• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ. ರಘುನಾಥ ಅಂಕಣ: ಮುಗಿದ ಆ ದಿನದ ಪಯಣ

By ಸ. ರಘುನಾಥ
|
Google Oneindia Kannada News

ಚಿಕ್ಕಬಳ್ಳಾಪುರವನ್ನು ತೊರೆಯಲು ನಿಶ್ಚಯಿಸಿದ್ದರೂ ದಿನ ನಿರ್ಣಯವಾಗಿರಲ್ಲಿಲ್ಲ. ತೊರೆಯುವ ಮುನ್ನ, ಕೊರೊನಾಗೆ ಹೆದರಿ ಕಾಲು ಕಟ್ಟಿಕೊಂಡಂತೆ ಮನೆಯಲ್ಲೆ ಇದ್ದುದು ನರಕವೇ. ಎಲ್ಲರಂತೆ ಇನ್ನು ಪರವಾಗಿಲ್ಲವೆನ್ನಿಸಿ ಓಡಾಡಲು ಮೊದಲಿಟ್ಟೆ. ಹಾಗೆ ಮೊದಲನೆಯ ದಿನ (16.12.2021) ಚಿಕ್ಕಬಳ್ಳಾಪುರದಿಂದ ಸುಮಾರು ಆರು ಕಿಲೋಮೀಟರ್ ದೂರ ಹೋದಾಗ ದಿನ್ನೆಹೊಸಳ್ಳಿ ಎಂಬ ಊರು ಸಿಕ್ಕಿತು. ಆ ಹಳ್ಳಿಯ ಮನೆಯೊಂದರ ಮುಂದೆ ಒಬ್ಬಾಕೆ, ಸಂಜೆ ಎತ್ತುಗಳಡಿ ಹರಡಲು ಬೆಳಗ್ಗೆ ಒಣಹಾಕಿದ್ದ ಗೊಬ್ಬರವನ್ನು (ದನದ ಸಗಣಿಯ ಚಿಕ್ಕಚಿಕ್ಕ ಉಂಡೆಗಳು) ಹಸಿ ಆರಲು ಹರವುತ್ತಿದ್ದಳು. ಬಹಳ ದಿನಗಳಿಂದ ಇಂಥ ದೃಶ್ಯ ಕಾಣಲು ಹುಡುಕಾಡುತ್ತಿದ್ದೆ. ಕಂಡು ಹರ್ಷಗೊಂಡೆ.

ರಸ್ತೆಯಲ್ಲಿ ಹೋಗುತ್ತಿದ್ದವನು ತನ್ನ ಮನೆಯತ್ತ ತಿರುಗಿ ಬಂದುದನ್ನು ಕಂಡ ಆ ರೈತ ಮಹಿಳೆ ಆಶ್ಚರ್ಯಗೊಂಡಳು. ಫೋಟೋ ತೆಗೆದುಕೊಳ್ಳಲೆ ಎಂದು ಕೇಳಿದ್ದಕ್ಕೆ ನಿರಾಕರಿಸುತ್ತ ಹರವುವದನ್ನು ಬಿಟ್ಟು ಮನೆಯೊಳಕ್ಕೆ ಹೋಗಲು ಸಿದ್ಧಳಾದಳು. ತಡೆದು, ನನ್ನ ಪ್ರವರ ಹೇಳಿಕೊಂಡೆ. ಬಹಳ ವರುಷಗಳಾದವು ಇದನ್ನು ಕಂಡು. ನಿಜಕ್ಕೂ ನೀನು ಸಹಜ ರೈತ ಹೆಣ್ಣಾಗಿ ಉಳಿದಿದ್ದೀಯ ತಾಯಿ ಎಂದು, ಹುಡುಗನಾಗಿದ್ದಾಗ ಈ ಕೆಲಸ ಮಾಡುತ್ತಿದ್ದೆ. ಬೆಳಗಾಗಲೆದ್ದು ಮಕ್ಕರಿ ಹಿಡಿದು ಸಗಣಿ ಕೂಡಾಕಿಕೊಂಡು ಬರಲು ಹೋಗುತ್ತಿದ್ದೆ ಎಂದು ಹೇಳಿ, ನಂಬಿಕೆ ಕುದುರಿಸಿ, ಫೋಟೋಗಾಗಿ ಹಿಂದಿನಂತೆ ಗೊಬ್ಬರ ಹರವಲು ಕೇಳಿಕೊಂಡೆ. ಆ ತಾಯಿ ಒಪ್ಪಿದಳು.

