ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾರಮೆ ನಾಟಕದ ಬೋಡಯ್ಯನೋರು, ಊರು ದಾಟದ ಕಲಾವಿದರು

By ಸ.ರಘುನಾಥ, ಕೋಲಾರ
|
Google Oneindia Kannada News

ನೆನಪಿನ ಕಿಂಡಿಗಳು ತೆರೆದುಕೊಂಡಾಗ ಮೂಡುವ ಚಿತ್ರಗಳು ಒಳಗೊಳಗೆ ರೋಮಾಂಚನ ಉಂಟು ಮಾಡುತ್ತವೆ. ಹೀಗೆ ಅನುಭವಿಸಿದ ರೋಮಾಂಚನಗಳಲ್ಲಿ ನಮ್ಮೂರು ಮಲಿಯಪ್ಪನಹಳ್ಳಿಯಲ್ಲಿ ಆಡುತ್ತಿದ್ದ ಹೆಸರುವಾಸಿ ನಾಟಕಗಳಲ್ಲಿ 'ಸದಾರಮೆ' ನಾಟಕವೂ ಒಂದು. ಅದರಲ್ಲಿನ ಕಳ್ಳನ ಪಾತ್ರ ಬಹು ಮೋಜಿನದು.

ಪಾತ್ರಧಾರ ಬೋಡಯ್ಯನೋರು ಎಂದು ಊರ ಜನರ ಬಾಯಲ್ಲಿ ನಿಂತಿದ್ದು ಸತ್ಯನಾರಾಯಣರಾವ್. ಈತ ವರಸೆಯಿಂದ ನನಗೆ ಮಾವನಾಗಿದ್ದವ. ಸತ್ಯನಾರಾಯಣರಾವ್ 'ಬೋಡೈನೋರು' ಎಂದು ಕರೆಸಿಕೊಳ್ಳಲು ಆತನ ಮುಖ ಹಾಗೂ ತಲೆಯಲ್ಲಿ ಹೆಸರಿಗೂ ಒಂದು ಕೂದಲಿರದಿದ್ದುದು ಕಾರಣ.

ಮಾಲೂರಿನ ಸೊಣ್ಣಪ್ಪ ಮೇಷ್ಟರ ಪ್ಯಾಂಟ್ ಗುಂಡಿ ಟಪ್ಪೆಂದ ಪ್ರಸಂಗಮಾಲೂರಿನ ಸೊಣ್ಣಪ್ಪ ಮೇಷ್ಟರ ಪ್ಯಾಂಟ್ ಗುಂಡಿ ಟಪ್ಪೆಂದ ಪ್ರಸಂಗ

ಕೆಂಪಗೆ ಒಳ್ಳೇ 'ಸೀಡ್ಸ್ ಟೊಮೇಟೋ' ಹಾಗಿದ್ದ. ಇಂಥ ಬೋಡಯ್ಯನಿಗೆ ಕರಿಕಪ್ಪು ಮೈಬಣ್ಣದ ಕಳ್ಳನ ಪಾತ್ರ! ಕಳ್ಳರೆಲ್ಲ ಕಪ್ಪಗಿರುತ್ತಾರೆ ಎಂದಲ್ಲ. ಆದರೆ ನಾಟಕದಲ್ಲಿ ಮೇಕಪ್ಪು ಕಪ್ಪಿನದಾಗಿತ್ತು. ನಾವು 'ರೆಡ್ ಮ್ಯಾನ್, ಬ್ಲ್ಯಾಕ್ ಥೀಫ್' ಎಂದು ಹಾಸ್ಯ ಮಾಡುತ್ತಿದ್ದೆವು.

