂದಾಗ ಇದ್ದ ನತ್ತೇ ಇತ್ತು. ಕಿವಿಯಲ್ಲಿ ಪಾರಿಜಾತದ ಹೂ ಆಕಾರದ ಹೊಸ ಓಲೆ. ನರಸಿಂಗರಾಯನಿಗೆ ಒಮ್ಮೆ ಮಾರಮ್ಮನಂತಿದ್ದಾಳೆ ಅನ್ನಿಸಿತು. ನಂತರ ಅರಿಸಿನಗೌರಿಯಂತಿದ್ದಾಳೆ ಅನ್ನಿಸಿತು. ಆ ಸರಳ ಸಿಂಗಾರ ಮಾತಂಗಿಯ ಚೆಲುವಿಗೆ ಸೌಂದರ್ಯವನ್ನು ಮುಡಿಸಿದಂತಿದೆ ಅಂದುಕೊಂಡ.

ಅವರ ಕುಲಾಚಾರದಂತೆ 'ಅರಿವೆಳ್ಳ' (ಸುಣ್ಣ, ಕೆಮ್ಮಣ್ಣು ಪಟ್ಟೆ ಬಳಿದು, ಹೂವಿಂದ ಅಲಂಕರಿಸಿ ನೀರು ತುಂಬಿ ಒಂದರ ಮೇಲೊಂದು ಜೋಡಿಸಿ ಮಣ್ಣಿನ ಹೊಸ ಹರವಿಗಳು). ಅದರ ಮೇಲೆ ಚಟ್ನ (ಮಣ್ಣಿನ ಮುಚ್ಚಳ)ದಲ್ಲಿ ನಿಂತ ಅರಿವೆಳ್ಳ ಜ್ಯೋತೆಮ್ಮನಿಗೆ ಮದುಮಕ್ಕಳು ಪೂಜೆ ಮಾಡಿದರು. ನಂತರದ ಶಾಸ್ತ್ರಗಳೊಂದಿಗೆ ಮಾಂಗಲ್ಯ ಧಾರಣೆಯಾಯಿತು. ಮುಯ್ಯಟ್ಟುವಾಗ (ಉಡುಗೊರೆ) ನರಸಿಂಗರಾಯ ಕಾಗದವನ್ನು ತೆಗೆದು ಕಿಸೆಗಿಟ್ಟು ಸೀರೆ, ರವಿಕೆ ಕಣ, ಪಂಚೆ, ಷರಟಿನ ಬಟ್ಟೆಗಳನ್ನು ಚೀಲದಿಂದ ತೆಗೆದು ಅಮ್ಮನ ಕೈಗೆ ಕೊಟ್ಟ.

ಮಾತಂಗಿಯ ನಾಗಬಂಧದಲ್ಲಿ ನರಸಿಂಗರಾಯನಿಗೆ ಮೊದಲ ಸ್ವಪ್ನಸ್ಖಲನಮಾತಂಗಿಯ ನಾಗಬಂಧದಲ್ಲಿ ನರಸಿಂಗರಾಯನಿಗೆ ಮೊದಲ ಸ್ವಪ್ನಸ್ಖಲನ

ಊಟಗಳಾದ ಮೇಲೆ ನರಸಿಂಗರಾಯ ಚಪ್ಪರದಡಿ ಒಂಟಿಯಾಗಿ ಕುಳಿತಿದ್ದುದನ್ನು ಕಂಡು ಓಬಲೇಸು ಜೊತೆಗೂಡಿದ. ಅವನ ಆತ್ಮೀಯ ಮಾತುಗಳಲ್ಲಿ ಸಲಿಗೆಯೂ ಇತ್ತು. ನರಸಿಂಗರಾಯ ಜೇಬಿನಿಂದ ಕಾಗದವನ್ನು ತೆಗೆದು ಅವನ ಕೈಗಿತ್ತು, ಆದುದನ್ನು ತಿಳಿಸಿದ. 'ಅಯ್ಯೋ ಮಾರಾಯ ಅವಳಿಗೆ ಓದಲು ಬರೋದಿಲ್ಲ ಅಂತ ತಿಳಿದಿದ್ದರೂ ಬರೆದೆ. ಮದುವೆ ಮುಂಚೆ ಪ್ರೇಮಪತ್ರ ಬರೀದಿದ್ದರೆ ಹೇಗೆ ಅನ್ನಿಸಿತು. ಬರೆದೆ.' ಅಂದ.

ನರಸಿಂಗರಾಯನಿಗೆ ಓಬಲೇಸುವಿನದು ವಿಚಿತ್ರ ಖುಷಿ ಅನ್ನಿಸಿತು. ಮೊದಲ ರಾತ್ರಿ ಅವಳ ಮುಂದೆ ಓದಿಬಿಡು ಅಂದ. 'ಎಲ್ಲಾದರು ಉಂಟೆ? ಹೇಗೂ ಜೊತೇಲಿ ಕರಕೊಂಡು ಹೋಗ್ತೀನಲ್ಲ. ಅಲ್ಲಿ ಅವಳಿಗೆ ಓದಲು ಕಲಿಸಿ, ಕಾಶ್ಮೀರದ ಚಳಿಯಲ್ಲಿ ಅವಳ ಮುಂದೆ ಕೂತು, ಅವಳಿಂದಲೇ ಓದಿಸಿ, ಆ ಸುಖದಲ್ಲಿ ಮನಸ್ಸನ್ನು ಬೆಚ್ಚಗೆ ಮಾಡಿಕೊಳ್ಳುವ ಆಸೆ. ಆ ದಿನದವರೆಗೆ ಇವು ಭದ್ರವಾಗಿರುತ್ತವೆ. ಈ ಕಾಗದ ತಂದು ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್' ಎಂದು ಬೆನ್ನು ತಟ್ಟಿದ.

ಬಂದೂಕು ಹಿಡಿವ ಕೈಯಲ್ಲಿ ಆ ಪ್ರೇಮಪತ್ರ ಗಮಗುಡುವ ಮುಂಜಾವಿನ ಪಾರಿಜಾತದಂತೆ ಕಂಡಿತು. ಮನೆಗೆ ಬರುವಾಗ ನರಸಿಂಗರಾಯ ದಾರಿಯಲ್ಲಿ, 'ಓಬಲೇಸು ಮಾತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನಿಸುತ್ತೆ' ಅಂದ. 'ಒಂದು ರೀತಿಯಲ್ಲಿ ಎರಡೂ ತಬ್ಬಲಿ ಜೀವಗಳೇ. ಸುಖವಾಗಿರಲಿ' ಅಂದಳು ಅಮ್ಮ.

English summary
Oneindia Kannada columnist Sa Raghunatha's Narasingaraya short story series continued. Matangi marriage and Obalesu love letter highlight of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X