ನಾಲ್ಕೆಕರೆ ಬೇಸಾಯ ಅವುಗಳದೆ ಎಂದಳು
ಎಷ್ಟು ನೇಗಿಲ ಉಳುಮೆ ಎಂದಾಗ ಒಂದೇ ಅಂದಳು. ಎತ್ತುಗಳಿಗೆ ಹಲ್ಲುಗಳೆಷ್ಟು ಎಂದು ಕೇಳಿದ್ದಕ್ಕೆ, 'ಎರಡು. ಮನೆಯಲ್ಲೇ ಹುಟ್ಟಿ ಹೆಗಲು ಮಾಡಿದೋವು' ಎಂದಳು. ಇನ್ನೊಂದು ನಾಲಕೈದು ವರ್ಷವಿದ್ದರೂ ನಷ್ಟವಿಲ್ಲವೆಂದೆ. ಹೌದು. ನಾಲ್ಕೆಕರೆ ಬೇಸಾಯ ಅವುಗಳದೆ ಎಂದಳು. ಎಮ್ಮೆ, ಹಸು, ಸೀಮೆಹಸು ಇವೆಯೆ ಎಂದು ಕೇಳಿದೆ. 'ಒಂದೆಮ್ಮೆ, ಒಂದು ನಾಟಿಹಸು. ಸೀಮೆಹಸು ಇಲ್ಲ. ಇವನ್ನ ನೋಡಿಕೊಳ್ಳುವುದೇ ಕಷ್ಟವಾಗಿದೆ. ಇನ್ನು ಸೀಮೆಹಸು ಬೇರೇನ?' ಎಂದಳು.

ಉಪಕಾರವಾಯ್ತು ತಾಯಿ ಎಂದು ಕೈ ಮುಗಿದು ಹೊರಡುವವನಿದ್ದಾಗ, ಊಟ? ಅಂದಳು. ಆಗಿದೆಯೆಂದೆ. ಸುಳ್ಳು ಹೇಳಿದೆ ಎಂದಂತಿತ್ತು ಬ್ಯಾಗಿನಲ್ಲಿದ್ದ ಹೋಟೆಲ್‌ನ ಚಿತ್ರಾನ್ನದ ಪೊಟ್ಟಣ. ಒಂದು ಲೋಟ ಹಾಲಾದರೂ... ಎಂದಿತು ಆ ತಾಯಿ ಜೀವ. ಕೊಡಮ್ಮ ತಾಯಿಯೆಂದೆ. ನೆರಳಿಗೆ ಬಾ ಎಂದು ಜಗುಲಿಯ ಮೇಲಿ ಕೂರಿಸಿ ಹಾಲು ತಂದುಕೊಟ್ಟಳು. ಕುಡಿದು ಆಕೆಯ ಕೈಗೆ ಲೋಟ ಕೊಡುತ್ತ ಹೆಸರು ಕೇಳಿದೆ. ಸುಮಿತ್ರ ಎಂದಳು.

ಹಳ್ಳಿ ಹಳ್ಳಿ ಸುತ್ತೋಕೆ, ನಿಮ್ಮಂಥವರನ್ನ ಮಾತಿನಾಡಿಸೋಕೆ
ಊರು ದಾಟಿದಾಗ ಮಸಣದ ಕಡೆಯಿಂದ ರಸ್ತೆಗೆ ಬರುತ್ತಿದ್ದ ಇಬ್ಬರು ತಮಟೆವಾದಕರು ಕಾಣಿಸಿದರು. ನಿಂತು ಎರಡು ನಿಮಿಷ ಕಾದಿದ್ದೆ. ಬಂದವರಿಗೆ ನಮಸ್ಕಾರ ಗುರುವೆ ಎಂದೆ. ಸುತ್ತಮುತ್ತ ನೋಡಿದರು. ನಿಮಗೇ ಹೇಳಿದ್ದು ಅಂದಾಗ ತಬ್ಬಿಬ್ಬಾದರು. ನೀನಾರು, ಯಾವೂರು, ಹೇಸರೇನೆಂದು ಕೇಳಿದರು. ಒಬ್ಬ 'ಬಂದೀರೋದು ಏನಕ?' ಎಂದು ವಿಚಾರಿಸಿದ. ಹಳ್ಳಿ ಹಳ್ಳಿ ಸುತ್ತೋಕೆ, ನಿಮ್ಮಂಥವರನ್ನ ಮಾತಿನಾಡಿಸೋಕೆ ಎಂದೆ.

ಮರಣಿಸಿದವನ ಬಗ್ಗೆ ಕೇಳಿದೆ. ತೆಲುಗಿನಲ್ಲಿ ಯಾಕೆಂದು ಕೇಳಿದರು. ತಿಳಿದುಕೊಳ್ಳಲೆಂದೆ. ಅಚ್ಚರಿಗೊಂಡರು. ಸತ್ತಾತ ತೋಟಿ ಚಿನ್ನೆಂಕಿಟಪ್ಪ. ವಯಸ್ಸು ತೊಂಬತ್ತು ದಾಟಿದ್ದು. ಮಕ್ಕಳಿಲ್ಲದ ಹೆಂಡತಿ ಇದ್ದಳು. ಊರೇ ಅಲ್ಲ, ಪಾಸಲೆಯ ಊರುಗಳಲ್ಲಿ ಯಾರ ಮರಣವೇ ಆಗಲಿ, ಕರೆಯಲಿ ಬಿಡಲಿ ಹೋಗಿ ತಮಟೆ ಬಾರಿಸುತ್ತಿದ್ದ. ಅವರು ಕೊಟ್ಟಷ್ಟು ಅವನದು. ಕೊಡದಿದ್ದರೆ ದೇವರು ಕೊಡಿಸಿದ್ದಿಲ್ಲ ಅನ್ನುತ್ತಿದ್ದ.