It is the story of unknown artistes famous on their native place

ಬೋಡಯ್ಯನದು ಈ ಪಾತ್ರಕ್ಕೆ ಎತ್ತಿದ ಕೈ. ಮೈಗೆ ಕರಿ ಬಣ್ಣ, ಕಪ್ಪು ಪಂಚೆ, ದೊಡ್ಡ ಕೋರೆ ಮೀಸೆ, ಕಾಲಿಗೆ ಅಂದುಗೆಯಂತೆ ಕರಿ ನೂಲು ಆತನ ಮೇಕಪ್ಪು. ತನ್ನ ಪರಿಚಯದ ಹಾಡಿನೊಂದಿಗೆ ರಂಗ ಪ್ರವೇಶ. 'ನಾನೇನಾದರು ಕಡಿಮೆ ಕಡಿಮೆ/ ನೋಡಿರಿ ಜನರೆಲ್ಲ/ ನಾ ಹುಟ್ಟುತಲೆ ಬಲು ಕಳ್ಳ/ ನನ್ಹೆಸರು ಸಂಗೇನಳ್ಳಿ ಮಾರ//ನಾನೇನಾದರ// ಬೆಂಗಳೂರು ಬಹು ದೂರ/ ಅಲ್ಲಿಟ್ಟಿರುವೆನು ಸಂಸಾರ/ ಕೂಡಿಟ್ಟಿರುವೆನು ಸಾವಿರಾರ// ನಾನೇನಾದರು//'

ಹೀಗೆ ರಂಗದಿಂದ ನಿರ್ಗಮಿಸಿ ಮತ್ತೆ ಪ್ರತ್ಯಕ್ಷನಾಗುತ್ತಿದ್ದುದು ಕಳ್ಳತನಕ್ಕೆಂದು ಬಂದಾಗ. ರಾಜೋದ್ಯಾನದಲ್ಲಿ ಹೊಂಚು ಹಾಕುತ್ತ ಕುಳಿತಿದ್ದಾಗ ಸದಾರಮೆಯನ್ನು ನೋಡುತ್ತಾನೆ. ಅವಳ ರೂಪಿಗೆ ಮನ ಸೋಲುತ್ತಾನೆ. ಕಳ್ಳತನಕ್ಕೆ ಬಂದವನು ಅವಳನ್ನು ಅಪಹರಿಸಲು ಮುಂದಾಗುತ್ತಾನೆ.

ನಮ್ಮೂರಿನಲ್ಲಿನ ನಕ್ಷತ್ರದಾಮೆ ಮತ್ತು ಹುಡುಗರ ಪಾಲಿನ ಮೊಸರನ್ನನಮ್ಮೂರಿನಲ್ಲಿನ ನಕ್ಷತ್ರದಾಮೆ ಮತ್ತು ಹುಡುಗರ ಪಾಲಿನ ಮೊಸರನ್ನ

ಅವಳು ರಾಜಕುಮಾರನೊಂದಿಗೆ ಮರೆಯಲ್ಲಿ ನಿಂತು ಮಾತಾಡುತ್ತಿರುತ್ತಾಳೆ. ಇವನಿಗೆ ಕಾಯುವುದು ಬೇಸರ. ಅಲ್ಲಿ ಇವನಿಗೊಂದು ಮಟ್ಟು 'ಆ ಕಡೆ ಪ್ಯಾಡೇಸ(ಪ್ರಾಣೇಶ) ಈ ಕಡೆ ಪ್ಯಾಡಪಿಯ(ಪ್ರಾಣಪ್ರಿಯೆ)/ ನಟ್ಟ ನಡಿವೆ ಜಗದೀಶನೋ/ ಸಿವಸಿವಾ.' ಅಂತೂ ಅವಳನ್ನು ಯಾಮಾರಿಸಿ ಕಾಡಿಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗುತ್ತಾನೆ.

ಸದಾರಮೆಗೆ ತಾನು ಮೋಸ ಹೋದುದು ತಿಳಿಯುತ್ತದೆ. ಅವನನ್ನು ನಿಂದಿಸುತ್ತಾಳೆ, ತಿರಸ್ಕರಿಸುತ್ತಾಳೆ. ಅಸಹಾಯಕಳಾಗಿ ರೋದಿಸುತ್ತಾಳೆ. ಇವನು ಬಿಡುವುದಿಲ್ಲ. ಅವಳನ್ನು ಅನುನಯಿಸುವಾಗ ಒಂದು ಹಾಡು. 'ಅಳ್ ಬ್ಯಾಡ್ ಕಣೇ ಸುಮ್ಕಿರೆ/ ನನ್ನೆಂಡ್ರೆ ಅಳ್ ಬ್ಯಾಡ್ ಕಣೇ ಸುಮ್ಕಿರೇ// ಕಾಲಿಗೆ ನಾ ಬಿದ್ದೇನು/ ಶಾಲೆ(ಸೀರೆ) ನಾ ಒಗದೇನು// ಅಳ್ ಬ್ಯಾಡ್//'

ಓ ಅವನ ಬಿನ್ನಾಣ, ವಯ್ಯಾರ, ನಟನಾ ಚೇಷ್ಟೆ ನಗೆ ಉಕ್ಕಿಸುತ್ತಿತ್ತು. ಅವನು ಸದಾರಮೆಯನ್ನು ಕಾಡುವ ವೈಖರಿಗೆ ಹೆಂಗಸರು 'ಕಳ್ ಮುಂಡೆ ಮಗುನು. ನಂಬೇಡ' ಎಂದು ಪ್ರತಿಕ್ರಿಯಿಸುತ್ತಿದ್ದರು.

ಹನುಮಪ್ಪನ ಸಾವಿನೊಂದಿಗೆ ಅನಾಥವಾದ ಗೆಜ್ಜೆ, ಚಿಟಿಕೆ, ಕೋನಿಗಕಟ್ಟಹನುಮಪ್ಪನ ಸಾವಿನೊಂದಿಗೆ ಅನಾಥವಾದ ಗೆಜ್ಜೆ, ಚಿಟಿಕೆ, ಕೋನಿಗಕಟ್ಟ

ಬೋಡಯ್ಯ ರಂಗದ ಮೇಲಿದ್ದಷ್ಟೂ ಹೊತ್ತು ರಂಜನೆಯೋ ರಂಜನೆ. ಎಲ್ಲಿಯೂ ಶ್ರುತಿ ತಪ್ಪುತ್ತಿರಲಿಲ್ಲವಾಗಿ, ಹಾರ್ಮೋನಿಯಂ ಮೇಷ್ಟ್ರಿಗೆ ಆತನೆಂದರೆ ಮೆಚ್ಚುಗೆ. ನೋಡುಗರಿಗೆ ಆನಂದವೋ ಆನಂದ. ಆತನಿಗೆ ಸಿಗುತ್ತಿದ್ದಷ್ಟು 'ಪೊಗಡಿಂಪು' (ಹೊಗಳಿಕೆಯ ಇನಾಮು) ಮತ್ತೊಬ್ಬರಿಗೆ ಇರುತ್ತಿರಲಿಲ್ಲ. ಈ ಪಾತ್ರಧಾರಿ ಸುತ್ತಲ ನಾಲ್ಕೂರಿಗೆ ಫೇಮಸ್.

ಇಂತಹ ನಾಟಕ, ಕೇಳಿಕೆಗಳಲ್ಲಿ ನಟಿಸುವ ಜನ ನಟರೆಂದು ಸನ್ಮಾನಿತರಾಗದ, ಗೌರವ ಪಡೆಯದ ನಟರು. ಇವರು ರೈತರು, ಕೂಲಿಕಾರರು, ಕೈ ಕಸುಬುದಾರರು ಆಗಿದ್ದು ನಟನೆಯ ಖಯಾಲುದಾರರಾಗಿರುತ್ತಾರೆ. ಇವರನ್ನು ಊರು ದಾಟದ ಕಲಾವಿದರು ಎಂದು ಕರೆಯಬಹುದು. ಹಾಗೆಯೇ ಅಜ್ಞಾತ ನಟರೂ ಹೌದು.

English summary
It is the story of unknown artistes famous on their native place like villages, town. This is beautiful column by Oneindia Kannada columnist Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X