ಸಾಯೋವರೆಗೂ ಅದರ ಮೇಲಿನ ಆಸೆ ಬಿಟ್ಟವನಲ್ಲ
ಪ್ರತಿ ಮಂಗಳವಾರ ರಾತ್ರಿ ಮಾರಮ್ಮನ ಗುಡಿಮುಂದೆ ತಮಟೆ ಬಾರಿಸುತ್ತಿದ್ದ. ಕುಡಿದಿದ್ದರೆ ತಮಟೆಯ ತೋಲು (ತೊಗಲು) ಹರಿಯುವುದೇನೋ ಅನ್ನಿಸಬೇಕು ಹಾಗಿರುತ್ತಿತ್ತು ಬಡಿತ. ಪಂದಿ (ಹಂದಿ) ವಾರುಗಳ ಸಮುರು (ಕೊಬ್ಬು), ಅಕ್ಕಿನುಚ್ಚು ಹಾಕಿದ ಮುದ್ದೆ ಎಂದರೆ ಎರಡು ಬೇಕಿತ್ತು. ಸಾಯೋವರೆಗೂ ಅದರ ಮೇಲಿನ ಆಸೆ ಬಿಟ್ಟವನಲ್ಲ. ಅವನ ಹೆಂಡತಿ ಅದೇಸು ಮುದ್ದಿಗಳ ತೊಳೆಸಿದ್ದಳೋ ಆ ಸಿ(ಚಿ)ತ್ರಗುಪ್ತನಿಗೇ ಲೆಕ್ಕ! ಊರಿಗೆ ದೊಡ್ಡೋನಲ್ಲದಿದ್ದರೇನು? ಬದುಕಿನಲ್ಲಿ (ಕೆಲಸದಲ್ಲಿ) ಬಹಳ ದೊಡ್ಡವನು. ಹಲಗೆ(ತಮಟೆ) ಮೇಲೆ ಕೋಲು ಬಿತ್ತೆಂದರೆ ಆ ಮಾರಮ್ಮ ಗಂಮ್ಮದೀರು ಬಂದು ಕುಣೀಬೇಕಿತ್ತು.

ಸಿಡೀರಣ್ಣನನ್ನು ಭುಜದ ಮೇಲಿರಿಸಿಕೊಂಡು ತಮಟೆ ಬಾರಿಸುತ್ತ ಸಿಡೀರಣ್ಣ ಆ ತಟ್ಟು ಈ ತಟ್ಟು (ಆ ಕಡೆ, ಈ ಕಡೆ) ಓಲದಂತೆ ಕುಣಿಯುತ್ತಿದ್ದ. ಒಳ್ಳೆ ಕಲಾಕಾರುನು ಆಗಿದ್ದ. ಕಾಸು ಕೇಳಿದವನಲ್ಲ, ಪೈಸಾ ಬೇಡಿದವನಲ್ಲ. ನಮಗೆಲ್ಲ ಅವನೇ ಗುರು. 'ತೋಟಿಗಿನಿಲ್ದೂರು ಊರಲ್ಲ, ನೀರುಗಂಟಿಗನಿಲ್ದ ಕೆರೆ ಕೆರೆಯಲ್ಲ' ಅನ್ನುವುದು ಅವನ ಮಾತಾಗಿತ್ತು' ಎಂದು ಒಬ್ಬೊಬ್ಬರು ಒಂದೊಂದು ಮಾತು ಹೇಳಿದರು. ಅವನ ತೋಟಿಗವೃತ್ತಿ ನಿಂತಾಗ ಮೊದಲು ಹೇಳದ್ದಾನು. ನಂತರ ಮಾತು ಬಂದಾಗಲೆಲ್ಲ ಹೇಳುತಿದ್ದಿರಬಹುದು. ಅವನು ಹೇಳಿದ್ದರಲ್ಲಿ ನಿಜವಿತ್ತು.

ತಮಟೆ ಮೇಲೆ ಎರಡು ಏಟು ಹಾಕೋಕಾಗುತ್ತ ಎಂದು ಕೇಳಿದೆ. ಎಷ್ಟು ವರಸೇದು ಎಂದು ಕೇಳದರು. ಮೂರು ಎಂದೆ. ಒಂದು ಗಂಟೆಕಾಲ ಬಾರಿಸಿದರು. ಅದರ ರಿಂಗಣದಲ್ಲಿ ಮೈ ಮರೆತೆ. ಈ ಹೊತ್ತಿನ ಪ್ರಯಾಣ ಇಲ್ಲಿಗೆ ಸಾಕು ಅಂದುಕೊಂಡೆ.

English summary
Sa Raghunatha Column: The Farmer woman was surprised to see that the man on the road had come back to her house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X